ಮೊದಲ ತಲೆಮಾರಿನ ಉದಯೋನ್ಮುಖ ಯುವ ಉತ್ಸಾಹಿಗಳು ಸ್ಟಾರ್ಟ್‌ಅಪ್ಸ್ (ನವೋದ್ಯಮ) ಆರಂಭಿಸಲು ಪೂರಕವಾದ ‘ಉದ್ಯಮ ಸ್ನೇಹಿ’ ಪರಿಸರ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ಟಾರ್ಟ್‌ಅಪ್ಸ್ ಕ್ರಿಯಾ ಯೋಜನೆ’ ಪ್ರಕಟಿಸಿದ್ದಾರೆ. ಇದು ದೇಶದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ತೋರಿಸುವಂತಹದ್ದು.

ಏಪ್ರಿಲ್ 1ರಿಂದ ಈ ಕ್ರಿಯಾ ಯೋಜನೆ ಜಾರಿಗೆ ಬರಲಿದೆ. ಹೊಸ ಉದ್ದಿಮೆಗಳನ್ನು ಆರಂಭಿಸಲು ಯುವ ಉದ್ಯಮಿಗಳಿಗೆ ಕಂಟಕವಾಗಿರುವ ಅನೇಕ ತೊಡಕುಗಳನ್ನು ಇದು ನಿವಾರಿಸಲಿದೆ. ಯುವಶಕ್ತಿಯ ಪ್ರಯೋಗಶೀಲ ಉದ್ಯಮಗಳಿಗೆ ಬೆಂಬಲ ಸಿಗಲಿದೆ.

ನವೋದ್ಯಮಿಗಳನ್ನು ಉತ್ತೇಜಿಸುವುದಕ್ಕಾಗಿ ಆದಾಯ ತೆರಿಗೆ ರಿಯಾಯಿತಿ, ಬಂಡವಾಳ ಮೇಲಿನ ಲಾಭಕ್ಕೆ ತೆರಿಗೆ ವಿನಾಯಿತಿ, ಕಾರ್ಮಿಕ ಕಾಯ್ದೆ ಸಡಿಲಿಕೆ, ಹಕ್ಕುಸ್ವಾಮ್ಯಗಳಿಗೆ ತ್ವರಿತ ಅಂಗೀಕಾರ ಮತ್ತು ಶೀಘ್ರ ನೋಂದಣಿಯಂತಹ ರಿಯಾಯಿತಿಗಳನ್ನು ಪ್ರಕಟಿಸಿರುವುದು ಸ್ಟಾರ್ಟ್‌ಅಪ್ಸ್‌ಗಳೂ ಸೇರಿದಂತೆ ದೇಶಿ ಕೈಗಾರಿಕಾ ವಲಯದಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಕೈಗಾರಿಕಾ ರಂಗಕ್ಕೆ ಬೇಕಾಗಿದ್ದ ಇಂತಹ ಉತ್ತೇಜನ ಕ್ರಮಗಳು ತುಂಬ ತಡವಾಗಿ ಪ್ರಕಟವಾಗುತ್ತಿದ್ದರೂ, ಚೇತರಿಕೆಯ ಏದುಸಿರು ಬಿಡುತ್ತಿರುವ ಅರ್ಥ ವ್ಯವಸ್ಥೆಗೆ ಸಕಾಲದಲ್ಲಿ ಶಕ್ತಿವರ್ಧಕವಾಗಿ ಕೆಲಸ ಮಾಡಲಿವೆ. ‘ಹೊಸ ಉದ್ಯೋಗಾವಕಾಶ ಸೃಷ್ಟಿಸುವ, ಸಮಾಜದ ಬೇಡಿಕೆ ಮತ್ತು ಅಗತ್ಯಗಳನ್ನು ಪೂರೈಸುವ ಮೊದಲ ತಲೆಮಾರಿನ ಉದ್ಯಮಶೀಲರ ಪ್ರಯತ್ನವೇ ಸ್ಟಾರ್ಟ್‌ಅಪ್ಸ್’ ಎಂದು ಪ್ರಧಾನಿ ಸ್ಪಷ್ಟಪಡಿಸಿರುವುದು ಈ ಬಗೆಗಿನ ಗೊಂದಲಗಳನ್ನೂ ದೂರ ಮಾಡಲಿದೆ.

ಹೊಸಬಗೆಯ ಉದ್ಯಮದ ಅಭಿವೃದ್ಧಿ, ಹೊಸ ಉತ್ಪನ್ನಗಳ ವಾಣಿಜ್ಯೀಕರಣ, ತಂತ್ರಜ್ಞಾನ ಅಥವಾ ಬೌದ್ಧಿಕ ಆಸ್ತಿಗಳಿಂದ ಪ್ರೇರಿತವಾದ ಸೇವೆಗಳೂ ಇದರ ವ್ಯಾಪ್ತಿಗೆ ಬರಲಿವೆ. ಫ್ಲಿಪ್‌ಕಾರ್ಟ್, ಪೇಟಿಎಂ, ಓಲಾಕ್ಯಾಬ್ಸ್, ಉಬರ್, ಓಯೊರೂಂ, ಸ್ನ್ಯಾಪ್‌ಡೀಲ್ ಸ್ಟಾರ್ಟ್‌ಅಪ್ಸ್‌ಗಳು ಈಗಾಗಲೇ ಮನೆಮಾತಾಗಿವೆ. ಇವುಗಳು ಗ್ರಾಹಕರ ಅನೇಕ ಅಗತ್ಯಗಳನ್ನು ಈಡೇರಿಸುತ್ತ ಲಾಭದಾಯಕವಾಗಿ ಮುನ್ನಡೆದಿರುವುದು ಇತರ ಅನೇಕ ನೂರಾರು ಯುವ ಉತ್ಸಾಹಿಗಳಿಗೆ ಪ್ರೇರಣೆಯಾಗಲಿದೆ.

