ಮಂಗಳವಾರ, ಏಪ್ರಿಲ್ 13, 2021
30 °C

ಹಾವೇರಿ ರಸ್ತೆಗಳೇ ಹೆರಿಗೆ ಆಸ್ಪತ್ರೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ನಗರದೊಳಗಿನ ಪ್ರತಿಯೊಂದು ರಸ್ತೆಗಳು ಹೆರಿಗೆ ಆಸ್ಪತ್ರೆಗಳಾಗಿವೆ. ಗರ್ಭಿಣಿಯರು ಹೆರಿಗೆಗಾಗಿ ಆಸ್ಪತ್ರೆಗೆ ತೆರಳುವುದೇ ಬೇಡ, ನಗರದ ರಸ್ತೆಗಳಲ್ಲಿ ಒಂದು ಸುತ್ತು ಸಂಚರಿಸಿದರೆ ಸಾಕು ತನ್ನಷ್ಟಕ್ಕೆ ತಾನೆ ಹೆರಿಗೆಯಾಗುತ್ತದೆ.’ ಒಳಚರಂಡಿ ಕಾಮಗಾರಿಯಿಂದ ನಗರದ ರಸ್ತೆಗಳ ಪರಿಸ್ಥಿತಿ ಎಷ್ಟು ಹದಗೆಟ್ಟಿವೆ ಎಂಬುದನ್ನು ನಗರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ನೀಡಿದ ವ್ಯಾಖ್ಯಾನವಿದು.ಕಳೆದ 11 ತಿಂಗಳಿನಿಂದ ನಗರದಲ್ಲಿ ಒಳಚರಂಡಿ ಕಾಮಗಾರಿ ನಡೆದಿದ್ದು, ಯಾವುದೇ ಒಂದು ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಳಿಸಿಲ್ಲ. ಹೀಗಾಗಿ ರಸ್ತೆಗಳು ತಗ್ಗು ದಿಣ್ಣೆಗಳಿಂದ ಕೂಡಿವೆಯಲ್ಲದೇ ದೂಳಿನಿಂದ ತುಂಬಿ ತುಳುಕುತ್ತಿವೆ. ನಗರಸಭೆ ಮಾತ್ರ ಆ ಕಾಮಗಾರಿಗೂ ನನಗೂ ಯಾವುದೇ ಸಂಬಂಧವಿಲ್ಲವೆನ್ನುವಂತೆ ಮೌನವಾಗಿದೆ. ಒಂದು ವಾರದಲ್ಲಿ ಸಂಬಂಧಿಸಿದ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಸಭೆ ಕರೆದು ಹದಗೆಟ್ಟ ರಸ್ತೆಗಳನ್ನು ದುರಸ್ತಿಗೆ ತಾಕೀತು ಮಾಡಬೇಕೆಂದು ಸದಸ್ಯರಾದ ಚೋಪದಾರ, ವೆಂಕಟೇಶ ಈಟಗಿ, ಜಾಮದಾರ, ಡಾ.ಕಮ್ಮಾರ ಸೇರಿದಂತೆ ಅನೇಕ ಸದಸ್ಯರು ನಗರಸಭೆ ಅಧ್ಯಕ್ಷರನ್ನು ಒತ್ತಾಯಿಸಿದರು.ಆಗ ನಗರಸಭೆ ಎಂಜನಿಯರ್ ಪಾಟೀಲ ಮಾತನಾಡಿ, ಟೆಂಡರ್ ನಿಯಮಾವಳಿ ಪ್ರಕಾರ ಒಳಚರಂಡಿ ಕಾಮಗಾರಿಗಾಗಿ ತಗ್ಗು ತೆಗೆದ ಜಾಗದಲ್ಲಿ ಮಾತ್ರ ಮೆಟಲಿಂಗ್ ಮಾಡಲು ಅವಕಾಶವಿದೆ. ಅಂತಹ ಸುಮಾರು 60 ಕಿ.ಮಿ. ರಸ್ತೆಯಲ್ಲಿ ಗುತ್ತಿಗೆದಾರರು ಮೆಟಲಿಂಗ್ ಮಾಡಬೇಕಾಗಿದೆ. ಆದರೆ, ಇತ್ತೀಚೆಗಷ್ಟೇ ಜಿಲ್ಲಾ ಉಸ್ತುವಾರಿ ಸಚಿವರು ಗುತ್ತಿಗೆದಾರರ ಹಾಗೂ ಎಂಜನಿಯರ್‌ಗಳ ಜತೆ ಮಾತುಕತೆ ನಡೆಸಿ ತಗ್ಗು ತೆಗೆದ ಜಾಗೆಯ ಸುಮಾರು 60 ಕಿ.