ಗುರುವಾರ , ಜೂಲೈ 9, 2020
23 °C

ಸೊಕ್ಕಿನ ಯುವರಾಜ ಈಗ ಮಹಾರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊಕ್ಕಿನ ಯುವರಾಜ ಈಗ ಮಹಾರಾಜ

ಅಹಮದಾಬಾದ್: ‘ಭಾರತ ಕ್ರಿಕೆಟ್‌ನ ಸೊಕ್ಕಿನ, ಸಿಟ್ಟಿನ ಯುವರಾಜ’ ಎಂದೇ ಹೆಸರಾಗಿದ್ದ ಯುವರಾಜ್ ಸಿಂಗ್ ಈಗ ಬದಲಾಗಿದ್ದಾರೆ. ಅವರೀಗ ‘ಭಾರತ ತಂಡದ ಮಹಾರಾಜ’ನೇ ಆಗಿದ್ದಾರೆ. ಹತ್ತನೇ ವಿಶ್ವ ಕಪ್‌ನಲ್ಲಿ ಈಗಾಗಲೇ ಮೂರು ಸಲ ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾಗಿರುವ ಅವರು ಭಾರತವನ್ನು ಫೈನಲ್ ವರೆಗೆ ಮುನ್ನಡೆಸುವ ಪ್ರಮುಖ ಆಟಗಾರನೆನಿಸಿದ್ದಾರೆ.ಯುವಿ ಅವರ ನಡೆ-ನುಡಿ ಮತ್ತು ಆಟದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಅವರು ಈ ವಿಶ್ವ ಕಪ್ ತಂಡದಲ್ಲಿ ಸ್ಥಾನ ಪಡೆಯುವುದೇ ಅನುಮಾನವಾಗಿತ್ತು. ಆದರೆ ದಕ್ಷಿಣ ಆಫ್ರಿಕ ಪ್ರವಾಸದಿಂದ ಅವರ ಬದಲಾವಣೆಗಳು ಎದ್ದು ಕಂಡವು. ಅವರೀಗ ತಂಡದ ಅಗ್ರಮಾನ್ಯ ಆಲ್‌ರೌಂಡರ್. ಮೊದಲು ಅವರ ಎಡಗೈ ಸ್ಪಿನ್ ಬೌಲಿಂಗ್ ಭಾರತದ ನೆರವಿಗೆ ಬಂತು. ಆರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳು. ಜೊತೆಗೆ ಮೂರು ಅರ್ಧ ಶತಕಗಳು ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಚೆನ್ನೈನಲ್ಲಿ ಅವರು ಗಳಿಸಿದ ಶತಕ (ಒಟ್ಟು 284 ರನ್‌ಗಳು) ಅವರಲ್ಲಿ ಹುದುಗಿದ್ದ ಆಲ್‌ರೌಂಡರ್‌ನನ್ನು ಪ್ರಕಟಗೊಳಿಸಿತು.ಭಾರತ 1983 ರ ವಿಶ್ವ ಕಪ್ ಗೆದ್ದಾಗ, ಕಪಿಲ್‌ದೇವ್ ಮತ್ತು ಮೊಹಿಂದರ್ ಅಮರನಾಥ್ ಅವರ ಆಲ್‌ರೌಂಡ್ ಆಟವೇ ಮುಖ್ಯ ಕಾರಣವಾಗಿತ್ತು. ಮೊಹಿಂದರ್ ಅಮರನಾಥ್ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮತ್ತು ವೆಸ್ಟ್‌ಇಂಡೀಸ್ ವಿರುದ್ಧದ ಫೈನಲ್‌ನಲ್ಲಿ ‘ಪಂದ್ಯದ ಆಟಗಾರ’ನೆಂಬ ಹಿರಿಮೆಗೆ ಪಾತ್ರರಾಗಿದ್ದರು. 