ಬುಧವಾರ, ಸೆಪ್ಟೆಂಬರ್ 30, 2020
25 °C

ಹಂದಿ ಹೊರಹಾಕಲು ಮೇಯರ್ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂದಿ ಹೊರಹಾಕಲು ಮೇಯರ್ ಆದೇಶ

ಧಾರವಾಡ: ಈಚೆಗೆ ನಗರದಲ್ಲಿ ಹಂದಿಗಳ ಗುಂಪು ಬಾಲಕನೊಬ್ಬನ ಮರ್ಮಾಂಗವನ್ನೇ ಕಚ್ಚಿ ಹಾಕಿದ ಘಟನೆ ಸೋಮವಾರ ಇಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಅವಧಿಯ ಚರ್ಚೆಗೆ ನಾಂದಿಯಾಯಿತು. ಹಂದಿಗಳನ್ನು ನಗರದಿಂದ ತೆರವುಗೊಳಿಸಲು ಮೇಯರ್ ಡಾ.ಪಾಂಡುರಂಗ ಪಾಟೀಲ ಆದೇಶ ನೀಡಿದರು.ಸಭೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರಾದ ದೀಪಕ್ ಚಿಂಚೋರೆ, ಗಣೇಶ ಟಗರಗುಂಟಿ, ಯಾಸಿನ್ ಹಾವೇರಿಪೇಟ ಅವರು ಅವಳಿನಗರದಲ್ಲಿ ಹಂದಿ ಹಾಗೂ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಕೂಡಲೇ ಅವುಗಳನ್ನು ನಗರದಿಂದ ತೆರವುಗೊಳಿಸಬೇಕು ಎಂದರು.ಇದಕ್ಕೆ ದನಿಗೂಡಿಸಿದ ವೀರಣ್ಣ ಸವಡಿ ಹಾಗೂ ಸರೋಜಾ ಪಾಟೀಲ ಹಂದಿಗಳನ್ನು ಯಾವುದಾದರೂ ಕಾಡಿನಲ್ಲಿ ಬಿಡಬೇಕು. ಪ್ರಾಣಿ ಹತ್ಯೆಯ ಹೆಸರಿನಲ್ಲಿ ಪಾಲಿಕೆಯ ವಿರುದ್ಧ ಕೇಸು ದಾಖಲಾಗಲಿ ಪ್ರಾಣಿಗಳಿಗಿಂತ ಮನುಷ್ಯರ ಜೀವನವೇ ಹೆಚ್ಚಿನದು ಎಂಬುದನ್ನು ತೋರಿಸಲು ಹಂದಿಗಳನ್ನು ಕೊಲ್ಲಬೇಕು. ಇಲ್ಲವೇ ಹೊರಹಾಕಬೇಕು ಎಂದರು.ಮೇಯರ್ ಡಾ.ಪಾಟೀಲ ಅವರು ಹಂದಿಗಳನ್ನು ಕೊಲ್ಲಲು ಏನಾದರೂ ಕಾನೂನು ತೊಡಕುಗಳಿವೆಯೇ ಎಂಬ ಬಗ್ಗೆ ಪಾಲಿಕೆಯ ಕಾನೂನು ಕೋಶದ ಗಂಜಿ ಅವರನ್ನು ಕೇಳಿದರು. ವಿವಿಧ ನಿಯಮಗಳನ್ನು ವಿವರಿಸಿದ ಅವರು, ಹಂದಿಗಳು ರೋಗಗ್ರಸ್ಥವಾಗಿದ್ದರೆ ಅಂಥವುಗಳನ್ನು ಕೊಂದು ಹಾಕಬಹುದು. ಆದರೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಬೇಕು ಎಂದು ಸಲಹೆ ನೀಡಿದರು. ಅದಕ್ಕೆ ಬಹುತೇಕ ಎಲ್ಲ ಸದಸ್ಯರು ಕೈಯೆತ್ತಿ ಸಮ್ಮತಿ ಸೂಚಿಸಿದರು. ಪಾಲಿಕೆ ಸಭಾನಾಯಕ ಪ್ರಕಾಶ ಗೋಡಬೋಲೆ ಹಾಗೂ ದೀಪಕ್ ಚಿಂಚೋರೆ ನಿರ್ಣಯ ಮಂಡನೆ ಹಾಗೂ ಅನುಮೋದನೆ ಮಾಡಿದರು.ನಂತರ ಪ್ರಮುಖವಾಗಿ ಚರ್ಚೆಗೆ ಬಂದದ್ದು ಈಚೆಗೆ ಹುಬ್ಬಳ್ಳಿಯಲ್ಲಿ ಕಾಮಗಾರಿ ನಡೆಯುವ ವೇಳೆ ಮ್ಯಾನ್‌ಹೋಲ್‌ನಲ್ಲಿ ಬಿದ್ದು ತೀರಿಕೊಂಡ ಕಾರ್ಮಿಕರ ಬಗ್ಗೆ. ಬಿಜೆಪಿಯ ವೆಂಕಟೇಶ ಮೇಸ್ತ್ರಿ ಈ ಸಂಗತಿಯನ್ನು ಪ್ರಸ್ತಾಪಿಸಿದರು. ಈಗಲ್ ಕನ್‌ಸ್ಟ್ರಕ್ಷನ್ಸ್ ಕಂಪೆನಿಯು ನಡೆಸುತ್ತಿರುವ ಒಳಚರಂಡಿ ಕಾಮಗಾರಿಯ ವೇಳೆ ಈ ದುರ್ಘಟನೆ ಸಂಭವಿಸಿದ್ದು, ದಲಿತ ಕುಟುಂಬಕ್ಕೆ ಸೇರಿದ ಇಬ್ಬರೂ ಕಾರ್ಮಿಕರಿಗೆ ಕಂಪೆನಿಯಿಂದ ತಲಾ 20 ಲಕ್ಷ ರೂಪಾಯಿ ಪರಿಹಾರವನ್ನು ಕೊಡಿಸಬೇಕು ಎಂದು ಒತ್ತಾಯಿಸಲಾಯಿತು. ನಿರ್ಲಕ್ಷ್ಯ ತೋರಿದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದೂ ಒತ್ತಾಯಿಸಲಾಯಿತು.ಈ ಬಗ್ಗೆ ಸ್ಪಷ್ಟನೆ ನೀಡಿದ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ, `ಈ ಘಟನೆಗೆ ಪಾಲಿಕೆ ಕಾರಣವಾಗುವುದಿಲ್ಲ. ಈಗಲ್ ಕನ್‌ಸ್ಟ್ರಕ್ಷನ್ಸ್ ಕಂಪೆನಿ ಹೊಣೆಯಾಗಲಿದೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದು, ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಯೋಜನೆಯನ್ನು ನೀಡಿದ ಕೆಯುಐಡಿಎಫ್‌ಸಿ (ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ) ವ್ಯವಸ್ಥಾಪಕ ನಿರ್ದೇಶಕರಿಗೆ ವರದಿಯ ಪ್ರತಿಯನ್ನು ಕಳಿಸಲಾಗಿದೆ~ ಎಂದರು.ಪಾಲಿಕೆ ಎಂಜಿನಿಯರ್ ಆಗಾಖಾನ್ ಮಾತನಾಡಿ, `ಈ ಕಂಪೆನಿ ಈಗಾಗಲೇ ಕೈಗೊಂಡ ಕಾರ್ಯವನ್ನು ಪೂರ್ಣಗೊಳಿಸುವವರೆಗೂ ಮುಂದಿನ ಕಾರ್ಯ ಮಾಡದಂತೆ ನಿರ್ದೇಶನ ನೀಡಲಾಗಿದೆ~ ಎಂದರು.

ಸಭೆಯಲ್ಲಿ ಹುಬ್ಬಳ್ಳಿಯ ಈಜುಕೊಳವನ್ನು ಶೀಘ್ರವೇ ದುರಸ್ತಿ ಮಾಡಿ ಕೋಚ್‌ಗಳನ್ನು ನೇಮಕ ಮಾಡಿ ಈಜುಗಾರರ ಉಪಯೋಗಕ್ಕೆ ಮುಕ್ತಗೊಳಿಸಬೇಕು ಎಂದು ವೀರಣ್ಣ ಸವಡಿ ಆಗ್ರಹಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.