ಮೀ. ರಸ್ತೆ ಬದಲಾಗಿ ಪೂರ್ಣ ಪ್ರಮಾಣದ 20 ಕಿ.ಮೀ.ರಸ್ತೆಯನ್ನು ಮಾಡಿಕೊಡಲು ವಿನಂತಿಸಿದ್ದಾರೆ. ಅವರು ಕೂಡಾ ಒಪ್ಪಿಕೊಂಡಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.ಎಂಜಿನಿಯರ್ ಅವರ ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು ಹೇಳಿ ಹೋಗುತ್ತಾರೆ. ಆದರೆ, ಯಾವಾಗ ಆ ಕೆಲಸವನ್ನು ಮಾಡುವುದು. ಅದು ಅಲ್ಲದೇ ಉಳಿದ 40 ಕಿ.ಮೀ ರಸ್ತೆಯನ್ನು ಯಾರು ದುರಸ್ತಿ ಮಾಡಬೇಕು ಎಂದು ಪ್ರಶ್ನಿಸಿದರು. ಅದನ್ನು ನಗರಸಭೆಯಿಂದ ಮಾಡಬೇಕು ಎಂದು ಎಂಜನಿಯರ್ ಪಾಟೀಲ ತಿಳಿಸಿದರು.ನೋಟಿಸ್ ನೀಡಿ: ಟಂಡರ್ ನಿಯಮವಾಳಿ ಪ್ರಕಾರ ತಗ್ಗು ತೆಗೆದ ರಸ್ತೆ ಮೆಟಲಿಂಗ್ ಮಾಡಬೇಕೆಂಬ ಸ್ಪಷ್ಟ ನಿರ್ದೇಶನವಿದ್ದರೂ, ಅದನ್ನು ಮಾಡದೇ ಇಲ್ಲಿವರೆಗೆ ಹಾಗೆ ಬಿಟ್ಟಿದ್ದು ಏಕೆ ಎಂದು ಪ್ರಶ್ನಿಸಿದ ಸದಸ್ಯ ರಾಜಶೇಖರ ಕಲ್ಲಮ್ಮನವರ, ತಕ್ಷಣವೇ ಅವರಿಗೆ ನೋಟಿಸ್ ನೀಡುವಂತೆ ಸಭೆಯಲ್ಲಿ ಒತ್ತಾಯಿಸಿದರು.ನಗರದ ರಸ್ತೆಗಳ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಆಗ ಜನರು ನಗರಸಭೆ ಸದಸ್ಯರನ್ನು ಕಂಡ ಕಂಡಲ್ಲಿ ಹೊಡಿದರೂ ಆಶ್ಚರ್ಯಪಡಬೇಕಿಲ್ಲ. ಅಂಥ ಪ್ರಸಂಗ ಎದುರಾಗುವ ನಗರಸಭೆ ಮುನ್ನವೇ ಎಚ್ಚೆತ್ತು ಕೆಲಸ ಮಾಡಿಸಲು ಮುಂದಾಗಬೇಕೆಂದು ಸದಸ್ಯ ವೆಂಕಟೇಶ ಇಟಗಿ ಆಗ್ರಹಿಸಿದರು.

ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ ಅವರು ಈ ಕುರಿತು ಶೀಘ್ರವೇ ಗುತ್ತಿಗೆದಾರರ ಹಾಗೂ ಎಂಜನಿಯರ್‌ಗಳ ಸಭೆ ಕರೆದು ನಗರದ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಈ ಕುರಿತ ಚರ್ಚೆ ಮುಕ್ತಾಯವಾಯಿತು.ನಗರಸಭೆ ಆಯುಕ್ತ ಎಚ್.ಕೆ.ರುದ್ರಪ್ಪ, ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ ಸೇರಿದಂತೆ ಅನೇಕರು ಸಭೆಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.