ಮಂಗಳವಾರ, ಏಪ್ರಿಲ್ 13, 2021
23 °C

ಸೈಕಲ್ ಪಯಣ: ಶಾಂತಿ ಸಂದೇಶ ಪಠಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸೈಕಲ್ ಮೇಲೆ ದೇಶ ಪಯಣ. ಶಾಂತಿ ಮಂತ್ರದ ಪಠಣ. ಕಳೆದ ಒಂದೂವರೆ ವರ್ಷದಿಂದ ಅಮರಕುಮಾರ ರಾಮಚಂದ ದೋಲಾಣಿ ಅವರ ನಿತ್ಯದ ಕಾಯಕ ಇದು.

ತಮ್ಮೂರು ಗುಜರಾತ ರಾಜ್ಯದ ಭಾವನಗರದಿಂದ 2009ರ ನವೆಂಬರ್‌ನಲ್ಲಿ ಸೈಕಲ್ ಯಾತ್ರೆ ಆರಂಭಿಸಿದ 40 ವರ್ಷದ ಅಮರಕುಮಾರ ಈಗಾಗಲೇ 27520 ಕಿ.ಮೀ. ಸೈಕಲ್ ತುಳಿದಿದ್ದಾರೆ. ಇನ್ನೂ 3000 ಕಿ.ಮೀ. ಸಾಗುವ ಗುರಿ ಅವರದ್ದಾಗಿದೆ.

ಗುರುವಾರ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ತಮ್ಮ ಯಾತ್ರೆಯ ಉದ್ದೇಶಗಳನ್ನು ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಶಾಂತಿ ಸಂದೇಶ ಸಾರುವುದು ಈ ಯಾತ್ರೆಯ ಉದ್ದೇಶ. ದೇಶದ ವಿವಿಧ ನಗರಗಳಿಗೆ ತೆರಳಿ ಅಲ್ಲಿನ ಧಾರ್ಮಿಕ ಸ್ಥಳಗಳನ್ನು ಭೇಟಿ ಮಾಡುತ್ತೇನೆ. ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರಗಳಲ್ಲಿ ತೆರಳಿ, ದೇಶದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. ಈಗಾಗಲೇ 55 ಸಾವಿರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದೇನೆ’ ಎಂದು ಅಮರಕುಮಾರ ಹೇಳುತ್ತಾರೆ.

ಗುಜರಾತದಿಂದ ಆರಂಭಗೊಂಡ ಈ ಸೈಕಲ್ ಯಾತ್ರೆ ರಾಜಸ್ತಾನ, ಹರಿಯಾಣ, ಪಂಜಾಬ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲ, ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸಗಡ, ಒರಿಸ್ಸಾ, ಮಹಾರಾಷ್ಟ್ರ ರಾಜ್ಯಗಳ ಮೂಲಕ ಸಾಗಿ ಈ ಕರ್ನಾಟಕಕ್ಕೆ ಕಾಲಿಟ್ಟಿದೆ. ನೇಪಾಳದ ಕಠ್ಮಂಡುವರೆಗೂ ಈ ಯಾತ್ರೆ ಸಾಗಿಬಂದಿದೆ.

ಅಮರಕುಮಾರ ಒಂಬತ್ತನೇ ತರಗತಿವರೆಗೆ ಓದಿದ್ದಾರೆ. ತರಕಾರಿ ಮಾರುವುದು ವೃತ್ತಿ. ಪತ್ನಿ ತೀರಿಹೋಗಿದ್ದಾರೆ. ಗಂಡು ಮಗುವನ್ನು ಇವರ ತಂದೆ-ತಾಯಿ ಆರೈಕೆ ಮಾಡುತ್ತಿದ್ದಾರೆ.

ದೇಶದ ಸಲುವಾಗಿ ಏನಾದರೂ ಮಾಡಬೇಕೆಂಬ ಉತ್ಕಟ ಬಯಕೆ ಬಾಲ್ಯದಿಂದಲೇ ಬೆಳೆದುಬಂದಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ದಾನ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಈಗಾಗಲೇ 51 ಬಾರಿ ರಕ್ತದಾನ ಮಾಡಿದ ಹಿರಿಮೆ ಇವರದ್ದು. ಈ ಹಿನ್ನೆಲೆಯಲ್ಲಿ ಯಾತ್ರೆಯ ಕನಸೂ ಮೂಡಿತು.

