ಶುಕ್ರವಾರ, ಜನವರಿ 24, 2020
21 °C

ಹೂವಿನ ಕೊಳ್ಳದಲಿ ವಿಹಾರ

–ಪದ್ಮಾ ಶ್ರೀರಾಮ Updated:

ಅಕ್ಷರ ಗಾತ್ರ : | |

ಹೂವಿನ ಕೊಳ್ಳದಲಿ ವಿಹಾರ

ಹಿ  ಮಾಲಯದಲ್ಲಿರುವ ಹೂವಿನ ಕಣಿವೆಯನ್ನು ನೋಡಬೇಕೆನ್ನುವುದು ನನ್ನ ಬಹುದಿನದ ಆಸೆ. ಆದರೆ ಈ ವರ್ಷ ಆ ಪರಿಸರದಲ್ಲಿ ಸಂಭವಿಸಿದ ದುರ್ಘಟನೆಗಳಿಂದ ಆ ಕಡೆ ಹೆಜ್ಜೆ ಇಡಲು ಏನೋ ಅಳುಕು. ಹೀಗಿರುವಾಗ ಅಕಸ್ಮಾತ್ ನಮ್ಮ ನೆರೆನಾಡಾದ ಮಹಾರಾಷ್ಟ್ರದಲ್ಲಿ ಒಂದು ಹೂವಿನ ಕಣಿವೆ ಇದೆ ಎಂದು ಓದಿದೆನು. ಆಹಾ! ಇಲ್ಲಾದರೂ ನಮ್ಮ ಆಸೆ ಪೂರೈಸಿಕೊಳ್ಳಬಹುದಲ್ಲಾ ಎಂದೆಣಿಸಿ ನನ್ನ ಪುಟ್ಟ ಗೆಳತಿ ಸಾಂಚಿತಾ ಜೊತೆ ಹೊರಟೇ ಬಿಟ್ಟೆ.ಮಹಾರಾಷ್ಟ್ರ ರಾಜ್ಯದ ಸತಾರ ಪಟ್ಟಣದಿಂದ ೨೨ ಕಿ.ಮೀ. ದೂರದಲ್ಲಿ ಸಹ್ಯಾದ್ರಿ ಶ್ರೇಣಿಯಲ್ಲಿ ಕಾಸ್ ಪಟಾರ್ ಎಂಬ ಪ್ರದೇಶವಿದೆ. ಪಟಾರ್ ಎಂದರೆ ಪ್ರಸ್ಥಭೂಮಿ. ಇಲ್ಲಿ ಪ್ರತಿ ವರ್ಷ ಆಗಸ್ಟ್–ಅಕ್ಟೋಬರ್ ಅಧಿಯಲ್ಲಿ ವನಸುಮಗಳ ಜಗತ್ತಿನ ಕದ ತೆರೆಯುವುದು.

