ಪ್ರಾಚೀನ ಶಿಲ್ಪಗಳ ತವರು, ಜಾತಿ-ಧರ್ಮಗಳ ಸೌಹಾರ್ದದ ಬೀಡಾಗಿ ಹಳೇಸೊರಬ ಒಂದು ಅಪೂರ್ವ ಗ್ರಾಮವಾಗಿ ತನ್ನ ಅಂತರಂಗ ತೆರೆದಿಡುತ್ತದೆ.

ಗ್ರಾಮದಲ್ಲಿ ಈಡಿಗರ ಪ್ರಾಬಲ್ಯ ಹೆಚ್ಚಾಗಿದ್ದು, ಲಿಂಗಾಯತ, ಮಡಿವಾಳ, ಪರಿಶಿಷ್ಟ ಜಾತಿ, ಪಂಗಡ... ಹೀಗೆ ವಿವಿಧ ಸಮುದಾಯದ ಜನರು ಇಲ್ಲಿ ವಾಸವಾಗಿದ್ದು, ಎಲ್ಲಾ ಸಮುದಾಯದವರು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶೈಕ್ಷಣಿಕವಾಗಿ ಮುಂದುವರಿದವರಿದ್ದರೂ ಆರ್ಥಿಕವಾಗಿ ಬಹಳಷ್ಟು ಹಿಂದುಳಿದವರಿದ್ದಾರೆ. ಗ್ರಾಮದಲ್ಲಿರುವ ಎರಡು ಕೆರೆಗಳು ಇಡೀ ಗ್ರಾಮದ ರೈತರು ಆರ್ಥಿಕವಾಗಿ ಮುಂದುವರಿಯಲು ಸಹಕರಿಸಿವೆ.

ಈ ಗ್ರಾಮದಲ್ಲಿ ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಬಹಳಷ್ಟು ಜನ ಗೇಣಿದಾರರ ಹೋರಾಟದ ಪ್ರಯೋಜನ ಪಡೆದಿದ್ದಾರೆ. ಸಮಾಜವಾದಿ ಮುತ್ಸದ್ದಿ ಕುಪ್ಪಗಡ್ಡೆ ಮರಿಯಪ್ಪ ಅವರ ಒಡನಾಟ ಹೊಂದಿದ್ದ ಬಹಳಷ್ಟು ಜನರು ಇಲ್ಲಿದ್ದಾರೆ. ರೈತಾಪಿ ವರ್ಗದ ಜನರೇ ಗ್ರಾಮದಲ್ಲಿ ಹೆಚ್ಚಾಗಿದ್ದು, ಇಲ್ಲಿನ ಜನರ ಮುಖ್ಯ ಜೀವನಾಧಾರ ಕೃಷಿ. ಬತ್ತ, ಮುಸುಕಿನ ಜೋಳ, ಮೆಣಸು, ಶುಂಠಿ, ಅಡಿಕೆ, ಬಾಳೆ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾರೆ.

ಗ್ರಾಮದಲ್ಲಿ 1,400 ಎಕರೆ ಅರಣ್ಯ ಭೂಮಿ, 2 ಎಕರೆ ಗೋಮಾಳ, 400 ಎಕರೆ ರೆವೆನ್ಯೂ ಭೂಮಿ ಹಾಗೂ 1,200 ಎಕರೆ ಹಿಡುವಳಿ ಭೂಮಿ ಇದೆ. ಸ್ವಾತಂತ್ರ್ಯ ಹೋರಾಟಗಾರ ಎಚ್. ರಾಮಪ್ಪ ಹಿತ್ತಲ ಮನೆ ಗ್ರಾಮದಲ್ಲಿದ್ದು, ನಾಟಿ ವೈದ್ಯರಾಗಿ ಜನಸೇವೆ ಮಾಡುತ್ತಿದ್ದಾರೆ. ಗೆದ್ದಪ್ಪ, ರೇವಣಪ್ಪ, ಮನಮನೆ ಕೆರಿಯಪ್ಪ ಸಾಂಸ್ಕೃತಿಕವಾಗಿ ಪೌರಾಣಿಕ ನಾಟಕಗಳನ್ನಾಡಿಸುವ ಪರಂಪರೆ ಹೊಂದಿದ್ದು, ಅದಕ್ಕೆ ಸಂಬಂಧಪಟ್ಟಂತೆ ಬಂಗಾರಪ್ಪ ಮಿಂಡಗಳ್ಳಿ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

