ಸೋಮವಾರ, ಮಾರ್ಚ್ 8, 2021
30 °C

ಹಾಕಿ ಉತ್ಸವಕ್ಕೆ ನಗರ ಸಜ್ಜು

ಪ್ರಜಾವಾಣಿ ವಾರ್ತೆ ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

ಹಾಕಿ ಉತ್ಸವಕ್ಕೆ ನಗರ ಸಜ್ಜು

ಗದಗ: ಗದಗ-ಬೆಟಗೇರಿ ಅವಳಿ ನಗರದ ಕ್ರೀಡಾಭಿಮಾನಿಗಳಿಗೊಂದು ಸಂತಸ ಸುದ್ದಿ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಟಿ.ವಿ.ಯಲ್ಲಿ ವೀಕ್ಷಿಸುತ್ತಿದ್ದ ಜನತೆಗೆ ಗದುಗಿನ ಗಾಂಧಿ ನಗರದ ಹಾಕಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಾಕಿ ಟೂರ್ನಿ  ನೋಡುವ ಅವಕಾಶ ದೊರೆತಿದೆ.ಹದಿಮೂರು ವರ್ಷಗಳ ಬಳಿಕ ಅವಳಿ ನಗರದಲ್ಲಿ ರಾಷ್ಟ್ರೀಯ ಹಾಕಿ ಪಂದ್ಯಾವಳಿ `ಶಿವಕುಮಾರ ಉದಾಸಿ ಟ್ರೋಫಿ~  ಮೇ 3ರಿಂದ ಆರಂಭ ಗೊಳ್ಳಲಿದೆ. 1985 ಮತ್ತು 98ರಲ್ಲಿ ರಾಷ್ಟ್ರೀಯ ಹಾಕಿ ಟೂರ್ನಿ ನಡೆದಿದ್ದವು.ಹನ್ನೊಂದು ದಿನಗಳ ಕಾಲ ಹಾಕಿ ಪಂದ್ಯಾವಳಿಗಳ ರಸದೌತಣ ಸವಿಯ ಬಹುದು. ಪುರುಷ ಮತ್ತು ಮಹಿಳಾ ತಂಡಗಳು ಸೇರಿದಂತೆ ಒಟ್ಟು 20 ತಂಡಗಳು ಭಾಗವಹಿಸುತ್ತಿದ್ದು, ಟೂರ್ನಿ ನಾಲ್ಕು ದಿನಗಳು ಬಾಕಿ ಇರುವುದರಿಂದ ಸಿದ್ಧತಾ ಕಾರ್ಯ ಭರದದಿಂದ ಸಾಗುತ್ತಿದೆ. ರಾಷ್ಟ್ರೀಯ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಕ್ರೀಡಾಪಟುಗಳಾದ ಬೇನು ಬಾಟ್ ಮತ್ತು ರಾಜು ಬಾಗಡೆ ಅವರು ಗದಗ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ.ಪುರುಷ ತಂಡಗಳ ವಿವರ: ಪಂಜಾಬ್ ಎಲೆಕ್ಟ್ರಿಕಲ್ ಬೋರ್ಡ್, ಮುಂಬೈನ ಆರ್‌ಸಿಎಫ್, ಸೆಂಟ್ರಲ್ ರೈಲ್ವೆ, ವೆಸ್ಟ್ರರ್ನ್ ಸೆಂಟ್ರಲ್ ರೈಲ್ವೆ, ಚಂಡೀಗಢದ  ಸಿಐಎಸ್‌ಎಫ್, ರಾಂಚಿಯ ಮೆಕಾನ್ ಸ್ಪೋರ್ಟ್ಸ್ ಕ್ಲಬ್,  ಸಿಕಂದ್ರಾಬಾದ್‌ನ ಸೌಥ್ ಸೆಂಟ್ರಲ್ ರೈಲ್ವೆ, ಪುಣೆಯ ವಿಕ್ರಮ ಪಿಳ್ಳೆ ಅಕಾಡೆಮಿ, ಬೆಂಗಳೂರಿನ ಎಚ್‌ಎಎಲ್ ತಂಡ,  ಬೆಂಗಳೂರಿನ ಕೆಎಸ್‌ಆರ್‌ಪಿ  ತಂಡ, ಮಹಾರಾಷ್ಟ್ರ ಕ್ರೀಡಾಮಂಡಳಿ, ಮಹಾರಾಷ್ಟ್ರ ಪೊಲೀಸ್ ತಂಡ, ಹುಬ್ಬಳ್ಳಿಯ ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್,  ವಾಸು ಇಲೆವನ್, ಹಾಗೂ ಸ್ಥಳೀಯ ತಂಡಗಳಾದ ವಾಸ ಇಲೆವನ್, ಉದಾದಿ ಇಲೆವನ್ ಮತ್ತು ಹನುಮಾನ ಬ್ಲೆಸ್ಸಿಂಗ್ ಸ್ಪೋರ್ಟ್ಸ್ ಕ್ಲಬ್ ತಂಡಗಳು ಭಾಗವಹಿಸಲಿವೆ. ಅಲ್ಲದೆ ಭೋಪಾಲ, ಬುಂದೇಲಖಂಡ, ಸೆಂಟ್ರಲ್ ರೈಲ್ವೆಸ್, ಮುಂಬೈನ ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ.  ವಿಜೇತ ಪುರುಷ ತಂಡ  1,11,111 ಲಕ್ಷ ರೂಪಾಯಿ ನಗದು ಜತೆಗೆ ಶಿವಕುಮಾರ ಉದಾಸಿ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದೆ. ದ್ವಿತೀಯ ರೂ. 55,555, ತೃತೀಯ ರೂ. 25,000 ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ರೂ. 15,000 ಜತೆಗೆ ಆಕರ್ಷಕ ಟ್ರೋಫಿ  ನೀಡಲಾಗುತ್ತದೆ.

ಪ್ರಥಮ ಸ್ಥಾನ ಪಡೆದ ಮಹಿಳಾ ತಂಡಕ್ಕೆ ರೂ. 31 ಸಾವಿರ, ದ್ವಿತೀಯ ರೂ. 21 ಸಾವಿರ, ತೃತೀಯ ರೂ. 15 ಸಾವಿರ ಹಾಗೂ ಟ್ರೋಫಿ ನೀಡಲಾಗುತ್ತದೆ.ಮೇ 3ರಂದು ಒಲಿಂಪಿಕ್ ಕ್ರೀಡಾ ಜ್ಯೋತಿಯ ಮೆರವಣಿಗೆ ವೀರನಾರಾಯಣ ದೇವಸ್ಥಾನದಿಂದ ಹೊರಟು ಕ್ರೀಡಾಂಗಣ ತಲುಪಲಿದೆ. ಅದೇ ದಿನ ಪ್ರದರ್ಶನ ಪಂದ್ಯವನ್ನು ಸಹ ಏರ್ಪಡಿಸಲಾಗಿದೆ. ಹಾಕಿ ಮೈದಾನದ ಸಮತಟ್ಟು ಕಾರ್ಯ ಹಾಗೂ ಆಸನ ವ್ಯವಸ್ಥೆ ಕಾರ್ಯ ನಡೆಯುತ್ತಿದೆ.`ನಗರದಲ್ಲಿ ರಾಷ್ಟ್ರೀಯ ಹಾಕಿ ಪಂದ್ಯಾವಳಿಗಳು ನಡೆಯುತ್ತಿರುವುದು ಜಿಲ್ಲೆಯ ಜನತೆಗೆ ಸಂತಸವಾಗಿದೆ. ಶಿವಕುಮಾರ ಉದಾಸಿ ಅಭಿಮಾನಿಗಳು ಪಂದ್ಯಾವಳಿಯ ವೆಚ್ಚವನ್ನು ಭರಿಸುತ್ತಿದ್ದಾರೆ.ಕೆಲವರು ಮಣ್ಣು, ಕಲ್ಲು ಹಾಗೂ ಸಂಪರ್ಕ ವೆಚ್ಚವನ್ನು ವಹಿಸಿ ಕೊಂಡಿದ್ದಾರೆ. 12 ಲಕ್ಷ ರೂಪಾಯಿ ವೆಚ್ಚದಲ್ಲಿ ಮೈದಾನದ ಸಮತಟ್ಟು, ಐದು ಸಾವಿರ ಮಂದಿ ಕುಳಿತು ಪಂದ್ಯ ವೀಕ್ಷಿಸಲು ಆಸನ ಹಾಗೂ ಇತರೆ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ~ ಎನ್ನುತ್ತಾರೆ ಟೂರ್ನಿಮೆಂಟ್ ಸಮಿತಿಯ ಸಹ ಕಾರ್ಯದರ್ಶಿ ಪರಶುರಾಮ ಕಟ್ಟಿಮಣಿ ಹಾಗೂ ಹನುಮಾನ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಜಿ.ಟಿ.ಬಾಗಡೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.