ಬುಧವಾರ, ಏಪ್ರಿಲ್ 14, 2021
24 °C

ಹಿಂದೂ-ಮುಸ್ಲಿಂ: ಸೌಹಾರ್ದ ಸಂವಹನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕೋಮು ಸೌಹಾರ್ದಕ್ಕೆ ಹೆಸರಾಗಿರುವ ನಗರ ಬೆಳೆದಂತೆ ಹಿಂದೂ-ಮುಸ್ಲಿಂ ಸಮುದಾಯದವರ ನಡುವೆ ಸೌಹಾರ್ದ ಸಂವಹನದ ಕೊರತೆ ಉಂಟಾಗುತ್ತಿದೆ. ಇದೇ ವೇಳೆ, ಕೆಲವು ಕಿಡಿಗೇಡಿಗಳಿಂದ ಕಾನೂನು ಸುವ್ಯವಸ್ಥೆಗೂ ಭಂಗ ಬಂದು ಶಾಂತಿ ಕದಡುತ್ತಿದೆ. ಈ ಸನ್ನಿವೇಶ ಬದಲಿಸುವುದು ಅತ್ಯಗತ್ಯ ಎಂದು ಎರಡೂ ಸಮುದಾಯದ ಮುಖಂಡರು ಅಭಿಪ್ರಾಯಪಟ್ಟರು.ರಂಜಾನ್ ಹಬ್ಬದ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಜಿಲ್ಲಾ ಮಟ್ಟದ ಶಾಂತಿ ಸಮಿತಿ ಸಭೆಯಲ್ಲಿ ಬಹುತೇಕ ಪ್ರಮುಖರು, ಕಿಡಿಗೇಡಿಗಳ ನಿಯಂತ್ರಣ ಮತ್ತು ಎರಡು ಕೋಮಿನ ನಡುವೆ ಸೌಹಾರ್ದತೆ ಮೂಡಿಸಬೇಕು. ಶಾಂತಿ ಭಂಗ ಮಾಡುವರು ಯಾರೇ ಆಗಿರಲಿ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ರಂಜಾನ್ ಸಮಯದಲ್ಲಿ ಹಿಂದೂಗಳನ್ನು ಭೋಜನ ಕೂಟಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ, ಮುಸ್ಲಿಂರು ಸಸ್ಯಾಹಾರಿಗಳಿಗಾಗಿಯೇ ಅಡುಗೆ ಭಟ್ಟರಿಂದ ಪ್ರತ್ಯೇಕ ಅಡುಗೆ ಮಾಡಿಸುತ್ತಾರೆ. ಹಬ್ಬಗಳಷ್ಟೇ ಅಲ್ಲದೆ ಸಾಮಾನ್ಯ ಸಂದರ್ಭಗಳಲ್ಲೂ ಪರಸ್ಪರ ನೋವಿಗೆ ಮಿಡಿಯುತ್ತಾರೆ. ಆದರೆ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಕಿಡಿಗೇಡಿಗಳಿಂದ ಎರಡೂ ಸಮುದಾಯ ನಡುವೆ ಶಾಂತಿ ಕದಡತ್ತಲೇ ಇದೆ. ಮಹಿಳೆಯರು, ಮಕ್ಕಳು ಎಲ್ಲರೂ ಆತಂಕ ಎದುರಿಸಬೇಕಾಗಿದೆ ಎಂದು ವಿಷಾದಿಸಿದರು.ವಾರ್ಡ್ ಸಭೆ: ಶಾಂತಿ ಸೌಹಾರ್ದತೆ ಕಾಪಾಡುವ ಸಲುವಾಗಿ ವಾರ್ಡ್ ಮಟ್ಟದಲ್ಲಿ ಶಾಂತಿ ಸಭೆ ನಡೆಸಬೇಕು ಎಂದು ಪ್ರತಿ ಸಭೆಯಲ್ಲೂ ಆಗ್ರಹಿಸಲಾಗುತ್ತಿದೆ. ಆದರೆ ಜಿಲ್ಲಾಡಳಿತ ಆ ಬಗ್ಗೆ ಗಂಭೀರ ಪ್ರಯತ್ನ ನಡೆಸಿಲ್ಲ ಎಂದು ನಗರಸಭೆ ಸದಸ್ಯ ಜಾಫರ್, ಬಜರಂಗದಳದ ಮುಕುಂದ್ ಅಸಮಾಧಾನ ವ್ಯಕ್ತಪಡಿಸಿದರು.