ಶುಕ್ರವಾರ, ಮಾರ್ಚ್ 5, 2021
27 °C
ಇರಾನಿ ಕಪ್‌: ಕರ್ನಾಟಕಕ್ಕೆ 189 ರನ್‌ ಮುನ್ನಡೆ, ಮತ್ತಷ್ಟು ಹೆಚ್ಚಿದ ಇತರೆ ತಂಡದ ಸಂಕಷ್ಟ

ಸ್ಟುವರ್ಟ್‌-ಕರುಣ್‌ ಜೊತೆಯಾಟದ ಸೊಗಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಟುವರ್ಟ್‌-ಕರುಣ್‌ ಜೊತೆಯಾಟದ ಸೊಗಸು

ಬೆಂಗಳೂರು: ರಾಷ್ಟ್ರೀಯ ತಂಡದಲ್ಲಿ ಆಡಿ ಬಂದಿರುವ ಸ್ಟುವರ್ಟ್‌ ಬಿನ್ನಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆ ಸುರಿಸಿದರೆ, ಯುವ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ತಾಳ್ಮೆಯ ಆಟದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.  ಈ ಜೋಡಿಯ ಸೊಗಸಾದ ಜೊತೆಯಾಟದ ಬಲದಿಂದ ಕರ್ನಾಟಕ ತಂಡ ಇರಾನಿ ಕಪ್‌ ಪಂದ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.ಮೊದಲ ದಿನ ಬೌಲಿಂಗ್‌ ಮೂಲಕ ಮಿಂಚಿದ್ದ ರಣಜಿ ಚಾಂಪಿಯನ್‌ ಕರ್ನಾಟಕ ಸೋಮವಾರ ಬ್ಯಾಟಿಂಗ್‌ ಮೂಲಕ ಆರ್ಭಟಿಸಿತು. ಸುಲಭವಾಗಿ ಇನಿಂಗ್ಸ್‌್ ಮುನ್ನಡೆ ಪಡೆದು ಭಾರತ ಇತರೆ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಇದರಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿಯಲ್ಲಿ ಇಡೀ ದಿನ ಕೇಳಿಬಂದಿದ್ದು ಚಪ್ಪಾಳೆಯ ಸದ್ದು.ಭರ್ಜರಿ ಮುನ್ನಡೆ: ಭಾನುವಾರದ ಅಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 14 ರನ್‌ ಗಳಿಸಿದ್ದ ಆತಿಥೇಯರು ಎರಡನೇ ದಿನ 376 ರನ್‌ ಸೇರಿಸಿದರು. ಇದರಿಂದ ವಿನಯ್‌ ಬಳಗ ಒಟ್ಟು 189 ರನ್‌ಗಳ ಭರ್ಜರಿ ಮುನ್ನಡೆ ಪಡೆದಿದೆ. ಆಲ್‌ರೌಂಡರ್‌ ಸ್ಟುವರ್ಟ್‌, ಕರುಣ್‌ ಮತ್ತು ಗಣೇಶ್‌ ಸತೀಶ್‌ ಅವರ ಆಟ ಇದಕ್ಕೆ ಕಾರಣ. ಹರಭಜನ್‌ ಸಿಂಗ್‌ ಸಾರಥ್ಯದ ಇತರೆ ತಂಡ ಮೊದಲ ಇನಿಂಗ್ಸ್‌ನಲ್ಲಿ 201 ರನ್‌ ಗಳಿಸಿತ್ತು.ಬೇಗನೆ ಔಟಾದ ರಾಹುಲ್‌: ಈ ಸಲದ ರಣಜಿಯಲ್ಲಿ ಅಪೂರ್ವ ಪ್ರದರ್ಶನ ತೋರಿರುವ ಕೆ.ಎಲ್‌ ರಾಹುಲ್‌ (35, 105ನಿಮಿಷ, 63ಎಸೆತ, 7ಬೌಂಡರಿ) ಇಲ್ಲಿ ಉತ್ತಮ ಮೊತ್ತ ಗಳಿಸುವಲ್ಲಿ ವಿಫಲರಾದರು. ಆದರೆ, ಗಣೇಶ್ ಸತೀಶ್‌ (84, 266ನಿ., 180ಎ., 11 ಬೌಂ.) ಜೊತೆ ಎರಡನೇ ವಿಕೆಟ್‌ಗೆ 75 ರನ್‌ ಸೇರಿಸಿದರು. ಇದರಿಂದ ಆರಂಭದಲ್ಲಿ ಎದುರಾಗಿದ್ದ ಸಂಕಷ್ಟ ದೂರವಾಯಿತು.ಸ್ಫೋಟಕ ಬ್ಯಾಟ್ಸ್‌ಮನ್‌ ಮನೀಷ್‌ ಪಾಂಡೆ (36, 75ನಿ., 47ಎ., 7 ಬೌಂ.) ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಪಡೆದ ಅಮೋಘ ಕ್ಯಾಚ್‌ನಿಂದ ಪೆವಿಲಿಯನ್‌ ಸೇರಿದರು. ಶತಕದತ್ತ ಹೆಜ್ಜೆ ಹಾಕಿದ್ದ ಗಣೇಶ್‌ ಕೂಡಾ ಆಫ್‌ ಸ್ಪಿನ್ನರ್ ಹರಭಜನ್‌ ಎಸೆತದಲ್ಲಿ ಔಟ್‌ ಆದರು. ನಂತರ ಶುರುವಾಗಿದ್ದೆ, ಸುಂದರ ಜೊತೆಯಾಟದ ಜುಗಲ್‌ಬಂದಿ.ಸ್ಟುವರ್ಟ್‌ ಶತಕ: ರಣಜಿ ಫೈನಲ್‌ ಆಡುವ ಅವಕಾಶ ತಪ್ಪಿಸಿಕೊಂಡಿದ್ದ ಸ್ಟುವರ್ಟ್‌್ ಬಿನ್ನಿ ಶತಕ ಗಳಿಸಿದರು. 107 ಎಸೆತಗಳಲ್ಲಿ 14 ಬೌಂಡರಿ ಸೇರಿದಂತೆ 115 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.ಸ್ಟುವರ್ಟ್‌ 86.1ನೇ ಓವರ್‌ನಲ್ಲಿ ಪಂಕಜ್ ಸಿಂಗ್‌ ಎಸೆತದಲ್ಲಿ ಸ್ಕ್ವೇರ್‌ ಲೆಗ್‌ ಬಳಿ ಎರಡು ರನ್‌ ಗಳಿಸಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎಂಟನೇ ಶತಕ ದಾಖಲಿಸಿದರು. ಮೂರಂಕಿಯ ಗಡಿ ಮುಟ್ಟುತ್ತಿದ್ದಂತೆಯೇ ಬ್ಯಾಟ್‌ ಎತ್ತಿ, ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಹೆಲ್ಮೆಟ್‌ಗೆ ಮುತ್ತಿಕ್ಕಿ ಸಂಭ್ರಮಿಸಿದರು. ಆಗ ಡ್ರೆಸ್ಸಿಂಗ್‌ ಕೊಠಡಿಯಲ್ಲಿದ್ದ ಆಟಗಾರರು ಎದ್ದುನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಪಂದ್ಯ ವೀಕ್ಷಿಸುತ್ತಿದ್ದ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯ ಹಾಗೂ ಸ್ಟುವರ್ಟ್‌ ತಂದೆ ರೋಜರ್‌ ಬಿನ್ನಿ ಕೂಡಾ ಚಪ್ಪಾಳೆ ತಟ್ಟಿದರು.