ಬುಧವಾರ, ಮೇ 18, 2022
28 °C

ಸ್ಥಳದಲ್ಲಿ ಹಾಜರಿದ್ದರೂ ಆರೋಪ ಸಾಬೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆರೋಪಿಯು ತಪ್ಪಿತಸ್ಥನೆಂದು ತೀರ್ಮಾನಿಸಲು ಆತ ಅಪರಾಧ ನಡೆಯುವ ಸ್ಥಳದಲ್ಲಿ ‘ಸಾಮಾನ್ಯ ಗುರಿಗಾಗಿ ಪ್ರೋತ್ಸಾಹಿಸುವ ಕ್ರಿಯಾಶೀಲ ಮನಸ್ಸಿನೊಂದಿಗೆ’ ಇದ್ದನೆಂಬುದೇ ಸಾಕು ಎಂದು ಸುಪ್ರಿಂಕೋರ್ಟ್ ತೀರ್ಪೊಂದರಲ್ಲಿ ಹೇಳಿದೆ.ಮದುವೆಯಾದ ಮರುದಿನವೇ ಮದುಮಗ ಕೊಲೆಯಾದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿ.ಎಸ್. ಸಿರ್ಪುರ್‌ಕರ್ ಮತ್ತು ಎ.ಆರ್. ದವೆ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ. ಇದೇ ವೇಳೆ  ಜೀವಾವಧಿ ಶಿಕ್ಷೆಗೆ ಒಳಗಾಗಿರುವ ನಾಲ್ವರ ಮೇಲ್ಮನವಿಯನ್ನು ತಳ್ಳಿ ಹಾಕಿದೆ.ಪ್ರಕರಣದಲ್ಲಿ ತಮ್ಮ ಸಕ್ರಿಯ ಪಾಲುದಾರಿಕೆ ಇಲ್ಲದಿದ್ದಾಗ್ಯೂ ಕೇವಲ ಸ್ಥಳದಲ್ಲಿ ಹಾಜರಿದ್ದ ಕಾರಣಕ್ಕೇ ಅಪರಾಧಿ ಎಂದು ತೀರ್ಮಾನಿಸಲಾಗಿದೆ ಎಂದು ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.‘ಕಾನೂನು ಪ್ರಕಾರ, ಒಂದೇ ಗುರಿ ಸಾಧನೆಗಾಗಿ ಸಕ್ರಿಯ ಮನಸ್ಸಿನೊಂದಿಗೆ ಅಕ್ರಮವಾದ ಗುಂಪಿನಲ್ಲಿ ಹಾಜರಿದ್ದ ವ್ಯಕ್ತಿ ಆ ಗುಂಪಿನ ಕಾರ್ಯಗಳಿಗೆ ಪ್ರಾತಿನಿಧಿಕವಾಗಿ ಹೊಣೆಗಾರನಾಗುತ್ತಾನೆ’ ಎಂದು ನ್ಯಾಯಮೂರ್ತಿ ಸಿರ್ಪುರ್‌ಕರ್ ಹೇಳಿದರು.ಈ ಪ್ರಕರಣದಲ್ಲಿ ತಪ್ಪಿತಸ್ಥರಾದ ಅಮೆರೈಕ ರಾಯ್ , ಮಿಥಿಲೇಶ್ ರಾಯ್, ಸಂಜಯ್ ರಾಯ್ ಮತ್ತು ಸಿಪಹಿ ರಾಯ್ ಅವರು ಮತ್ತೊಬ್ಬ ಚುಲ್ಹನ್‌ರಾಜ್ ಎಂಬುವನೊಡನೆ ಸೇರಿ ಮದುಮಗ ಶಂಕರ್ ರಾಯ್‌ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು.ಬಿಹಾರದ ವೈಶಾಲಿ ಜಿಲ್ಲೆಯಲ್ಲಿ 1995ರ ಜೂನ್ 26ರಂದು ನಡೆದ ಮದುವೆಗಾಗಿ ಇವರೆಲ್ಲರೂ ವಧುವಿನ ಗ್ರಾಮಕ್ಕೆ ತೆರಳಿದ್ದರು. ಅಪರಾಧಿಗಳು ಮತ್ತು ಸಾವಿಗೀಡಾದ ಮದುಮಗ ಎಲ್ಲರೂ ಗೆಳೆಯರು ಮತ್ತು ಬಂಧುಗಳು ಎಂಬುದೇ ವಿಪರ್ಯಾಸ.ಗ್ರಾಮದಲ್ಲಿ ಎರಡೂ ಕಡೆಯವರಿಗೆ ಜಗಳ ಆಗಿತ್ತು. ಮರುದಿನ ಶಂಕರನ ಸೋದರ ಸಂಬಂಧಿ ರಾಮ್‌ಬಾಬುವಿನ ಮೇಲೆ ಹಲ್ಲೆ ನಡೆದಿತ್ತು. ಆಗ ಶಂಕರ್ ಮಧ್ಯೆ ಪ್ರವೇಶಿಸಿದ್ದರು. ಈ ಸಂದರ್ಭದಲ್ಲಿ ನಡೆದ ಗದ್ದಲದಲ್ಲಿ ಶಂಕರ್ ಗುಂಡಿಗೆ ಬಲಿಯಾಗಿದ್ದು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.ಸೆಷನ್ಸ್ ನ್ಯಾಯಾಲಯವು ದರ್ಬೇಶ್ ರಾಯ್ ಅವರನ್ನು ಒಳಗೊಂಡಂತೆ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಅಮೆರೈಕ ಮತ್ತು ಮಿಥಿಲೇಶ್ ಅವರು ತಾವು ಕೇವಲ ಘಟನೆಯ ಸ್ಥಳದಲ್ಲಿ ಇದ್ದುದ್ದಾಗಿ ವಾದಿಸಿ ಪಟ್ನಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಇದನ್ನು ಕೋರ್ಟ್ ವಜಾ ಮಾಡಿತ್ತು.ವಾದವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್, ಪ್ರಕರಣದಲ್ಲಿ ಐದು ಮಂದಿಯ ಪಾಲುದಾರಿಕೆ ಇರುವ ಬಗ್ಗೆ ದಾಖಲೆಯಲ್ಲಿರುವ ಸಾಕ್ಷ್ಯಗಳು ಸ್ಪಷ್ಟವಾಗಿ ಸಾಬೀತುಪಡಿಸಿವೆ ಎಂದು ಹೇಳಿತು.‘ಅಮೆರೈಕ ರಾಯ್, ಮಿಥಿಲೇಶ್‌ರಾಯ್ ಮತ್ತು ಚುಲ್ಹನ್ ರಾಯ್ ಅವರು ಹೊಣೆಗಾರಿಕೆಯಿಂದ ವರ್ತಿಸಿ ಅಹಿತಕರ ಘಟನೆ ತಡೆಯುವ ಬದಲು, ಬಂದೂಕು ತರುವಂತೆ ಆರೋಪಿಗಳಿಗೆ ಪ್ರೇರೇಪಿಸಿದ್ದಾರೆ ಎಂಬುದು ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಕಂಡು ಬಂದಿದೆ. ನಂತರ ಇತರ ಮೂರು ಮಂದಿ ಬಂದೂಕು ಬಳಕೆ ಮಾಡಿದ್ದಾರೆ. ಇದು ಇವರೆಲ್ಲರ ತಪ್ಪಿತಸ್ಥ ಮನಸ್ಸನ್ನು ಸೂಚಿಸುತ್ತದೆ’ ಎಂದು ಪೀಠ ಹೇಳಿದೆ.ಆದರೆ ಮತ್ತೊಬ್ಬ ಅಪರಾಧಿ ದರ್ಬೇಶ್ ರಾಯ್ ಅವರನ್ನು ಸಂಶಯದ ಲಾಭದ ಮೇಲೆ ಸುಪ್ರೀಂಕೋರ್ಟ್ ಖುಲಾಸೆ ಗೊಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.