ಶನಿವಾರ, ಸೆಪ್ಟೆಂಬರ್ 21, 2019
24 °C

ಸೊಗಸಾದ ನರ್ತನ

Published:
Updated:

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಮಾನಸ ಕಂಬಣ್ಣ ಅವರ ಭರತನಾಟ್ಯ ರಂಗಪ್ರವೇಶ `ಕಲಾವಿದೆ, ಗುರು, ಪಕ್ಕವಾದ್ಯ ಮತ್ತು ಕಲಾ ರಸಿಕರನ್ನು~ ಸುಂದರವಾಗಿ ಬೆಸೆದ ಕಾರ್ಯಕ್ರಮ.ಮಾನಸ ನಾಡಿನ ಪ್ರಖ್ಯಾತ ಭರತನಾಟ್ಯ ಗುರು ಶುಭ ಧನಂಜಯರ ಬಳಿ ಎಂಟು ವರ್ಷಗಳಿಂದ ಪಡೆದ ನೃತ್ಯ ಶಿಕ್ಷಣದ ಆಳ, ಅರಿವಿನ ಉತ್ತುಂಗವನ್ನು ಪ್ರೇಕ್ಷಕರಿಗೆ ಪ್ರದರ್ಶಿಸಿದರು.ಆರಂಭದಲ್ಲಿ ನಾಟ್ಯರಾಗದ ಆದಿತಾಳದಲ್ಲಿ ಪುಷ್ಪಾಂಜಲಿ ಪ್ರಾರ್ಥನಾ ನೃತ್ಯ ಮಾಡಿದರು. ನಂತರ ಗಣೇಶ ವಂದನೆ. ರಾಗಹಂಸ ವಿನೋದಿನಿ ಮತ್ತು ಆದಿತಾಳದಲ್ಲಿಯ ನರ್ತನದಲ್ಲಿ ವಿನಾಯಕನ ನಾನಾ ರೂಪಗಳು, ಅಹಂಕಾರ ಭರಿತನಾದ ತಂದೆ ಶಿವನಿಂದ ಗಜರೂಪ ಪಡೆದ ಬಗೆಯನ್ನು, ರಾವಣದ ಬುದ್ಧಿ ಭ್ರಮೆಯನ್ನು ತಿದ್ದಿದ ರೀತಿಯನ್ನು ಭಕ್ತಿ ಭಾವಪರವಶರಾಗಿ ನರ್ತಿಸಿದರು.ಚಾರುಕೇಶಿ ರಾಗದ ಆದಿತಾಳದಲ್ಲಿರುವ ಜತಿಸ್ವರವನ್ನು ಚಾಕಚಕ್ಯತೆಯಿಂದ ಗುರುಗಳ ತಾಳಕ್ಕೆ ತಕ್ಕಂತೆ, ಪಕ್ಕವಾದ್ಯಕ್ಕೆ ಸರಿಸಾಟಿಯಾಗಿ ಅಭಿನಯಿಸಿದರು.ಮಾನಸ ಪ್ರದರ್ಶಿಸಿದ ಮತ್ತೊಂದು ಮನೋಲ್ಲಾಸ ನೃತ್ಯ ರಾಮಚಂದ್ರ ಭಜನ್. ತುಳಸಿದಾಸರ ರಚನೆಯು ರಾಗಮಾಲಿಕೆ ಮತ್ತು ಮಿಶ್ರಚಾಪು ತಾಳದಿಂದ ಕೂಡಿತ್ತು. ರಾಮಚಂದ್ರನ ಮಹಿಮೆಯನ್ನು, ಆತನ ವಚನ ಪರಿಪಾಲನೆಯನ್ನು ಬಹಳ ಸುಂದರವಾಗಿ ನೃತ್ಯದ ಮೂಲಕ ಅಭಿನಯಿಸಿ ಚಾತುರ್ಯ ಮೆರೆದರು.ನಂತರ ರಂಗಪ್ರವೇಶದ ಪ್ರಮುಖ ಘಟ್ಟ ವರ್ಣ. ಮಾನಸ ತನ್ನ ಗುರು ಶುಭ ಧನಂಜಯರಲ್ಲಿ ಪಡೆದ ನೃತ್ಯ ಕೌಶಲ್ಯ ಪ್ರದರ್ಶಿಸುವ ಘಟ್ಟ.ಇಲ್ಲಿ ಅವರು ಆಯ್ಕೆ ಮಾಡಿಕೊಂಡಿದ್ದು `ಭುವನ ಸುಂದರ~ ವರ್ಣ (ರಚನೆ: ದ್ವಾರಕಿ ಕೃಷ್ಣಸ್ವಾಮಿ, ತಾಳ: ಆದಿ) ಮಾಧವನನ್ನು ಕಾಣದೆ ಪರಿತಪಿಸುವ, ತಂಗಾಳಿಯು ಬಿಸಿಯಾಗಿ ಕಾಣುವ, ವಿರಹದ ಆ ಸನ್ನಿವೇಶವನ್ನು ಮನಮುಟ್ಟುವಂತೆ ಅಭಿನಯಿಸಿದರು.ನಂತರ ಡಿ.ವಿ. ಗುಂಡಪ್ಪನವರ `ಏನೇ ಶುಕಭಾಷಿಣಿ~ ಎಂಬ ಅಂತಃಪುರ ಗೀತೆಯಲ್ಲಿ ಶುಕವನ್ನು ನುಡಿಯುವ ಗಿಳಿಯ ಕುರಿತು, ಅದರಿಂದ ಹೊಗಳುವ, ತೆಗಳುವ, ಇರಿಸು ಮುರಿಸಾಗುವ, ಚಿಂತೆ ಮತ್ತು ಸಂತೋಷಗಳ ಸುದ್ದಿ ಮುಟ್ಟಿಸುವ  ಪರಿ, ಪರಿಣಾಮವನ್ನು ಮನೋಹರವಾಗಿ ಅಭಿನಯಿಸಿದರು.ಎರಡು ಗಂಟೆಗಳ ಕಾಲ ನಡೆದ ರಂಗ ಪ್ರವೇಶದಲ್ಲಿ ಸೊಗಸಾಗಿ, ನಿರಾಯಾಸವಾಗಿ ಮಾನಸ ನರ್ತಿಸಿದರು. ನಟುವಾಂಗ: ವಿದುಷಿ ಗುರು ಶುಭ ಧನಂಜಯ. ಹಾಡುಗಾರಿಕೆ: ವಿದ್ವಾನ್ ಮೋಹನ್ ಪುಟ್ಟಿ.ಮೃದಂಗ: ವಿದ್ವಾನ್ ಚಂದ್ರಶೇಖರ್. ಪಿಟೀಲು: ವಿದ್ವಾನ್ ಹೇಮಂತ್ ಕುಮಾರ್, ಕೊಳಲು: ವಿದ್ವಾನ್ ವೇಣುಗೋಪಾಲ್. ವಾದ್ಯ ಸಂಗಮ: ವಿದ್ವಾನ್ ಪ್ರಸನ್ನ ಕುಮಾರ್ ಸಮಯೋಚಿತವಾಗಿ ಬೆಂಬಲಿಸಿದರು.  

Post Comments (+)