ಸೋಮವಾರ, ಮಾರ್ಚ್ 8, 2021
19 °C

ಹತ್ತಿ ಬೆಳೆಗಾರರ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹತ್ತಿ ಬೆಳೆಗಾರರ ಸಂಕಷ್ಟ

ಉದ್ಯೋಗ ನೀಡಿಕೆ, ಉತ್ಪಾದನೆ ಮತ್ತು ವಿದೇಶೀ ವಿನಿಮಯ ಗಳಿಕೆಯಲ್ಲಿ ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಜವಳಿ ಉದ್ಯಮ ತೀವ್ರ ಬಿಕ್ಕಟ್ಟು ಎದುರಿಸತೊಡಗಿದೆ. ಹತ್ತಿ ಮತ್ತು ಹತ್ತಿ ನೂಲಿನ ರಫ್ತು ವಿಚಾರದಲ್ಲಿನ ಸರ್ಕಾರದ ತಪ್ಪು ನೀತಿ ನಿರ್ಧಾರಗಳೇ ಇದಕ್ಕೆ ಕಾರಣ.ಹತ್ತಿಯ ರಫ್ತಿನ ಪ್ರಮಾಣದ ಮೇಲೆ ನಿರ್ಬಂಧ ವಿಧಿಸಿದ್ದರಿಂದ ದೇಶೀಯ ಹತ್ತಿ ಬೆಲೆ ಪಾತಾಳಕ್ಕೆ ಕುಸಿದಿದೆ. ಹತ್ತಿ ಬೆಳೆಗಾರರನ್ನು ತೀವ್ರ ಕಂಗಾಲುಗೊಳಿಸಿರುವುದು ಇದೇ. ಅವರಿಗೆ ಇಂದು ಕನಿಷ್ಠ ಗೌರವ ದರವೂ ಸಿಗುತ್ತಿಲ್ಲ.ಹತ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಹತ್ತಿ ಬೆಳೆಗಾರರಿಗೆ ಇಂದು ಸೂಕ್ತ ಬೆಲೆಯೇ ಸಿಗುತ್ತಿಲ್ಲ. ಇದೊಂದು ಸೂಕ್ಷ್ಮ ವಿಚಾರವಾಗಿ ಬದಲಾಗಿದ್ದು, ರಾಜಕೀಯ ಪಕ್ಷಗಳೂ ಸಹ ಕಳವಳ ವ್ಯಕ್ತಪಡಿಸಿವೆ.ಅಸ್ಥಿರ ನೀತಿಗಳು