1985ರಿಂದಲೂ ಈ ಗ್ರಾಮದಲ್ಲಿ ಬಹಳಷ್ಟು ಜನ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದು, ಹಲವರು ತಾಲ್ಲೂಕು ಪಂಚಾಯ್ತಿ ಸದಸ್ಯರು ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಗ್ರಾಮದ ಶಿಕ್ಷಕ ಬಿ. ಗೋಪಾಲಪ್ಪ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದು ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಗ್ರಾಮದ ನಾಮ ಹಿನ್ನೆಲೆ: ಸೊರಬ ಪಟ್ಟಣದ ಸನಿಹದಲ್ಲಿ ಇರುವ ಹಳೇಸೊರಬ ಮೂಲತಃ ಸುರಭಿಪುರ ಆಗಿತ್ತು. ಇಲ್ಲಿನ `ಸುರಭಿ~ ಎಂಬ ಆಕಳು ಸೊರಬದ ರಂಗನಾಥ ದೇವರಿಗೆ ಹಾಲಿನ ಅಭಿಷೇಕ ಮಾಡುತ್ತಿತ್ತೆಂಬ ಪ್ರತೀತಿ ಇದ್ದು, ಕಾಲ ಕ್ರಮೇಣ ಈಗಿನ ಸೊರಬ ಪಟ್ಟಣವಾಗಿ ಬೆಳೆದು ಮೂಲ ಸುರಭಿಪುರಕ್ಕೆ `ಹಳೇಸೊರಬ~ ಎಂಬ ಹೆಸರು ನಾಮಕರಣವಾಯಿತೆಂಬ ಮಾತು ವಾಡಿಕೆಯಲ್ಲಿದೆ.

ಐತಿಹಾಸಿಕ ಹಿನ್ನೆಲೆ: ಹಳೇಸೊರಬ ಗ್ರಾಮವು 3ನೇ ಶತಮಾನದ ಗಂಗರ ಕಾಲದ ಹಾಗೂ ಹೊಯ್ಸಳರು, ಕೆಳದಿಯ ಅರಸರು, ಬನವಾಸಿ ಕದಂಬರ ಆಳ್ವಿಕೆಗೆ ಒಳಪಟ್ಟಿತ್ತು. 12, 13ನೇ ಶತಮಾನದ ಅನೇಕ ಶಾಸನಗಳು ಪುರಾವೆ ಒದಗಿಸುತ್ತವೆ. 12-13ನೇ ಶತಮಾನದ ಶಿವ ದೇಗುಲದೊಂದಿಗೆ ಅನೇಕ ಪಾಳುಬಿದ್ದ ಮೂರ್ತಿಗಳು ಕಾಣ ಸಿಗುತ್ತವೆ.

ಇದೇ ಕಾಲದ ವೇಣುಗೋಪಾಲನ ಮೂರ್ತಿಯೂ ಇದ್ದು, ಗ್ರಾಮದಲ್ಲಿ ಜೈನ ಧರ್ಮವಿದ್ದ ಬಗ್ಗೆ ಕುರುಹು ನೀಡುವ ಕೆಲವು ಬಸದಿ ಕಲ್ಲುಗಳು ಕಂಡು ಬರುತ್ತವೆ. ಸುಮಾರು 16-17ನೇ ಶತಮಾನದೆನ್ನಬಹುದಾದ ವೀರಭದ್ರ, ಆಂಜನೇಯ ಗುಡಿಯೂ ಇದ್ದು, ಭೈರವ ವಿಗ್ರಹ ಗಮನ ಸೆಳೆಯುತ್ತದೆ.

