ಗುರುವಾರ , ಮೇ 19, 2022
23 °C

ಹಿಂಜರಿಕೆ ಬಿಡಿ, ಸರ್ವರೊಂದಿಗೆ ಕೂಡಿ ಬಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ದಲಿತರು ಹಿಂಜರಿಕೆ ಬಿಟ್ಟು ಎಲ್ಲರೊಂದಿಗೆ ಕೂಡಿ ಬಾಳಬೇಕಿದೆ. ಸಂವಿಧಾನದತ್ತ ಸವಲತ್ತುಗಳನ್ನು ಪಡೆಯಲು ಅಕ್ಷರದ ಅರಿವು ಮೂಡಿಸಿಕೊಳ್ಳಬೇಕು. ಪ್ರಬುದ್ಧ ಭಾರತ ನಿರ್ಮಾಣಕ್ಕೆ ಬಾಬಾ ಸಾಹೇಬ ಅಂಬೇಡ್ಕರ್ ಆದರ್ಶಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದು  ಅರಣ್ಯ ಸಂರಕ್ಷಣಾಧಿಕಾರಿ ಆರ್.ಶಿವರಾಮಯ್ಯ ಸಲಹೆ ನೀಡಿದರು.ಅವರು ತಾಲ್ಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ವೇದಿಕೆ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಡಾ.ಬಿ.ಆರ್.ಅಂಬೇಡ್ಕರ್ ಕೇವಲ ಒಂದು ಜಾತಿಗೆ ಸೀಮಿತ ಮಾಡುವುದು ಬೇಡ. ರಾಷ್ಟ್ರ ನಾಯಕರ ಜಯಂತಿಯನ್ನು ನಾಡ ಹಬ್ಬವನ್ನಾಗಿ ಎಲ್ಲ ಸಮುದಾಯಗಳವರು ಸೇರಿ ಆಚರಿಸಬೇಕಿದೆ. ವಾಲ್ಮೀಕಿ, ಕೃಷ್ಣ, ಕನಕ, ವ್ಯಾಸ, ಬುದ್ದ, ಬಸವಣ್ಣ, ಜ್ಯೋತಿ ಬಾ ಪುಲೆ, ಪೆರಿಯಾರ್, ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ನಾವೆಲ್ಲರೂ ಅಧ್ಯಯನ ಮಾಡಿ, ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಮಾಜ ಸೇವಾ ಕಾರ್ಯಕರ್ತ ಬಿ.ವಿ.ಜಯರಾಮು ತಿಳಿಸಿದರು.ಮೂಢನಂಬಿಕೆ ಬಿಡಿ. ಅಕ್ಷರ ಕಲಿಯಿರಿ. ಸಂಘಟಿತರಾಗಿ ಅಂಬೇಡ್ಕರ್ ಅವರು ತೋರಿಸಿರುವ ಹೋರಾಟದ ದಾರಿಯುಲ್ಲಿ ನಡೆಯಿರಿ ಎಂದು ಗ್ರಾ.ಪಂ.ಸದಸ್ಯ ಚಕ್ರಬಾವಿ ಬೈರಪ್ಪ ತಿಳಿಸಿದರು.`ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಇತರ ಸಮುದಾಯಗಳವರು ಧ್ವನಿ ಎತ್ತಬೇಕು. ತ್ಯಾಗ ಬಲಿದಾನಗಳ ಮೂಲಕ ಶೋಷಿತರು ಗಳಿಸಿರುವ ಸ್ವಾತಂತ್ರ್ಯವನ್ನು ಮನುವಾದಿಗಳಿಂದ ರಕ್ಷಿಸಬೇಕಿದೆ~ ಎಂದು ಜವಹರಲಾಲ್ ನೆಹರು ವಿ.ವಿ.ಯ ಪ್ರಾಧ್ಯಾಪಕ ಡಾ.ಅಶೋಕ್ ಚಕ್ರವರ್ತಿ ನುಡಿದರು. ಶೋಷಿತರ ಜೀವನವನ್ನು ಉತ್ತಮಪಡಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರ ನಾಯಕರೆಂಬ ವಾದ ಸರಿಯಲ್ಲ ಎಂದು ಸಾಮಾಜಿಕ ಪರಿವರ್ತನಾ ಚಳುವಳಿಯ ಚಿಂತಕ ಚೆಂಗಪ್ಪ ತಿಳಿಸಿದರು. ದಲಿತರ ಕಾಲೊನಿಗಳಿಗೆ ಇಂದಿಗೂ ಗ್ರಾಮದೇವತೆಗಳು ಬರುವುದಿಲ್ಲ. ಚಿಂತಿಸಬೇಡಿ, ಎಲ್ಲಾ ವರ್ಗಗಳ ಶೋಷಿತರ ಪಾಲಿನ ದೇವರಂತಿರುವ ಡಾ.ಬಿ.ಆರ್.ಅಂಬೇಡ್ಕರ್ ಜೀವನದ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡಿ ಎಂದು ರಾಜ್ಯ ಬಿ.ಎಸ್.ಎನ್.ಎಲ್.ನೌಕರರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಮನವಿ ಮಾಡಿದರು.ತಾಲ್ಲುಕು ಪಂಚಾಯಿತಿ ಸದಸ್ಯ ಕಾಂತರಾಜು ಮಾತನಾಡಿ, ಅಂಬೇಡ್ಕರ್ ಬದುಕು ನಮಗೆಲ್ಲ ಆದರ್ಶನೀಯವಾಗಬೇಕಿದೆ ಎಂದರು. ದಲಿತರ ಕಾಲೊನಿಯಲ್ಲಿರುವ ದೇವರ ಗುಡಿ ದುರಸ್ತಿಗೆ ರೂ.20 ಸಾವಿರ ನೀಡುವುದಾಗಿ ಗ್ರಾಮದ ಮುಖಂಡ ಗುಡ್ಡೇಗೌಡ ತಿಳಿಸಿದರು.ತಾಲ್ಲೂಕು ಚಲವಾದಿ ಮಹಾಸಭಾ ಅಧ್ಯಕ್ಷ ಅಕ್ಕಿನಾಳ್ ವೆಂಕಟೇಶ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರಯ್ಯ, ಸದಸ್ಯೆ ಶಾಂತಮ್ಮ ಗುಡ್ಡೇಗೌಡ, ವೇದಿಕೆಯ ಮುಖಂಡರಾದ ರಾ

ಮಯ್ಯ, ಚಂದ್ರು, ಸಂಜೀವಮೂರ್ತಿ, ಪರಮೇಶ್, ಗಂಗಬೋರಯ್ಯ ಇತರರು ವೇದಿಕೆಯಲ್ಲಿದ್ದರು.

ಲೇಖಕ ಟಿ.ಎಂ.ಶ್ರೀನಿವಾಸ್ ಮತ್ತು ಡಾ.ರವಿಕುಮಾರ್ ಅವರಿಗೆ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂಬೇಡ್ಕರ್ ಅಲಂಕೃತ ಭಾವಚಿತ್ರವನ್ನು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಗ್ರಾಮಸ್ಥರೆಲ್ಲರೂ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.