ಸೋಮವಾರ, ಮಾರ್ಚ್ 8, 2021
22 °C

ಹಾವನೂರು ಸೇವೆ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವನೂರು ಸೇವೆ ಸ್ಮರಣೆ

ಬೆಂಗಳೂರು: ‘ಸಾಮಾಜಿಕ ಸುಧಾರಣೆ ಹಾಗೂ ಹಿಂದುಳಿದ ಸಮಾಜದ ಅಭಿ­ವೃದ್ಧಿಗೆ ಎಲ್‌.ಜಿ.ಹಾವನೂರು ಅವರ  ಕೊಡುಗೆ ಅಪಾರ’ ಎಂದು ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಹೇಳಿದರು.ಎಲ್‌.ಜಿ.ಹಾವನೂರು ವಿಚಾರ ವೇದಿಕೆಯು ನಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಆಯೋ­ಜಿಸಿದ್ದ ‘ಎಲ್‌.ಜಿ.ಹಾವನೂರ ಅವರ 88 ನೇ ಜಯಂತಿ ಆಚರಣೆ’ ಕಾರ್ಯ­ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಪ್ರತಿ ಹಿಂದುಳಿದ ಜಾತಿ ಸಂಘಟನೆ­ಯಾಗಬೇಕು. ಜಾತಿಗಳ ನಡುವಿನ ಅಂತರ ಕಡಿಮೆಯಾಗಬೇಕು. ಜಾತಿ­ಗಳು ಸಂಘಟನೆಯಾಗದೆ ಹೋದರೆ, ಅವರ ಬೇಡಿಕೆಗಳು ಆಡಳಿತಾರೂಢ­ರನ್ನು ತಲುಪುವುದಿಲ್ಲ ಎಂಬುದು ಅವರ ಪ್ರತಿಪಾದನೆಯಾಗಿತ್ತು’ ಎಂದು ಸ್ಮರಿಸಿದರು.‘ಈಗ ಚುನಾವಣೆಗಾಗಿ ಎಲ್ಲ ಪಕ್ಷಗಳು ಕಾರ್ಯತಂತ್ರವನ್ನು ರೂಪಿ­ಸಿವೆ. ಎಲ್ಲದರಲ್ಲಿಯೂ ಈಗ ಮೋದಿ ಅಲೆ ಎಂದು ಬಿಂಬಿಸಲಾಗುತ್ತಿದೆ. ಮೋದಿ ಅಲೆಯಲ್ಲಿ ಅವರು ಮಾಡಿದ ಕೊಲೆ, ಸಂಸಾರದ ಆಕ್ರಂದನ ಎಲ್ಲಿ ಹೋಯಿತು’ ಎಂದು ಪ್ರಶ್ನಿಸಿದ ಅವರು, ಸಂವಿಧಾನದ ಆಶಯಗಳನ್ನು ನುಚ್ಚು­ನೂರು ಮಾಡುವ ಹುನ್ನಾರ ನಡೆಯುತ್ತಿದೆ’ ಎಂದರು.‘ಮೊದಲು ಕಾಂಗ್ರೆಸ್‌ ಕಾರ್ಪೊರೇಟ್‌ ವಲಯದ ಕೈಗೊಂಬೆ­ಯಾಗಿತ್ತು. ಆದಾಗ್ಯೂ, ಕಾಂಗ್ರೆಸ್‌ ಪಕ್ಷಕ್ಕೆ ಜನಸಾಮಾನ್ಯರ ಆಶೋತ್ತರ­ಗಳನ್ನು ಬಲಿ ನೀಡಲು ಸಾಧ್ಯವಾಗಲಿಲ್ಲ. ಇದರಿಂದ, ಕಾರ್ಪೊರೇಟ್‌ ವಲಯ ಕಾಂಗ್ರೆಸ್‌ ಪಕ್ಷದಿಂದ ಸಂಪೂರ್ಣವಾಗಿ ತೃಪ್ತಿ ಹೊಂದಲು ಸಾಧ್ಯವಾಗಿಲ್ಲ’ ಎಂದು ವಿಶ್ಲೇಷಿಸಿದರು.‘ಕಾರ್ಪೊರೇಟ್‌ ವಲಯ ಮೋದಿ ಮೂಲಕ ಆಡಳಿತ ಸ್ಥಾಪಿಸಲು ಹುನ್ನಾರ ನಡೆಸುತ್ತಿದೆ. ಇದಕ್ಕೆ ಪುರೋಹಿತಶಾಹಿಗಳ ಬೆಂಬಲವೂ ಇದೆ. ಅಂಬಾನಿ ಸಮೂಹವು ಮೋದಿಗೆ ಹಣ ಸುರಿಯುತ್ತಿದ್ದಾರೆ’ ಎಂದರು.ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಎಲ್‌.ಜಿ.ಹಾವನೂರು ವೇದಿಕೆಯ ರಾಜ್ಯಾಧ್ಯಕ್ಷ ಸಿರಿಗೆರೆ ತಿಪ್ಪೇಶ್‌, ‘ಹಾವನೂರು ಅವರ ಹೆಸರಿನಲ್ಲಿ ಸರ್ಕಾರವೇ ಜಯಂತಿಯನ್ನು ಆಚರಿಸಬೇಕು. ವಿಧಾನ ಸೌಧದ ಮುಂಭಾಗದಲ್ಲಿ ಅವರ ಪ್ರತಿಮೆ ಸ್ಥಾಪಿಸಬೇಕು. ಯಾವುದಾದರೂ ಕಾನೂನು ವಿವಿಗೆ ಹಾವನೂರು ಅವರ ಹೆಸರಿಡಬೇಕು ಹಾಗೂ ಸರ್ಕಾರ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು’ ಎಂದು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.