ಸತಾರ ಊರಿನಿಂದ ಕಾಸ್‌ಪಟಾರ್‌ಗೆ ಹೋಗುವ ಮಾರ್ಗ ಬಹಳ ಮನೋಹರ. ದೂರದಲ್ಲಿ ಕಣ್ಣಿಗೆ ತಂಪೆರೆವ ಹಸಿರುಬೆಟ್ಟಗಳ ಮಾಲೆ, ನಡುವೆ ಪಾತಾಳದಲ್ಲಿ ಶುಭ್ರ ನೀರಿನ ಹಾಳೆಗಳಂತಿರುವ ಸರೋವರಗಳನ್ನು ನೋಡುತ್ತ ಸಾಗಿದರೆ, ಅಲ್ಲಲ್ಲಿ ಗುಂಪಾಗಿ, ಇಳಿಜಾರಿನಲ್ಲಿ ಹೊಲವಾಗಿ, ಇದ್ದಕ್ಕಿದ್ದಂತೆ ಒಂಟಿಯಾಗಿ, ಜಂಟಿಯಾಗಿ ಕಣ್ಮನಗಳನ್ನು ಸೆಳೆವ ಸೇವಂತಿಗೆ ಜಾತಿಯ ಹಳದಿ ಹೂಗಳ ಗಿಡಗಳು ಕಾಣಸಿಗುತ್ತವೆ.ದಾರಿಯ ಸೊಬಗನ್ನು ಹೆಚ್ಚಿಸುವ ಈ ಹಳದಿ ಹೂಗಳನ್ನು ಸಸ್ಯಶಾಸ್ತ್ರೀಯವಾಗಿ ‘ಸಿನೇಶಿಯಾ ಗ್ರಹಾಮಿ’ ಎಂಬ ಹೆಸರಿನಿಂದ ಗುರುತಿಸುತ್ತಾರೆ. ೧೮೩೦ರ ಸುಮಾರಿನಲ್ಲಿ ಜಾನ್‌ಗ್ರಹಾಂ ಎನ್ನುವ ಬ್ರಿಟಿಷ್ ಡೆಪ್ಯುಟಿ ಪೋಸ್ಟ್ ಮಾಸ್ಟರ್ ಜನರಲ್ ಈ ಸ್ಥಳದಲ್ಲಿದ್ದರು. ಇವರು ಪಶ್ಚಿಮ ಘಟ್ಟಗಳ ಸಸ್ಯಗಳ ಬಗ್ಗೆ ನಡೆಸಿದ ವಿಶೇಷ ಅಧ್ಯಯನವನ್ನು ಸ್ಮರಿಸಿ, ಈ ಹಳದಿ ಹೂವಿಗೆ ಸಿನೆಶಿಯೊಗ್ರಹಾಮಿ ಎಂದು ಆತನ ಹೆಸರನ್ನು ಕೊಟ್ಟಿದ್ದಾರೆ.ಹಸಿರನ್ನು ಕಣ್ಣು ತುಂಬಿಕೊಳ್ಳುತ್ತ ತುತ್ತ ತುದಿಗೆ ಹೋದಾಗ ಒಂದು ಅತಿ ವಿಸ್ತಾರವಾದ ಸಮತಟ್ಟಾದ ಬಯಲಿಗೆ ಬಂದು ಮುಟ್ಟುತ್ತೇವೆ. ಇದೇ ಕಾಸ್ ಪಟಾರ್, ಮಹಾರಾಷ್ಟ್ರೀಯರು ಇದನ್ನು ಇನ್ನೊಂದು ‘ವ್ಯಾಲಿ ಆಫ್ ಫ್ಲವರ್ಸ್‌’ ಎನ್ನುತ್ತಾರೆ. ಆದರೆ ನನಗನ್ನಿಸುವುದು ಇದು ಪುಷ್ಪಗಳ ಸಮತಳ. ಇದು ವಿವಿಧ ವಿನ್ಯಾಸದ, ಮುಟ್ಟಿ ಕೀಳಬಾರದ, ನೋಡಿ ಆನಂದ, ಅಚ್ಚರಿಗಳನ್ನು ಅನುಭವಿಸಬೇಕಾದ ತರತರದ ಹೂವುಗಳ ಆಡುಂಬೋಲ.