ಭಾನುವಾರ, ಜನವರಿ 26, 2020
22 °C

ಸ್ವರ್ಗದ ಬಾಗಿಲಿಗೆ ನೂಕು ನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವೈಕುಂಠ ಏಕಾದಶಿ ಅಂಗವಾಗಿ ನಗರದ ವಿವಿಧ ದೇವಸ್ಥಾನಗಳಲ್ಲಿ ಬೆಳಿಗ್ಗೆ 4 ಗಂಟೆಯಿಂದಲೇ ಭಕ್ತರ ಸಡಗರ, ಸಂಭ್ರಮ ಮನೆ ಮಾಡಿತ್ತು. ಭಕ್ತಾದಿಗಳು ಲಘುಬಗೆಯಿಂದ ಸಿದ್ಧರಾಗಿ ಭಕ್ತಿಯ ಸಮರ್ಪಣೆಗೆ ದೇವಸ್ಥಾನಕ್ಕೆ ತೆರಳಿದರು.ಮಾರ್ಗಶಿರ ಶುಕ್ಲ ಏಕಾದಶಿ ದಿನವು `ವೈಕುಂಠ ಏಕಾದಶಿ~ ಎಂದೇ ಬಿಂಬಿತವಾಗಿದೆ. ಬೆಳಿಗ್ಗೆ ಮಾಗಿಯ ಚಳಿಯನ್ನು ಲೆಕ್ಕಿಸದೇ 4 ಗಂಟೆಗೆ ಸ್ನಾನ ಮಾಡಿದ ಭಕ್ತರು, ಮಡಿವಸ್ತ್ರ ಧರಿಸಿ ದೇವಸ್ಥಾನಗಳತ್ತ ಮುಖ ಮಾಡಿದರು.ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮ, ಒಂಟಿಕೊಪ್ಪಲ್ ಶ್ರೀವೆಂಕಟರಮಣಸ್ವಾಮಿ ದೇವಸ್ಥಾನ, ಅರಮನೆ ಆವರಣದ ಕಿಲ್ಲೆ ವೆಂಕಟರಮಣಸ್ವಾಮಿ, ವಿಜಯನಗರದ ಯೋಗಾನರಸಿಂಹಸ್ವಾಮಿ, ಹೆಬ್ಬಾಳದ ಲಕ್ಷ್ಮೀಕಾಂತ ದೇವಾಲಯ ಹಾಗೂ ಇಸ್ಕಾನ್ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳನ್ನು ಬಗೆ ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು.ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀದತ್ತವೆಂಕಟೇಶ್ವರ ದೇವಾಲಯದಲ್ಲಿ `ವೈಕುಂಠ ದ್ವಾರ~ವನ್ನು ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 2.30ರ ವರೆಗೆ ತೆರೆಯಲಾಗಿತ್ತು. ಸಾವಿರಾರು ಮಂದಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಸ್ವರ್ಗದ ಬಾಗಿಲು ಪ್ರವೇಶಿಸಿ ಪುನೀತರಾದರು.ವಿವಿ ಮೊಹಲ್ಲಾದ ಶ್ರೀವೆಂಕಟರಮಣಸ್ವಾಮಿ ದೇವಸ್ಥಾನವನ್ನು ಬೆಳಿಗ್ಗೆ 4.30 ಗಂಟೆಗೆ ತೆರೆಯಲಾಗಿತ್ತು. ಮೊದಲಿಗೆ ಸುಪ್ರಭಾತ ಸೇವೆ, ಬಳಿಕ ದೇವರ ಉತ್ಸವ, ವೈಕುಂಠ ದ್ವಾರ ಪ್ರವೇಶ, ನೈವೇದ್ಯ, ಮಹಾಮಂಗಳಾರತಿ ಕಾರ್ಯಕ್ರಮ ಜರುಗಿದವು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.ಕುವೆಂಪು ನಗರದ ಐ ಬ್ಲಾಕ್‌ನಲ್ಲಿರುವ ಶ್ರೀಮತ್ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲೂ ವಿಶೇಷ ಪೂಜೆ ನೆರವೇರಿತು. ವಿವಿಧ ಬಡಾವಣೆಗಳ ಜನರು ಬೆಳಿಗ್ಗೆಯಿಂದಲೇ ಸಾಲು ಸಾಲಾಗಿ ಬಂದು ದೇವರ ದರ್ಶನ ಪಡೆದರು. ಇಸ್ಕಾನ್ ದೇವಸ್ಥಾನದಲ್ಲಿ ಲಕ್ಷ ಅರ್ಚನೆ ಕೈಗೊಳ್ಳಲಾಯಿತು.ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ 7.30ಕ್ಕೆ ವಿಶೇಷ ಪೂಜೆ ನಡೆಯಿತು. ಭಕ್ತರು ವಿಶೇಷವಾಗಿ ಅಲಂಕೃತವಾದ `ಸ್ವರ್ಗದ ಬಾಗಿಲು~ ಪ್ರವೇಶಿಸಿ ಶ್ರೀರಾಮಚಂದ್ರನ ದರ್ಶನ ಪಡೆದರು.ವೈಕುಂಠ ಏಕಾದಶಿ ದಿನ ದೇವರ ದರ್ಶನ ಪಡೆದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಜನರದ್ದು. ಹೀಗಾಗಿ ವಿಷ್ಣು ಭಕ್ತರಿಗೆ ವೈಕುಂಠ ಏಕಾದಶಿ ಅತ್ಯಂತ ಪವಿತ್ರ ದಿನವೂ ಹೌದು. ವೈಕುಂಠ ಏಕಾದಶಿ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ `ವೈಕುಂಠ ದ್ವಾರ~ದ ಮೂಲಕ ಹೊರ ಬಂದರೆ, ಉತ್ತರೋತ್ತರ ಅಭಿವೃದ್ಧಿಯಾಗುವುದಲ್ಲದೆ, ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಎಂಬುದು ಹಿರಿಯರ ನಂಬಿಕೆ.

ಪ್ರತಿಕ್ರಿಯಿಸಿ (+)