ಹಾಡು ಹಕ್ಕಿ ಜುಬಿಲಿ ಬರುವಾ

ಜುಬಿಲಿ ಬರುವಾ... ಈಶಾನ್ಯ ರಾಜ್ಯ ಅಸ್ಸಾಂನ ಮನೆ ಮನೆಯಲ್ಲೂ ಅಭಿಮಾನದ ಹೊಳೆ ಹರಿಸಿದ ಸಿರಿ ಕಂಠದ ಹೆಸರು. ಅವರದೊಂದು ವೈಯಕ್ತಿಕ ವಿವರ (ಪ್ರೊಫೈಲ್) ಬರೆಯಲು ಹೊರಟರೆ ಅಪರೂಪದ ಗೀತ ರಚನೆಕಾರ್ತಿ ಅನ್ನುವ ಅಂಶವನ್ನು ಮರೆತು ಪೂರ್ಣವಿರಾಮ ಹಾಕಲು ಸಾಧ್ಯವೇ ಇಲ್ಲ.
ಅದಾದ ಮೇಲೆ ಅವರೊಬ್ಬ ಸಂವೇದನಾಶೀಲ ಅಭಿನೇತ್ರಿ ಎಂಬುದನ್ನು ಅಸ್ಸಾಮಿ ಹಿರಿ/ಕಿರುತೆರೆ ಮೂಲಕ ಸಾಬೀತುಪಡಿಸಿರುವುದನ್ನು ಮರೆಯಲಾದೀತೆ? ತನ್ನ ಪ್ರತಿಭೆಗಳ ಹರವನ್ನು ಬಹು ಆಯಾಮದಲ್ಲಿ ಒರೆಗೆ ಹಚ್ಚಿರುವ ಈ ಬೆಡಗಿಯ ಹೆಜ್ಜೆಗುರುತು ಇನ್ನೆಲ್ಲಾದರೂ ಇದೆಯೇ ಎಂದು ಹುಡುಕಿದರೆ ಮಾಡೆಲಿಂಗ್ ಕ್ಷೇತ್ರದಲ್ಲಿ ಆಕೆಯ ಬಗ್ಗೆ ಪುಂಖಾನುಪುಂಖ ಶ್ಲಾಘನೆಯ ಮಾತುಗಳು ಸಿಗುತ್ತವೆ.
ಕಣ್ಣು ಕೋರೈಸುವಂಥ ಸುಂದರಿಯಲ್ಲದಿದ್ದರೂ ಸಾವಿರ ವೋಲ್ಟ್ನ ನಗೆ, ಮಾಡೆಲಿಂಗ್ ಕ್ಷೇತ್ರಕ್ಕೆ ಬೇಕಾದ ಪ್ರತಿಭೆ ಮತ್ತು ಸೌಷ್ಠವವಿದೆ.
ನಗರದಲ್ಲಿ ನಡೆದಿರುವ ಅಲೈವ್ ಇಂಡಿಯಾ ಕನ್ಸರ್ಟ್ ಸೀಸನ್ ೨ರಲ್ಲಿ ಮೊನ್ನೆ ಶನಿವಾರ ಹಾಡಿದ ಜುಬಿಲಿ ಬರುವಾ ಗುರುವಾರದಿಂದಲೇ ಇಲ್ಲಿ ರಿಹರ್ಸಲ್ನಲ್ಲಿ ತೊಡಗಿದ್ದರು. ಶುಕ್ರವಾರ ‘ಮೆಟ್ರೊ’ ಜತೆ ಮಾತನಾಡಲೆಂದೇ ಅಭ್ಯಾಸಕ್ಕೆ ಅಲ್ಪವಿರಾಮ ಹಾಕಿದ್ದರು. ಅವರ ಹವ್ಯಾಸ, ಸಂಗೀತ ಧ್ಯಾನ, ಅಭಿನಯ, ನಡುಗುವ ಚಳಿಯಲ್ಲೂ ಐಸ್ಕ್ರೀಂ ಮೆಲ್ಲುವ ಸುಖ.. ಹೀಗೆ ಏನೇನೆಲ್ಲಾ ಹರಟಿದ್ದಾರೆ ನೋಡಿ...
ಬೆಂಗಳೂರಿಗೆ ಸ್ವಾಗತ ಜುಬಿಲಿ. ಈ ಹಿಂದೆ ಇಲ್ಲಿಗೆ ಬಂದಿದ್ದಿರಾ?
ಹೌದು. ನಾನು ಕೆಲವು ಸಲ ಬಂದಿದ್ದೇನೆ. ಆದರೆ ಪ್ರತಿ ಸಲ ಬರುವಾಗಲೂ ಈ ಬೆಂಗಳೂರು ಅನ್ನೋ ಸುಂದರ ನಗರ ಹೊಸ ಬಗೆಯಲ್ಲಿ ಕಾಣಿಸುತ್ತದೆ. ಈ ಬಾರಿ ನಾನು ಬಂದಿರೋದು ಅಲೈವ್ ಇಂಡಿಯಾ ಇನ್ ಕನ್ಸರ್ಟ್ ಸೀಸನ್ ೨ರ ಸ್ಪರ್ಧಿಯಾಗಿ. ಹೀಗಾಗಿ ಈ ಬಾರಿಯ ಭೇಟಿಯಲ್ಲಿ ಬೇರೆಯದೇ ಆದ ನಿರೀಕ್ಷೆಯಿದೆ. ನೋಡೋಣ.
ಸಣ್ಣ ವಯಸ್ಸಿನಲ್ಲೇ ನೀವು ಹಾಡಲು ಆರಂಭಿಸಿದ್ದಿರಿ. ಹಾಡುವ ಆಸೆ ಹೇಗೆ ಮೊಳೆಯಿತು?
ಒಂದೂವರೆ ವರ್ಷದ ಮಗುವಿದ್ದಾಗ ನಾನು ಮೊದಲು ವೇದಿಕೆಯೇರಿದ್ದು. ನನ್ನಮ್ಮ ಆಗಲೇ ಆಕಾಶವಾಣಿಯ ಹಿರಿಯ ಕಲಾವಿದೆ. ಅವರು ಹಾಡಲು ಹೋಗುವಾಗಲೆಲ್ಲ ನಾನೂ ಜತೆಗಿರುತ್ತಿದ್ದೆ. ಮನೆಯಲ್ಲಿ ಅಭ್ಯಾಸ ಮಾಡಬೇಕಾದರೂ ನಾನು ಅವಳ ಪಕ್ಕದಲ್ಲೇ ಕುಳಿತು ಆಲಿಸುತ್ತಿದ್ದೆ. ನಾನೂ ಹಾಡಲು ಪ್ರಯತ್ನಿಸುತ್ತಿದ್ದೆ. ಒಮ್ಮೆ ಅಮ್ಮ ಕಾರ್ಯಕ್ರಮವೊಂದರಲ್ಲಿ ಹಾಡಬೇಕಿತ್ತು. ಅವರು ಹಾಡಿ ಮುಗಿಸುತ್ತಿದ್ದಂತೆ ನಾನೂ ಹಾಡುತ್ತೇನೆಂದು ರಚ್ಚೆ ಹಿಡಿದು ಅಳತೊಡಗಿದೆನಂತೆ. ದೊಡ್ಡ ಕಲಾವಿದೆಯ ಮಗು ಎಂಬ ಕಾರಣಕ್ಕೂ ಮಗು ತಪ್ಪು ಮಾಡಿದರೂ ಜನ ಕ್ಷಮಿಸುತ್ತಾರೆಂಬ ಕಾರಣಕ್ಕೂ ನನಗೆ ಅವಕಾಶ ಕೊಟ್ಟರಂತೆ. ದೊಡ್ಡವರಂತೆ ಶಾಸ್ತ್ರೀಯವಾಗಿ ಹಾಡಿದೆನಂತೆ. ಅದು ನನ್ನ ಮೊದಲ ಸ್ಟೇಜ್ ಶೋ.
ಹಾಗಿದ್ದರೆ ನಿಮಗೆ ನಿಮ್ಮಮ್ಮನೇ ಸ್ಫೂರ್ತಿ ಎಂದಾಯ್ತು. ಮಾದರಿ ಯಾರು?
ಅಪ್ಪ ಮತ್ತು ಅಮ್ಮನೇ ಸ್ಫೂರ್ತಿ ಮತ್ತು ಮಾದರಿ. ರಂಗಭೂಮಿಯಲ್ಲಿ ಪಳಗಿದ ನಟನಾದ್ದರಿಂದ ಅಪ್ಪನೂ ಅಮ್ಮನಂತೆ ನನಗೆ ಬೆಂಬಲ ನೀಡಿದರು. ಸ್ವಾತಂತ್ರ್ಯ ನೀಡಿದರು. ನನ್ನ ಅಕ್ಕ ಊರ್ಮಿಳಾ ಬರುವಾ ನಮ್ಮ (ಅಸ್ಸಾಮಿ) ಚಿತ್ರರಂಗದಲ್ಲಿನ ಬೇಡಿಕೆಯ ನಟಿ.
ನಿಮ್ಮ ಸಂಗೀತ ಕಾರ್ಯಕ್ರಮಕ್ಕೆ ಜನ ಕಿಕ್ಕಿರಿದು ನೆರೆಯುತ್ತಾರೆ ಎಂದು ತಿಳಿದೆ. ಆದರೆ ದಕ್ಷಿಣ ಭಾರತದಲ್ಲಿ ಅವಕಾಶಗಳು ಸಿಗಲಿಲ್ಲವೇ?
ದಕ್ಷಿಣ ಭಾರತದಲ್ಲಿ ಶೋ ನೀಡಿದ್ದು ಕಡಿಮೆಯೇ. ನನ್ನ ತವರಿನಲ್ಲೇ ನಾನು ತುಂಬಾ ಬ್ಯುಸಿಯಾಗಿರುತ್ತೇನೆ. ವಿದೇಶಗಳಲ್ಲಿಯೂ ನನ್ನ ಕಾರ್ಯಕ್ರಮ ನಿರಂತರವಾಗಿ ಇರುತ್ತದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಅಷ್ಟೊಂದು ಪರಿಚಿತಳಾಗಿಲ್ಲ.
ಈಗ ನೀವು ಡೈನಾಮಿಕ್ ಹಿನ್ನೆಲೆ ಗಾಯಕಿ. ನಿಮ್ಮ ಪ್ರಯಾಣ ಶುರುವಾದದ್ದು ಯಾವಾಗ?
೧೯೯೨ರಲ್ಲಿ ‘ರಣಾಂಗಿಣಿ’ ಅಸ್ಸಾಮಿ ಸಾಕ್ಷ್ಯಚಿತ್ರದಲ್ಲಿ ಹಾಡುವಲ್ಲಿಂದ ವೃತ್ತಿಪರ ಹಿನ್ನೆಲೆ ಗಾಯಕಿಯಾದೆ. ನಂತರ ಹಲವಾರು ಚಿತ್ರಗಳಲ್ಲಿ ಹಾಡಿದ್ದೇನೆ. ಆದರೆ ನನಗೆ ಹೆಚ್ಚು ಅಭಿಮಾನಿಗಳು ಲಭಿಸಿರುವುದು ನನ್ನ ಶೋಗಳ ಮೂಲಕವೇ. ಸಾಕ್ಷ್ಯಚಿತ್ರವೊಂದರ ಹಾಡಿಗಾಗಿ ಯುನೆಸ್ಕೊ ‘ಅಸ್ಸಾಂನ ಅತ್ಯುತ್ತಮ ಗಾಯಕಿ’ ಪ್ರಶಸ್ತಿಯನ್ನು ೧೯೯೭ರಲ್ಲಿ ನೀಡಿತ್ತು.
ನಿಮ್ಮದೇ ಆಲ್ಬಂಗಳ ಬಗ್ಗೆ ಹೇಳಿ...
ನಾನು ಹಲವಾರು ಆಡಿಯೊ ಆಲ್ಬಂಗಳನ್ನು ಮಾಡಿದ್ದೇನೆ. ಅವುಗಳ ಪೈಕಿ ಪಾಪ್ ಆಲ್ಬಂಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. ಅಸ್ಸಾಮಿ ಭಾಷೆಯ ಆಲ್ಬಂಗಳನ್ನೂ ಮಾಡಿದ್ದೇನೆ. ಇತ್ತೀಚಿನ ‘ಮಾಟಿ’ಯಲ್ಲಿ, ಅಸ್ಸಾಮಿನ ಪಕ್ಕಾ ಜನಪದ ಹಾಡುಗಳನ್ನು ಅದೇ ಶೈಲಿಯಲ್ಲಿ ಬಳಸಿಕೊಂಡು ಅದನ್ನು ಪಾಪ್ನೊಂದಿಗೆ ಬೆರೆಸಿ ಹಾಡಿದ್ದೇನೆ. ನನ್ನ ಆಲ್ಬಂಗಳಿಗೆ ಗೀತ ರಚನೆ ಮತ್ತು ಸಂಗೀತ ಸಂಯೋಜನೆ ನಾನೇ ಮಾಡೋದು. ಇದು ನನಗೆ ಹೆಚ್ಚು ಖುಷಿ ಕೊಡುವ ಕೆಲಸ.