ಸುಮಾರು ಸಾವಿರ ಹೆಕ್ಟೇರ್ ವೈಶಾಲ್ಯ ಹೊಂದಿರುವ ಈ ಸಮತಟ್ಟು ಭೂಮಿಗೆ ತಂತಿಬೇಲಿ ಹಾಕಿದ್ದಾರೆ. ಒಳಹೊಕ್ಕರೆ ಆಗಲೇ ಜನರಿದ್ದಾರೆ! ಕೆಲವರು ಮಂಡಿ, ಕುಂಡಿ ಊರಿ ನೆಲಕ್ಕೆ ತಮ್ಮ ಕ್ಯಾಮೆರಾ ಜೂಮ್‌ಅನ್ನು ಗುರಿಯಾಗಿಸಿದ್ದಾರೆ. ಇದೇನು ಹೀಗೆ ಅಂದರೆ ಅಲ್ಲಿ ಹೂಗಳು ನೆಲದ ಮಟ್ಟದಲ್ಲೇ ಇವೆ! ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಬೇಕಾದವರು ವಿನೀತರಾಗಿ ಮಂಡಿ ಊರಲೇಬೇಕು! ಹಲವರು ಹೂವುಗಳ ಹಿಂದೆ ನಿಂತು ಫೋಟೊಗಳಿಗೆ ಪೋಸ್ ಕೊಡುತ್ತಿದ್ದಾರೆ.ಪ್ರತಿವರ್ಷ ಆಗಸ್ಟ್ ಮಧ್ಯದಿಂದ ಅಕ್ಟೋಬರ್‌ ತಿಂಗಳವರೆಗೆ ಪ್ರಕೃತಿ ಇಲ್ಲಿ ಧಾರಾಳವಾಗಿ ಬಗೆಬಗೆಯ ಹೂಗಳನ್ನು ಸೃಷ್ಟಿಸುತ್ತದೆ. ಇದೇನೂ ಜಗದ್ವಿಖ್ಯಾತ ಬೊಟಾನಿಕಲ್ ಗಾರ್ಡನ್ ಅಲ್ಲ. ಯಾವ ಮಾಲಿಯೂ ಸುವ್ಯವಸ್ಥಿತವಾಗಿ ನೋಡಿಕೊಂಡ ತೋಟ ಇದಲ್ಲ. ಕಾಸ್ ಪಟಾರ್ ಪ್ರಕೃತಿ ತನ್ನ ಮನಸ್ಸಿಗೆ ಬಂದಂತೆ ಸೃಷ್ಟಿಸಿದ ಲಕ್ಷಾಂತರ ಬಣ್ಣ ಬಣ್ಣದ ಹೂವುಗಳ ಮೊಸೈಕ್. ಇವು ಸುಕೋಮಲ ಪುಷ್ಪಗಳು. ಈ ಹೂಗಳನ್ನು ಗಿಡದಿಂದ ಮಲ್ಲಿಗೆ, ಗುಲಾಬಿಗಳನ್ನು ಕಿತ್ತಂತೆ ಕೀಳಲಾರಿರಿ. ಇವು ಅತ್ಯಂತ ಚಿಕ್ಕದಾದ ಸುಮಾರು ಒಂದು ಸೆಂಟಿಮೀಟರ್‌ನಷ್ಟು ಉದ್ದದ ದೇಟಿನ ಮೇಲೆ ನಿಂತ ಹಳದಿ, ಬಿಳಿ, ನೇರಳೆ, ವರ್ಣದ ಹೂಗಳ ಕಲಸು ಮೇಲೋಗರ. ಇನ್ನು ಗುಲಾಬಿ ಬಣ್ಣದ ಕರ್ಣಕುಂಡಲ ಹೂಗಳ ಸಮೂಹ, ಗಾಳಿ ಬೀಸಿದಾಗ ತೊನೆದಾಡುವ ಮರ್ಡಾನಿಯ ಹೂಗಳ ಪುಟ್ಟ ಗುಂಪು, ಇವುಗಳ ಮಧ್ಯೆ ನೇರಳೆ ಬಣ್ಣದ ಅವರೆ ಜಾತಿಯ ಹೂವಿನ ಕುಚ್ಚು, ಇದ್ದುದರಲ್ಲೇ ನೆಟ್ಟಗೆ ನಿಂತ ಆರೋರೂಟ್ ಸಸ್ಯಗಳು. ಈ ಹೂವುಗಳೆಲ್ಲವೂ ನಿಸರ್ಗದ ಮಿನಿಯೇಚರ್ ಪೇಂಟಿಂಗ್‌ಗಳು.