ಮಂಗಳವಾರ, ಏಪ್ರಿಲ್ 20, 2021
29 °C

ಸ್ಥಾನ ನಿರೀಕ್ಷೆಯಲ್ಲಿ ಅಶ್ವಿನ್, ರೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಸ್ಥಳೀಯ ಆಟಗಾರ ಆರ್.ಅಶ್ವಿನ್ ಹಾಗೂ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯ ಆಡುವ ಕ್ಷಣ ಸಮೀಪ ಬಂದಂತಿದೆ.ಅದಕ್ಕೆ ಸಾಕ್ಷಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)-ಮದ್ರಾಸ್ ಕ್ಯಾಂಪಸ್‌ನಲ್ಲಿ ಅವರು ಅಭ್ಯಾಸ ನಡೆಸುತ್ತಿರುವ ರೀತಿ. ಎರಡು ದಿನಗಳಿಂದ ರೈನಾ ಹಾಗೂ ಅಶ್ವಿನ್ ಅವರತ್ತ ಭಾರತ ತಂಡದ ಕೋಚ್ ಗ್ಯಾರಿ ಕರ್ಸ್ಟನ್ ಹೆಚ್ಚು ಗಮನ ಹರಿಸುತ್ತಿದ್ದಾರೆ.ಅಭ್ಯಾಸದ ಎರಡನೇ ದಿನವಾದ ಗುರುವಾರ ಕೂಡ ಇವರು ನೆಟ್ಸ್‌ನಲ್ಲಿ ತುಂಬಾ ಹೊತ್ತು ಅಭ್ಯಾಸ ನಡೆಸಿದರು. ತಂಡದ ಮೂಲಗಳ ಪ್ರಕಾರ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ವೆಸ್ಟ್‌ಇಂಡೀಸ್ ಎದುರಿನ ಕೊನೆಯ ಲೀಗ್ ಪಂದ್ಯದಲ್ಲಿ ರೈನಾ ಹಾಗೂ ಆಫ್ ಸ್ಪಿನ್ನರ್ ಅಶ್ವಿನ್ ಕಣಕ್ಕಿಳಿಯುವ ನಿರೀಕ್ಷೆ ಇದೆ. ಟೂರ್ನಿಯಲ್ಲಿ ವಿಫಲವಾಗಿರುವ ಆಶೀಶ್ ನೆಹ್ರಾ ಹಾಗೂ ಯೂಸುಫ್ ಪಠಾಣ್ ಅವರನ್ನು ಕೈಬಿಡುವ ಸಾಧ್ಯತೆಗಳಿವೆ.ನಾಲ್ಕು ದಿನಗಳಿಂದ ವಿಶ್ರಾಂತಿಗೆ ಮೊರೆ ಹೋಗಿದ್ದ ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಗೌತಮ್ ಗಂಭೀರ್, ಹರಭಜನ್ ಸಿಂಗ್, ಆಶೀಶ್ ನೆಹ್ರಾ ಹಾಗೂ ಎಸ್.ಶ್ರೀಶಾಂತ್ ಗುರುವಾರ ಅಭ್ಯಾಸ ನಡೆಸಿದರು. ಮತ್ತೆ ಐಐಟಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಚಿನ್ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.ಮಂಡಿ ನೋವಿಗೆ ಒಳಗಾಗಿರುವ ವೀರೇಂದ್ರ ಸೆಹ್ವಾಗ್ ಅಭ್ಯಾಸ ನಡೆಸಲು ಆಗಮಿಸಲಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೆ ವೀರೂ ಚೇತರಿಸಿಕೊಂಡಿದ್ದು ವಿಂಡೀಸ್ ಎದುರಿನ ಪಂದ್ಯಕ್ಕೆ ಲಭ್ಯರಿರುತ್ತಾರೆ ಎಂದು ತಂಡದ ಮೂಲಗಳು ತಿಳಿಸಿವೆ. ಅವರು ನಾಗಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಈ ಸಮಸ್ಯೆಗೆ ಒಳಗಾಗಿದ್ದರು.ನಾಯಕ ಎಂ.ಎಸ್.ದೋನಿ ಮತ್ತೆ ವಿಶ್ರಾಂತಿಗೆ ಮೊರೆ ಹೋದರು. ದಕ್ಷಿಣ ಆಫ್ರಿಕಾ ಎದುರಿನ ಪಂದ್ಯ ಮುಗಿದು ಐದು ದಿನಗಳಾದರೂ ಅವರು ಅಭ್ಯಾಸ ನಡೆಸಲು ಆಗಮಿಸಿಲ್ಲ. ಅವರು ಶೀತದಿಂದ ಬಳಲುತ್ತಿದ್ದಾರೆ. ಆಟಗಾರರ ಅಭ್ಯಾಸ ಶುಕ್ರವಾರ ಐಐಟಿ ಕ್ಯಾಂಪಸ್‌ನಿಂದ ಎಂ.ಎ.ಚಿದಂಬರಂ ಕ್ರೀಡಾಂಗಣಕ್ಕೆ ಸ್ಥಳಾಂತರವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.