ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ಜ್ಞಾನಸ್ವರೂಪ ಸಾನಂದ

ಗಂಗೆ ಉಳಿಸಲು ಯತ್ನಿಸುತ್ತಿರುವ ಭಗೀರಥ
Last Updated 28 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮನಸ್ಸು ಮಾಡಿದ್ದರೆ ಈ ಪ್ರೊಫೆಸರ್ ‘ನೆಮ್ಮದಿಯ ಜೀವನ’ ನಡೆಸಬಹುದಿತ್ತು. ತನ್ನ ಬುದ್ಧಿಮತ್ತೆಯನ್ನೇ ಬಳಸಿಕೊಂಡು ದೇಶ- ವಿದೇಶಗಳಲ್ಲಿ ಮಾಲಿನ್ಯ ನಿವಾರಣೆ ಕುರಿತು ಉಪನ್ಯಾಸ ಕೊಡುತ್ತ, ಹಾಯಾಗಿ ಸುತ್ತಾಡಬಹುದಿತ್ತು. ಅದೂ ಬೇಡವಾಗಿದ್ದರೆ, ಸರ್ಕಾರದ ವಿವಿಧ ಇಲಾಖೆಗಳಿಗೆ ಸಲಹೆಗಾರನಾಗಿ ಸೇವೆ ಸಲ್ಲಿಸಬಹುದಿತ್ತು. ಅದೆಲ್ಲ ಬಿಟ್ಟು, ‘ನದಿಯನ್ನು ರಕ್ಷಿಸಿ’ ಎಂಬ ಬೇಡಿಕೆ­ಯೊಂದಿಗೆ ಸ್ವಾಮಿ ಜ್ಞಾನಸ್ವರೂಪ ಸಾನಂದ ( ಹಿಂದಿನ ಹೆಸರು ಡಾ. ಜಿ.ಡಿ.ಅಗರ­ವಾಲ್) ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಲಕ್ಷಾಂತರ ಜನ ಮೋಕ್ಷ ಪಡೆಯಲು ಧಾವಿಸುವ ಗಂಗೆಯನ್ನು ಉಳಿಸಿ ಎಂಬ ಒತ್ತಾಯ ಅವರದು. ಯಥಾಪ್ರಕಾರ ಸರ್ಕಾರದ್ದು ಜಾಣಕಿವುಡು.

‘ದೇವ ನದಿ’ಯೆಂದು ಕರೆಸಿಕೊಳ್ಳುವ ಗಂಗಾ ನದಿಯನ್ನೊಮ್ಮೆ ಈಗ ನೋಡಬೇಕು. ಕೈಗಾರಿಕೆಗಳ ವಿಷಕಾರಿ ತ್ಯಾಜ್ಯ, ಹಳ್ಳಿ- ಪಟ್ಟಣಗಳಿಂದ ಹರಿದು ಬರುವ ಚರಂಡಿ ನೀರು, ಮೋಕ್ಷ ಸಿಗಲಿ ಎಂದು ಅರೆಬರೆ ಸುಟ್ಟು ನದಿಗೆ ಎಸೆದ ಶವಗಳು... ದೇವ ನದಿಯೆದುರು ನಮ್ಮೂರ ಚರಂಡಿಯೇ ಶುಭ್ರ ಎನ್ನುವಂತೆ ಭಾಸವಾಗುತ್ತದೆ.
 

ಮಾನವ ಚಟುವಟಿಕೆಗಳಿಂದಲೇ ಮಾಲಿನ್ಯದ ಕೂಪವಾದ ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಕೋಟಿಗಟ್ಟಲೆ ಹಣ ಖರ್ಚಾಗಿದೆ. ಹೀಗಿದ್ದರೂ ಅದರಲ್ಲಿ ಇನ್ನಷ್ಟು, ಮತ್ತಷ್ಟು ಕೊಳೆ ತುಂಬಿಕೊಳ್ಳುತ್ತಿದೆ. ಈ ನದಿಯ ಮೂಲದಲ್ಲೇ ಸರಣಿ ಅಣೆಕಟ್ಟು ಕಟ್ಟಿ, ವಿದ್ಯುತ್ ಉತ್ಪಾದಿಸುವ ಸರ್ಕಾರದ ನಿರ್ಧಾರದಿಂದ ನದಿಯ ಮಾರಣಹೋಮ ನಡೆಯಲಿದೆ. ‘ಇದನ್ನು ಕಣ್ಣಾರೆ ನೋಡುತ್ತಾ, ಮೂಕಪ್ರೇಕ್ಷಕನಾಗಿ ಸುಮ್ಮನೇ ಕೂಡಲಾರೆ’ ಎಂದು ಗರ್ಜಿಸುತ್ತ, ಸ್ವಾಮಿ ಸಾನಂದ ಜೂನ್ 13ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ನಿರಶನ ನೂರು ದಿನಗಳನ್ನು ಪೂರೈಸುತ್ತಿದ್ದಂತೆ, ನೀರು ಸೇವಿಸುವುದನ್ನು ಸಹ ಅವರು ತ್ಯಜಿಸಿದ್ದಾರೆ.

ಎಂಜಿನಿಯರಿಂಗ್‌ ಪದವಿ ಪಡೆದು, ಜಲವಿಜ್ಞಾನಿಯಾಗಿ, ನೀರಿನ ರಕ್ಷಣೆ ಕುರಿತು ಕಾನೂನು ರಚನೆಗೆ ಕಾರಣರಾದರು. ಈಗ ಇಳಿವಯಸ್ಸಿನಲ್ಲಿ ಸನ್ಯಾಸಿಯಾಗಿ ಗಂಗಾ ನದಿ ಉಳಿಸಲು ಹೋರಾಟ ನಡೆಸಿರುವ ಸ್ವಾಮಿ ಸಾನಂದ ನಮ್ಮ ನಡುವಿರುವ ಅಪರೂಪದ ಸಂತ.

ಉತ್ತರ ಪ್ರದೇಶದ ಮುಜಫ್ಫರ್‌ ಜಿಲ್ಲೆಯ ಕಾಂಡ್ಲಾ ಎಂಬ ಗ್ರಾಮದಲ್ಲಿ ಜುಲೈ 20, 1932ರಲ್ಲಿ ಗುರುದಾಸ್ ಅಗರವಾಲ್‌ ಜನಿಸಿದರು. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಭ್ಯಾಸ ನಡೆಸಿದರು. ರೂರ್ಕಿಯ ಐಐಟಿಯಿಂದ ಪದವಿ ಪಡೆದ ಅಗರವಾಲ್‌, ಉತ್ತರ ಪ್ರದೇಶದ ನೀರಾವರಿ ಇಲಾಖೆಯಲ್ಲಿ  ವಿನ್ಯಾಸ ವಿಭಾಗದಲ್ಲಿ ಎಂಜಿನಿಯರ್ ಆಗಿ ಕೆಲಸ ಆರಂಭಿಸಿದರು. ಕೆಲವು ದಿನಗಳ ಬಳಿಕ ಅಮೆರಿಕಕ್ಕೆ ತೆರಳಿ ಕ್ಯಾಲಿಫೋರ್ನಿಯಾದ ಬರ್ಕಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ, ಪರಿಸರ ಎಂಜಿನಿಯರಿಂಗ್ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಮರಳಿ ಕಾನ್ಪುರ ಐಐಟಿಗೆ ಬಂದು ನೀರಾವರಿ ಎಂಜಿನಿಯರಿಂಗ್ ಕುರಿತು ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. 2011ರಲ್ಲಿ (ತಮ್ಮ 79ನೇ ವಯಸ್ಸಿನಲ್ಲಿ) ಸನ್ಯಾಸ ದೀಕ್ಷೆ ಸ್ವೀಕರಿಸಿದ ಡಾ. ಜಿ.ಡಿ.ಅಗರವಾಲ್, ಸ್ವಾಮಿ ಜ್ಞಾನಸ್ವರೂಪ ಸಾನಂದ ಆದರು.

ನದಿ ಸಂರಕ್ಷಣೆಗೆ ಸ್ವಾಮಿ ಸಾನಂದ ನಡೆಸಿದ ಹೋರಾಟಗಳು ಗಮನಾರ್ಹ. ನಮ್ಮ ನಾಗರಿಕತೆಯ ಮೂಲ­ಸೆಲೆಯಾದ ನದಿಗಳನ್ನು ಹಾಳು ಮಾಡಿದ್ದು ಸಾಕು; ನಮ್ಮೆಲ್ಲ ತಪ್ಪುಗಳನ್ನು ಸರಿಪಡಿಸಿಕೊಳ್ಳೋಣ ಎಂಬ ಘೋಷಣೆಯೊಂದಿಗೆ ಅವರು ಆಂದೋಲನವನ್ನೇ ಆರಂಭಿಸಿದರು.