ಸ್ಟಾರ್ಟ್‌ಅಪ್ಸ್‌ಗಳಲ್ಲಿ ಹಣ ಹೂಡಿಕೆ ಮಾಡುವವರಿಗೇನೂ ಕೊರತೆ ಇಲ್ಲ. ಇದಕ್ಕಾಗಿ ಸರ್ಕಾರವೇ ₹ 10 ಸಾವಿರ ಕೋಟಿಗಳ ನಿಧಿ ಸ್ಥಾಪಿಸುತ್ತಿರುವುದು ನವೋದ್ಯಮಗಳ ಆರಂಭಕ್ಕೆ ಭಾರಿ ಉತ್ತೇಜನ ನೀಡಿದಂತಾಗುತ್ತದೆ. ಸ್ಟಾರ್ಟ್‌ಅಪ್ಸ್‌ಗಳಿಗೆಂದೇ ಅನೇಕ ರಿಯಾಯಿತಿಗಳನ್ನು ಘೋಷಿಸಿರುವುದರ ಜತೆಗೆ, ಉದ್ದಿಮೆ ವಹಿವಾಟು ಆರಂಭಿಸಲು ಉದ್ಯಮ ಸ್ನೇಹಿಯಾದ ಪೂರಕ ವಾತಾವರಣ ಕಲ್ಪಿಸಲು ಸರ್ಕಾರ ಬದ್ಧತೆ ಪ್ರಕಟಿಸಿರುವುದೂ ಇಲ್ಲಿ ಮುಖ್ಯವಾಗಿದೆ. ಹೊಸ ಉದ್ದಿಮೆಗಳ ಏಳಿಗೆಗೆ ಈ ಎಲ್ಲ ಕ್ರಮಗಳು ನೆರವಾಗಲಿವೆ.

ಹೊಸ ತಲೆಮಾರಿನ ಉದ್ದಿಮೆದಾರರು ಎದುರಿಸುವ ಆರಂಭಿಕ ವೆಚ್ಚ, ಸಂಕೀರ್ಣ ನಿಯಮಗಳು ಮತ್ತು ವಿಳಂಬ ನೀತಿ ಸಮಸ್ಯೆಗಳಿಗೆ ಈ ಕ್ರಿಯಾ ಯೋಜನೆ ‘ಸರ್ವ ರೋಗ ಪರಿಹಾರ’ ಬಗೆಯಲ್ಲಿ ನೆರವಾಗಲು ಉದ್ಯಮದ ಎಲ್ಲ ಭಾಗಿದಾರರು ಸಕ್ರಿಯವಾಗಿ ಸ್ಪಂದಿಸಬೇಕಾಗಿದೆ. ಹದಿನೈದು ವರ್ಷಗಳ ಹಿಂದೆ ದೇಶದಲ್ಲಿ ಅಂತರ್ಜಾಲ ತಾಣಗಳ ಆರಂಭಕ್ಕೆ ಇದೇ ಬಗೆಯ ಅತ್ಯುತ್ಸಾಹ ಕಂಡು ಬಂದು, ಆಮೇಲೆ ಅದೊಂದು ನೀರ್ಗುಳ್ಳೆಯಾಗಿ ಒಡೆದು ಹೋಗಿತ್ತು. ಹೀಗಾಗಿ ಈ ಕ್ರಿಯಾಯೋಜನೆ ಅನುಷ್ಠಾನದಲ್ಲಿ ಬದ್ಧತೆ ಅಗತ್ಯ.

ಐಐಟಿ, ಐಐಎಂಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಪ್ರತಿಭಾನ್ವಿತ ಯುವ ಸಮೂಹವು ನೆಮ್ಮದಿಯ ಉದ್ಯೋಗದ ಆಮಿಷಕ್ಕೆ ಒಳಗಾಗದೆ, ಸಮಾಜಕ್ಕೆ ನೆರವಾಗುವ ಸ್ಟಾರ್ಟ್‌ಅಪ್ಸ್‌ಗಳನ್ನು ಆರಂಭಿಸಲು ಸಾಹಸ ಮನೋಭಾವ ಪ್ರದರ್ಶಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಸರ್ಕಾರದ ಹಸ್ತಕ್ಷೇಪ ಕಡಿಮೆಯಾದಷ್ಟೂ ಸ್ಟಾರ್ಟ್‌ಅಪ್ಸ್‌ಗಳು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿವೆ.

ಪ್ರತಿವರ್ಷ ಸಾವಿರಾರು ಮಂದಿ ಉದ್ಯೋಗ ಮಾರುಕಟ್ಟೆಗೆ ಬರುತ್ತಾರೆ. ಮೋದಿಯವರೇ ಹೇಳಿದಂತೆ ಐವರಿಗೆ ಉದ್ಯೋಗ ನೀಡುವ ಚಿಕ್ಕ ಉದ್ಯಮವೂ ಐವರ ನಿರುದ್ಯೋಗ ಸಮಸ್ಯೆ ಪರಿಹರಿಸುತ್ತದೆ. ಹಣಕಾಸು, ಸಣ್ಣ ಕೈಗಾರಿಕೆ, ಕಂಪೆನಿ ವ್ಯವಹಾರ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗಳು ಸ್ಟಾರ್ಟ್‌ಅಪ್ಸ್‌ಗಳಿಗೆ ಬೆಂಬಲವಾಗಿ ನಿಲ್ಲಬೇಕು. ಹಾಗಾದಾಗ ಮಾತ್ರ ಈ ಕ್ರಿಯಾ ಯೋಜನೆ ನಿರೀಕ್ಷಿತ ಫಲ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.