ಶುಕ್ರವಾರ, ಜೂನ್ 25, 2021
29 °C

ಸೌಲಭ್ಯಗಳಿಲ್ಲದೆ ನರಳುತ್ತಿರುವ ಮಾವಿನಮಟ್ಟಿ ಗ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಲಭ್ಯಗಳಿಲ್ಲದೆ ನರಳುತ್ತಿರುವ ಮಾವಿನಮಟ್ಟಿ ಗ್ರಾಮ

ಸುರಪುರ: ಸ್ವಾತಂತ್ರ್ಯ ದೊರೆತು 6 ದಶಕಗಳೆ ಕಳೆದರೂ ಇದುವರೆಗೂ ಅನೇಕ ಗ್ರಾಮಗಳು ಕುಗ್ರಾಮಗಳಾಗಿಯೇ ಉಳಿದಿದೆ. ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಎಂಬ ಖಾತೆಯಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂಬ ಜನನಾಯಕರ ಭಾಷಣ ಅದಕ್ಕಷ್ಟೆ ಸೀಮಿತವಾಗಿಬಿಟ್ಟಿದೆ.ಇನ್ನೂ ಬಹುತೇಕ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳೆ ಇಲ್ಲ. ಬಹುತೇಕ ಗ್ರಾಮೀಣರು ನಗರದಿಂದ ದೂರವಾಗಿಯೇ ಉಳಿದು ಬಿಟ್ಟಿದಾರೆ. ಇಂತಹ ಗ್ರಾಮಗಳಲ್ಲಿ ಅಲ್ಲಿನ ನಿವಾಸಿಗಳ ಪಾಡು ಹದ್ದಿಗಿಂತ ಕಡೆ. ಇದಕ್ಕೆ ಉತ್ತಮ ಉದಾಹರಣೆ ಸುರಪುರ ತಾಲ್ಲೂಕಿನ ಮಾವಿನಮಟ್ಟಿ ಗ್ರಾಮ.ಈ ಗ್ರಾಮ ಸುರಪುರ ತಾಲ್ಲೂಕಿನಲ್ಲಿ ಬರುತ್ತಿದ್ದರೂ ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಇದರಿಂದ ಎರಡೂ ಕ್ಷೇತ್ರಗಳ ಶಾಸಕರಿಂದ ಮಲತಾಯಿ ಧೋರಣೆ ಎದುರಿಸುತ್ತಿದೆ. ಮಾಲಗತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮ ಅಂದಾಜು 1500 ಜನಸಂಖ್ಯೆ ಹೊಂದಿದೆ. ಇರುವ 250 ಮನೆಗಳಲ್ಲಿ ಬಹುತೇಕ ಗುಡಿಸಲುಗಳೆ.ಗ್ರಾಮದಲ್ಲಿ ಒಂದು ಬಾವಿ ಇದೆ. ಬಾವಿಯ ನೀರು ಕೆಟ್ಟು ಹೋಗಿದೆ. ಇಡೀ ಗ್ರಾಮಕ್ಕೆ ಒಂದೆ ಬೋರವೆಲ್ ಹಾಕಲಾಗಿದೆ. ಅದು ಕೆಟ್ಟರಂತೂ ಗ್ರಾಮಸ್ಥರ ಪಾಡು ದೇವರೆ ಬಲ್ಲ. ದಿನಾಲು ಸಾಲುಗಟ್ಟಿ ನೀರು ತರಬೇಕು. ಮೂರು ವರ್ಷಗಳ ಹಿಂದೆ ಕಿರು ನೀರು ಸರಬರಾಜು ಯೋಜನೆಯಲ್ಲಿ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೀರಿನ ಟ್ಯಾಂಕ್ ನಿರುಪಯುಕ್ತವಾಗಿದೆ.