ಗಂಗಾ ನದಿ ತನ್ನ ಉಗಮ ಸ್ಥಾನ­ದಿಂದ ಹಿಮಾಲ­ಯದ ಗಿರಿ ಕಂದರಗಳಲ್ಲಿ 125 ಕಿ.ಮೀವರೆಗೆ ಹರಿಯುವ ಮಾರ್ಗ­ವಷ್ಟೇ ಈಗ ಮಾನವ ಹಸ್ತಕ್ಷೇಪದಿಂದ ಮುಕ್ತ­­ವಾಗಿದೆ. ಇಲ್ಲಿಯೇ ಜಲವಿದ್ಯುತ್ ಉತ್ಪಾದನೆ­ಗೆಂದು ಸರಣಿ ಅಣೆಕಟ್ಟು ಕಟ್ಟಲು ಉತ್ತರಾಖಂಡ ಸರ್ಕಾರ ನಿರ್ಧರಿಸಿತು. ‘ಜೀವ­ವೈವಿಧ್ಯ ದೃಷ್ಟಿ­ಯಿಂದ ಪ್ರಮುಖ ವೆಂದೇ ಪರಿಗಣಿ­ಸಲಾದ ಈ ಮಾರ್ಗ­ದಲ್ಲಾದರೂ ಗಂಗೆಯನ್ನು ಸಹಜವಾಗಿ ಹರಿಯಲು ಬಿಡಿ’ ಎಂಬ ಬೇಡಿಕೆಯೊಂದಿಗೆ ಸ್ವಾಮಿ ಸಾನಂದ ಅವರು 2008ರ ಜೂನ್ 13ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ‘ಈ ಬಗ್ಗೆ ತಜ್ಞರ ಸಮಿತಿ ರಚಿಸಲಾಗುವುದು’ ಎಂಬ ಸರ್ಕಾರದ ಭರ­ವಸೆ ಮೇರೆಗೆ 38ನೇ ದಿನ ತಮ್ಮ ಸತ್ಯಾಗ್ರಹ ಹಿಂದಕ್ಕೆ ಪಡೆದರು.

ಆದರೆ ಆರು ತಿಂಗಳು ಕಳೆದರೂ ಯಾವುದೇ ಪ್ರಕ್ರಿಯೆ ಆರಂಭವಾಗದೇ ಹೋದಾಗ 2009ರ ಜನವರಿ 14ರಂದು ಮತ್ತೆ ಉಪವಾಸ ಸತ್ಯಾಗ್ರಹ ಶುರು ಮಾಡಿದ್ದರು. ಕೊನೆಗೆ, ಉತ್ತರಾಖಂಡ ಸರ್ಕಾರ 380 ಹಾಗೂ 480 ಮೆ.ವಾ. ಸಾಮರ್ಥ್ಯದ ಎರಡು ಜಲವಿದ್ಯುತ್ ಘಟಕ ನಿರ್ಮಾಣ ಕಾಮಗಾರಿಯನ್ನು ಕೈಬಿಡಲು ನಿರ್ಧರಿಸಿತು.

