ಹಳೇಬೀಡು: ಇಳೆಗೆ ತಂಪೆರೆದ ಮಳೆ

7

ಹಳೇಬೀಡು: ಇಳೆಗೆ ತಂಪೆರೆದ ಮಳೆ

Published:
Updated:

ಹಳೇಬೀಡು: ಪಟ್ಟಣದಲ್ಲಿ ಸೋಮವಾರ ಮಳೆ ಸುರಿದಾಗ ಬಿಸಿಲಿನ ತಾಪಕ್ಕೆ ಕಾದು ನಿಂತಿದ್ದ ಇಳೆ ತಂಪಾಗಿದೆ. ವರ್ಷವಿಡಿ ಬಾರದ ಮಳೆ ಬಂದಾಗ ಉಷ್ಣಾಂಶದಿಂದ ನಲುಗಿದ್ದ ಜನತೆಗೆ ಸಂತಸವಾದರೂ, ಕೊಚ್ಚೆ ನೀರು ಹೊಯ್ಸಳ ದೇವಾಲಯ ರಸ್ತೆಯಲ್ಲಿ ಹರಿದು ಅವಾಂತರ ಸೃಷ್ಟಿಸಿತು.ರಸ್ತೆ ಉದ್ದಕ್ಕೂ ಸೃಷ್ಟಿಯಾದ ಗುಂಡಿಗಳು ಕೊಚ್ಚೆ ನೀರಿನಿಂದ ತುಂಬಿಕೊಂಡಿದ್ದವು. ವಾಹನಗಳು ಸಂಚರಿಸಿದಾಗ ಗಲೀಜು ನೀರು ರಸ್ತೆ ಬದಿಯಲ್ಲಿ ಓಡಾಡುವ ಜನರಿಗೆ ಚಿಮ್ಮಿತು. ರಸ್ತೆಯ ತುಂಬ ಗಲೀಜು ತುಂಬಿದ್ದರಿಂದ ದಾರಿಯಲ್ಲಿ ತಿರುಗಾಡುವ ಜನ ಅಸಹ್ಯಪಟ್ಟರು. ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯುವ ವ್ಯವಸ್ಥೆ ಇಲ್ಲದೆ ಜನತಾ ಕಾಲೊನಿ, ಅಂಬೆಡ್ಕರ್ ಕಾಲೋನಿ ಹಾಗೂ ತರಗಿನ ಪೇಟೆ ಬಡಾವಣೆಗಳಲ್ಲಿ ತುಂಬಿದ್ದ ಚರಂಡಿಯ ಕೊಚ್ಚೆ ನೀರು ಮಳೆ ನೀರಿನೊಂದಿಗೆ ಮಿಶ್ರಣವಾಗಿ ಹೊಯ್ಸಳ ದೇವಾಲಯ ರಸ್ತೆಯಲ್ಲಿ ಹರಿಯಿತು.ಈ ರಸ್ತೆಯಲ್ಲಿ ಫುಟ್‌ಪಾತ್ ಅವ್ಯವಸ್ಥೆಯಿಂದ ಕೂಡಿದ್ದು, ಎರಡೂ ಬದಿಯ ಚರಂಡಿಯ ರಸ್ತೆ ಪಕ್ಕದ ಕಟ್ಟಡ ಎತ್ತರವಾಗಿದೆ. ಹೀಗಾಗಿ ಮಳೆ ಬಂದಾಗ ರಸ್ತೆಯಲ್ಲಿ ಹರಿಯುವ ನೀರು ಚರಂಡಿಗೆ ಹೋಗಲು ಅವಕಾಶ ಇಲ್ಲದಂತಾಗಿದೆ. ಜೋರು ಮಳೆ ಬಂದರೆ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತ್ತದೆ.ಲೋಕೋಪಯೋಗಿ ಇಲಾಖೆ ವ್ಯವಸ್ಥಿತ ಚರಂಡಿ ನಿರ್ಮಿಸಿ, ರಸ್ತೆ ನೀರು ಚರಂಡಿಗೆ ಹರಿಯುವ ಕಾಮಗಾರಿ ನಿರ್ವಹಿಸದೆ ಕಣ್ಮುಚ್ಚಿ ಕುಳಿತಿರುವುದರಿಂದ ಹೊಯ್ಸಳ ದೇವಾಲಯದ ರಸ್ತೆ ಹತ್ತಾರು ಸಮಸ್ಯೆಗಳಿಂದ ಸೊರಗಿದೆ ಎನ್ನುತ್ತಾರೆ ಸ್ಥಳೀಯರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry