ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಸಂವೇದನೆಯ ಲಜ್ಜೆ

Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ತಲೆತಲಾಂತರದಿಂದ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಘಟನೆಗಳನ್ನೇ ಪ್ರಧಾನವಾಗಿ ಇಟ್ಟುಕೊಂಡು ಹೆಣೆಯಲಾಗಿರುವ ನಾಟಕ ‘ಲಜ್ಜೆ’.

ಈ ನಾಟಕವನ್ನು ‘ರಂಗ ವರ್ತುಲ’ ತಂಡ ‘ರಂಗಶಂಕರ’ದ ರಂಗದ ಮೇಲೆ ಮಂಗಳವಾರ ಪ್ರಯೋಗ ಮಾಡಿ ತೋರಿಸಿತು.
ಮಹಿಳೆಯರ ಮೇಲಿನ ಶೋಷಣೆಗೆ ಸಂಬಂಧಿಸಿದ ಅನೇಕ ನಾಟಕಗಳು ಈಗಾಗಲೇ ರಂಗದ ಮೇಲೆ ಹಲವು ಸಲ ಪ್ರದರ್ಶನ ಕಂಡಿವೆ. ಅವುಗಳ ಸಾಲಿಗೆ ಹೊಸ ಸೇರ್ಪಡೆ ಈ ‘ಲಜ್ಜೆ’.

ಶತಮಾನಗಳ ಹಿಂದಿನಿಂದಲೂ ಮಹಿಳೆಯರ ಮೇಲೆ ನಡೆಯುತ್ತ ಬಂದಿರುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಇಂದಿನ ಪ್ರಸಕ್ತ ಸನ್ನಿವೇಶದಲ್ಲೂ ಹೆಣ್ಣು ಮಕ್ಕಳ ಸ್ಥಿತಿ ಬದಲಾಗದಿರುವುದರ ಕುರಿತೂ ಗಮನ ಸೆಳೆಯುವುದರಿಂದ ಈ ನಾಟಕವೂ ಕೊಂಚ ವಿಭಿನ್ನ ಎನಿಸುತ್ತದೆ.

ಗಂಡಿನ ಶೋಷಣೆಗೆ ಒಳಗಾದ ಮೊದಲ ಹೆಣ್ಣು ಎಂದು ಇತಿಹಾಸದಲ್ಲಿ ಅಧಿಕೃತವಾಗಿ ದಾಖಲಾಗಿರುವ ಉತ್ಪಲಾವರ್ಣ ಎಂಬ ಮಹಿಳೆಯ ಕಥಾನಕದ ಹಿನ್ನೆಲೆಯಲ್ಲಿ ನಾಟಕ ಶುರುವಾಗುತ್ತದೆ. ಬಳಿಕ ನೃತ್ಯ ಶಿಕ್ಷಕಿ  ಮತ್ತು ಅವರ ಐವರು ಶಿಷ್ಯೆಯರ ಜೀವನದ ಒಂದೊಂದೇ ಮಗ್ಗಲಿನ ಮೂಲಕ ಸಮಾಜದಲ್ಲಿ ಮಹಿಳೆ ಮೇಲೆ ಯಾವ ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಬಿಚ್ಚಿಡಲಾಗಿದೆ. ಮಧ್ಯೆ ಮಧ್ಯೆ ಪಾತ್ರಗಳ ಮೂಲಕ ಬುದ್ಧನ ಸಂದೇಶಗಳನ್ನು ತಿಳಿಸುವ ಪ್ರಯತ್ನವನ್ನೂ ಮಾಡಲಾಗಿದೆ.

‘ನನಗಿಂತ ವಯಸ್ಸಿನಲ್ಲಿ ೨೦ ವರ್ಷ ದೊಡ್ಡವನಾಗಿದ್ದ ನಿಮ್ಮ ತಂದೆ ಜೊತೆ ನನ್ನ ವಿವಾಹ ಮಾಡಿಸಿ ನಾನು ತಾಯಿಯಾಗಲು ಕಾರಣವಾಗಿದ್ದು ಅತ್ಯಾಚಾರವಲ್ಲದೇ ಮತ್ತೇನು?’ ಎಂದು ನೃತ್ಯ ಶಿಕ್ಷಕಿ ಮಗಳ ಎದುರು ತನ್ನ ವಿಚ್ಛೇದನ ಕುರಿತು ಪ್ರಶ್ನೆಯ ಮೂಲಕವೇ ನೀಡುವ ಸ್ಪಷ್ಟನೆ, ಅಪ್ರಾಪ್ತ ಹೆಣ್ಣು ಮಕ್ಕಳ ಜತೆ ಸಮಾಜ ವ್ಯವಹರಿಸುತ್ತಿರುವ ರೀತಿಯ ಮೇಲೆ ಬೆಳಕು ಚೆಲ್ಲುತ್ತದೆ. ಇದನ್ನು ಕೇಳಿಸಿಕೊಂಡು ಆಕೆಯ ಮಗಳು  ಯಶು, ‘ನಾನು ಬೇಗ ಮನೆಗೆ ಹೋಗಬೇಕು. ಮನೆಯಲ್ಲಿ ಮಗಳು ಬಿಟ್ಟರೆ ನನ್ನ ಗಂಡ ಮಾತ್ರ ಇದ್ದಾನೆ’ ಎಂಬ ಮಾತು ಮನೆಯಲ್ಲೂ ಹೆಣ್ಣು ಮಕ್ಕಳು ಸುರಕ್ಷಿತರಾಗಿಲ್ಲ ಎಂಬ ಸಂಗತಿಯನ್ನು ಬಿಚ್ಚಿಡುತ್ತದೆ.

*ರಚನೆ: ಚೇತನಾ ತೀರ್ಥಹಳ್ಳಿ/ನಿತೀಶ್ ಶ್ರೀಧರ್
*ನಿರ್ದೇಶನ: ನಿತೀಶ್ ಶ್ರೀಧರ್
*ಕಲಾವಿದರು: ಸುಂದರಶ್ರೀ, ಹರಿಣಿ, ದ್ರೀಪ್ತಿ, ದಿವ್ಯ, ಶ್ರೀಯ, ದಿವ್ಯಾ, ಅನುಷ, ನಿತೀಶ್, ಮನೋಜ್‌ ವಸಿಷ್ಠ ಹಾಗೂ ನಾಗರಾಜ ಸೋಮಯಾಜಿ
*ಪಕ್ಕವಾದ್ಯ: ರಾಜಗುರು
*ಬೆಳಕು: ಮಂಜುನಾರಾಯಣ
*ಸಂಗೀತ ಸಂಯೋಜನೆ ಮತ್ತು ಗಾಯನ : ಸಿಂಚನ್‌ ದೀಕ್ಷಿತ್‌
*ಅವಧಿ: ೮೦ ನಿಮಿಷ
*ಪ್ರಯೋಗ: ಪ್ರಥಮ
*ಭಾಷೆ: ಕನ್ನಡ
*ಕಥಾವಸ್ತು: ಸ್ತ್ರೀಯರ ಮೇಲಿನ ಅತ್ಯಾಚಾರ ಪ್ರಕರಣ

ನೃತ್ಯ ಶಿಕ್ಷಕಿಯ ಪಾತ್ರದಲ್ಲಿ ಸುಂದರಶ್ರೀ ಅವರ ಅಭಿನಯ ಮನೋಜ್ಞವಾಗಿದೆ. ಯಶು ಪಾತ್ರವನ್ನು ಮೈಮೇಲೆ ಆವರಿಸಿಕೊಂಡಂತೆ ಹರಿಣಿ ನಟಿಸಿದ್ದಾರೆ. ವಿದ್ಯಾ ಪಾತ್ರವೂ ಗಮನ ಸೆಳೆಯುತ್ತದೆ.