ಸೊರಬ ತಾಲ್ಲೂಕಿನ ಎಲ್ಲೆಡೆ ಮಾರಿಯ ಕಾಷ್ಠ ವಿಗ್ರಹ ಕಂಡು ಬಂದರೆ, ಇಲ್ಲಿ ವಿಶೇಷವಾಗಿ ನೂರಾರು ವರ್ಷ ಹಳೆಯದೆನ್ನಬಹುದಾದ ಶಿಲಾ ವಿಗ್ರಹ ಕಂಡು ಬಂದಿದೆ. ಇದೇ ದೇಗುಲದಲ್ಲಿ ಹಳೆಯ ದುರ್ಗೆ, ಭೈರವನ ಮೂರ್ತಿ ಕೂಡಾ ಇದೆ.

ದೇವಸ್ಥಾನಗಳು:  ಗ್ರಾಮದ ಹೊರಭಾಗದಲ್ಲಿ ಇರುವ ಪಾಳು ಬಿದ್ದ ಬಸವಣ್ಣ ದೇವಸ್ಥಾನ, ರಾಮೇಶ್ವರ ದೇವಸ್ಥಾನ, ಮಾರಮ್ಮ ದೇವಸ್ಥಾನ, ಆಂಜನೇಯ ದೇವಸ್ಥಾನ, ವೀರಭದ್ರ ದೇವಸ್ಥಾನ, ಮೈಲಾರ ಲಿಂಗೇಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ಕೊಳಲು ಕೃಷ್ಣ ದೇವಸ್ಥಾನ, ರಾಮೇಶ್ವರ, ಜೋಗಪ್ಪ ದೇವಸ್ಥಾನಗಳಿವೆ. ಗ್ರಾಮದ ಬಹಳಷ್ಟು ಜನರ ಆರಾಧ್ಯ ದೈವ ರಂಗನಾಥ ಹಾಗೂ ಚಂದ್ರಗುತ್ತಿ ರೇಣುಕಾ ದೇವಿ. ಪ್ರತಿ 5 ವರ್ಷಕ್ಕೆ ಒಮ್ಮೆ ಎಲ್ಲಾ ಜಾತಿಯವರು ಸೇರಿ ಒಗ್ಗಟ್ಟಾಗಿ ಮಾರಿಜಾತ್ರೆ ನಡೆಸುತ್ತಾರೆ.

ಗ್ರಾಮ ಪಂಚಾಯ್ತಿ: ಗ್ರಾಮದ ಹೊಸಪೇಟೆ ಬಡಾವಣೆಯಲ್ಲಿ ಗ್ರಾಮ ಪಂಚಾಯ್ತಿ ಕಚೇರಿ ಇದ್ದು, 18 ಸದಸ್ಯರ ಬಲ ಹೊಂದಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಹಳೇಸೊರಬ, ಹೊಸಪೇಟೆ ಹಕ್ಲು, ಜಂಗಿನಕೊಪ್ಪ, ಕರಡಿಗೆರೆ, ಚಿತ್ರಟ್ಟೆಹಳ್ಳಿ, ಓಟೂರು, ಜಯಂತಿ ಗ್ರಾಮ, ರಾಜೀವ ನಗರ, ನಡಹಳ್ಳಿ, ಜೇಡಗೆರೆ, ಮರೂರು, ತಾವರೆಹಳ್ಳಿ, ಯಲಸಿ, ಗುಂಡಶೆಟ್ಟಿಕೊಪ್ಪ ಗ್ರಾಮಗಳು ಸೇರುತ್ತವೆ.

ಶಿಕ್ಷಣ: ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಇದ್ದು, ಕಿರಿಯ ಪ್ರಾಥಮಿಕ ಶಾಲೆ ಇದೆ. ಶಾಲೆಯಲ್ಲಿ ಸುಮಾರು 60-70 ವಿದ್ಯಾರ್ಥಿಗಳಿದ್ದು, ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಂಘ- ಸಂಸ್ಥೆಗಳು: ಗ್ರಾಮದಲ್ಲಿ ರಾಮೇಶ್ವರ ಯುವಕ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಹಲವು ಸ್ತ್ರೀಶಕ್ತಿ ಸಂಘಗಳಿದ್ದು, ಈ ಸಂಘಗಳು ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಕೆಲಸ ನಿರ್ವಹಿಸುತ್ತಿವೆ. ಬಹಳ ವರ್ಷಗಳಿಂದ ಗ್ರಾಮಾಭಿವೃದ್ಧಿ ಸಮಿತಿ ರಚನೆಯಾಗಿದ್ದು, 11 ಜನ ಸದಸ್ಯರಿದ್ದು, ಗ್ರಾಮದ ಸಮಸ್ಯೆಗಳನ್ನು ಈ ಗ್ರಾಮಾಭಿವೃದ್ಧಿ ಸಮಿತಿ ಮೂಲಕ ಬಗೆಹರಿಸಿಕೊಳ್ಳುತ್ತಾರೆ.

ಕೆರೆಗಳು: ಗ್ರಾಮದಲ್ಲಿ ಸಂಪೆಗುಂಡಿ ಕೆರೆ, ಕಾನಗದ್ದೆ ಕೆರೆ, ಅರಳಿ ಕೆರೆ ಮತ್ತು ಸಾವಂತ ಕೆರೆ ಎಂಬ ಕೆರೆಗಳಿವೆ. ಈ ಕೆರೆಗಳಲ್ಲಿ ಅರಳಿಕೆರೆ ಮತ್ತು ಸಾವಂತಕೆರೆ (ಶಾಂತಕೆರೆ) ದೊಡ್ಡ ಕೆರೆಗಳಾಗಿದ್ದು, ಗ್ರಾಮದ ಹಲವಾರು ಎಕರೆ ಪ್ರದೇಶಗಳಿಗೆ ನೀರುಣಿಸುತ್ತಿವೆ.

ಸಮಸ್ಯೆಗಳು: ಗ್ರಾಮದಲ್ಲಿ ಸಮರ್ಪಕವಾದ ರಸ್ತೆ ಸೌಕರ್ಯವಿಲ್ಲ. ಊರಿನ ಒಳಭಾಗದಲ್ಲಿ ರಸ್ತೆಗಳ ಡಾಂಬರೀಕರಣ ಆದರೆ, ಜನ ಸಂಚಾರಕ್ಕೆ ಸೂಕ್ತವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೇ ಮಳೆಗಾಲದಲ್ಲಿ ಚರಂಡಿಯ ನೀರು ರಸ್ತೆಯ ಮೇಲೆಲ್ಲಾ ಹರಿಯುತ್ತದೆ. ಆದ್ದರಿಂದ, ಸುಸಜ್ಜಿತ ಚರಂಡಿ ವ್ಯವಸ್ಥೆ ಆಗಬೇಕು. ಅರಳಿಕೆರೆ ಮತ್ತು ಸಾವಂತಕೆರೆ ಹೂಳು ತುಂಬಿದ್ದು, ಅರ್ಧ ಭಾಗ ಹೂಳು ತೆಗೆಯಲಾಗಿದ್ದು, ಸಂಪೂರ್ಣ ಹೂಳು ತೆಗೆದರೆ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ.

ಗ್ರಾಮದ ಅರಳಿಕೆರೆ ರಸ್ತೆ ಅತೀ ಕಿರಿದಾಗಿದ್ದು, ವಾಹನ ಹಾಗೂ ಜನ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ. ಗ್ರಾಮದಲ್ಲಿ ಒಂದು ಕೊಳವೆ ಬಾವಿ ಇದ್ದು, ಕುಡಿಯುವ ನೀರಿಗೆ ಹಿನ್ನಡೆಯಾಗುತ್ತಿದೆ. ಇರುವ 2 ತೆರೆದ ಬಾವಿಗಳು ನೀರಿಲ್ಲದೇ ಒಣಗಿ ಹೋಗಿವೆ.

ಅಭಿಪ್ರಾಯ: ಹಳೇಸೊರಬ ಗ್ರಾಮಕ್ಕೆ ಸರ್ಕಾರ ಮುಖ್ಯವಾಗಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಜತೆಗೆ ರಸ್ತೆ ಹಾಗೂ ಒಳಚರಂಡಿ ಮಾಡುವ ಮೂಲಕ ಸಮಸ್ಯೆ ನೀಗಿಸಬೇಕು ಎಂದು ಗ್ರಾಮಸ್ಥರ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.