ಅಮರಕುಮಾರ ಪ್ರತಿದಿನ ಸರಾಸರಿ 100 ಕಿ.ಮೀ. ಪ್ರಯಾಣವನ್ನು ಸೈಕಲ್ ಮೇಲೆ ಮಾಡುತ್ತಿದ್ದರು. ಕೊಲ್ಹಾಪುರ ದಾಟಿ ಕರ್ನಾಟಕಕ್ಕೆ ಪ್ರವೇಶಿಸುತ್ತಿದ್ದಂತೆಯೇ ಏರಿಳಿತ ಹೆಚ್ಚಾಗಿದ್ದರಿಂದ ಈ ವೇಗ 60 ಕಿ.ಮೀ.ಗೆ ತಗ್ಗಿದೆ. ಭಾವನಗರದಿಂದ ಯಾತ್ರೆ ಆರಂಭಿಸಿದ ಸಂದರ್ಭದಲ್ಲಿ ಖರೀದಿಸಿದ ಸೈಕಲ್ಲನ್ನೇ ಇದುವರೆಗೆ ಅವರು ಬಳಸಿದ್ದಾರೆ. ಮುಂದಿನ ಹಾಗೂ ಹಿಂದಿನ ಗಾಲಿಯ ಟೈರ್-ಟ್ಯೂಬ್‌ಗಳನ್ನು ಎಂಟು ಬಾರಿ ಬದಲಿಸಿದ್ದಾರೆ. ಸೈಕಲನ್ನು ಸ್ವತಃ ರಿಪೇರಿ ಮಾಡಿಕೊಂಡಿದ್ದಾರೆ. ಬಟ್ಟೆ, ಹಾಸಿಗೆ, ಸೈಕಲ್ ರಿಪೇರಿ ಸಾಮಗ್ರಿಗಳೊಂದಿಗೆ ಪ್ರಯಾಣ ಮುಂದುವರಿಸಿದ್ದಾರೆ.

ಧರ್ಮಶಾಲೆ, ಸಂಘ-ಸಂಸ್ಥೆಗಳ ಕಚೇರಿ, ಪೆಟ್ರೋಲ್ ಪಂಪ್, ಢಾಬಾ, ದೇವಸ್ಥಾನಗಳಲ್ಲಿ ವಾಸ ಮಾಡುತ್ತ, ಹೋಟೆಲ್‌ಗಳಲ್ಲಿ ಊಟ ಮಾಡುತ್ತ ಸಾಗುತ್ತಿದ್ದಾರೆ. ಎಷ್ಟೋ ಸಲ ಅರಣ್ಯಪ್ರದೇಶದಲ್ಲೇ ವಾಸ ಮಾಡಬೇಕಾದ ಪರಿಸ್ಥಿತಿ ಬಂದರೂ ಧೈರ್ಯಗುಂದಿಲ್ಲ.

ಈ ಯಾತ್ರೆಗಾಗಿ ಈಗಾಗಲೇ ಸುಮಾರು 50 ಸಾವಿರ ರೂಪಾಯಿ ವ್ಯಯಿಸಿದ್ದಾರೆ. ಇದರಲ್ಲಿ 18200 ರೂಪಾಯಿ ಕರಪತ್ರಕ್ಕಾಗಿ ಖರ್ಚಾಗಿದೆ. ಯಾತ್ರೆಗಾಗಿ ಯಾರಿಂದಲೂ ಹಣ ಪಡೆದುಕೊಂಡಿಲ್ಲ. ಕೆಲವೊಂದಿಷ್ಟು ಕರಪತ್ರಗಳನ್ನು ಕೆಲವರು ಉಚಿತವಾಗಿ ಮುದ್ರಿಸಿಕೊಟ್ಟಿದ್ದಾರೆ. ಬೇರೆ ಸೈಕಲ್ ಕೊಡಿಸುವುದಾಗಿ ಕೆಲವರು ಹೇಳಿದರೂ ಇವರು ಒಪ್ಪಿಲ್ಲ. ತಮ್ಮ ಯಾತ್ರೆಯ ಏಕೈಕ ಸಂಗಾತಿ ಈ ಸೈಕಲ್ಲು; ಇದನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಹೆಮ್ಮೆಯಿಂದ ಅವರು ಹೇಳುತ್ತಾರೆ.

ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಪ್ರಯಾಣಿಸಿ; ಗೋವಾ, ಮಹಾರಾಷ್ಟ್ರ ಮೂಲಕ ಗುಜರಾತ್‌ಗೆ ವಾಪಸಾಗುವ ಉದ್ದೇಶ ಅಮರಕುಮಾರ ಅವರದ್ದಾಗಿದೆ. ಇನ್ನಾರು ತಿಂಗಳು ಈ ಶಾಂತಿ ಯಾತ್ರೆ ಮುಂದುವರಿಯಲಿದೆ. ಊರಿಗೆ ವಾಪಸಾದ ನಂತರ ಸಮಾಜ ಸೇವೆ ಮುಂದುವರಿಸುವ ಆಲೋಚನೆ ಅಮರಕುಮಾರ ಅವರದ್ದು. ನಿರ್ಗತಿಕರು, ಭಿಕ್ಷಕರಿಗೆ ನೆರವು ನೀಡುವುದು; ಗಾಯಗೊಂಡ ಪಶುಪಕ್ಷಿಗಳ ಆರೈಕೆ ಮಾಡುವ ಆಲೋಚನೆ ಅವರದ್ದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.