ಗುರುವಾರ , ಮಾರ್ಚ್ 4, 2021
19 °C

ಹಾಲು ಸಂರಕ್ಷಣೆಗೆ ‘ಬಿಎಂಸಿ’ ವರದಾನ

-ಎನ್. ರವಿ\ವಿಶೇಷ ವರದಿ\ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಲು ಸಂರಕ್ಷಣೆಗೆ ‘ಬಿಎಂಸಿ’ ವರದಾನ

ಚಾಮರಾಜನಗರ: ಜಿಲ್ಲೆಯಲ್ಲಿ ಬರಗಾಲದಿಂದ ತತ್ತರಿಸುವ ರೈತರು ಹೈನುಗಾರಿಕೆಯತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಒಂದು ಅಥವಾ ಎರಡು ರಾಸು ಸಾಕಿಕೊಂಡು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನಿತ್ಯವೂ ಹಾಲು ಪೂರೈಸಿ ನೆಮ್ಮದಿ ಕಂಡುಕೊಂಡಿದ್ದಾರೆ. ಐದಾರು ರಾಸುಗಳನ್ನು ಹೊಂದಿರುವ ರೈತರು ಇದ್ದಾರೆ.ವಾತಾವರಣದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಸಂಘಗಳಿಗೆ ಪೂರೈಕೆಯಾದ ಹಾಲು ಕೆಡುತ್ತದೆ. ಇದರಿಂದ ಮೈಮುಲ್ ಹಾಗೂ ಸಂಘಕ್ಕೂ ನಷ್ಟ ಕಟ್ಟಿಟ್ಟಬುತ್ತಿ. ಈ ಹಿನ್ನೆಲೆಯಲ್ಲಿ ಮೈಮುಲ್‌ನಿಂದ ಅನುಷ್ಠಾನಗೊಂಡಿರುವ ಬಲ್ಕ್ ಮಿಲ್ಕ್ ಕೇಂದ್ರಗಳು (ಬಿಎಂಸಿ) ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದಿವೆ. ಪೂರೈಕೆಯಾದ ಹಾಲನ್ನು ಸಂರಕ್ಷಿಸುವ ಜತೆಗೆ ಗುಣಮಟ್ಟ ಕಾಯ್ದುಕೊಳ್ಳಲು ಈ ಕೇಂದ್ರಗಳು ಸಹಕಾರಿಯಾಗಿವೆ.ಒಂದು ಬಲ್ಕ್ ಮಿಲ್ಕ್ ಕೇಂದ್ರವು 3 ಸಾವಿರ ಹಾಲಿನ ಶೇಖರಣಾ ಸಾಮರ್ಥ್ಯ ಹೊಂದಿರುತ್ತದೆ. ಕೇಂದ್ರದಲ್ಲಿ ಹಾಲಿನ ಶೀತಲೀಕರಣ ಯಂತ್ರ ಇರುತ್ತದೆ. ಇಲ್ಲಿ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಹಾಲನ್ನು ಸಂಗ್ರಹಿಸಲಾಗುತ್ತದೆ.ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಹಾಲು ಮೈಸೂರಿನಲ್ಲಿರುವ ಮೈಮುಲ್ ಕೇಂದ್ರ ಹಾಗೂ ಜಿಲ್ಲೆಯ ಇತರ ಸಂಗ್ರಹಣಾ ಕೇಂದ್ರಗಳಿಗೆ ಪೂರೈಕೆಯಾಗುತ್ತದೆ. ಅಲ್ಲಿ ಹಾಲನ್ನು ಸಂಸ್ಕರಿಸಿ ನೆರೆಯ ತಮಿಳುನಾಡು, ಕೇರಳದ ಅಲೆಪ್ಪಿ ಭಾಗಕ್ಕೆ ಪೂರೈಸಲಾಗುತ್ತದೆ.ಆದರೆ, ವಾತಾವರಣದಲ್ಲಿ ಉಂಟಾಗುವ ಬದಲಾವಣೆಯಿಂದ ಮೈಸೂರಿಗೆ ಅಥವಾ ನಿಗದಿತ ಸಂಸ್ಕರಣಾ ಕೇಂದ್ರಕ್ಕೆ ಹಾಲು ಪೂರೈಸುವ ವೇಳೆ ಕೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬ್ಯಾಕ್ಟಿರೀಯಾಗಳು ಹಾಲಿನೊಡನೆ ಬೆರೆತು ಹಾಲು ವಿಷಯುಕ್ತವಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಬಲ್ಕ್ ಮಿಲ್ಕ್ ಕೇಂದ್ರದಿಂದ ಪರಿಹಾರ ಸಿಕ್ಕಿದೆ.ಬಲ್ಕ್ ಮಿಲ್ಕ್ ಕೇಂದ್ರದಲ್ಲಿ ಹಾಲನ್ನು ಸಂಸ್ಕರಿಸಬಹುದು. ಮೈಮುಲ್‌ನಲ್ಲಿ ನಡೆಯುವ ಸಂಸ್ಕರಣಾ ಪ್ರಕ್ರಿಯೆ ಈ ಕೇಂದ್ರಗಳಲ್ಲಿಯೂ ನಡೆಯುತ್ತದೆ. ಹೀಗಾಗಿ, ಈ ಕೇಂದ್ರಗಳ ಮೂಲಕ ನೇರವಾಗಿ ನೆರೆಯ ರಾಜ್ಯಗಳಿಗೆ ಹಾಲು ಪೂರೈಸಬಹುದು. ಇದರಿಂದ ಸಂಘ ಹಾಗೂ ಮೈಮುಲ್‌ ಎರಡಕ್ಕೂ ಹೆಚ್ಚಿನ ಲಾಭ ಬರುತ್ತದೆ. ಈ ನಿಟ್ಟಿನಲ್ಲಿ ಬಲ್ಕ್ ಮಿಲ್ಕ್ ಕೇಂದ್ರಗಳು ಹಾಲು ಉತ್ಪಾದಕರಿಗೆ ಪೂರಕವಾಗಿವೆ.

ಎಷ್ಟು ವೆಚ್ಚ: ಒಂದು ಬಲ್ಕ್ ಮಿಲ್ಕ್ ಕೇಂದ್ರದ ಸ್ಥಾಪನೆಗೆ ₨ 20 ಲಕ್ಷ ಬೇಕಾಗುತ್ತದೆ.ಇದರಲ್ಲಿ ಮೈಮುಲ್ ₨ 2.70 ಲಕ್ಷವನ್ನು ಹಾಲು ಉತ್ಪಾದಕರ ಸಂಘಕ್ಕೆ ಸಾಲದ ರೂಪದಲ್ಲಿ ನೀಡುತ್ತದೆ. ಜತೆಗೆ, ₨ 75 ಸಾವಿರ ಹಣವನ್ನು ವಿದ್ಯುತ್ ಸೌಲಭ್ಯ ಕಲ್ಪಿಸಿಕೊಳ್ಳಲು ನೀಡುತ್ತದೆ. ಉಳಿದಂತೆ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಸಂಸ್ಥೆ ಮತ್ತು ಮೈಮುಲ್‌ ಅನುದಾನದಿಂದ ಬಲ್ಕ್ ಮಿಲ್ಕ್ ಕೇಂದ್ರ ಸ್ಥಾಪಿಸಲಾಗುತ್ತದೆ.ಚಾಮರಾಜನಗರ ತಾಲ್ಲೂಕಿನ ಉಡಿಗಾಲ, ಕೊತ್ತಲವಾಡಿ, ಬದನಗುಪ್ಪೆ, ಪಣ್ಯದಹುಂಡಿ, ಕಲ್ಪುರ, ಹರವೆ, ಯರಗನಹಳ್ಳಿಯಲ್ಲಿ ಬಲ್ಕ್ ಮಿಲ್ಕ್ ಕೇಂದ್ರಗಳಿವೆ.‘2006-–07ನೇ ಸಾಲಿನಲ್ಲಿ ಮೈಮುಲ್‌ನಿಂದ ನಮ್ಮ ಸಂಘಕ್ಕೆ ಶೀತಲೀಕರಣ ಯಂತ್ರ ನೀಡಲಾಯಿತು. ಅಕ್ಕಪಕ್ಕದ ಬೊಕ್ಕಾಪುರ, ಬಡಗಲಪುರ, ಉಗನೆದಹುಂಡಿ ಗ್ರಾಮದ ಸಂಘಗಳಲ್ಲಿ ಸಂಗ್ರಹವಾಗುವ ಹಾಲನ್ನು ಇಲ್ಲಿ ಸಂಸ್ಕರಿಸಲಾಗುತ್ತದೆ. ಇಲ್ಲಿಂದ ನೇರವಾಗಿ ರಾಮಸಮುದ್ರದಲ್ಲಿರುವ ಹಾಲಿನ ಕೇಂದ್ರಕ್ಕೆ ತಲುಪಿಸಲಾಗುತ್ತದೆ’ ಎಂದು ಉಡಿಗಾಲದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿದ್ದೇಶ್ವರಪ್ಪ ತಿಳಿಸಿದರು.ವೆಂಕಟಯ್ಯನಛತ್ರ, ಮೂಡ್ನಾಕೂಡು, ಅಮಚವಾಡಿ, ಅರಳಿಕಟ್ಟೆ ಗ್ರಾಮದಲ್ಲಿ ಬಲ್ಕ್ ಮಿಲ್ಕ್ ಕೇಂದ್ರಗಳನ್ನು ಸ್ಥಾಪಿಸಲು ಸಿದ್ಧತೆ ಪೂರ್ಣಗೊಂಡಿದೆ. ಲೋಕಸಭಾ ಚುನಾವಣಾ ನೀತಿಸಂಹಿತೆ ಮುಗಿದ ನಂತರ ಕೇಂದ್ರಗಳ ಸ್ಥಾಪನೆಗೆ ಚಾಲನೆ ನೀಡಲಾಗುವುದು. ಮುಂದಿನ ಹಂತದಲ್ಲಿ ನಾಗವಳ್ಳಿ, ಕಾಗಲವಾಡಿ, ಪುಟ್ಟನಪುರ ಗ್ರಾಮದಲ್ಲಿ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದು ಮೈಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ‘ಪ್ರಜಾವಾಣಿ'ಗೆ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.