ಶನಿವಾರ, ಮೇ 15, 2021
23 °C

ಹಲ್ಲೆ: ಶಿಕ್ಷಕರ ಅಮಾನತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲ್ಲೆ: ಶಿಕ್ಷಕರ ಅಮಾನತಿಗೆ ಒತ್ತಾಯ

ರಾಮನಗರ: ಮುಖ್ಯ ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವ ಸಹ ಶಿಕ್ಷಕಿ ಮತ್ತು ಅವರ ಪತಿಯ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಮಾದೇಗೌಡ ಅವರನ್ನು ಒಂದೂವರೆ ಗಂಟೆ ಕೊಠಡಿಯಲ್ಲಿ ದಿಗ್ಬಂಧನ ಮಾಡಿದ್ದ ಘಟನೆ ಬುಧವಾರ ತಾಲ್ಲೂಕಿನ ಪೇಟೆ ಕುರುಬರಹಳ್ಳಿಯಲ್ಲಿ ನಡೆಯಿತು.`ಸಹ ಶಿಕ್ಷಕಿ ಲಕ್ಷ್ಮೀದೇವಮ್ಮ ಹಾಗೂ ಅವರ ಪತಿ ಸಿಆರ್‌ಪಿ ಕೃಷ್ಣಪ್ಪ ಅವರು ಮಂಗಳವಾರ ಮಧ್ಯಾಹ್ನ ಶಾಲೆಯಲ್ಲಿಯೇ ಮುಖ್ಯ ಶಿಕ್ಷಕ ರಂಗಸ್ವಾಮಯ್ಯ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಮುಖ್ಯ ಶಿಕ್ಷಕರು ರಾಮನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿದೆ.ಶಾಲಾ ಆವರಣದಲ್ಲಿ ಮುಖ್ಯ ಶಿಕ್ಷಕರನ್ನು ಶಾಲೆಯ ಶಿಕ್ಷಕರೇ ಹಲ್ಲೇ ನಡೆಸಿರುವುದು ಖಂಡನೀಯ. ಆದ್ದರಿಂದ ಕೂಡಲೇ ಹಲ್ಲೆ ನಡೆಸಿದ ಶಿಕ್ಷಕಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ~ ಗ್ರಾಮದ ಜನತೆ ಶಾಲೆಗೆ ಬೀಗ ಹಾಕಿ ಬುಧವಾರ ಪ್ರತಿಭಟನೆ ನಡೆಸುತ್ತಿದ್ದರು.ಈ ಸಂದರ್ಭದಲ್ಲಿ ಗ್ರಾಮದ ಜನತೆಯನ್ನು ಸಮಾಧಾನ ಪಡಿಸಿ, ಶಾಲೆ ನಡೆಸಲು ಅನುವು ಮಾಡಿಕೊಡುವಂತೆ ಮನವಿ ಮಾಡಲು ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಗ್ರಾಮದ ಜನತೆ ಕೊಠಡಿಯಲ್ಲಿ ಕೂಡಿ ಹಾಕಿದರು. ಮಕ್ಕಳ ಎದುರು, ಶಾಲಾ ಅವಧಿಯಲ್ಲಿ, ಶಾಲಾ ಆವರಣದಲ್ಲಿಯೇ ಮುಖ್ಯ ಶಿಕ್ಷಕರ ಮೇಲೆ ಹಲ್ಲೆ ಮಾಡಿದವರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಗ್ರಾಮದ ಜನತೆ ಪಟ್ಟು ಹಿಡಿದರು.ರಜಾ ಕೊಡಲು ನಿರಾಕರಿಸಿದ ಕಾರಣಕ್ಕೆ ಕೋಪಗೊಂಡ ಶಿಕ್ಷಕಿ ತನ್ನ ಪತಿಯನ್ನು ಕರಿಸಿ ಮುಖ್ಯ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಮುಖ್ಯ ಶಿಕ್ಷಕರ ಜೀವಕ್ಕೆ ಸಂಚಕಾರ ಬಂದಿದೆ ಎಂದು ಗ್ರಾಮದ ಜನತೆ ದೂರಿದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬಿಇಒ ಭರವಸೆ ನೀಡಿದ ನಂತರ ಅವರನ್ನು ದಿಗ್ಬಂಧನದಿಂದ ಮುಕ್ತಿಗೊಳಿಸಲಾಯಿತು.ಘಟನೆ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಮಾದೇಗೌಡ ಅವರು, `ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕರು ಮತ್ತು ಗ್ರಾಮದ ಜನತೆಯಿಂದ ಒಟ್ಟು ಎರಡು ದೂರುಗಳು ಬಂದಿವೆ. ಮುಖ್ಯ ಶಿಕ್ಷಕರು ತಮ್ಮ ದೂರಿನಲ್ಲಿ ಹಲ್ಲೆ ಆಗಿರುವ ಕುರಿತು ಪ್ರಸ್ತಾಪಿಸಿಲ್ಲ. ಬದಲಿಗೆ ಅವಾಚ್ಯ ಪದಗಳನ್ನು ಬಳಸಿ ನಿಂಧಿಸಿದ್ದಾರೆ ಎಂದು ದೂರು ನೀಡಿದ್ದಾರೆ.

 

ಆದರೆ ಗ್ರಾಮದ ಜನತೆ ನೀಡಿರುವ ದೂರಿನಲ್ಲಿ ಶಿಕ್ಷಕಿ ಮತ್ತು ಅವರ ಪತಿ ಇಬ್ಬರೂ ಸೇರಿ ಮುಖ್ಯ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಎರಡೂ ದೂರುಗಳನ್ನು ಪರಿಶೀಲಿಸಿ, ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.