ಭಾನುವಾರ, ಮೇ 9, 2021
18 °C

ಹಸಿರ ಮನೆಗೆ ಮಳೆನೀರಿನ ಆಸರೆ

ನಟರಾಜ್ ನಾಗಸಂದ್ರ Updated:

ಅಕ್ಷರ ಗಾತ್ರ : | |

ಹಸಿರ ಮನೆಗೆ ಮಳೆನೀರಿನ ಆಸರೆ

ನೀರಿನಲ್ಲಿ ಲವಣಾಂಶದ ಪ್ರಮಾಣ ಹೆಚ್ಚಿದರೆ ಹೂವಿನ ಸಸಿ, ಅದರ ಎಲೆಗಳು ಸೊರಗುತ್ತವೆ. ಸಸಿಯ ಬೆಳವಣಿಗೆ ಪ್ರಮಾಣ ಕುಂಠಿತವಾಗುತ್ತದೆ. ಇದರಿಂದ ಹೂವಿನ ಇಳುವರಿ ಕಡಿಮೆಯಾಗುತ್ತದೆ. ಗುಣಮಟ್ಟವೂ ಕುಸಿಯುತ್ತದೆ.ನೀರನ್ನು ಶುದ್ಧೀಕರಿಸಿ ಲವಣಾಂಶದ ಪ್ರಮಾಣವನ್ನು 0.5ಕ್ಕಿಂತಲು ಕಡಿಮೆ ಮಾಡುವ ಸಂಬಂಧ ಈಗ ಬಳಕೆಯಲ್ಲಿರುವ ಇಸ್ರೇಲ್ ತಂತ್ರಜ್ಞಾನ ಬಲು ದುಬಾರಿ. ಇದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲ್ಲೂಕಿನ ಬೈರಾಪುರ ತಾಂಡ ಗ್ರಾಮದ ಸಮೀಪದ ಕೃಷ್ಣಾರೆಡ್ಡಿ.10 ಲಕ್ಷ ರೂಪಾಯಿ ಖರ್ಚು ಮಾಡಿ 35 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಛಾವಣಿ ಮಳೆ ನೀರು ಸಂಗ್ರಹಣೆ ವ್ಯವಸ್ಥೆ ಮಾಡಿಕೊಂಡಿದ್ದಾರೆ ಇವರು. ಇದರಿಂದ ಆರು ಎಕರೆ ಪ್ರದೇಶದ ಹಸಿರು ಮನೆ ಹೂವಿನ ತೋಟಕ್ಕೆ ನೀರು ಪೂರೈಸುತ್ತಿದ್ದಾರೆ.`ಮಳೆ ನೀರಿನಲ್ಲಿ ಲವಣಾಂಶದ ಪ್ರಮಾಣ ಶೂನ್ಯ ಪ್ರಮಾಣದಲ್ಲಿರುತ್ತವೆ. ಮಳೆ ನೀರನ್ನು ಹೂವಿನ ಸಸಿಗಳಿಗೆ ನೀಡುವುದರಿಂದ ಸಸಿಗಳ ಬೆಳವಣಿಗೆ, ಹೂವಿನ ಗುಣಮಟ್ಟ ಉತ್ತಮವಾಗುತ್ತದೆ. ಮಳೆ ನೀರನ್ನು ಶುದ್ಧೀಕರಣ ಮಾಡದೆ ನೇರವಾಗಿ ಸಸಿಗಳಿಗೆ ಹಾಯಿಸುವುದರಿಂದ ಶುದ್ಧೀಕರಣದ ವಿದ್ಯುತ್ ಹಾಗೂ ಹಣ ಉಳಿತಾಯವಾಗಲಿದೆ' ಎನ್ನುತ್ತಾರೆ ಕೃಷ್ಣಾರೆಡ್ಡಿ. ಹೀಗಿದೆ ವಿಧಾನ

350/50 ಅಡಿ ಉದ್ದ, 20 ಅಡಿ ಆಳದ ತೊಟ್ಟಿಯಲ್ಲಿ 35 ಲಕ್ಷ ಲೀಟರ್ ಮಳೆ ನೀರು ಸಂಗ್ರಹಣೆ ಮಾಡಲಾಗಿದೆ. ತೊಟ್ಟಿಯ ತಳ ಭಾಗ ಸೇರಿದಂತೆ ಇಡೀ ತೊಟ್ಟಿಗೆ ದಪ್ಪದ ಪ್ಲಾಸ್ಟಿಕ್ ಪೇಪರ್‌ನಿಂದ ಹೊದಿಕೆ ಮಾಡಲಾಗಿದೆ. ಇದರಿಂದ ಬಿಸಿಲಿಗೆ ನೀರು ಆವಿಯಾಗುವುದು, ಸಂಗ್ರಹಣೆ ಮಾಡಿದ ನೀರು ಭೂಮಿಗೆ ಇಂಗುವುದು ಹಾಗೂ ಬಿಸಿಲಿನಿಂದ ತೊಟ್ಟಿಯಲ್ಲಿ ಪಾಚಿ ಬೆಳೆಯುವುದು ತಪ್ಪುತ್ತದೆ.ಪ್ರತಿ ದಿನ ಕೊಳವೆ ಬಾವಿಯಿಂದ ನೀರು ಮೇಲೆತ್ತಿ ಶುದ್ಧೀಕರಣ ಮಾಡಿ (ಲವಣಾಂಶ 0.5 ಕ್ಕೆತರಲು) ಆರು ಎಕರೆ ಪ್ರದೇಶದ ಹಸಿರು ಮನೆಯಲ್ಲಿನ ಹೂ ಸಸಿಗಳಿಗೆ ಹನಿ ನೀರಾವರಿ ಮೂಲಕ ನೀರು ಹಾಯಿಸಲು ಎಂಟು ಸಾವಿರ ರೂಪಾಯಿಗಳ ವಿದ್ಯುತ್ ಶುಲ್ಕವಾಗಲಿದೆ. ಆದರೆ ಮಳೆ ನೀರಿನಲ್ಲಿ ಲವಣಾಂಶ ಇಲ್ಲದೆ ಇರುವುದರಿಂದ ಶುದ್ಧೀಕರಿಸದೆ ಸಸಿಗಳಿಗೆ ನೇರವಾಗಿ ನೀರು ಹಾಯಿಸಲು ಕೇವಲ 3,500 ರೂಪಾಯಿ ವೆಚ್ಚವಾಗಲಿದೆ.ತೊಟ್ಟಿ ನಿರ್ಮಾಣ ಹಾಗೂ ಆರು ಎಕರೆ ಪ್ರದೇಶದಲ್ಲಿನ ಹಸಿರು ಮನೆಯ ಮೇಲ್ಛಾವಣಿಯಿಂದ ಮಳೆ ನೀರು ಹರಿದು ಬರಲು ಅಳವಡಿಸಿರುವ ಪೈಪ್ ಲೈನ್‌ಗಳಿಗೆ ಮಾಡಿರುವ ಖರ್ಚು 10 ಲಕ್ಷ ರೂಪಾಯಿಗಳ ವೆಚ್ಚ ದುಬಾರಿ ಅನ್ನಿಸುವುದಿಲ್ಲ.ಇದೆಲ್ಲಕ್ಕೂ ಮುಖ್ಯವಾಗಿ ಮಳೆಗಾಲದಲ್ಲಿ ವ್ಯರ್ಥವಾಗಿ ಹೋಗುವ ಮಳೆ ನೀರು ಬಳಕೆ ಮಾಡಿಕೊಳ್ಳುವುದರಿಂದ ಅಪಾರ ಪ್ರಮಾಣದ ಅಂತರ್ಜಲ ಉಳಿತಾಯವಾಗಲಿದೆ. ಇದಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹೆಚ್ಚಿನ ಮಾಹಿತಿಗೆ 9448680746

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.