ಹತ್ತಿಯ ರಫ್ತು ವಿಚಾರದಲ್ಲಿ ಕೇಂದ್ರ ಸರ್ಕಾರದ ಅವೈಜ್ಞಾನಿಕ ಕ್ರಮಗಳೇ ಇಂದಿನ ಬಿಕ್ಕಟ್ಟಿಗೆ ಕಾರಣ. ಜವಳಿ ಕ್ಷೇತ್ರದ ವಿವಿಧ ವರ್ಗಗಳ ಬೇಡಿಕೆ, ಪೂರೈಕೆ ಬಗ್ಗೆ ಸಮಗ್ರ ಚಿಂತನೆ ನಡೆಸದೆ ಸರ್ಕಾರ ಕಚ್ಚಾ ಹತ್ತಿ ಮತ್ತು ಹತ್ತಿ ನೂಲಿನ ರಫ್ತನ್ನು ಒಮ್ಮೆ ನಿಷೇಧಿಸುತ್ತದೆ, ಮತ್ತೊಮ್ಮೆ ನಿಷೇಧ ತೆರವುಗೊಳಿಸುತ್ತದೆ. ಹತ್ತಿ ಬೆಳೆಗಾರರು, ನೂಲಿನ ಗಿರಣಿಗಳು, ಜವಳಿ ತಯಾರಕರ ಹಿತವನ್ನು ಪರಿಗಣಿಸದೆ ಇಂತಹ ನಿರ್ಧಾರ ಕೈಗೊಳ್ಳಲಾಗುತ್ತಿದೆ.ನೂಲಿನ ಗಿರಣಿಯಂತಹ ಜವಳಿ ಉದ್ಯಮಕ್ಕೆ ಸಾಕಷ್ಟು ಕಚ್ಚಾ ಸಾಮಗ್ರಿ ಸಿಗಲಿ ಎಂಬ ಕಾರಣಕ್ಕೆ ಸರ್ಕಾರ ಕಚ್ಚಾ ಹತ್ತಿಯ ರಫ್ತಿನ ಪ್ರಮಾಣದ ಮೇಲೆ ನಿರ್ಬಂಧ ವಿಧಿಸುತ್ತದೆ. ಅದರಂತೆಯೇ ಸರ್ಕಾರವು ಜವಳಿ ಉದ್ಯಮಕ್ಕೆ ಮುಖ್ಯವಾಗಿ ಬೇಕಾದ ಹತ್ತಿ ನೂಲಿನ ರಫ್ತಿನ ಪ್ರಮಾಣಕ್ಕೆ ಒಂದು ಮಿತಿ ನೀಡಿದೆ.  ಆದರೆ ದೇಶದಲ್ಲಿ ಮಾತ್ರವಲ್ಲ ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ, ಬೇಡಿಕೆ ಸನ್ನಿವೇಶ ಬಹಳ ಬೇಗ ಬದಲಾಗುತ್ತಿರುತ್ತದೆ. ಇಂತಹ ಬದಲಾವಣೆಗೆ ಸರ್ಕಾರದ ಮಾತ್ರ ಸ್ಪಂದಿಸುತ್ತಿಲ್ಲ. ಜವಳಿ ಉದ್ಯಮದಲ್ಲಿನ ಬಿಕ್ಕಟ್ಟಿಗೆ ಇದೇ ಕಾರಣ.ದೇಶದಲ್ಲಿ ಹತ್ತಿಯ ಬೆಲೆ ಗಗನಕ್ಕೆ ಏರಿದ್ದರಿಂದ ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರವು ಹತ್ತಿ ರಫ್ತಿನ ಪ್ರಮಾಣದ ಮೇಲೆ ನಿರ್ಬಂಧ ವಿಧಿಸಿತ್ತು. ಹತ್ತಿ ದರ ಹೆಚ್ಚಳದಿಂದಾಗಿ ಕೆಲವು ಜವಳಿ ಘಟಕಗಳು ಮುಚ್ಚಿದವು ಕೂಡ. 2010-11ರ ಮಾರುಕಟ್ಟೆ ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) 5.5 ದಶಲಕ್ಷ ಬೇಲ್ (ಪ್ರತಿಯೊಂದು 170 ಕೆ.ಜಿ.ಯದು) ಹತ್ತಿ ರಫ್ತಿಗೆ ಮಾತ್ರ ಸರ್ಕಾರ ಅನುಮತಿ ನೀಡಿತ್ತು. ಆ ಋತುವಿನಲ್ಲಿ ಇಷ್ಟೂ ಪ್ರಮಾಣದ ಹತ್ತಿಯ ರಫ್ತು ನಡೆದುಹೋಗಿತ್ತು. ಆದರೆ ಕಳೆದ ಮಾರ್ಚ್‌ನಿಂದೀಚೆಗೆ ಪರಿಸ್ಥಿತಿ ತೀರಾ ಬದಲಾಗಿದೆ.ಹತ್ತಿ ದರ ಪಾತಾಳಕ್ಕೆ ಕುಸಿದಿದೆ. ಹತ್ತಿ ರಫ್ತಿನ ಮೇಲೆ ಈಗಲೂ ನಿರ್ಬಂಧ ಮುಂದುವರಿದಿರುವುದೇ ಈ ದರ ಕುಸಿತಕ್ಕೆ ಕಾರಣ ಎಂದು ಪರಿಣಿತರು ಹೇಳುತ್ತಾರೆ.

