ಬುಧವಾರ, ಜನವರಿ 29, 2020
24 °C
ಸಚಿವ ಎಂ.ಬಿ.ಪಾಟೀಲ್‌ ನೇರ ಆರೋಪ

ಹಫ್ತಾ ವಸೂಲಿಗೆ ನಿಂತ ಅಬಕಾರಿ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಫ್ತಾ ವಸೂಲಿಗೆ ನಿಂತ ಅಬಕಾರಿ ಅಧಿಕಾರಿಗಳು

ವಿಜಾಪುರ: ‘ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾ­ರಿ­ಗಳು ಹಫ್ತಾ ವಸೂಲಿ ಮಾಡುತ್ತಾರೆ. ಮದ್ಯ ಮಾರಾಟಗಾರರ ಸಂಘದವರು ಅಧಿಕೃತವಾಗಿಯೇ ಹಣ ಸಂಗ್ರಹಿಸಿ ಕೊಡುತ್ತಾರೆ. ಅದು ಅಧಿಕಾರಿಗಳ ನಡುವೆ ಹಂಚಿಕೆಯಾಗುತ್ತದೆ’. ಇದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ನೇರ ಆರೋಪ.ಶನಿವಾರ ಇಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಬಕಾರಿ ಇಲಾಖೆಯ ಕಾರ್ಯವೈಖರಿ ಕುರಿತು ವ್ಯಾಪಕ ಚರ್ಚೆಯಾಯಿತು. ‘ಅಕ್ರಮ ಸಾರಾಯಿ ಮತ್ತು ಗ್ರಾಮೀಣ ಪ್ರದೇಶ­ದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾ­ಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆಯಲ್ಲ’ ಎಂಬ ಸಚಿವರ ಪ್ರಶ್ನೆಗೆ, ‘ಹಾಗೇ­ನಿಲ್ಲ. ಎಲ್ಲವನ್ನೂ ನಿಯಂತ್ರಿಸಿ­ದ್ದೇವೆ’ ಎಂದು  ಅಧಿಕಾರಿ ಮಾಹಿತಿ ನೀಡಿದರು.‘ನನ್ನ ಸ್ವಗ್ರಾಮ ಸಾರವಾಡ ಸೇರಿದಂತೆ ಎಲ್ಲ ಹಳ್ಳಿಗಳಲ್ಲೂ ರಾಜಾರೋಷವಾಗಿ ಅನಧಿಕೃತ­ವಾಗಿ ಮದ್ಯ ಮಾರಾಟ ನಡೆ­ದಿದೆ’ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ ಆರೋಪಿಸಿದರು. ಅಬಕಾರಿ ಉಪ ಆಯುಕ್ತರು ಸಭೆಗೆ ಬಂದಿರಲಿಲ್ಲ. ಸಭೆಗೆ ಬಂದಿದ್ದ ಬೇರೊಬ್ಬ ಅಧಿಕಾರಿ ಮಾಹಿತಿ ನೀಡುತ್ತಿದ್ದರು. ‘ಶುಕ್ರವಾರ ಅಬಕಾರಿ ಉಪ ಆಯುಕ್ತರು ನಗರದಲ್ಲಿ ಇದ್ದರು. ಸಭೆಯ ಕುರಿತು ಮುಂಚಿತವಾಗಿಯೇ ಅಧಿಕೃತ ಮಾಹಿತಿ ನೀಡಿದ್ದರೂ ಸಭೆಗೆ ಏಕೆ ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ರಿತ್ವಿಕ್‌ ರಂಜನ್‌ ಪಾಂಡೆ ತರಾಟೆಗೆ ತೆಗೆದುಕೊಂಡರು.‘ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಬಹಳಷ್ಟು ಅವ್ಯ­ವಹಾರ ನಡೆಯುತ್ತಿದೆ. ಎಲ್ಲ ಮಾಹಿತಿಯೂ ನನ್ನ ಬಳಿ ಇದ್ದು, ಜವಾಬ್ದಾರಿ ಸ್ಥಾನದಲ್ಲಿರುವ ನಾನು ಅದನ್ನು ಇಲ್ಲಿ ಪ್ರಸ್ತಾಪಿಸಲು ಬಯಸುವುದಿಲ್ಲ. ಸಭೆಗೆ ಬಂದಿಲ್ಲದ ಅಧಿಕಾರಿಗೆ ನೋಟೀಸ್‌ ಜಾರಿ ಮಾಡಿ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ಇದಕ್ಕೆ ದನಿಗೂಡಿಸಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ‘ಇದೇ 10ರಂದು ಮುಖ್ಯಮಂತ್ರಿಗಳು ನಗರಕ್ಕೆ ಬರುತ್ತಾರೆ. ಅವರ ಸಮ್ಮುಖದಲ್ಲಿಯೇ ಆ ಅಧಿಕಾರಿಯನ್ನು ಪ್ರಶ್ನಿಸೋಣ’ ಎಂದರು.

ಪ್ರತಿಕ್ರಿಯಿಸಿ (+)