ಶುಕ್ರವಾರ, ಮೇ 20, 2022
21 °C

ಹಂಪಿ ಸಂಶೋಧಕರ ಗಣಿ: ಡಾ. ಎಂ. ಚಿದಾನಂದ ಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಹಂಪಿ ಕೇವಲ ಐತಿಹಾಸಿಕ ಸ್ಥಳ ಮಾತ್ರವಾಗಿರದೆ, ಸಂಶೋಧಕರ ಅಕ್ಷಯ ಗಣಿ~ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಇಲ್ಲಿ ಅಭಿಪ್ರಾಯಪಟ್ಟರು.ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಜ್ಯೋತಿ ಸಭಾಂಗಣದ ಉಪನ್ಯಾಸ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ `ಹಂಪಿ- ಕೆಲವು ಹೊಸ ಸಂಶೋಧಗಳು~ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಈಚೆಗೆ ಹಂಪಿಯಲ್ಲಿ ನಡೆಸಿದ ಕೆಲವು ಸಂಶೋಧನೆಗಳ ಬಗ್ಗೆ ವಿವರಿಸಿದ ಅವರು, ಹಂಪಿಯಲ್ಲಿನ ಅರಸನ ಗುಹೆಗಳ ಬಗ್ಗೆ ದಾಖಲೆ ದೊರೆತಿದೆ. ಇದಕ್ಕೆ ಯೋಗಿಗಳು ವಾಸವಾಗಿರುವ ಬಗ್ಗೆ ಗುಹೆಯ ಮೇಲಿರುವ ಕೆಲ ಬರಹಗಳೇ ಸಾಕ್ಷಿಯಾಗಿವೆ. ಇಲ್ಲಿನ ಪಂಪಾ ಸರೋವರದಲ್ಲಿ ವಿರೂಪಾಕ್ಷ ತಪಸ್ಸು ಮಾಡಿದ ಎಂಬುದು ಇಲ್ಲಿನ ಜನರ ಮತ್ತು ಜಾನಪದ ನಂಬಿಕೆಯಾಗಿದೆ. ಇಂತಹ ನಂಬಿಕೆಗಳಲ್ಲಿ ಐತಿಹಾಸಿಕ ಸತ್ಯಗಳು ಹುದುಗಿವೆ. ವಾಲ್ಮೀಕಿ ರಾಮಾಯಣದಲ್ಲಿ ಸಹ ಪಂಪಾ ಸರೋವರದ ಉಲ್ಲೇಖವಿದೆ~ ಎಂದು ಹೇಳಿದರು.ಕ್ರಿ.ಶ.12 ಮತ್ತು 13ನೇ ಶತಮಾನದಲ್ಲಿ ಈ ಪ್ರದೇಶವನ್ನು ಪಂಪಾಪುರ ಎಂದು ಕರೆಯಲಾಗುತ್ತಿತ್ತು. ಪೂರ್ವದಲ್ಲಿ ಕಿನ್ನೇಶ್ವರ, ಪಶ್ಚಿಮದಲ್ಲಿ ಸೋಮೇಶ್ವರ, ದಕ್ಷಿಣದಲ್ಲಿ ಜಂಬುಕೇಶ್ವರ, ಉತ್ತರದಲ್ಲಿ ವಾಣಿ ಭದ್ರೇಶ್ವರ ಎಂಬ ನಾಲ್ಕು ಗಡಿಗಳನ್ನು ಅಂದಿನ ಕಾಲದಲ್ಲಿ ನಿರ್ಮಿಸಲಾಗಿತ್ತು. ಇಂದಿಗೂ ಈ ಗಡಿ ದ್ವಾರಗಳಿಗೆ ನಿತ್ಯ ಪೂಜೆ ನಡೆಯುತ್ತದೆ. ಈ ಪ್ರದೇಶವನ್ನು ಯಾವ ರಾಜರೂ ಆಳ್ವಿಕೆ ಮಾಡುತ್ತಿರಲಿಲ್ಲ. ವಿರೂಪಾಕ್ಷನೇ ಹಂಪೆಯ ದೊರೆಯಾಗಿದ್ದ ಎಂಬುದರ ಬಗ್ಗೆ ಕೆಲ ಕಾಶಿ ಪುಸ್ತಕಗಳ ಅಧ್ಯಯನದಿಂದ ತಿಳಿದು ಬಂದಿದೆ ಎಂದು ವಿವರಿಸಿದರು.ಬಹು ಮುಖ್ಯ ಸಂಗತಿಯೆಂದರೆ ವಿರೂಪಾಕ್ಷ ದೇವಾಲಯದಲ್ಲಿ ವಿರೂಪಾಕ್ಷನ ಪತ್ನಿಯರಾದ ಕಿರಿಯ ಪಂಪಾಂಬಿಕೆ (ಪಂಪಾ ಸರೋವರದಲ್ಲಿ), ಹಿರಿಯ ಪಂಪಾಂಬಿಕೆ (ವಿರೂಪಾಕ್ಷ ದೇವಾಲಯ) ದೇವಾಲಯಗಳಿರುವುದು ತಿಳಿದು ಬಂದಿದೆ. ಹಿರಿಯ ಪಂಪಾಂಬಿಕೆಗೆ ವಿರೂಪಾಕ್ಷ ದೇವಾಲಯದಲ್ಲಿ ಪ್ರತಿವರ್ಷ ವಿವಾಹ ಕಾರ್ಯಕ್ರಮ ನಡೆಸುವ ಪದ್ದತಿ ಇದೆ. ಇದಕ್ಕೂ ಮುನ್ನ ನಿಶ್ಚಿತಾರ್ಥವು ಪಂಪಾ ಸರೋವರದಲ್ಲಿ ನಡೆಯುತ್ತದೆ. ವಿರೂಪಾಕ್ಷನ ಬಗ್ಗೆ ಹರಿಹರನ ರಗಳೆಯಲ್ಲೂ ಉಲ್ಲೇಖವಿರುವ ಪುರಾವೆ ಇದೆ ಎಂದರು.