2011 ರ ತಂಡದಲ್ಲಿ ಪಕ್ಕಾ ಆಲ್‌ರೌಂಡರ್ ಒಬ್ಬ ಇಲ್ಲ ಎಂಬ ಟೀಕೆ ಕೇಳಿಬಂದಿತ್ತು. ಯುವರಾಜ್ ಆ ಟೀಕೆಗೆ ಈಗ ಉತ್ತರ ನೀಡಿದ್ದಾರೆ.ಯುವರಾಜ್ ಇನ್ನೂ ತಮ್ಮ 30ನೇ ಜನ್ಮದಿನ (ಜನ್ಮದಿನ: ಡಿಸೆಂಬರ್ 12, 1981) ಆಚರಿಸಲು ಇನ್ನೂ ಒಂಬತ್ತು ತಿಂಗಳುಗಳಿವೆ. 19ನೇ ವಯಸ್ಸಿನಲ್ಲಿ ಭಾರತ ತಂಡದೊಳಗೆ ಕಾಲಿಟ್ಟ ಅವರು ಯಶಸ್ಸಿನ ಮೆಟ್ಟಲುಗಳನ್ನು ಬಹಳ ಬೇಗ ಏರಿದರು. ಅವರ ಆಟದಲ್ಲಿ ಆಕ್ರೋಶ ಇರುತ್ತಿತ್ತು. ಅದು ಅವರ ಸ್ವಭಾವಕ್ಕೆ ತಕ್ಕಂತೆಯೇ ಇತ್ತು. ಆದರೆ ಕ್ರಮೇಣ ಆ ಸ್ವಭಾವ ಅವರ ಆಟದ ಮೇಲೆ ಪರಿಣಾಮ ಬೀರತೊಡಗಿತು. ಭಾರತ ತಂಡದ ತರಬೇತುದಾರರಾಗಿದ್ದ ಆಸ್ಟ್ರೇಲಿಯದ ಗ್ರೆಗ್ ಚಾಪೆಲ್ ಈ ‘ಸಿಟ್ಟಿನ ಯುವಕ’ನನ್ನು ದಾರಿಗೆ ತರಲು, ತಂಡದಿಂದ ಕೈಬಿಡುವುದೊಂದೇ ದಾರಿ ಎಂಬ ಸಲಹೆ ಕೊಟ್ಟರು. (ಗ್ರೆಗ್ ಚಾಪೆಲ್ ಹೀಗೇಯೇ ಕೆಲವು ಹಿರಿಯ ಆಟಗಾರರನ್ನು ಟೀಕಿಸಿಯೇ ತಮ್ಮ ಕೆಲಸ ಕಳೆದುಕೊಂಡರು.ಅವರ ನಂತರ ಬಂದ ಕೋಚ್‌ಗಳೆಲ್ಲ ಎಲ್ಲರೊಡನೆ ಹೊಂದಿಕೊಂಡು ಆರಾಮವಾಗಿದ್ದಾರೆ!) ಕೆಲವು ಪಂದ್ಯಗಳಲ್ಲಿ ಬರೀ ಬೆಂಚಿನ ಮೇಲೆ ಕುಳಿತ ಯುವಿಗೆ, ‘ಚೆನ್ನಾಗಿ ಆಡುತ್ತಿದ್ದರೆ ಮಾತ್ರ ಜನ ಮರ್ಯಾದೆ ಕೊಡುತ್ತಾರೆ’ ಎಂಬ ಜ್ಞಾನೋದಯ ಆಯಿತು. ಮೊಳಕಾಲು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಕೊಂಡ ಮೇಲೆ ಅವರು ಸ್ವಲ್ಪ ದಪ್ಪ ಆದರು. ಫೀಲ್ಡಿಂಗ್‌ನಲ್ಲಿ ಮೊದಲಿದ್ದ ಚುರುಕುತನ ಸ್ವಲ್ಪ ಕಡಿಮೆ ಆಯಿತು. ಆದರೆ ಅವರ ಬ್ಯಾಟಿಂಗ್ ಮೊದಲಿನ ಹಾಗೇ ಇತ್ತು. ಈಗ ಅವರೊಬ್ಬ ಪರಿಪೂರ್ಣ ಅಲ್‌ರೌಂಡರ್. ಢಾಕಾದಲ್ಲಿ ಭಾರತ ಆಡಿದ ಮೊದಲ ಲೀಗ್ ಪಂದ್ಯದಲ್ಲಿ ಯುವರಾಜ್‌ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಬೌಲ್ ಮಾಡಿದ ಏಳು ಓವರುಗಳಲ್ಲಿ 42 ರನ್‌ಗಳಿಗೆ ಒಂದೂ ವಿಕೆಟ್ ಸಿಗಲಿಲ್ಲ. ಇಂಗ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅವರು 50 ಎಸೆತಗಳಲ್ಲಿ 58 ರನ್ ಹೊಡೆದರು. ಆದರೆ ಇಂಗ್ಲೆಂಡ್ ವಿರುದ್ಧವೂ ಏಳು ಓವರುಗಳಲ್ಲಿ 46 ರನ್ನುಗಳಿಗೆ ಒಂದೂ ವಿಕೆಟ್ ಸಿಗಲಿಲ್ಲ.ಇಂಗ್ಲೆಂಡ್ ವಿರುದ್ಧ ಅಚ್ಚರಿಯ ಜಯ ಗಳಿಸಿದ್ದ ಐರ್ಲೆಂಡ್, ಭಾರತಕ್ಕೂ ಕಿರಿಕಿರಿಯುಂಟುಮಾಡಬಹುದು ಎಂಬ ಭಾವನೆ ಜನರಲ್ಲಿತ್ತು. ಆದರೆ ಯುವರಾಜ್ ಅದಕ್ಕೇ ಅವಕಾಶವನ್ನೇ ಕೊಡಲಿಲ್ಲ. 50 ರನ್ ಹೊಡೆದ ಅವರು 31 ರನ್ನುಗಳಿಗೆ ಐದು ವಿಕೆಟ್ ಪಡೆದರು. ಹಾಲೆಂಡ್ ವಿರುದ್ಧವೂ ಅರ್ಧಶತಕ ಹೊಡೆದು ಎರಡು ವಿಕೆಟ್ ಪಡೆದರು. ಯುವರಾಜ್ 2003 ಮತ್ತು 2007 ರ ವಿಶ್ವ ಕಪ್‌ನಲ್ಲಿ ಆಡಿದ್ದರಾದರೂ ಅವರಿಂದ ಹೇಳಿಕೊಳ್ಳುವಂಥ ಆಟ ಬಂದಿರಲಿಲ್ಲ. ವಿಂಡೀಸ್ ವಿರುದ್ಧದ ಶತಕ, ವಿಶ್ವ ಕಪ್‌ನಲ್ಲಿ ಅವರ ಮೊದಲ ಶತಕ. ಈಗ ಲೀಗ್ ಹಂತ ಮುಗಿದು ನಾಕ್‌ಔಟ್ ಹಂತ ಆರಂಭವಾಗಲಿದೆ.ಯುವಿ ಅವರ ಆಲ್‌ರೌಂಡ್ ಆಟಕ್ಕೆ ಹೆಚ್ಚಿನ ಮಹತ್ವ ದೊರೆಯಲಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯದ ವೇಗದ ಬೌಲರುಗಳಾದ ಟೇಟ್ ಮತ್ತು ಬ್ರೆಟ್ ಲೀ ಅವರನ್ನು ಯುವಿ ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲಕರ ಅಂಶ. ಟ್ವೆಂಟಿ-20 ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಅವರು ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್‌ನ ಎಲ್ಲ ಆರೂ ಎಸೆತಗಳನ್ನು ಸಿಕ್ಸರ್‌ಗೆ ಎತ್ತಿದ್ದರು. ಆದರೆ 50 ಓವರುಗಳ ಆಟದಲ್ಲಿ ಶತಕ ಗಳಿಸಲು ತಾಳ್ಮೆಯೂ ಬೇಕಾಗುತ್ತದೆ. ಭಾರತದ ಮಧ್ಯಮ ಕ್ರಮಾಂಕ ದಿಢೀರನೆ ಕುಸಿಯುತ್ತಿರುವ ಈಗಿನ ಸ್ಥಿತಿಯಲ್ಲಿ ಯುವರಾಜ್ ಆಡುತ್ತಿರುವ ಆಟ ಸೂಕ್ತವಾಗಿದೆ. ಇದು ಮುಂದುವರಿದಲ್ಲಿ ಭಾರತ ಫೈನಲ್ ವರೆಗೆ ಮುನ್ನಡೆಯುವುದು ಕಷ್ಟವಾಗಲಿಕ್ಕಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.