ಕರ್ನಾಟಕದಲ್ಲಿ ಹತ್ತಿಯ ಬೆಲೆ ಶೇ 30ರಷ್ಟು ಕುಸಿದಿದೆ. ರಫ್ತು ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿರುವ ಹತ್ತಿ ವ್ಯಾಪಾರಿಗಳು ಬೆಳೆಗಾರರಿಂದ ಹತ್ತಿ ಕೊಳ್ಳುವುದನ್ನು ನಿಲ್ಲಿಸಿಬಿಟ್ಟಿದ್ದಾರೆ.ಸಂದಿಗ್ಧ ಸ್ಥಿತಿ: ಹತ್ತಿಗೆ ಕೀಟ ಮತ್ತು ರೋಗ ಬಾಧೆ ಅಧಿಕ. ಹೀಗಾಗಿ ಹತ್ತಿ ಒಂದು ದುಬಾರಿ ಬೆಳೆ. ಹತ್ತಿಯ ಬೆಲೆ ಕುಸಿದಿರುವುದರಿಂದ ದೇಶದೆಲ್ಲೆಡೆ ಬೆಳೆಗಾರರಿಗೆ ಭಾರಿ ಸಂಕಷ್ಟ ಎದುರಾಗಿದೆ. ಆಂಧ್ರದಲ್ಲಿ ಇದೊಂದು ರಾಜಕೀಯ ವಿಚಾರವಾಗಿದ್ದು, ರೈತರ ಹಿತದೃಷ್ಟಿಯಿಂದ ಹತ್ತಿ ರಫ್ತಿಗೆ ಅವಕಾಶ ನೀಡಬೇಕು ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕೇಂದ್ರವನ್ನು ಆಗ್ರಹಿಸಿದ್ದಾರೆ.

ಜವಳಿ ಗಿರಣಿಗಳ ಒತ್ತಡದಿಂದಾಗಿಯೇ ಹತ್ತಿ ರಫ್ತಿನ ಪ್ರಮಾಣದ ಮೇಲೆ ನಿರ್ಬಂಧ ವಿಧಿಸಿರುವುದನ್ನು ಅವರು ಬೆಟ್ಟು ಮಾಡಿ ತೋರಿಸಿದ್ದಾರೆ. ಅದೇ ರೀತಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಹ ರಫ್ತು ಪ್ರಮಾಣದ ಮೇಲಿನ ನಿರ್ಬಂಧ ನಡಿಲಿಸುವಮತೆ ಒತ್ತಾಯಿಸಿದ್ದಾರೆ.ದೇಶದ ಹತ್ತಿ ಗಿರಣಿಗಳು ಇಂದು ಹತ್ತಿ ಕೊಳ್ಳುವುದನ್ನು ನಿಲ್ಲಿಸಿಬಿಟ್ಟಿವೆ. ಏಕೆಂದರೆ ಅಲ್ಲಿ ಹತ್ತಿ ನೂಲಿನ ರಾಶಿ ಬಿದ್ದಿದೆ. ದೇಶದೆಲ್ಲೆಡೆ ಜವಳಿ ಗಿರಣಿಗಳು ಕಳೆದ ತಿಂಗಳು ಒಂದು ದಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಭಾರತೀಯ ಜವಳಿ ಉದ್ಯಮ ಒಕ್ಕೂಟ (ಸಿಐಟಿಐ) ಈ ಉತ್ಪಾದನೆ ಸ್ಥಗಿತಕ್ಕೆ ಕರೆ ನೀಡಿತ್ತು. ದೇಶದ ಜವಳಿ ಗಿರಣಿ ಉದ್ಯಮ ವಾರ್ಷಿಕ 70 ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತದೆ.7 ಲಕ್ಷಕ್ಕೂ ಅಧಿಕ ನೌಕರರನ್ನು ಹೊಂದಿರುವ ಈ ಉದ್ಯಮ ವರ್ಷಕ್ಕೆ 3 ಶತಕೋಟಿ ಡಾಲರ್ ಮೌಲ್ಯದ ಹತ್ತಿ ನೂಲನ್ನು ರಫ್ತು ಮಾಡುತ್ತದೆ. 2010-11ರ ಕೊನೆಯ ತ್ರೈಮಾಸಿಕದ ಎರಡು ತಿಂಗಳಿಗೂ ಅಧಿಕ ಸಮಯ ಹತ್ತಿ ನೂಲಿನ ರಫ್ತಿನ ಮೇಲೆ ಬಹುತೇಕ ಸಂಪೂರ್ಣ ನಿಷೇಧ ಹೇರಿದ್ದರಿಂದ ಹಾಗೂ ದೇಶೀಯ ಬೇಡಿಕೆ ತಗ್ಗಿದ್ದರಿಂದ ಗಿರಣಿಗಳಲ್ಲಿ ಹತ್ತಿ ನೂಲಿನ ರಾಶಿ ಬೀಳುವಂತಾಯಿತು ಎಂದು ಸಿಐಟಿಐ ಅಧ್ಯಕ್ಷ ಸಿಶಿರ್ ಜೈಪುರಿಯಾ ಹೇಳುತ್ತಾರೆ.ಕಳೆದ ಏಪ್ರಿಲ್‌ನಲ್ಲಿ ಹತ್ತಿ ರಫ್ತಿಗೆ ಅವಕಾಶ ನೀಡಿದಾಗ, ಈಗಾಗಲೇ ಹತ್ತಿ ನೂಲು ಭಾರಿ ಪ್ರಮಾಣದಲ್ಲಿ ದಾಸ್ತಾನಾಗಿದ್ದರಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಬೆಲೆ ಕುಸಿಯಿತು. ಬೆಲೆ ಇನ್ನಷ್ಟು ಕುಸಿಯುತ್ತದೆ ಎಂದು ಭಾವಿಸಿದ ಹತ್ತಿ ಖರೀದಿದಾರರು ಹತ್ತಿ ಖರೀದಿಗೆ ಹಿಂದೇಟು ಹಾಕಿದರು.