ಆರಂಭದಿಂದಲೂ ವೇಗವಾಗಿ ರನ್‌ ಕಲೆ ಹಾಕಿದ ಬಿನ್ನಿ ಶತಕ ಗಳಿಸಲು ತೆಗೆದುಕೊಂಡಿದ್ದು 82 ಎಸೆತಗಳು ಮಾತ್ರ. ಜೊತೆಗೆ ಮೂರು ಸಿಕ್ಸರ್‌ ಸಿಡಿಸಿದರು. ಹರಭಜನ್‌ ಹಾಗೂ ಅಮಿತ್‌ ಮಿಶ್ರಾ ಎಸೆತಗಳಲ್ಲಿ ಲಾಂಗ್‌ ಆಫ್‌ ಬಳಿ ಎರಡು ಸಿಕ್ಸರ್‌ ಸಿಡಿಸಿದರು. ಜೊತೆಗೆ 82ನೇ ಓವರ್‌ನಲ್ಲಿ ಅನುರೀತ್ ಸಿಂಗ್‌ ಎಸೆತದಲ್ಲೂ ಫೈನ್‌ ಲೆಗ್‌ ಬಳಿ ಸಿಕ್ಸರ್‌ ಬಾರಿಸಿದರು. ತಂಡದ ಹಿರಿಯ ಆಟಗಾರ ಬಿನ್ನಿ ಚೆಂದದ ಆಟಕ್ಕೆ ಭರವಸೆಯ ಬ್ಯಾಟ್ಸ್‌ಮನ್‌ ಕರುಣ್‌ ಸೂಕ್ತ ಬೆಂಬಲ ನೀಡಿದರು.ತಾಳ್ಮೆಯ ಆಟ: ಮೊದಲ ಇರಾನಿ ಕಪ್‌ ಆಡುತ್ತಿರುವ ಕರುಣ್‌ ಅವರ ಸೊಗಸಾದ ಆಟ ಇಡೀ ದಿನ ಕ್ರಿಕೆಟ್ ಪ್ರೇಮಿಗಳಿಗೆ ಮುದ ನೀಡಿತು. ಈ ಜೋಡಿ 65ನೇ ಓವರ್‌ನಲ್ಲಿ ಇನಿಂಗ್ಸ್‌ ಮುನ್ನಡೆ ತಂದುಕೊಟ್ಟಿತು. ಜೊತೆಗೆ ಐದನೇ ವಿಕೆಟ್‌ಗೆ 29.1 ಓವರ್‌ಗಳಲ್ಲಿ 187 ರನ್‌ ಕಲೆ ಹಾಕಿತು. ಈ ಬೃಹತ್‌ ಮೊತ್ತದ ಜೊತೆಯಾಟದಿಂದ ಕರ್ನಾಟಕ ದಿನದ ಅಂತ್ಯಕ್ಕೆ ಹಿಡಿತ ಬಿಗಿಗೊಳಿಸಿತು.ರಣಜಿಯಲ್ಲಿ ಹ್ಯಾಟ್ರಿಕ್‌ ಶತಕ ಗಳಿಸಿರುವ ಕರುಣ್‌ ನಾಲ್ಕು ಗಂಟೆ ಕ್ರೀಸ್‌ನಲ್ಲಿದ್ದರು. 161 ಎಸೆತಗಳಲ್ಲಿ 12 ಬೌಂಡರಿ ಸೇರಿದಂತೆ 92 ರನ್‌ ಕಲೆ ಹಾಕಿದರು. ಆದರೆ, 90.4ನೇ ಓವರ್‌ನ ಪಂಕಜ್‌ ಸಿಂಗ್ ಎಸೆತದಲ್ಲಿ ಕರುಣ್‌ ಬೌಲ್ಡ್‌ ಆದರು. ಮೊದಲು ಕೈಗೆ ತಗುಲಿದ ಚೆಂಡು ನಂತರ ಬೆಲ್ಸ್‌ಗೆ ಬಡಿಯಿತು. ಶತಕದ ಹೊಸ್ತಿಲಲ್ಲಿದ್ದ ಅವರು ಇದರಿಂದ ನಿರಾಸೆಗೆ ಒಳಗಾದರು. ಪುತ್ರನ ಆಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣಕ್ಕೆ ಬಂದಿದ್ದ ಕಲಾಧರನ್‌ ನಾಯರ್ ಕರುಣ್‌ ಆಟಕ್ಕೆ ತಲೆದೂಗಿದರು.ಮತ್ತಷ್ಟು ಹೆಚ್ಚಿದ ಸಂಕಷ್ಟ: ಅನುಭವಿ ಬೌಲರ್‌ಗಳಿದ್ದರೂ, ಕರ್ನಾಟಕ ತಂಡವನ್ನು ಕಟ್ಟಿ ಹಾಕಲು ಪರದಾಡಿದ ಇತರೆ ತಂಡದ ಸಂಕಷ್ಟ ಮತ್ತಷ್ಟು ಹೆಚ್ಚಿದೆ.