ಮತ್ತೆ ನಿರಶನ
ಭಾಗೀರಥಿ, ಅಲಕನಂದಾ ಹಾಗೂ ಮಂದಾಕಿನಿ ನದಿಗಳಿಗೆ ಅಣೆಕಟ್ಟು ಕಟ್ಟಿ, ವಿದ್ಯುತ್‌ ಉತ್ಪಾದನೆ ಮಾಡುವ ಯೋಜನೆ ಕೈಬಿಡಬೇಕು ಹಾಗೂ ಗಂಗಾ ನದಿ ಸಂರಕ್ಷಣೆಗೆ ಸಮರ್ಪಕ ಯೋಜನೆಯೊಂದನ್ನು ರೂಪಿಸಬೇಕು ಎಂಬ ಎರಡು ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಸ್ವಾಮಿ ಸಾನಂದ ಅವರು ಹರಿದ್ವಾರದ ಮಾತೃ ಸದನ ಆಶ್ರಮದಲ್ಲಿ ಜೂನ್ 13ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಆಗಸ್ಟ್ ಒಂದರಂದು ಸತ್ಯಾಗ್ರಹ 50ನೇ ದಿನಕ್ಕೆ ಕಾಲಿಟ್ಟಾಗ, ಪೊಲೀಸರು ಬಲವಂತದಿಂದ ಅವರನ್ನು ಹೊತ್ತೊಯ್ದು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದರು. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ­ಲಾಯಿತು. ಈ ಅವಧಿ ಮುಕ್ತಾಯ­ವಾದ ಬಳಿಕ ಮತ್ತೆ ಆಶ್ರಮಕ್ಕೆ ಬಂದು ಸತ್ಯಾಗ್ರಹ ಮುಂದುವರಿಸಿದ್ದಾರೆ. ‘ನನ್ನ ದೇಹಸ್ಥಿತಿ ಕಳವಳಕಾರಿಯಾಗಿದೆ ಎಂದು ಹೇಳಿ ಪೊಲೀಸರು ಕರೆದೊಯ್ದರು. ಆಸ್ಪತ್ರೆಗೆ ದಾಖಲಿಸಿ, ಬಲವಂತದಿಂದ ಹಣ್ಣು ತಿನಿಸಲು ಯತ್ನಿಸಿದರು. ಉಪವಾಸ ಸತ್ಯಾಗ್ರಹವೆಂದರೆ, ಅದು ನನ್ನ ತಪಸ್ಸು. ಆ ಹಕ್ಕು ಕಸಿಯಲು ಸಾಧ್ಯವಿಲ್ಲ ಎಂದು ಗುಡುಗಿದೆ. ಎಲ್ಲರೂ ಸುಮ್ಮನಾದರು. ಈಗ ಸತ್ಯಾಗ್ರಹದ ನೂರು ದಿನಗಳನ್ನು ಪೂರೈಸಿದ್ದು, ಯಾರೂ ಈವರೆಗೆ ನನ್ನತ್ತ ಬಂದಿಲ್ಲ’ ಎಂದು ಸ್ವಾಮಿ ಸಾನಂದ ಹೇಳುತ್ತಾರೆ. ನೂರನೇ ದಿನದಿಂದ (ಸೆ. 21) ಅವರು ನೀರು ಕುಡಿಯುವುದನ್ನೂ ತ್ಯಜಿಸಿದ್ದಾರೆ.

ಗಂಗಾ ನದಿಯುದ್ದಕ್ಕೂ ನಡೆದಿರುವ ಅಕ್ರಮ ಮರಳುಗಾರಿಕೆ ತಡೆಯಲು ಆಗ್ರಹಿಸಿ ಸ್ವಾಮಿ ನಿಗಮಾನಂದ ಸರಸ್ವತಿ ಉಪವಾಸ ಸತ್ಯಾಗ್ರಹ ನಡೆಸಿದ್ದರು; ನಿರಶನದ 68ನೇ ದಿನದಂದು (2011ರ ಜೂನ್ 13) ಶಂಕಾಸ್ಪದವಾಗಿ ಸಾವನ್ನಪ್ಪಿದ್ದರು. ‘ಸ್ವಾಮಿ ನಿಗಮಾ­ನಂದ ಮರಳು ಮಾಫಿಯಾಕ್ಕೆ ಬಲಿಯಾದರು. ನಾನು ಜಲವಿದ್ಯುತ್ ಮಾಫಿಯಾಕ್ಕೆ ಬಲಿಯಾಗಬಹುದು. ಚಿಂತೆಯಿಲ್ಲ. ಸಂಸ್ಕೃತಿ ಹಾಗೂ ಪರಿಸರದ ದೃಷ್ಟಿಯಿಂದ ಅಮೂಲ್ಯವೆನಿಸಿದ ಗಂಗಾ ನದಿ ಸಂರಕ್ಷಣೆ ಮುಂದೆ ನಮ್ಮ ಜೀವ ಅಮೂಲ್ಯವೇನೂ ಅಲ್ಲವಲ್ಲ?!’ ಎಂದು ಸ್ವಾಮಿ ಸಾನಂದ ನಿರಾಳವಾಗಿ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT