ಮಂಗಳವಾರ, ಏಪ್ರಿಲ್ 20, 2021
32 °C

ಹಾಡಹಗಲೇ ಬ್ಯಾಂಕ್ ದರೋಡೆ: ಗುಂಡೇಟಿಗೆ ಒಬ್ಬ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಬ್ಯಾಂಕ್‌ಗೆ ನುಗ್ಗಿದ ದುಷ್ಕರ್ಮಿ, ಗ್ರಾಹಕರೊಬ್ಬರ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿ ಸುಮಾರು 12 ಲಕ್ಷ ರೂಪಾಯಿ ಹಣ ದರೋಡೆ ಮಾಡಿರುವ ಘಟನೆ ನಗರದ ಹೆಸರಘಟ್ಟ ಮುಖ್ಯರಸ್ತೆಯ ಚಿಕ್ಕಬಾಣಾವರ ವೃತ್ತದಲ್ಲಿ ಸೋಮವಾರ ಹಾಡಹಗಲೇ ನಡೆದಿದೆ.ಚಿಕ್ಕಬಾಣಾವರ ನಿವಾಸಿ ಮುರಳೀಧರ್ (43) ಕೊಲೆಯಾದವರು. ಸಿವಿಲ್ ಗುತ್ತಿಗೆದಾರರಾಗಿದ್ದ ಅವರು, ವೆಂಕಟೇಶ್ ಎಂಬ ಸ್ನೇಹಿತನ ಪೆಟ್ರೋಲ್ ಬಂಕ್‌ನಲ್ಲಿ ವ್ಯವಸ್ಥಾಪಕರಾಗಿಯೂ ಕೆಲಸ ಮಾಡುತ್ತಿದ್ದರು.

 

ಮುರಳೀಧರ್, ಪೆಟ್ರೋಲ್ ಬಂಕ್‌ನ ವಹಿವಾಟಿನ ಹಣವನ್ನು ಕಾರ್ಪೋರೇಷನ್ ಬ್ಯಾಂಕ್‌ನ ಚಿಕ್ಕಬಾಣಾವರ ಶಾಖೆಗೆ ಕಟ್ಟಲು ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.ವಿದ್ಯಾರ್ಥಿಯ ಸೋಗಿನಲ್ಲಿ ಬ್ಯಾಗ್ ಹಾಕಿಕೊಂಡು ಮಧ್ಯಾಹ್ನ 3.30ರ ಸುಮಾರಿಗೆ ಕಾರ್ಪೋರೇಷನ್ ಬ್ಯಾಂಕ್‌ಗೆ ಬಂದಿದ್ದ ಯುವಕನೊಬ್ಬ ಮೂರ‌್ನಾಲ್ಕು ನಿಮಿಷಗಳ ಕಾಲ ಆವರಣದಲ್ಲಿ ಅಡ್ಡಾಡಿ ಗ್ರಾಹಕರು ಮತ್ತು ಅಧಿಕಾರಿಗಳ ಚಲನವಲನಗಳನ್ನು ಗಮನಿಸಿದ.

 

ನಂತರ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದು, ಗ್ರಾಹಕರು ಹಾಗೂ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಹಾಕಿ ಎಲ್ಲರನ್ನೂ ಒಂದೆಡೆ ಕೂರಿಸಿದ. ಬಳಿಕ ಅವರೆಲ್ಲರ ಮೊಬೈಲ್‌ಗಳನ್ನು ಕಿತ್ತುಕೊಂಡು, ನಗದು ಕೌಂಟರ್‌ಗೆ ನುಗ್ಗಿ ಹಣ ತೆಗೆದುಕೊಂಡು ಹೊರ ಹೋಗಲು ಮುಂದಾದ.

 

ಈ ಹಂತದಲ್ಲಿ ಮುರಳೀಧರ್, ಆತನನ್ನು ಹಿಡಿದುಕೊಳ್ಳಲು ಹೋದಾಗ ದುಷ್ಕರ್ಮಿ ಪಿಸ್ತೂಲ್‌ನಿಂದ ಅವರ ಮೇಲೆ ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.