ಅನುಭವಿ ಹರಭಜನ್‌, ಅಶೋಕ್‌ ದಿಂಡಾ ತಲಾ ಒಂದು ವಿಕೆಟ್‌ ಪಡೆದರೆ, ಪಂಕಜ್‌ ಸಿಂಗ್‌ ಎರಡು ವಿಕೆಟ್‌ ಉರುಳಿಸಿದರು. ಜೊತೆಗೆ ಎರಡು  ಕ್ಯಾಚ್‌ ಕೈಚೆಲ್ಲಿದ ತಪ್ಪಿಗೆ ಭಾರಿ ಬೆಲೆ ಕಟ್ಟಿದರು.ಸ್ಕೋರ್ ವಿವರ

ಭಾರತ ಇತರೆ ತಂಡ: ಮೊದಲ ಇನಿಂಗ್ಸ್‌ 65.4 ಓವರ್‌ಗಳಲ್ಲಿ 201


ಕರ್ನಾಟಕ: ಪ್ರಥಮ ಇನಿಂಗ್ಸ್‌ 98 ಓವರ್‌ಗಳಲ್ಲಿ 5 ವಿಕೆಟ್‌ಗೆ 390

(ಭಾನುವಾರದ ಅಂತ್ಯಕ್ಕೆ 14 ಓವರ್‌ಗಳಲ್ಲಿ 1 ವಿಕೆಟ್‌ಗೆ 35)

ಕೆ.ಎಲ್‌. ರಾಹುಲ್‌ ಬಿ ಅನುರೀತ್‌ ಸಿಂಗ್‌  35

ಗಣೇಶ್‌ ಸತೀಶ್‌ ಸಿ ಕೇದಾರ್‌ ಜಾಧವ್‌ ಬಿ ಹರಭಜನ್‌ ಸಿಂಗ್‌  84

ಮನೀಷ್‌ ಪಾಂಡೆ ಸಿ ದಿನೇಶ್‌ ಕಾರ್ತಿಕ್‌ ಬಿ ಪಂಕಜ್‌ ಸಿಂಗ್‌  36

ಕರುಣ್‌ ನಾಯರ್‌ ಬಿ ಪಂಕಜ್‌ ಸಿಂಗ್‌  92

ಸ್ಟುವರ್ಟ್‌್ ಬಿನ್ನಿ ಬ್ಯಾಟಿಂಗ್‌  115

ಸಿ.ಎಂ. ಗೌತಮ್‌ ಬ್ಯಾಟಿಂಗ್‌  06ಇತರೆ: (ಬೈ-16, ಲೆಗ್‌ ಬೈ-2, ನೋ ಬಾಲ್‌-4)  22

ವಿಕೆಟ್‌ ಪತನ: 2-75 (ರಾಹುಲ್‌; 22.5), 3-136 (ಪಾಂಡೆ; 38.5), 4-188 (ಗಣೇಶ್‌; 61.3), 5-375 (ಕರುಣ್‌; 90.4).

ಬೌಲಿಂಗ್‌: ಅಶೋಕ್‌ ದಿಂಡಾ 23-5-93-1, ಪಂಕಜ್‌ ಸಿಂಗ್‌ 23-6-78-2, ಅನುರೀತ್‌್ ಸಿಂಗ್‌ 21-5-78-1, ಅಮಿತ್‌ ಮಿಶ್ರಾ  14-2-56-0, ಹರಭಜನ್‌ ಸಿಂಗ್‌ 14-2-56-1, ಬಾಬಾ ಅಪರಾಜಿತ್‌ 3-1-11-0.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.