ಹವ್ಯಾಸ?
ಸಂಗೀತ ಕ್ಷೇತ್ರವನ್ನು ಬಿಟ್ಟರೆ ರಂಗಭೂಮಿ, ಸಾಕ್ಷ್ಯಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸುವುದು ಇದ್ದೇ ಇರುತ್ತದೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಕೈತುಂಬಾ ಅವಕಾಶಗಳು ಸಿಗುತ್ತಿರುತ್ತವೆ. ತೀರಾ ಪುರುಸೊತ್ತು ಸಿಕ್ಕಿದರೆ ಒಂದೋ ಪ್ರವಾಸ ಹೋಗುತ್ತೇನೆ. ಅಥವಾ ಅನಿಮೇಟೆಡ್ ಸಿನಿಮಾ ವೀಕ್ಷಿಸುತ್ತೇನೆ.
ಇಷ್ಟೆಲ್ಲ ಒತ್ತಡದ ಮಧ್ಯೆ ಅಂಗಸೌಷ್ಠವ ಕಾಪಾಡಿಕೊಂಡಿದ್ದು ಹೇಗೆ?
ಗೊತ್ತಿಲ್ಲ! ಚಾಕೊಲೇಟ್ ಇಲ್ಲದೆ ನಾನು ದಿನ ಕಳೆಯಲಾರೆ. ಇನ್ನು, ಶೋಗೆ ಐದು ನಿಮಿಷ ಇರುವಾಗ್ಲೂ ಐಸ್ಕ್ರೀಂ ತಿನ್ನಲು ರೆಡಿ... ಮತ್ತೊಂದು ಸತ್ಯ ಹೇಳಲಾ? ನಂಗೆ ಮ್ಯಾಗಿ ನೂಡಲ್ಸ್ ಪಂಚಪ್ರಾಣ. ಅದು ಜಂಕ್, ಆರೋಗ್ಯಕ್ಕೆ ಹಾನಿಕರ ಅಂತ ಗೊತ್ತು. ಆದರೂ ನಾನು ಅಡಿಕ್ಟ್ ಆಗಿದ್ದೇನೆ. ಅದು ಬಿಟ್ಟರೆ ಚೈನೀಸ್ ಫುಡ್ ತಿನ್ನುತ್ತೇನೆ. ಇಷ್ಟಾಗಿಯೂ ‘ಫಿಟ್’ ಆಗಿದ್ದೇನೆ ಅನ್ನೋದೇ ಅಚ್ಚರಿ ಅಲ್ವಾ?
ಭವಿಷ್ಯದ ಕನಸು?
ದಿನವಿಡೀ ಕನಸು ಕಾಣುತ್ತಲೇ ಇರುವವಳು ನಾನು. ಆದರೆ ಸಣ್ಣ ವಯಸ್ಸಿನಲ್ಲಿ ಅಂದುಕೊಂಡಿದ್ದನ್ನು ಈಗಾಗಲೇ ಸಾಧಿಸಿದ್ದೇನೆ. ನಾನು ಮತ್ತು ನನ್ನ ಸ್ನೇಹಿತೆಯರು ಸೇರಿ ‘ಜುಬಿಲಿ ಫೌಂಡೇಶನ್’ ಶುರು ಮಾಡಿದ್ದೇವೆ. ಹುಟ್ಟುತ್ತಲೇ ದೈಹಿಕವಾಗಿ ಅಸಮರ್ಥರಾಗಿ ಹುಟ್ಟುವ ಮತ್ತು ವೃದ್ಧಾಪ್ಯದಲ್ಲಿ ತೀವ್ರತರವಾದ ಆರೋಗ್ಯ ಸಮಸ್ಯೆ ಎದುರಿಸುವವರಿಗೆ ವಿವಿಧ ಬಗೆಯ ಅಂಗದಾನ ಮಾಡುವುದು ಮತ್ತು ಅದಕ್ಕೆ ನೆರವಾಗುವುದು ಪ್ರತಿಷ್ಠಾನದ ಉದ್ದೇಶ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.