ಇಲ್ಲಿನ ವಿರೂಪಾಕ್ಷ ದೇವಾಲಯದ ಬಲ ಭಾಗದಲ್ಲಿ ನಾಗನಂದೇಶ್ವರ ಹಾಗೂ ನಾಗನಾಥ ದೇವಾಲಯ ಇದೆ. ಇದು ಹರಿಹರ ವಾಸವಿದ್ದ ಸ್ಥಳ. ಈಗ ಸ್ಥಳದಲ್ಲಿ ಪಲ್ಲಕ್ಕಿ ಉತ್ಸವ ಮತ್ತು ರಥೋತ್ಸವ ನಡೆಯುತ್ತದೆ. ಚಾಮರಸನ ಗುಹೆ ಸಹ ಕಂಡು ಬಂದಿದ್ದು, ಈ ಕುರಿತು ಆತನ ಪ್ರಭುಲಿಂಗ ಲೀಲೆಯಲ್ಲಿ ಮಾಹಿತಿ ಇದೆ. ಆತನ ಗುಹೆಯಲ್ಲಿ ಇಷ್ಟಲಿಂಗ ಪೂಜೆ ನಡೆಸುತ್ತಿರುವ ಬಗ್ಗೆ ಕುರುಹುಗಳು ದೊರೆತಿವೆ. ಪೂಜಾ ಸ್ಥಳದಲ್ಲಿ ಪೀಠ, ಲಿಂಗಕ್ಕೆ ಪೂಜೆ ಸಲ್ಲಿಸಿದ ನೀರು ಹರಿದು ಹೋಗಲು ಸ್ಥಳ ನಿರ್ಮಿಸಿರುವುದಕ್ಕೆ ಈಗಲೂ ಆ ಸ್ಥಳದಲ್ಲಿ ಸಾಕ್ಷಿಗಳಿವೆ ಎಂದು ಹೇಳಿದರು.ಕ್ರಿ.ಶ.12 ಮತ್ತು 13ನೇ ಶತಮಾನದಲ್ಲಿ ಮುಸ್ಲಿಂರ ಆಕ್ರಮಣದಿಂದ ಈ ಪ್ರದೇಶಗಳ ದೇವಾಲಯಗಳು ಹಾಗೂ ಸನಾತನ ಧರ್ಮ ನಾಶ ಹೊಂದಲು ಕಾರಣವಾಯಿತು. ಮಾತಂಗ ಪರ್ವತದಲ್ಲಿ ದಾಳಿಯನ್ನು ತಡೆಯಲು ಸೈನ್ಯವನ್ನು ನಿಯೋಜಿಸಲಾಗಿತ್ತು ಎಂಬ ಅಂಶ ಆ ಕಾಲದ ಕುರುಗೋಡು ಶಾಸನದಲ್ಲಿದೆ. ಈ ವೇಳೆ ಉದಯವಾದ ಏಕೈಕ ಸನಾತನ ರಾಜ್ಯವೇ ವಿಜಯನಗರ. ಅಂದಿನ ಕಾಲದಲ್ಲಿ ಹಕ್ಕ ಬುಕ್ಕರಿಗೆ ದೇವಾಲಯದ ಸಂಪತ್ತನ್ನು ನೀಡುವ ಮೂಲಕ ರಾಜ್ಯ ಸ್ಥಾಪನೆ ಮಾಡಲು ಸಹಾಯ ಮಾಡಲಾಯಿತು ಎಂಬ ವಿಷಯ ತಿಳಿದು ಬಂದಿದೆ ಎಂದು ತಮ್ಮ ಸಂಶೋಧನೆಯ ವಿಷಯಗಳನ್ನು ವಿವರಿಸಿದರು.ಕುಲಪತಿ ಡಾ.ಎನ್.ಪ್ರಭುದೇವ್, `ಹಂಪಿ ಕ್ಷೇತ್ರದ ಬಗ್ಗೆ ಸಂಶೋಧನೆ ನಡೆಸಿರುವ ಹಾಗೆಯೇ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗ್ಗೆ ಸಂಶೋಧನೆ ನಡೆಸಬೇಕು ಎಂದು ಮನವಿ ಮಾಡಿದರು. ಹಂಪಿ ಸಂಶೋಧನೆ ಬಗ್ಗೆ ಬರೆದಿರುವ ಲೇಖನ ಹಾಗೂ ಪ್ರಬಂಧಗಳನ್ನು ನೀಡಿದರೆ ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟ ಮಾಡುವುದಾಗಿ ಹೇಳಿದರು. ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲ  ಸಚಿವ ಟಿ.ಆರ್.ಸುಬ್ರಹ್ಮಣ್ಯ        ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.