ಮಂಗಳವಾರ, ಮಾರ್ಚ್ 9, 2021
31 °C

ಹಾರಂಗಿ ಜಲಾಶಯ: 39 ಅಡಿ ಕಡಿಮೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾರಂಗಿ ಜಲಾಶಯ: 39 ಅಡಿ ಕಡಿಮೆ ನೀರು

ಕುಶಾಲನಗರ: ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಕಾರಣ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳ ಪೈಕಿ ಒಂದಾದ ಹಾರಂಗಿ ಜಲಾಶಯದ ನೀರಿನ ಮಟ್ಟದಲ್ಲಿ ಹೆಚ್ಚು ಏರಿಕೆ ಕಂಡು ಬಂದಿಲ್ಲ.ಅಣೆಕಟ್ಟೆಯಲ್ಲಿ ಒಂದು ವಾರದಿಂದ ಕೇವಲ 7 ಅಡಿಗಳಷ್ಟು ನೀರು ಏರಿಕೆಯಾಗಿದ್ದು, ನೀರಿನ ಸಂಗ್ರಹ  0.7 ಟಿಎಂಸಿ ಹೆಚ್ಚಿದಂತಾಗಿದೆ. ಗರಿಷ್ಠ 8.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದೆ. ಜಲಾಶಯದಲ್ಲಿ ಭಾನುವಾರ ಬೆಳಿಗ್ಗೆ 2820.68 ಅಡಿಗಳಷ್ಟು ದಾಖಲಾಗಿತ್ತು. ಕಳೆದ ವರ್ಷ ಇದೇ ವೇಳೆಗೆ 2856 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಅಣೆಕಟ್ಟೆಯಲ್ಲಿ 39 ಅಡಿಗಳಷ್ಟು ಕಡಿಮೆ ನೀರು ಇದೆ. ಪ್ರಸ್ತುತ 2.73 ಟಿಎಂಸಿ ನೀರು ಅಣೆಕಟ್ಟೆಯಲ್ಲಿದ್ದು, ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ 0.75 ಟಿಎಂಸಿ ನೀರು ಹೊರತುಪಡಿಸಿದರೆ 1.98 ಟಿಎಂಸಿ ನೀರನ್ನು ಮಾತ್ರ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ಬಳಸಬಹುದು ಎಂದು ನೀರಾವರಿ ಇಲಾಖೆ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಕಳೆದ ವರ್ಷ ಈ ಅವಧಿಗೆ ಉತ್ತಮ ಮಳೆಯಾಗಿತ್ತು. ಈ ವೇಳೆಗೆ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದವು. ಈ ವರ್ಷ ಇನ್ನೂ ಬತ್ತದ ನಾಟಿಯೂ ಆರಂಭವಾಗಿಲ್ಲ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆ ಕೊರತೆಯಿಂದ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಮೆಕ್ಕೆಜೋಳ, ಶುಂಠಿ ಕೃಷಿ ಚಟುವಟಿಕೆಗೂ ತೊಂದರೆಯಾಗಿದೆ. ಜುಲೈ ತಿಂಗಳಿನಲ್ಲಿ ಸಮರ್ಪಕ ಮಳೆ ಬಾರದಿದ್ದರೆ ಅಣೆಕಟ್ಟೆ ಖಾಲಿಯಾಗುವ ಸೂಚನೆಗಳಿವೆ. ಕಳೆದ ವರ್ಷ ಈ ವೇಳೆಗೆ ಜಲಾಶಯ ಬಹುತೇಕ ಭರ್ತಿಯಾಗಿತ್ತು. ಜುಲೈ 3ರ ನಂತರ ಅಣೆಕಟ್ಟೆಯಿಂದ ನೀರು ಹರಿಸಲಾಗಿತ್ತು.ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಮಳೆ ಬಾರದೆ ಇರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.