 

ಜಾಗತಿಕ ಹತ್ತಿ ನೂಲಿನ ದರ ನಿರ್ಧರಿಸುವಲ್ಲಿ ಭಾರತದ ಪಾತ್ರ ದೊಡ್ಡದಿದೆ. ಏಕೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಶೇ 25ರಷ್ಟು ಪಾಲು ಭಾರತಕ್ಕಿದೆ. ಸರ್ಕಾರ ಮೇಲಿಂದ ಮೇಲೆ ಹತ್ತಿ ರಫ್ತಿನ ಮೇಲೆ ನಿರ್ಬಂಧ ಹೇರುವುದು ಮತ್ತು ಸಡಿಲಿಸುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಕೆಡುತ್ತದೆ, ಅದು ನಂಬಿಗಸ್ಥ ಹತ್ತಿ ಪೂರೈಕೆ ರಾಷ್ಟ್ರವಲ್ಲ ಎಂಬ ಭಾವನೆ ಮೂಡುತ್ತದೆ.ಏಪ್ರಿಲ್‌ನಲ್ಲಿ ಹತ್ತಿ ರಫ್ತಿನ ಮೇಲಿನ ನಿರ್ಬಂಧ ಸಡಿಲಿಸಿದಾಗ ಜಾಗತಿಕ ಮಾರುಕಟ್ಟೆ ಸಹ ಚಿಂತಿಸತೊಡಗಿತ್ತು. ಬಹುಶಃ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹತ್ತಿ ನೂಲು ಸಂಗ್ರಹವಾಗಿದೆ, ಸ್ವಲ್ಪ ಕಾದರೆ ದರ ಇನ್ನಷ್ಟು ಕುಸಿಯಬಹುದು ಎಂದು ಅವುಗಳು ಭಾವಿಸಿದವು.ಬಹುತೇಕ ಖರೀದಿದಾರರು ಹತ್ತಿ ಖರೀದಿಯನ್ನು ಮುಂದೂಡಿದರು. ಹೊಸ ಹತ್ತಿ ಆಗಮಿಸುವುದಕ್ಕೆ ಮೊದಲು ಹಳೆಯ ಹತ್ತಿ ಮುಗಿಯಬೇಕು ಎಂಬ ಕಾರಣಕ್ಕೆ ಒಂದು ತಿಂಗಳೊಳಗೆಯೇ ಹತ್ತಿ ದರವನ್ನು ಶೇ 30ರಷ್ಟು ಇಳಿಸಲಾಯಿತು. ಇದರಿಂದ ದೇಶೀಯ ಹತ್ತಿಯ ಬೆಲೆ ಅಂತರರಾಷ್ಟ್ರೀಯ ಮಟ್ಟಕ್ಕಿಂತ ಕೆಳಕ್ಕೆ ಕುಸಿಯಿತು. ಇಂದು ಹತ್ತಿ ಬೆಳೆಗಾರರು ಎದುರುಸುತ್ತಿರುವುದು ಇದೇ ಸಮಸ್ಯೆ.ಗಾಯದ ಮೇಲೆ ಬರೆ ಎಳೆದಂತೆ ಕಳೆದ ಬಜೆಟ್‌ನಲ್ಲಿ ಜವಳಿ ಉದ್ಯಮದ ಮೇಲೆ ಶೇ 10.3ರಷ್ಟು ಅಬಕಾರಿ ಸುಂಕ ವಿಧಿಸಲಾಗಿದೆ. ಇದರಿಂದ ನೂಲು ಮತ್ತು ಬಟ್ಟೆಯ ಬಳಕೆ ಕಡಿಮೆಯಾಗುವಂತಾಗಿದೆ.