ಮಂಗಳವಾರ, ಜನವರಿ 31, 2023
19 °C

ಹದಗೆಟ್ಟ ರಸ್ತೆ: ವಾಹನ ಸವಾರರ ಸರ್ಕಸ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹದಗೆಟ್ಟ ರಸ್ತೆ: ವಾಹನ ಸವಾರರ ಸರ್ಕಸ್!

ಶ್ರೀರಂಗಪಟ್ಟಣ: ತಾಲ್ಲೂಕಿನ ಕಿರಂಗೂರು ಗ್ರಾಮದಿಂದ ಪಾಂಡವಪುರ ರೈಲ್ವೆ ನಿಲ್ದಾಣದ ವರೆಗೆ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಇನ್ನಿಲ್ಲದಂತೆ ಹದಗೆಟ್ಟಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಸರ್ಕಸ್ ಮಾಡುವ ಪರಿಸ್ಥಿತಿ ಬಂದಿದೆ.ಕಿರಂಗೂರು, ಕೂಡಲಕುಪ್ಪೆ ಗೇಟ್, ದರಸಗುಪ್ಪೆ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಇತರೆಡೆ ಬೀದರ್ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ- 19 ಸಂಪೂರ್ಣ ಹಾಳಾಗಿದೆ. ಹೆಜ್ಜೆ ಹೆಜ್ಜೆಗೂ ಗುಂಡಿಗಳು ನಿರ್ಮಾಣವಾಗಿವೆ. ಮೂಲೆ ಮಂಟಪ ಹಾಗೂ ದರಸಗುಪ್ಪೆ ಸಮೀಪದ, ಸಿಡಿಎಸ್ ನಾಲೆ ಬಳಿ ಇಡೀ ರಸ್ತೆ ಅಧ್ವಾನಗೊಂಡಿದೆ. ರಸ್ತೆ ಉಬ್ಬು ಹಾಕಿರುವ ಸ್ಥಳದಲ್ಲಿ ಗುಂಡಿಗಳು ಕಣ್ಣಿಗೆ ರಾಚುತ್ತವೆ. ಬೈಕ್ ಸವಾರರಿಂದ ಹಿಡಿದು ಬಸ್‌ಗಳ ತನಕ ವಾಹನಗಳ ಸುಗಮ ಸಂಚಾರಕ್ಕೆ ಈ ರಸ್ತೆ ಅಡ್ಡಿಯಾಗಿ ಪರಿಣಮಿಸಿದೆ. ಒಂದು ಕಿ.ಮೀ. ದೂರ ಸಾಗಲೂ ವಾಹನ ಚಾಲಕರು ತಿಣುಕಾಡುತ್ತಿದ್ದಾರೆ. ಮೇಲಿಂದ ಮೇಲೆ ಬ್ರೇಕ್ ಹಾಕುವುದು, ಹಿಂದಿನ ವಾಹನ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆಯುವುದು ಇಲ್ಲಿ ಸಾಮಾನ್ಯ ಸಂಗತಿಯಾಗಿದೆ.ರಸ್ತೆ ಹದಗೆಟ್ಟಿರುವುದರಿಂದ ಅಪಘಾತಗಳ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಒಂದು ವರ್ಷದ ಈಚೆಗೆ ದರಸಗುಪ್ಪೆ ಬಳಿ ಮೂವರು ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಕಬ್ಬು ತುಂಬಿದ ಲಾರಿ, ಎತ್ತಿನ ಗಾಡಿಗಳು ಹೆಚ್ಚು ಸಂಚರಿಸುತ್ತಿದ್ದು, ರೈತರಿಗೂ ಈ ರಸ್ತೆ ಸಮಸ್ಯೆ ತಂದೊಡ್ಡುತ್ತಿದೆ.‘ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಹದಗೆಟ್ಟಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ರಸ್ತೆ ದುರಸ್ತಿಗೆ ಪ್ಯಾಕೇಜ್ ಟೆಂಡರ್ ಕರೆಯಲಾಗಿದೆ. 0-28 ಕಿ.ಮೀ ವರೆಗೆ ದುರಸ್ತಿ ಮಾಡುವಂತೆ ಮುಖ್ಯ ಎಂಜಿನಿಯರ್ ಸೂಚನೆ ನೀಡಿದ್ದಾರೆ. ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ಪಾಂಡವಪುರ ಉಪ ವಿಭಾಗ ಸೆಕ್ಷನ್ ಆಫೀಸರ್ ಸದಾಶಿವ ಚಟ್ನಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಅಧಿಕಾರಿಗಳು ಹೀಗೆ ಸಬೂಬು ಹೇಳುತ್ತಲೇ ಇದ್ದು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ ಬಗ್ಗೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ನಿತ್ಯ ಸಹಸ್ರಾರು ವಾಹನಗಳು ಸಂಚರಿಸುವ ಇಂತಹ ರಸ್ತೆ ರಿಪೇರಿಗೆ ಮಂತ್ರಿ, ಶಾಸಕರು ಆಸಕ್ತಿ ವಹಿಸಬೇಕು. ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ದರಸಗುಪ್ಪೆ ಧನಂಜಯ, ಎಂ.ಗೋಪಾಲ್, ಮಂಜುನಾಥ್ ಇತರರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.