ಗ್ರಾಮದಲ್ಲಿ ಸಿ. ಸಿ. ರಸ್ತೆ, ಚರಂಡಿ ಇಲ್ಲ. ನೈರ್ಮಲ್ಲೆಕರಣವೆಂದರೆ ಏನೆಂದು ಗ್ರಾಮಸ್ಥರಿಗೆ ಗೊತ್ತಿಲ್ಲ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬಸ್ ಸೌಕರ್ಯವಿಲ್ಲ. ಖಾಸಗಿ ವಾಹನಗಳನ್ನೆ ಅವಲಂಬಿಸಬೇಕಿದೆ. ರೋಗಿಗಳ, ಗರ್ಭಿಣಿಯರ, ವೃದ್ಧರ ಗೋಳು ಯಾರೂ ಕೇಳುವಂತಿಲ್ಲ. ಸಾರಿಗೆ ಬಸ್ ಹಿಡಿಯಬೇಕೆಂದರೆ 3 ಕಿಮಿ ಅಂತರದಲ್ಲಿರುವ ಮುಖ್ಯ ರಸ್ತೆಗೆ ಬರಬೇಕು.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 80 ಮಕ್ಕಳ ದಾಖಲಾತಿಯಿದೆ. ಇಬ್ಬರು ಶಿಕ್ಷಕರು ಇದ್ದಾರೆ. ಬಸ್ ಸೌಕರ್ಯ ಇಲ್ಲದಿರುವುದರಿಂದ ಶಿಕ್ಷಕರು ಸಮರ್ಪಕವಾಗಿ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬೇರೆ ಶಿಕ್ಷಕರು ಈ ಗ್ರಾಮಕ್ಕೆ ಸೇವೆಗೆ ಬರಲು ಸುತಾರಾಂ ಒಪ್ಪುವುದಿಲ್ಲ. ಕಾಲುವೆಗೆ ನೀರು ಹರಿಸುವುದಿಲ್ಲವೆಂದು ಪ್ರಕಟಣೆ ಹೊರಡಿಸಿದ ಹಿನ್ನೆಲೆಯಲ್ಲಿ ಗ್ರಾಮದ ಬಹುತೇಕ ಕೂಲಿ ಕಾರ್ಮಿಕರು ದೂರದ ಊರುಗಳಿಗೆ ಗುಳೆ ಹೋಗಿದ್ದಾರೆ. ಗ್ರಾಮದಲ್ಲಿ ಜನರ ಸಂಖ್ಯೆ ಕಡಿಮೆಯಾಗಿರುವುದರಿಂದ ಕಳ್ಳರ ಹಾವಳಿ ಉಂಟಾಗಿದೆ.ಗ್ರಾಮದಲ್ಲಿ ಸರ್ಕಾರದ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಒಂದು ರೀತಿಯ ನರಕದ ವಾತಾವರಣದಲ್ಲಿ ಈ ಗ್ರಾಮದ ಜನ ಜೀವನ ಸಾಗಿಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಬೇಕಾದಷ್ಟು ಆಶ್ವಾಸನೆಗಳನ್ನು ಕೊಟ್ಟು ಹೋಗುವ ಜನ ಪ್ರತಿನಿಧಿಗಳು ನಂತರ ಗ್ರಾಮದ ಕಡೆ ಮುಖ ಮಾಡುವುದಿಲ್ಲ. ಗ್ರಾಮಕ್ಕೆ ಸೌಲಭ್ಯ ಒದಗಿಸಬೇಕೆಂದು ಮಾಡಿದ ಮನವಿಗಳು ಕಸದ ಬುಟ್ಟಿ ಸೇರಿವೆ.ಗ್ರಾಮಕ್ಕೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಯುತ್ ಫಾರ್ ಹ್ಯೂಮನ್ ರೈಟ್ಸ್ ಅಧ್ಯಕ್ಷ ಶಿವರಾಜನಾಯಕ್, ನಿರ್ದೇಶಕ ಅಮರೇಶ ದೊರೆ, ಗ್ರಾಮದ ಮುಖಂಡರಾದ ದೇವರಾಜ ಕನ್ನೆಳ್ಳಿ, ಭೀಮಣ್ಣ ಮೇಟಿ, ದೇವಪ್ಪ ಗಿಂಡಿ, ಸಿದ್ದಪ್ಪ ಕಾಶಿ, ಭೀಮಣ್ಣ ಟಣಕೆದಾರ, ಮಾನಪ್ಪ ದಾಸರ ಆಗ್ರಹಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.