ಕಿಡಿಗೇಡಿಗಳನ್ನು ನಿಯಂತ್ರಿಸಬೇಕು ಎಂದು ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಅಭಿಪ್ರಾಯಪಟ್ಟರು. ರಾತ್ರಿ ವೇಳೆಯಲ್ಲಿ ಯುವಕರು ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಅಂಥವರು ಮಾಡುವ ಕೆಲಸಗಳಿಂದ ಹಿರಿಯರು ಸಮಸ್ಯೆ ಎದುರಿಸಬೇಕಾಗಿದೆ. ಬೀಟ್ ಪೊಲೀಸರ ಸಂಖ್ಯೆ ಹೆಚ್ಚಿಸುವುದು ಅಗತ್ಯ ಎಂದು ಜಯಂತಿಲಾಲ್ ಸಲಹೆ ನೀಡಿದರು.ರಾತ್ರಿ ವೇಳೆ ನಿಯಮ ಮೀರಿ ಅಧಿಕ ಹೊತ್ತಿನವರೆಗೂ ಟೀ ಹೋಟೆಲ್, ಬಾರ್‌ಗಳನ್ನು ತೆರೆದಿರುವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಮಯ್ಯ ಆಗ್ರಹಿಸಿದರು.ಕಟೌಟ್ ಹಾವಳಿ: ನಗರದಲ್ಲಿ ಅನಿಯಮಿತವಾಗಿ ಅಳವಡಿಸಲಾಗುವ ಫ್ಲೆಕ್ಸ್, ಬ್ಯಾನರ್‌ಗಳಿಂದಲೇ ಶಾಂತಿ ಕದಡುವ ಸನ್ನಿವೇಶ ನಿರ್ಮಾಣವಾಗಿದೆ ಎಂಬುದು ಬಹುತೇಕರ ದೂರಾಗಿತ್ತು. ವಕ್ಫ್ ಮಂಡಳಿ ಅಧ್ಯಕ್ಷ ಬೆಗ್ಲಿ ಸಿರಾಜ್ ಕಟೌಟ್‌ಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸೂಕ್ತ ಕ್ರಮ: ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಭೆಯಲ್ಲಿ ಮೂಡಿ ಬಂದಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಎಸ್‌ಪಿ ಡಾ.ರಾಮನಿವಾಸ್ ಸಪೆಟ್ ಭರವಸೆ ನೀಡಿದರು.ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಕೋಮು ಸೌಹಾರ್ದತೆ ರಕ್ಷಣೆಗೆ ಜಿಲ್ಲಾಡಳಿತ ಬದ್ಧ ಎಂದರು. ಎಎಸ್‌ಪಿ ಎಚ್.ಆರ್.ಭಗವಾನ್‌ದಾಸ್ ಪ್ರಾಸ್ತಾವಿಕ ಮಾತನಾಡಿದರು.ಜಿ.ಪಂ.ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ನಗರಸಭೆ ಅಧ್ಯಕ್ಷೆ ನಾಜಿಯಾ, ಸದಸ್ಯರಾದ ಸಲಾವುದ್ದೀನ್‌ಬಾಬು, ಲಾಲ್‌ಬಹಾದೂರ್ ಶಾಸ್ತ್ರಿ, ಆಯುಕ್ತ ಮಹೇಂದ್ರಕುಮಾರ್, ಶ್ರೀಕೃಷ್ಣ, ರವಿ, ಫಲ್ಗುಣ, ಮಂಜುನಾಥ್, ಅಂಜುಮನ್ ಇಸ್ಲಾಮಿಯಾ ಅಧ್ಯಕ್ಷ ಕೆ.ಜಮೀರ್ ಅಹ್ಮದ್, ಸೈಫುಲ್ಲಾ, ತಜಮುಲ್ ಪಾಷಾ, ಮೌಸಾನಿ, ಶರ್ಫದ್ದೀನ್, ಆಸಿಫ್, ಎಂ.ರವಿಕುಮಾರ್, ಮೊಹ್ಮದ್‌ಉಸ್ಮಲ್ ಷರೀಫ್, ಪಂಡಿತ್ ಮುನಿವೆಂಕಟಪ್ಪ, ವಕ್ಕಲೇರಿ ರಾಜಪ್ಪ, ಧನಮಟ್ಟನಹಳ್ಳಿ ವೆಂಕಟೇಶ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶಕುಮಾರ್, ಇಮ್ರಾನ್‌ಖಾನ್, ಕೆಂಬೋಡಿ ನಾರಾಯಣಸ್ವಾಮಿ, ನರಸಿಂಹಮೂರ್ತಿ, ಕೃಷ್ಣೇಗೌಡ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.