ಅತ್ಯಾಚಾರ ಒಂದೇ ನಾಟಕದ ಪ್ರಧಾನ ವಿಷಯವಾಗಿದ್ದರೂ ಸಮಾಜದಲ್ಲಿ ನಡೆಯುತ್ತಿರುವ ಸಲಿಂಗಕಾಮ, ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದ ವಿಷಯಗಳನ್ನು ತುರುಕಿರುವುದು ಅನಗತ್ಯ ಎನಿಸುತ್ತದೆ. ಈ ವಿಷಯಗಳು ನಾಟಕವನ್ನು ಅದರ ಮುಖ್ಯ ಕಥಾವಸ್ತುವಿನಿಂದ ವಿಷಯಾಂತರ ಮಾಡುತ್ತದೆ. ಸಂಭಾಷಣೆ ಕೆಲವಡೆ ಶಿಷ್ಟ ಭಾಷೆಯಲ್ಲಿದ್ದರೆ, ಕೆಲವೊಮ್ಮೆ ಜನರ ಆಡು ಮಾತಿನಲ್ಲಿದೆ.

ಸನ್ನಿವೇಶಕ್ಕೆ ತಕ್ಕಂತೆ ಸಂಗೀತ, ಬೆಳಕು ಮತ್ತು ನೃತ್ಯ ಉತ್ತಮವಾಗಿ ಮೂಡಿ ಬಂದಿದೆ. ಆರಂಭದಿಂದ ಕೊನೆಯವರೆಗೆ ನಾಟಕ ಗಂಭೀರವಾಗಿಯೇ ಸಾಗುತ್ತದೆ. ಹಾಸ್ಯಕ್ಕೆ ಕಿಂಚಿತ್ತೂ ಅವಕಾಶವನ್ನು ನಿರ್ದೇಶಕರು ನೀಡಿಲ್ಲ. ನಾಟಕದ ಕಥಾವಸ್ತು ಕೂಡ ಇದಕ್ಕೆ ಕಾರಣ ಇರಬಹುದು. ಇದು ನಾಟಕದ ಮೊದಲ ಪ್ರದರ್ಶನವಾಗಿದ್ದರೂ ವೃತ್ತಿಪರತೆಯ ಕೊರತೆ ಕಂಡು ಬರಲಿಲ್ಲ.

‘ಅತ್ಯಾಚಾರಕ್ಕೆ ಒಳಗಾದ ಮಹಿಳೆ ನೊಂದುಕೊಳ್ಳಬೇಕಿಲ್ಲ. ಸೆಟೆದು ನಿಲ್ಲಬೇಕು’ ಎಂಬ ಮಾತಿನೊಂದಿಗೆ ನಾಟಕಕ್ಕೆ ತೆರೆ ಬೀಳುತ್ತದೆ. ಸಮಸ್ಯೆಯ ಆಳ ಅಗಲ ತೋರಿಸುವುದರ ಜೊತೆಗೆ ಜನಜಾಗೃತಿಯ ಅಂಶ ಕೂಡ ಸೇರಿಸಲಾಗಿದೆ.

ಇಡೀ ನಾಟಕ ನೋಡಿದ ಮೇಲೆ  ೨೦೦೧ರಲ್ಲಿ ತೆರೆ ಕಂಡಿದ್ದ ‘ಲಜ್ಜಾ’ ಹಿಂದಿ ಚಿತ್ರ ನೆನಪಾಗುತ್ತದೆ. ತಸ್ಲೀಮಾ ನಸ್ರೀನ್‌ ಅವರ ‘ಲಜ್ಜಾ’ ಕಾದಂಬರಿ ಆಧಾರಿತ ಈ ಚಿತ್ರವನ್ನು ರಾಜಕುಮಾರ್ ಸಂತೋಷಿ ಅವರು ಬೆಳ್ಳಿ ಪರದೆ ಮೇಲೆ ತಂದಿದ್ದರು. ರೇಖಾ, ಮಾಧುರಿ ದೀಕ್ಷಿತ್‌, ಮಹಿಮಾ ಚೌಧರಿ ಮತ್ತು ಮನೀಷಾ ಕೊಯಿರಾಲಾರಂತಹ ನಟೀಮಣಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT