ಶನಿವಾರ, ಮೇ 21, 2022
20 °C

ಹರಳಯ್ಯ-ಮಧುವಯ್ಯ ಸ್ಮರಣೋತ್ಸವಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: “ಜಾತಿ ರಹಿತ, ಅಂತಸ್ತುರಹಿತ ಹಾಗೂ ಅಂತರರಹಿತ ಸಮಾಜ ನಿರ್ಮಾಣಕ್ಕೆ 12ನೇ ಶತಮಾನದಲ್ಲಿ ಶ್ರಮಿಸಿದ ಶರಣರನ್ನು ಸ್ಮರಿಸಲು ಮಾರ್ಚ್ 5-6ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ‘ಹರಳಯ್ಯ, ಮಧುವಯ್ಯರ ಸ್ಮರಣೋತ್ಸವ ಹಾಗೂ ಶರಣರ ಸಂಸ್ಮರಣೋತ್ಸವ’ವನ್ನು ಆಯೋಜಿಸಲಾಗಿದೆ” ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಎನ್.ತಿಪ್ಪಣ್ಣ ತಿಳಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ‘ಮಹಾಮಹಿಮ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿವಿಧ ಮಠಗಳ ಮಠಾಧೀಶರು ಹಾಗೂ ರಾಜಕೀಯ ಧುರೀಣರು ಭಾಗವಹಿಸುವರು’ ಎಂದು ನುಡಿದರು.‘ಮೊದಲ ದಿನ ಹರಳಯ್ಯ-ಮಧುವಯ್ಯರ ಸ್ಮರಣಾರ್ಥ ಎಳೆಹೂಟೆ (ಇವರಿಬ್ಬರನ್ನೂ ಆನೆಯ ಕಾಲಿಗೆ ಕಟ್ಟಿ ಎಳೆದ)ಯ ಸ್ತಬ್ದಚಿತ್ರದ ರಥವನ್ನು ಪಟ್ಟಣದ ಕಿಲ್ಲೆಯಿಂದ ಮೈದಾನದ ಮಹಾಮಂಟಪದವರೆಗೆ ಎಳೆಯಲಾಗುವುದು. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಭಕ್ತರು ಭಾಗವಹಿಸಲಿದ್ದಾರೆ. ಎರಡನೇ ದಿನದ ಸ್ಮರಣೋತ್ಸವದಲ್ಲಿ ಸಮರ್ಪಣ ಎಂಬ ಸ್ಮರಣ ಸಂಪುಟವನ್ನು ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.ಮಹಾಸಭಾ ಕಾರ್ಯದರ್ಶಿ ಚಿದಾನಂದ ಎಸ್.ಮಠದ ಮತ್ತು ಪ್ರಧಾನ ಕಾರ್ಯದರ್ಶಿ ಮಧುರಾ ಅಶೋಕಕುಮಾರ್ ಅವರು ಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.