ಬಿಕ್ಕಟ್ಟಿನ ಬಿಸಿಯನ್ನು ಕೊನೆಗೂ ತಟ್ಟಿಸಿಕೊಂಡಿರುವ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಇದೀಗ ರಫ್ತು ಪ್ರಮಾಣ ನಿರ್ಬಂಧವನ್ನು ಹಾಲಿ 5.5 ದಶಲಕ್ಷ ಬೇಲ್‌ನಿಂದ 7 ದಶಲಕ್ಷ ಬೇಲ್‌ಗೆ ಹೆಚ್ಚಿಸುವ ಪ್ರಸ್ತಾವ ಇದೆ ಎಂದಿದ್ದಾರೆ.ದೇಶೀಯ ಉತ್ಪಾದನೆ ಹೆಚ್ಚಿರುವುದು ಮತ್ತು ಹತ್ತಿ ನೂಲಿಗೆ ಜಾಗತಿಕ ಮಟ್ಟದಲ್ಲಿ ಕೊರತೆ ಉಂಟಾಗಿರುವುದರಿಂದ ಈ ಬಾರಿ ರಫ್ತು ಪ್ರಮಾಣ ಹೆಚ್ಚುತ್ತದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಶೀಘ್ರ ಇಂತಹ ನಿರ್ಧಾರ ಕೈಗೊಳ್ಳಲಿ ಎಂಬುದು ಹತ್ತಿ ಬೆಳೆಗಾರರ ಆಶಯ.ಕೃಷಿ ಸಚಿವಾಲಯದ ಅಂದಾಜಿನ ಪ್ರಕಾರ ದೇಶದಲ್ಲಿ ಈ ಮೊದಲಿನ ವರ್ಷದ 24.22 ದಶಲಕ್ಷ ಬೇಲ್ ಹತ್ತಿಯ ಬದಲಿಗೆ 2010-11ನೇ ಸಾಲಿನಲ್ಲಿ 34 ದಶಲಕ್ಷ ಬೇಲ್ ಹತ್ತಿ ಉತ್ಪಾದಿಸಲಾಗಿದೆ. ಮತ್ತೊಂದೆಡೆ ಜವಳಿ ಸಚಿವಾಲಯ 2010-11ನೇ ಸಾಲಿನ ಹತ್ತಿಯ ಅಂದಾಜನ್ನು 30.5 ದಶಲಕ್ಷ ಬೇಲ್‌ಗಳಿಗೆ ನಿಗದಿಪಡಿಸಿತ್ತು. ಡಿಸೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಮಂಡಿಗಳಿಗೆ ಕಡಿಮೆ ಪ್ರಮಾಣದಲ್ಲಿ ಹತ್ತಿ ಬೇಲ್‌ಗಳು ಬಂದಿದ್ದವು.ಅಂತೂ ಹತ್ತಿ ಬಿಕ್ಕಟ್ಟು ಬೆಟ್ಟದಷ್ಟು ದೊಡ್ಡದಾಗಿದೆ. ದರ ಕುಸಿತದಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮಗಳ ಹಿತವನ್ನು ಕಾಪಾಡುವ ಹೊಣೆ ಸರ್ಕಾರದ್ದು. ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತಿ ಮತ್ತು ಹತ್ತಿಯ ನೂಲಿಗೆ ಬರಬಹುದಾದ ಸಂಭಾವ್ಯ ಬೇಡಿಕೆಗಳ ಬಗ್ಗೆ ಸಮಗ್ರ ದೃಷ್ಟಿಕೋನದೊಂದಿಗೆ ಹತ್ತಿ ರಫ್ತು ಮಿತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ.

  

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.