ಮಂಗಳವಾರ, ಜನವರಿ 28, 2020
29 °C

ಸೇವೆ ಕಾಯಂಗೆ ಗ್ರಾ.ಪಂ ನೌಕರರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಪ್ರಮುಖ ಬೀದಿಗಳ ಮೂಲಕ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಲ್‌ ಕಲೆಕ್ಟರ್, ಕಂಪ್ಯೂಟರ್‌ ಆಪರೇಟರ್‌, ಪಂಪ್‌ ಆಪರೇಟರ್‌, ವಾಟರ್‌ಮನ್‌, ಸೇವಕರಿಗೆ ಸಂಬಳ ಪಾವತಿಸಲು ಆರು ತಿಂಗಳಿಂದ ವರ್ಷದವರೆಗೂ ವಿಳಂಬ ಮಾಡಲಾಗುತ್ತಿದೆ. 5 ವರ್ಷ ಸೇವೆ ಸಲ್ಲಿಸಿದ ಪಂಪ್‌ ಆಪರೇಟರ್‌­ಗಳಿಗೆ ಬಿಲ್‌ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡುವಂತೆ ಆದೇಶಿಸಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.ಖಾಲಿ ಇರುವ ಬಿಲ್‌ ಕಲೆಕ್ಟರ್‌ ಹುದ್ದೆಗಳಿಗೆ ಪಂಪ್‌ ಆಪರೇಟರ್‌ಗಳಿಗೆ ಬಡ್ತಿ ಕೊಡಬೇಕು. ಗ್ರೇಡ್‌ 2 ಕಾರ್ಯದರ್ಶಿ ಹುದ್ದೆಗೆ ಬಿಲ್‌ ಕಲೆಕ್ಟರ್‌ಗಳನ್ನು ನೇಮಕ ಮಾಡಬೇಕು. ತುಟ್ಟಿ ಭತ್ಯೆಯೊಂದಿಗೆ ವೇತನ ಪಾವತಿಸಬೇಕು. ಕಂಪ್ಯೂಟರ್ ಆಪರೇಟರ್‌ಗಳನ್ನು ಗ್ರಾಮ ಪಂಚಾಯಿತಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಧನರಾಜ ವಗ್ಗೆ, ಪ್ರಧಾನ ಕಾರ್ಯದರ್ಶಿ ಅಬ್ರಾಹಂ, ರಾಜ್ಯ ಸಮಿತಿ ಸದಸ್ಯ ರಾಜಪ್ಪ ಮಡಿವಾಳ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)