ಹಾಸನ ಜಿಲ್ಲೆಯ ಉಪ ಕಾಲುವೆಗಳ ಸ್ಥಿತಿ ಚಿಂತಾಜನಕ

ಮಂಗಳವಾರ, ಜೂಲೈ 23, 2019
20 °C

ಹಾಸನ ಜಿಲ್ಲೆಯ ಉಪ ಕಾಲುವೆಗಳ ಸ್ಥಿತಿ ಚಿಂತಾಜನಕ

Published:
Updated:

ಹಾಸನ: ಹೇಮಾವತಿ ಜಲಾಶಯ ಸೇರಿದಂತೆ ಜಿಲ್ಲೆಯಲ್ಲಿ ಮೂರು ಮುಖ್ಯ ಜಲಾಶಯಗಳು ಹಾಗೂ ಹಲವು ಜಲಮೂಲಗಳಿದ್ದರೂ ಜಿಲ್ಲೆಯ ಅನೇಕ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ. ಜಾವಗಲ್, ಬಾಣಾವರ ಮುಂತಾದ ಹೋಬಳಿಗಳಿಗೆ ಇಂದಿಗೂ ಶುದ್ಧ ಕುಡಿಯುವ ನೀರು ಒದಗಿಸಲಾಗಿಲ್ಲ. ಫ್ಲೋರೈಡ್‌ಯುಕ್ತ ನೀರು ಕುಡಿದು ಜನರ ಆರೋಗ್ಯ ಹಾಳಾಗುತ್ತಿದೆ. ಆದರೆ, ಹಾಸನದಿಂದ ಬೇರೆ ಜಿಲ್ಲೆಗಳಿಗೆ ನೀರೊದಗಿಸುವ ಬಗ್ಗೆ ಸರ್ಕಾರ ಯೋಜನೆಗಳನ್ನು ರೂಪಿಸುತ್ತಲೇ ಇದೆ.ಹೇಮಾವತಿ ಯೋಜನೆ ಪೂರ್ಣಗೊಂಡಿದ್ದರೂ, ಯಗಚಿ ವಾಟೆಹೊಳೆ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಏತ ನೀರಾವರಿ ಯೋಜನೆಗಳಿಗೆ ಇನ್ನೂ ಚಾಲನೆಯನ್ನೇ ಕೊಟ್ಟಿಲ್ಲ. ಹೇಮಾವತಿ ಪ್ರಮುಖ ಜಲಾಶಯವಾಗಿರುವುದರಿಂದ ನಾಲೆಗಳ ಅಭಿವೃದ್ಧಿಗೆ ಸ್ವಲ್ಪಮಟ್ಟಿನ ಕೆಲಸವಾಗುತ್ತಿದೆ.  ಇತರ ನಾಲೆಗಳ ಬಗ್ಗೆ ಈ ಮಾತನ್ನು ಹೇಳಲಾಗದು.ಹೇಮಾವತಿ ಜಲಾಶಯಕ್ಕೆ ಎಡದಂಡೆ (212 ಕಿ.ಮೀ), ಬಲದಂಡೆ (91 ಕಿ.ಮೀ.) ಹಾಗೂ ಬಲ ಮೇಲ್ದಂಡೆ (96.7 ಕಿ.ಮೀ) ಎಂಬ ಮೂರು ನಾಲೆಗಳಿವೆ. ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಭೂಮಿಗೆ ನೀರು ಒದಗಿಸುವುದರಿಂದ ಈ ನಾಲೆಗಳ ಹೂಳೆತ್ತುವ ಕೆಲಸ ನಿಯಮಿತವಾಗಿ ನಡೆಯುತ್ತಲೇ ಇರುತ್ತದೆ. ಕಾಮಗಾರಿಯು ಸರಿಯಾಗಿ ನಡೆಯುತ್ತಿದೆ ಎನ್ನುವಂತಿಲ್ಲ. ಉಪ ಕಾಲುವೆಗಳ ಸ್ಥಿತಿ ಅನೇಕ ಕಡೆ ಚಿಂತಾಜನಕವಾಗಿದೆ ಎಂಬುದು ರೈತರ ಆರೋಪ.ಎಡದಂಡೆ ನಾಲೆಗೆ ಚನ್ನರಾಯಪಟ್ಟಣ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಬಳಿ ನಿರ್ಮಿಸಿರುವ ಜಾಕ್‌ವೆಲ್‌ನಿಂದ ನಾಲೆ ನೀರು ಎರಡು ಭಾಗಗಳಾಗಿ ಹರಿಯುತ್ತದೆ. ಬಾಗೂರು- ನವಿಲೆ ಸುರಂಗ ಮಾರ್ಗದ ಮೂಲಕ ತುಮಕೂರು ಜಿಲ್ಲೆಗೆ ನೀರು ಹರಿದರೆ. ಮತ್ತೊಂದು ನಾಲೆ ಶ್ರವಣಬೆಳಗೊಳದ ಸಮೀಪದಿಂದ ಮಂಡ್ಯ ಜಿಲ್ಲೆಗೆ ಹರಿಯುತ್ತದೆ.ಬಾಗೂರು- ನವಿಲೆ ಸುರಂಗ ಮಾರ್ಗ (9.50 ಕಿ.ಮೀ.) ಏಷ್ಯಾದ ಎರಡನೇ ಅತಿ ದೊಡ್ಡ ಸುರಂಗ ಎಂಬ ಹೆಗ್ಗಳಿಕೆ ಪಡೆದಿದೆ. ಈ ನಾಲೆಯಲ್ಲಿ ಅಲ್ಲಲ್ಲಿ ಹೂಳು ತುಂಬಿಕೊಂಡಿದೆ. ಅನೇಕ ಕಡೆ ಲೈನಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಪಟ್ಟಣ ಭಾಗದಲ್ಲಿ ನಾಲೆ ಹಾದು ಹೋಗಿರುವುದರಿಂದ ಜನರು ತ್ಯಾಜ್ಯಗಳನ್ನು ನಾಲೆಗೇ ಎಸೆಯುತ್ತಾರೆ. ಬೇಸಿಗೆಯಲ್ಲಿ ನೀರು ಹರಿಯದಿರುವುದರಿಂದ ಇಂಥ ಜಾಗದಲ್ಲಿ ಮೂಗು ಮುಚ್ಚಿ ಸಂಚರಿಸಬೇಕಿದೆ.ಉಪ ವಿತರಣಾ ನಾಲೆಗಳಲ್ಲಿ ಗಿಡ, ಗಂಟಿಗಳು ಬೆಳೆದು ನೀರು ಸರಾಗವಾಗಿ ಹರಿಯುತ್ತಿಲ್ಲ. ಹೇಮಾವತಿ ನಾಲೆಗಳ ಸ್ಥಿತಿಯಾದರೂ ಪರವಾಗಿಲ್ಲ, ಆದರೆ ಬೇಲೂರು ತಾಲ್ಲೂಕಿನ ಯಗಚಿ ಜಲಾಶಯದ ಎಡದಂಡೆ ನಾಲೆ ಮತ್ತು ಇದರ ವ್ಯಾಪ್ತಿಗೆ ಬರುವ ಹೊಸ ಕೂಡ್ಲೂರು ನಾಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿದೆ. ಹೊಸ ಕೂಡ್ಲೂರು ನಾಲೆಯ 22 ಕಿ.ಮೀ. ಉದ್ದಕ್ಕೂ ಗಿಡಗಂಟಿಗಳು ಬೆಳೆದಿದ್ದು, ನೀರು ಹರಿಯಲು ಅಡ್ಡಿಯುಂಟಾಗುತ್ತಿದೆ.

 

ಯಮಸಂಧಿ ಸಮೀಪದ ಕೂಡ್ಲೂರು ಬಳಿ ಹಿಂದೆ ಇದ್ದ ಒಡ್ಡಿನಿಂದ ಸುಮಾರು 30 ಕಿ.ಮೀ. ಉದ್ದಕ್ಕೆ ನಾಲೆ ನಿರ್ಮಾರ್ಮಿಸಲಾಗಿತ್ತು. ಯಗಚಿ ಅಣೆಕಟ್ಟೆ ನಿರ್ಮಾಣದ ನಂತರ ಈ ನಾಲೆ ಯಗಚಿ ಜಲಾಶಯ ವ್ಯಾಪ್ತಿಗೆ ಬಂತು. ಪ್ರಸಕ್ತ ಈ ನಾಲೆಯ ಮೂಲಕ 762 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕುತ್ತಿದೆ.

 

ಈ ನಾಲೆಯ ಸುಮಾರು 22 ಕಿ.ಮೀ. ಉದ್ದಕ್ಕೂ ಹೂಳು ತುಂಬಿದೆ. ಹೊಸದಾಗಿ ನಿರ್ಮಿಸಿದ 100 ಕಿ.ಮೀ. ಉದ್ದದ ಎಡದಂಡೆ ನಾಲೆಯಲ್ಲೂ ಅಲ್ಲಲ್ಲಿ ಹೂಳು ತುಂಬಿದೆ. 37 ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಸುವ ಉದ್ದೇಶದಿಂದ ಯಗಚಿ ಜಲಾಶಯ ನಿರ್ಮಿಸಿದ್ದರೂ, ಕಾಮಗಾರಿ ಪೂರ್ತಿಯಾಗದೆ 8 ಸಾವಿರ ಎಕರೆಗೆ ನೀರು ಹರಿಸಲಾಗುತ್ತಿದೆ.ಅರಕಲಗೂಡು ತಾಲ್ಲೂಕು ವ್ಯಾಪ್ತಿಯ ಕಟ್ಟೇಪುರ ಗ್ರಾಮದಲ್ಲಿ ಮೈಸೂರು ಅರಸರ ಕಾಲದಲ್ಲಿ (ಕ್ರಿ.ಶ. 1732ರಲ್ಲಿ) ಕಾವೇರಿ ನದಿಗೆ ನಿರ್ಮಿಸಿರುವ ಅಣೆಕಟ್ಟೆಯ ಸ್ಥಿತಿಯೂ ಈಗ ಹದಗೆಟ್ಟಿದೆ.  ಗರಿಷ್ಠ 55,970 ಕ್ಯೂಸೆಕ್‌ನೀರು ಹರಿವಿನ ಸಾಮರ್ಥ್ಯ ಹೊಂದಿ ರುವ ಈ ಅಣೆಕಟ್ಟೆ 318 ಮೀ. ಉದ್ದವಿದೆ.ಈ ಅಣೆಕಟ್ಟೆ ಎಡ ಮತ್ತು ಬಲದಂಡೆ ನಾಲೆಗಳ ಮೂಲಕ ಹಾಸನ ಜಿಲ್ಲೆಯ ಅರಕಲಗೂಡು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕು ಸೇರಿದಂತೆ ಒಟ್ಟು 8770 ಎಕರೆ (3549 ಹೆಕ್ಟೇರ್) ವಿಸ್ತಾರವಾದ ಭೂ ಪ್ರದೇಶಕ್ಕೆ ನೀರುಣಿಸಲಾಗುತ್ತಿದೆ.ಶತಮಾನ ಕಂಡಿರುವ ಈ ಅಣೆಕಟ್ಟೆ ಹಾರಂಗಿ ಇಲಾಖೆಯ ಸುಪರ್ದಿಗೆ ಬಂದ ನಂತರ ನಿರ್ವಹಣೆಯಿಲ್ಲದೇ ಶಿಥಿಲಾವಸ್ಥೆಗೆ ತಲುಪಿತು. ಮಳೆಗಾಲದಲ್ಲಿ ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ಹೊರ ಬಿಟ್ಟಾಗ ಈ ಅಣೆಕಟ್ಟೆ ಮೇಲೆ ಭಾರಿ ಒತ್ತಡ ಉಂಟಾಗುತ್ತದೆ.ಕೆಲವು ವರ್ಷಗಳ ಹಿಂದೆ ಕೋಡಿಯಲ್ಲಿ ಇಳಿಜಾರಿಗೆ ಹಾಸಿರುವ ದೊಡ್ಡ ದೊಡ್ಡ ಬಂಡೆ ಕಲ್ಲುಗಳು ಒಡೆದು ನದಿ ಪಾಲಾಗಿದ್ದವು. ತಡೆಗೋಡೆಗಳಲ್ಲಿ ಹಲವೆಡೆ ಬಿರುಕು ಕಾಣಿಸಿತ್ತು. ಕಳೆದ ವರ್ಷ ನೀರಿನ ರಭಸಕ್ಕೆ ತೂಬಿನ ಕಬ್ಬಿಣದ ರಾಡುಗಳು ಮುರಿದಿದ್ದವು. ಸರ್ಕಾರ ದುರಸ್ತಿಗಾಗಿ ನೀಡುವ ಹಣ ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಕಾಮಗಾರಿ ಕಳಪೆ

ರೈತರ ಒತ್ತಾಯವನ್ನು ಪರಿಗಣಿಸಿ ಸರ್ಕಾರ 2010ರಲ್ಲಿ ಈ ಅಣೆಕಟ್ಟೆ ಮತ್ತು ನಾಲೆಗಳ ಆಧುನೀಕರಣಕ್ಕೆ 121.30 ಕೋಟಿ ರೂಪಾಯಿ ಬಿಡುಗಡೆ ಮಾಡಿತು. 2011ರ ಫೆಬ್ರವರಿಯಲ್ಲಿ ಕಾಮಗಾರಿಯೂ ಆರಂಭವಾಗಿತ್ತು. ಆದರೆ ರೈತರ ಹಲವು ವರ್ಷಗಳ ನಿರೀಕ್ಷೆ ಹುಸಿಯಾಗಲು ಹೆಚ್ಚು ಕಾಲ ಬೇಕಾಗಲಿಲ್ಲ.ಶತಮಾನಗಳಷ್ಟು ಹಳೆಯ ಈ ನಾಲೆಗಳ ಕಾಮಗಾರಿ ಅತಿ ಕಳಪೆಯಾಗಿದೆ ಎಂಬುದು ಕೆಲವೇ ದಿನಗಳಲ್ಲಿ ಸಾಬೀತಾಯಿತು. ಇತ್ತ ಕಾಂಕ್ರೀಟ್ ಲೈನಿಂಗ್ ಹಾಕುತ್ತ ಹೋದರೆ ಅತ್ತ ಅದು ಕುಸಿಯುತ್ತಲೇ ಇತ್ತು. ರೈತರು ಪ್ರತಿಭಟನೆಗೆ ಇಳಿದರು. ಜನಪ್ರತಿನಿಧಿಗಳು ಸುಮ್ಮನಿದ್ದ ಪರಿಣಾಮ ಅದೇ ಗುಣಮಟ್ಟದ ಕಾಮಗಾರಿ ಮುಂದುವರಿದಿದೆ.ನಾಲೆಗಳಲ್ಲಿ ಉದ್ದಗಲಕ್ಕೂ ಗಿಡಗಂಟಿಗಳು ಬೆಳೆದಿವೆ. ಹೂಳು ತುಂಬಿಕೊಂಡು ನಾಲೆ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಉಂಟಾಗಿತ್ತು. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ಏರಿ ಮೇಲೆ ನುಗ್ಗುತ್ತಿತ್ತು. ಹೀಗಾಗಿ ನಾಲೆಯಲ್ಲಿ ನೀರು ಹರಿದರೂ ಕೊನೆಯ ಹಂತದವರೆಗೆ ತಲುಪದೇ ಅಚ್ಚುಕಟ್ಟು ವ್ಯಾಪ್ತಿಯ ರೈತರು ಗೋಳಾಡುತ್ತಿದ್ದಾರೆ.

 

ಏನೇ ಆದರೂ ನಾಲೆಗಳ ಆಧುನೀಕರಣ ಕಾಮಗಾರಿ ನಡೆದರೆ ಕೊನೆಯ ಭಾಗದವರೆಗೆ ನೀರು ಬರಬಹುದು ಎಂಬ ನಿರೀಕ್ಷೆ ರೈತರಲ್ಲಿದೆ. ಇದರ ಜತೆಯಲ್ಲೇ ಗುಣಮಟ್ಟದ ಕಾಮಗಾರಿಗೆ ಗಮನ ನೀಡಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry