ಶನಿವಾರ, ಮೇ 21, 2022
25 °C

ಹಿರಿಯೂರಿನ ತೇರು ಮಲ್ಲೇಶ್ವರ

ಎನ್.ಎಲ್. ಬಸವರಾಜ್ Updated:

ಅಕ್ಷರ ಗಾತ್ರ : | |

ಹಿರಿಯೂರಿನ ತೇರು ಮಲ್ಲೇಶ್ವರ ಸ್ವಾಮಿ ದೇವಸ್ಥಾನ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಮಲ್ಲೇಶ್ವರ ಸ್ವಾಮಿಯ ದರ್ಶನ ಕಾಶಿಯ ವಿಶ್ವನಾಥನ ದರ್ಶನಕ್ಕೆ ಸಮ ಎಂಬ ನಂಬಿಕೆ ಹಿರಿಯೂರು ಸುತ್ತ ಮುತ್ತಲಿನ ಜನರಲ್ಲಿದೆ.ತೇರು ಮಲ್ಲೇಶ್ವರನ ದರ್ಶನಕ್ಕೆ ಚಿತ್ರದುರ್ಗ ಹಾಗೂ ಸುತ್ತಲಿನ ಜಿಲ್ಲೆಗಳು, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಂದ ಸಾವಿರಾರು ಜನರು ಬರುತ್ತಾರೆ. ಪ್ರತಿ ವರ್ಷ ಫೆಬ್ರುವರಿ ತಿಂಗಳಲ್ಲಿ ತೇರು ಮಲ್ಲೇಶ್ವರನ ಜಾತ್ರೆ ಅತ್ಯಂತ ವೈಭವದಿಂದ ನಡೆಯುತ್ತದೆ.ಹಿರಿಯೂರಿನ ಪಾಳೇಗಾರರಾಗಿದ್ದ ರಾಜಾ ಕೆಂಚಪ್ಪನಾಯಕರು 1446ರಲ್ಲಿ ದ್ರಾವಿಡ ಶೈಲಿಯಲ್ಲಿ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದರು ಎನ್ನಲಾಗಿದೆ. ಗೋಪುರದ ಮೇಲಕ್ಕೆ ಹತ್ತಿ ಹೋಗಲು  ಒಳಭಾಗದಿಂದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಗೋಪುರದ ಎದುರಿಗೆ 45 ಅಡಿ ಎತ್ತರದ ಎರಡು ಉಯ್ಯಾಲೆ ಕಂಬಗಳಿವೆ. ಮಹಾದ್ವಾರವನ್ನು ದಾಟಿ ಒಳಕ್ಕೆ ಹೋದರೆ, ಮೂರು ಕಡೆ ಪ್ರವೇಶವಿರುವ ಮುಖಮಂಟಪ ಇದೆ. ಮಂಟಪದ ಹೊರಮೈ ಮೇಲೆ ಗೋಪಿಕೆಯರ ಜೊತೆ ಕೃಷ್ಣನ ರಾಸಲೀಲೆಗಳ ಕೆತ್ತನೆಗಳಿವೆ. ಮುಖ ಮಂಟಪದ  ಒಳ ಭಾಗದಲ್ಲಿ ಗಿರಿಜಾ ಕಲ್ಯಾಣ, ಕಿರಾತಾರ್ಜುನ ವಿಜಯ, ಗೋಕರ್ಣ ಮಹಿಮೆಯ ಚಿತ್ರಗಳಿವೆ.ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಕೋರಿಕೆಯ ಮೇರೆಗೆ ಶ್ರೀಶೈಲ ಮಲ್ಲಿಕಾರ್ಜುನ ಮಲ್ಲೇಶ್ವರನ ಹೆಸರಿನಲ್ಲಿ ಇಲ್ಲಿ ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ. ಗರ್ಭಗುಡಿಯಲ್ಲಿ ಉದ್ಭವ ಲಿಂಗವಿದೆ.ಮಳೆಯ ಪ್ರವಾಹದಲ್ಲಿ ಕೊಚ್ಚಿ ಬಂದ ಹೊಸದುರ್ಗ ತಾಲ್ಲೂಕಿನ ಮಲ್ಲೇಶ್ವರ ಸ್ವಾಮಿ ರಥ ಹಿರಿಯೂರಿನ ವೇದಾವತಿ ನದಿ ದಂಡೆಯಲ್ಲಿ ಬಂದು ನಿಂತಿತ್ತು. ಅದನ್ನು ಮಲ್ಲೇಶ್ವರ ದೇವಸ್ಥಾನಕ್ಕೆ ತರಲಾಯಿತು. ಹೀಗಾಗಿ ಈ  ದೇವ ಸ್ಥಾನಕ್ಕೆ ತೇರು ಮಲ್ಲೇಶ್ವರ ಸ್ವಾಮಿ ಎಂಬ ಹೆಸರು ಬಂತು ಎಂದೂ ಹೇಳಲಾಗಿದೆ.