ಗುರುವಾರ , ಮೇ 26, 2022
30 °C

ಸ್ಮಾರ್ಟ್‌ಗ್ರಿಡ್ ಕುರಿತು ಜಾಗೃತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿದ್ಯುತ್ ಉಳಿತಾಯ ಮಾಡುವ ಉದ್ದೇಶದಿಂದ ಸ್ಮಾರ್ಟ್‌ಗ್ರಿಡ್ ವ್ಯವಸ್ಥೆ ಬಗ್ಗೆ ಜನ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ’ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಎಂಜಿನಿಯರ್‌ಗಳ ಸಂಘ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ಮಾರ್ಟ್ ಗ್ರಿಡ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.‘ಕೇವಲ ವಿದ್ಯುತ್ ಉತ್ಪಾದನೆಯಿಂದ ಮಾತ್ರ ವಿದ್ಯುತ್ ಕೊರತೆಯ ಸಮಸ್ಯೆ ಕಡಿಮೆಯಾಗುವುದಿಲ್ಲ. ಅದರ ಮಿತವ್ಯಯ ಹೇಗೆ ಎಂಬ ಬಗ್ಗೆ ಕೂಡ ಚಿಂತಿಸಬೇಕಿದೆ. ದಿನ ನಿತ್ಯದ ಬಳಕೆಯಲ್ಲಿ ವಿದ್ಯುತ್ ಪೋಲಾಗುವುದನ್ನು ತಪ್ಪಿಸಬೇಕಿದೆ.ಇದರಿಂದ ವಿದ್ಯುತ್ ಉತ್ಪಾದನೆಯ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ’ ಎಂದು ಅವರು ಹೇಳಿದರು.‘ವಿದ್ಯುತ್ ಉಳಿತಾಯ ಮಾಡಲು ಬೇರೆ ದೇಶಗಳಲ್ಲಿ ಸ್ಮಾಟ್‌ಗ್ರಿಡ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಅದೇ ವ್ಯವಸ್ಥೆ ದೇಶದಲ್ಲಿ ಕೂಡ ಜಾರಿಯಾದರೆ ಹಣ ಹಾಗೂ ವಿದ್ಯುತ್ ಉಳಿತಾಯವಾಗಲಿದೆ’ ಎಂದರು.‘ಹಳೆಯ ತಂತ್ರಜ್ಞಾನದಿಂದಾಗಿ ವಿದ್ಯುತ್ ಅಪವ್ಯಯವಾಗುತ್ತಿದೆ. ವಿದ್ಯುತ್ ಕ್ಷೇತ್ರದ ಆಧುನೀಕರಣವಾದರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಸ್ಮಾರ್ಟ್‌ಗ್ರಿಡ್ ಯೋಜನೆ ಅಂತಹ ಆಧುನೀಕರಣದ ವಿಧಾನಗಳಲ್ಲಿ ಒಂದು’ ಎಂದು ಹೇಳಿದರು.ಶ್ನೈಡರ್ ಸಂಸ್ಥೆಯ ಸ್ಮಾರ್ಟ್ ಗ್ರಿಡ್ ಸಟ್ಯೆಾಟಜಿ ನಿರ್ದೇಶಕ ಶಿವಕುಮಾರನ್ ಗೋವಿಂದರಾಜನ್ ಮಾತನಾಡಿ ‘ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಕೂಡ ಸ್ಮಾರ್ಟ್‌ಗ್ರಿಡ್ ಯೋಜನೆಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಿದೆ. ಆಗ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯ ಸಾಧ್ಯವಾಗಲಿದೆ’ ಎಂದರು.ಸಿಪಿಆರ್‌ಐ ವ್ಯವಸ್ಥಾಪಕ ನಿರ್ದೇಶಕ ಎನ್. ಮುರುಗೇಶನ್ ಮಾತನಾಡಿ ‘ವಿದ್ಯುತ್ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಸ್ಮಾರ್ಟ್ ಗ್ರಿಡ್ ಕಲ್ಪನೆ ಅತ್ಯಂತ ಮುಖ್ಯವಾಗಿದೆ. ಜನರು ಈ ಬಗ್ಗೆ ಜಾಗೃತರಾದರೆ ಕ್ಷಿಪ್ರವಾಗಿ ವಿದ್ಯುತ್ ಕೊರತೆಯನ್ನು ಹತೋಟಿಗೆ ತರಬಹುದು’ ಎಂದರು.ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಮೀಮ್ ಬಾನು, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ  ಜಿ. ಲತಾ ಕೃಷ್ಣರಾವ್, ಕೆಇಬಿಇಎ ಅಧ್ಯಕ್ಷ ಎಲ್.ರವಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಏನಿದು ಸ್ಮಾರ್ಟ್‌ಗ್ರಿಡ್?

ವಿದ್ಯುತ್ ಸರಬರಾಜು ಕಂಪೆನಿಗೂ ಹಾಗೂ ಗ್ರಾಹಕನಿಗೂ ಮಧ್ಯೆ ನೇರವಾದ ಸಂವಹನ ಸಂಪರ್ಕವಿರುವ ವ್ಯವಸ್ಥೆಯೇ ಸ್ಮಾರ್ಟ್‌ಗ್ರಿಡ್. ಒಂದು ಮನೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಬಳಸುವುದಿಲ್ಲ ಎಂದಿಟ್ಟುಕೊಳ್ಳೋಣ. ಈ ಬಗ್ಗೆ ಮಾಹಿತಿ ಪಡೆಯುವ ಕಂಪೆನಿ ಅಷ್ಟು ಪ್ರಮಾಣದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಅದನ್ನು ಕಾರ್ಖಾನೆಗಳಿಗೂ ಕಚೇರಿಗಳಿಗೂ ಪೂರೈಸುತ್ತದೆ.ಉಪಯೋಗ: ‘ಮೂರು ಯೂನಿಟ್ ವಿದ್ಯುತ್ ಉತ್ಪಾದಿಸಿದರೆ ಅದರ ಸರಬರಾಜು ನಂತರ ಗ್ರಾಹಕರಿಗೆ ತಲುಪುವುದು ಕೇವಲ ಒಂದು ಯುನಿಟ್’ ಎನ್ನುತ್ತಾರೆ ತಜ್ಞ ಸ್ಮಾರ್ಟ್‌ಗ್ರಿಡ್ ತಜ್ಞ ಅನಿಲ್ ಕದಂ. ಅವರ ಪ್ರಕಾರ ಬಹುತೇಕ ವಿದ್ಯುತ್ ಅದರ ಸರಬರಾಜು ವೇಳೆಯೇ ಸೋರಿಕೆಯಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಗ್ರಾಹಕರ ಅವಶ್ಯಕತೆಯನ್ನು ತಿಳಿದು ಅವಶ್ಯವಿದ್ದಷ್ಟು ವಿದ್ಯುತ್ ಪೂರೈಸುವ ವ್ಯವಸ್ಥೆಯೇ ಸ್ಮಾರ್ಟ್‌ಗ್ರಿಡ್.ಈ ವ್ಯವಸ್ಥೆ ಜಾರಿಯಾದರೆ ಗ್ರಾಹಕರು ಸೌರಶಕ್ತಿ ಮೂಲಕ ಉತ್ಪಾದಿಸಿದ ವಿದ್ಯುತ್ ಅನ್ನು ಮಾರಾಟ ಮಾಡಬಹುದು. ವಿದ್ಯುತ್ ಅಪವ್ಯಯವಾಗದಂತೆ ತಡೆಯಬಹುದು. ಬೆಸ್ಕಾಂ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಾಯೋಗಿಕ ಯೋಜನೆ ಮೂಲಕ ಈ ವ್ಯವಸ್ಥೆ ಜಾರಿಗೆ ಚಿಂತನೆ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.