ಭಾನುವಾರ, ಜೂನ್ 20, 2021
29 °C

ಸೌಲಭ್ಯ ವಂಚಿತ ವಿಟ್ಲ ಸರ್ಕಾರಿ ಬಸ್ ನಿಲ್ದಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ:  ಕಾಸರಗೋಡು ರಸ್ತೆಯಲ್ಲಿರುವ ವಿಟ್ಲ ಸರ್ಕಾರಿ ಬಸ್ ನಿಲ್ದಾಣ ಮೂಲ ಸೌಕರ್ಯಗಳಿಂದ ವಂಚಿತಗೊಂಡಿದ್ದು ಶೋಚನೀಯ ಸ್ಥಿತಿಯಲ್ಲಿದೆ. ಹೀಗಾಗಿ ಇಲ್ಲಿಗೆ ಬರಲು ಪ್ರಯಾಣಿಕರು ಹಿಂಜರಿಯುವ ಪರಿಸ್ಥಿತಿಯಿದೆ.ನಿಲ್ದಾಣದ ರಸ್ತೆ ಡಾಂಬರೀಕರಣವಾಗಿಲ್ಲ. ಅಪಾಯ ಆಹ್ವಾನಿಸುವ ಹೊಂಡಗಳಿವೆ. ನಿಲ್ದಾಣಕ್ಕೆ ಆವರಣ ಗೋಡೆಯೂ ಇಲ್ಲ. ವಿದ್ಯುದ್ದೀಪಗಳು ಉರಿಯುವುದಿಲ್ಲ. ನೀರಿನ ವ್ಯವಸ್ಥೆಯೂ ಇಲ್ಲ. ಒಟ್ಟಾರೆ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೊ ಎನ್ನುತ್ತಿದೆ.ಪ್ರಯಾಣಿಕರ ಹಲವು ವರ್ಷಗಳ ಬೇಡಿಕೆ ಮತ್ತು ಹೋರಾಟಕ್ಕೆ ಮಾಜಿ ಶಾಸಕರಾದ ಕೆ.ಎಂ.ಇಬ್ರಾಹಿಂ ಹಾಗೂ ಪದ್ಮನಾಭ ಕೊಟ್ಟಾರಿ ಸ್ಪಂದಿಸಿದ ಫಲವಾಗಿ ನಾಲ್ಕು ವರ್ಷ ಹಿಂದೆ ಸರ್ಕಾರಿ ಬಸ್ ನಿಲ್ದಾಣ ಮಂಜೂರಾಗಿತ್ತು.  ಶಾಸಕಿ ಮಲ್ಲಿಕಾ ಪ್ರಸಾದ್ ಅವರಿಂದ ಚಾಲನೆಯಾಗಿ ಪ್ರಯಾಣಿಕರ ಬೇಡಿಕೆ ಈಡೇರಿ 4 ವರ್ಷ ಕಳೆದಿವೆ. ಆದರೆ ಮೂಲಸೌಕರ್ಯಗಳಿಲ್ಲದೇ ಪ್ರಯಾಣಿಕರೇ ಇಲ್ಲಿಗೆ ಬರುತ್ತಿಲ್ಲ!ಸಾರಿಗೆ ಸಚಿವ ಆರ್.ಆಶೋಕ್ ಅವರಿಂದ ಉದ್ಘಾಟನೆಗೊಂಡ ಬಸ್ ನಿಲ್ದಾಣದಲ್ಲಿ ಅಗತ್ಯ ನೀರಿನ ವ್ಯವಸ್ಥೆಯೇ ಇಲ್ಲ. ಇಲ್ಲಿರುವ ಹೊಂಡಗಳಿಂದ ಮಳೆಗಾಲದಲ್ಲಿ ಪ್ರಯಾಣಿಕರು ಬಸ್ಸಿನಿಂದ ಹತ್ತುವಾಗ ಮತ್ತು ಇಳಿಯುವಾಗ ಮೊಣಕಾಲಿನವರೆಗೆ ಕೆಸರು ಎರಚುತ್ತದೆ.ನಿಲ್ದಾಣ ವಿಟ್ಲ ಪೇಟೆಯಿಂದ ಸ್ವಲ್ಪ ದೂರದಲ್ಲಿದೆ. ದೂಳಿನಿಂದಾಗಿ ನಿಲ್ದಾಣಕ್ಕೆ ಹೋಗಲು ಪ್ರಯಾಣಿಕರಿಗೆ ಹಿಂಜರಿಯುವ ಸ್ಥಿತಿಯಿದೆ. ವಿಟ್ಲ ವಿಧಾನಸಭಾ ಕ್ಷೇತ್ರ ಪುತ್ತೂರಿಗೆ ಹಂಚಿಹೋಗಿದ್ದರಿಂದ ಇಲ್ಲಿಯ ಅಭಿವೃದ್ಧಿಗೆ ಎರವಾಗಿದೆ. ಅಳಿಕೆ, ಪೆರುವಾಯಿ, ಕಾಸರಗೋಡು, ಕನ್ಯಾನ, ಉಪ್ಪಳ ಮುಂತಾದ ಪ್ರದೇಶಕ್ಕೆ ಹೋಗುವ ಜನರಿಗೆ ಪ್ರಯಾಣಿಸಲು ಸರ್ಕಾರಿ ಬಸ್ಸಿನ ಅನಿವಾರ್ಯತೆ ಇದೆ. ಆದರೆ ಇಲ್ಲಿಯ ಅವ್ಯವ್ಯವಸ್ಥೆ ಕಾರಣ ಜನರು ಇಲ್ಲಿಗೆ ಬರಲು ಭಯಪಡುವ ಸ್ಥಿತಿಯಿದೆ.ವಿಟ್ಲ ಕೆಎಸ್‌ಆರ್‌ಟಿಸಿ ಬಸ್ಸು ತಂಗುದಾಣದ  ಸಮಸ್ಯೆಗಳು ಒಂದಲ್ಲ, ಎರಡಲ್ಲ. ಇಲ್ಲಿ ಪ್ರಯಾಣಿಕರು ಬರಬೇಕಾದರೆ ಮೂಲ ಸೌಲಭ್ಯಗಳು ಬೇಕು. ಅದಕ್ಕಿಂತಲೂ ಹೆಚ್ಚಾಗಿ ತಂಗುದಾಣದ ಒಳಗೆ ಬಸ್ಸುಗಳು  ಬರಬೇಕಾಗಿದೆ. ಇಲ್ಲಿನ ಸಿಬ್ಬಂದಿಗೆ ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.