ಶಿವಧನಸ್ಸು: ದೇವಸ್ಥಾನದಲ್ಲಿ 20 ಅಡಿ ಉದ್ದದ ಶಿವ ಧನಸ್ಸು ಇದೆ. ರಥೋತ್ಸವದ ದಿನ ಅದನ್ನು ವೇದಾವತಿ ನದಿಗೆ ಒಯ್ದು ಅದನ್ನು ತೊಳೆದು ಪೂಜೆ ಸಲ್ಲಿಸುತ್ತಾರೆ. ಧನಸ್ಸನ್ನು ಹಿಂದಕ್ಕೆ ತರುವಾಗ ಅದು ಹಗುರವಾಗಿದ್ದರೆ  ಉತ್ತಮ ಮಳೆ-ಬೆಳೆಯಾಗುತ್ತದೆಂದೂ, ಭಾರವಾಗಿದ್ದರೆ ಬರಗಾಲ ಬರುತ್ತದೆ ಎಂದು ಜನರು ನಂಬುತ್ತಾರೆ. ಮಕ್ಕಳಿಲ್ಲದವರು ಧನಸ್ಸಿಗೆ ಹೆಗಲು ಕೊಟ್ಟರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ಈ ಧನಸ್ಸನ್ನು ಶರಣೆ ಹೇಮರೆಡ್ಡಿ ಮಲ್ಲಮ್ಮ ಊರುಗೋಲಾಗಿ ಬಳಸುತ್ತಿದ್ದಳು ಎನ್ನಲಾಗಿದೆ.ವಿಶೆಷ ಪೂಜೆ: ಶ್ರಾವಣ, ಧನುರ್ಮಾಸ, ಕಾರ್ತೀಕ ಮಾಸಗಳಲ್ಲಿ ಹಾಗೂ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವರಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಕಾರ್ತೀಕ ಮಾಸದಲ್ಲಿ ಪ್ರತಿ ಸಂಜೆ ಭಕ್ತರ ಹೆಸರಿನಲ್ಲಿ ನಡೆಸುವ ‘ದೀಪಾರಾಧನೆ’ ತೇರು ಮಲ್ಲೇಶ್ವರ ದೇವಸ್ಥಾನದ ವಿಶೇಷ ಆಚರಣೆ. ದೇವಸ್ಥಾನ ಬೆಳಿಗ್ಗೆ ಆರು ಗಂಟೆಗೆ ತೆರೆಯುತ್ತದೆ. ಸ್ವಾಮಿಗೆ ರುದ್ರಾಭಿಷೇಕ ಮಾಡಿಸಲು ಬಯಸುವ ಭಕ್ತರು ಒಂದು ದಿನ ಮೊದಲೇ ಅರ್ಚಕರಿಗೆ ತಿಳಿಸಬೇಕು. ರುದ್ರಾಭಿಷೇಕಕ್ಕೆ 101 ರೂ, ಪಂಚಾಮೃತ  ಅಭಿಷೇಕ್ಕೆ 50 ರೂ. ಹಾಗೂ ಕುಂಕುಮಾರ್ಚನೆಗೆ 25 ರೂ ನಿಗದಿ ಪಡಿಸಲಾಗಿದೆ. ಧನುರ್ಮಾಸದಲ್ಲಿ ಒಂದು ತಿಂಗಳು ಪ್ರಾತಃಕಾಲದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ನವರಾತ್ರಿಯ ಸಮಯದಲ್ಲಿ 9 ದಿನಗಳ ಕಾಲ ವಿಶೇಷ ಪೂಜೆ ನಡೆಯುತ್ತದೆ.ದೇವಸ್ಥಾನದಲ್ಲಿ ಸರಳ ವಿವಾಹಕ್ಕೆ ಅವಕಾಶವಿದೆ. ಮದುವೆಗೆ 500 ರೂ ಶುಲ್ಕ ನಿಗದಿ ಮಾಡಲಾಗಿದೆ. ವದೂವರರ ವಯಸ್ಸು ಹಾಗೂ ಇತರ ವಿಷಯಗಳ ಆಯಾ ತಹಸೀಲ್ದಾರರಿಂದ ಪ್ರಮಾಣ ಪತ್ರ ತರಬೇಕು. ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಇಲ್ಲ. ವಾಸ್ತವ್ಯಕ್ಕೆ ಹಿರಿಯೂರಿನಲ್ಲಿ ಹೋಟೆಲ್‌ಗಳಿವೆ.ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಬರುವವರು ಸಂಪರ್ಕಿಬೇಕಾದ ಮೊಬೈಲ್ ನಂಬರ್‌ಗಳು: 9945008908, 9448079091. ಹಿರಿಯೂರು ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಬಸ್ ನಿಲ್ದಾಣದಿಂದ ದೇವಸ್ಥಾನ ಎರಡು ಕಿಲೋ ಮೀಟರ್ ದೂರದಲ್ಲಿದೆ.

     

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.