ಬುಧವಾರ, ಏಪ್ರಿಲ್ 14, 2021
25 °C

ಹಳೆ ಕುಮ್ಮೂರಿನಲ್ಲಿ ಅಪರೂಪದ ಶಿಲಾಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳೆ ಕುಮ್ಮೂರಿನಲ್ಲಿ ಅಪರೂಪದ ಶಿಲಾಶಾಸನ ಪತ್ತೆ

ಬ್ಯಾಡಗಿ: ತಾಲ್ಲೂಕಿನ ಹಳೆ ಕುಮ್ಮೂರು ಗ್ರಾಮದಲ್ಲಿ ಕರೆಯ ತೂಬಿನಲ್ಲಿ ರಾಷ್ಟ್ರಕೂಟರ ಕಾಲದ ಅಪರೂಪದ ಹೊಸ ಶಿಲಾಶಾಸನ ಪತ್ತೆಯಾಗಿದೆ ಎಂದು ಶಾಸನದ ಅಧ್ಯಯನ ನಡೆಸಿರುವ ಸಂಶೋಧಕ ಹಾಗೂ ರಟ್ಟಿಹಳ್ಳಿ ಪ್ರಿಯ ದರ್ಶಿನಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚಾಮರಾಜ ಕಮ್ಮಾರ ತಿಳಿಸಿದ್ದಾರೆ.ಕ್ಷೇತ್ರ ಕಾರ್ಯಕ್ಕೆಂದು ತೆರಳಿದ ಸಂದರ್ಭದಲ್ಲಿ ಶಿಲಾಶಾಸನ ದೊರೆತಿದ್ದು, 6 ಅಡಿ ಎತ್ತರ ಹಾಗೂ 13 ಅಡಿ ಅಗಲವಿದೆ. ಈ ಶಾಸನದ ಮೇಲ್ಬಾಗದಲ್ಲಿ 17 ಸಾಲುಗಳು, ಕೆಳಭಾಗದಲ್ಲಿ 10 ಸಾಲುಗಳಿದ್ದು, ಸುಮಾರು ಹತ್ತನೇ ಶತಮಾನದ ಲಿಪಿಯಾಗಿದೆ.ರಾಷ್ಟ್ರಕೂಟರ ಕಾಲದ ದೊರೆ ಬದ್ದೆಗ ದೇವ ರಾಜ್ಯವನ್ನು ಆಳುತ್ತಿದ್ದಾಗ, ಬನವಾಸಿ ಪನ್ನಿರ್ಛ್ಛಾಸಿರವನ್ನು ಪಿಟ್ಟಮನು ಆಳುತ್ತಿದ್ದನು. ಚಿಲ್ಲಚಯನ 12 ಕುಪ್ಪೆಯರ ಮಾರಸಿಂಗನು ಗಾವುಂಡನಾಗಿದ್ದನು. (ಕ್ರಿ.ಶ. 937 ಎ.30ರ ಆದಿತ್ಯವಾರ) ಅಕ್ಕಬ್ಬೆ ಎಂಬವಳು ತೂಬಿನ ಕೆರೆಗೆ (ತುಂಬಿಗೆರೆಗೆ)  ಶಿದ್ದದೇವರ ಸಿಂಗನಿಗೆ ಒಂದು ಮತ್ತರು ಕೆರೆಯನ್ನು ನಿರ್ಮಾಣ ಮಾಡಿ ಎರೆಗ ಎನ್ನುವವನಿಗೆ ನೀಡಿದ್ದನು ಎನ್ನಲಾಗಿದೆ.ಕೆರೆ ನಿರ್ಮಿಸಿದ ಕೆಲಸಗಾರರಿಗೆ ದಾನ ಕೊಟ್ಟಿರುವುದನ್ನು ಈ ಶಾಸನ ತಿಳಿಸುತ್ತದೆ. ಐತಿಹಾಸಿಕ ಕೇಂದ್ರವಾದ ಹಳೆ ಕುಮ್ಮೂರು ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಪಕ್ಕದ  ದೊಡ್ಡಕೆರೆಯಲ್ಲಿ 6 ಮಹಾಸತಿ ಕಲ್ಲುಗಳು, 7 ವೀರಗಲ್ಲುಗಳು, ಮಹಾಸತಿ, ನಟವರ ಶಿಲ್ಪಗಳು, ಶಿಲಾ ಶಾಸನಗಳು, ನಾಗಶಿಲ್ಪಗಳು ಮತ್ತು ರಾಮೇಶ್ವರ ದೇವಸ್ಥಾನದ ಎದುರು ಸೂರ್ಯಕಿರಣದ ಕಲ್ಲುಗಳಿವೆ. ಎರಡು ಕಂಬಗಳ ಮೇಲ್ಭಾಗದಲ್ಲಿ ಹಾಕಿದ ಕಲ್ಲಿನಲ್ಲಿ ಸುಂದರವಾದ ಗಜಲಕ್ಷ್ಮೀ ಶಿಲ್ಪ ಎರಡೂ ಬದಿಯಲ್ಲಿವೆ. ಇದು ನಮ್ಮ ನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲಲಿದೆ ಎಂದು ಹೇಳಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಡಾ.ಕಲವೀರ ಮನ್ವಾಚಾರ್ಯರು ಅತ್ಯಂತ ಸುಂದರ ಲಿಪಿಯನ್ನು ಒಳಗೊಂಡಿರುವ 10ನೇ ಶತಮಾನದ ರಾಷ್ಟ್ರಕೂಟರ ಅಪರೂಪದ ಶಾಸನವೆಂದು ಹೇಳುತ್ತಾರೆ.ಇತಿಹಾಸ ಪ್ರಾಧ್ಯಾಪಕ ಎಚ್.ಬಿ.ಕೆಂಚಳ್ಳಿ, ಗ್ರಾಮದ ಮುಖಂಡರಾದ ಶಿವರುದ್ರಪ್ಪ ಮಟ್ಟಿಮನಿ, ಶಂಭು ಬಣಕಾರ, ಮಾಲಿಂಗಪ್ಪ ಮುಡಬಾಗಿಲು, ಮಹೇಶ ಅಂಗಡಿ, ಮಲ್ಲೇಶ ಹಡಪದ, ಮಲ್ಲಿಕಾರ್ಜುನ ಅಂಗಡಿ, ಶ್ರೀನಿವಾಸ ಬಡಿಗೇರ, ತಿರಕಪ್ಪ ಬಾಸೂರ, ವೀರಬಸಪ್ಪ ಬಾಸೂರ, ಸಂತೋಷ ಮುಡಬಾಗಿಲು ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.