ಕಾಸ್‌ನಲ್ಲಿ ಸುಮಾರು ಬಗೆಯ ಸಸ್ಯಗಳಿವೆಯೆಂದು ಹೇಳುತ್ತಾರೆ. ನಾನು ಹೋದಾಗ ಅಲ್ಲಿ ಏಳೆಂಟು ವಿಧದ ಪುಟ್ಟ ಹೂವುಗಳದ್ದೇ ದರ್ಬಾರು. ಇವು ಅಲ್ಲಲ್ಲಿ ತಮಗೆ ಸಿಕ್ಕ ಅಲ್ಪ ಮಣ್ಣಿನ ಮೇಲೆ ಹೂ ಸಮೂಹವನ್ನು ಸೃಷ್ಟಿಸಿ, ಮನುಷ್ಯರ ಪರಿವೇ ಇಲ್ಲದೇ ಗಾಳಿಗೆ ತಲೆದೂಗುತ್ತಿದ್ದರೆ ಮೈಮರೆಯುವುದು ನೋಡುತ್ತಿರುವ ನಾವು ಮಾತ್ರ.ಕರ್ನಾಟಕದಿಂದ ಮುಂದುವರೆದ ಸಹ್ಯಾದ್ರಿ ಶ್ರೇಣಿಯಲ್ಲಿರುವ ಕಾಸ್ ಪಟಾರ್ ಬಸಾಲ್ಟ್ ಶಿಲೆಗಳಿಂದ ಆಗಿದ್ದು ಈ ಶಿಲಾಭೂಮಿಯ ಮೇಲೆ ಬಹಳ ತೆಳುವಾದ ಒಂದು ಪದರ ಮಣ್ಣು ಇರುತ್ತದೆ. ಈ ಕಲ್ಲು ಭೂಮಿಯ ಆಳವಿಲ್ಲದ ಕೊರಕಲುಗಳಲ್ಲಿ ನೀರು ಸಂಗ್ರಹವಾಗುತ್ತದೆ. ಇಂತಹ ಕಡೆ, ಜೌಗಿನಲ್ಲಿ ಬೆಳೆವ ಅತಿ ಚಿಕ್ಕ ಸಸ್ಯಗಳು ಬೆಳೆದು ಪ್ರತಿವರ್ಷ ನಿರ್ದಿಷ್ಟ ಕಾಲದಲ್ಲಿ ವಿವಿಧ ಬಗೆಯ ಹೂವುಗಳು ಸೃಷ್ಟಿಯಾಗಿ ಕಾಸ್ ಪಟಾರ್ ಒಂದು ನಂದನವನವಾಗುತ್ತದೆ.ಕಾಸ್‌ಪಟಾರ್‌ಅನ್ನು ಯುನೆಸ್ಕೊ ಜಗತ್ತಿನ ಹೆರಿಟೇಜ್ ತಾಣಗಳಲ್ಲಿ ಒಂದು ಎಂದು ಘೋಷಿಸಿದೆ. ಅತಿ ವಿಸ್ತಾರವಾದ ಕಾಸ್‌ಪಟಾರ್‌ಅನ್ನು ಅಲ್ಲಿನ ಸರ್ಕಾರ ಸುರಕ್ಷಿತವಾಗಿಟ್ಟಿದೆ. ಹೂಸಮೂಹಗಳ ಮಧ್ಯೆ ಓಡಾಡಲು ಸಣ್ಣ ಕಾಲ್ದಾರಿಗಳನ್ನು ಮಾಡಿದ್ದಾರೆ. ಆರ್ಶರ್ಯವೆಂದರೆ ನಮ್ಮ ಜನ ಹೂವುಗಳನ್ನು ಕಿತ್ತು ಹಾಳು ಮಾಡದೆ, ಹೂಗಳನ್ನು ನೋಡುತ್ತ, ಫೋಟೊಗಳನ್ನು ತೆಗೆದುಕೊಳ್ಳುವುದನ್ನು ನೋಡಿದೆ. ಶಾಲಾ ಮಕ್ಕಳು ಗುಂಪು ಗುಂಪಾಗಿ ದಿಗಂತದ ಅಂಚಿನಷ್ಟು ದೂರದಲ್ಲಿ ಹೂಗಳನ್ನು ವೀಕ್ಷಿಸುತ್ತಿರುವುದನ್ನು ನೋಡಿದೆ. ಇವೆಲ್ಲವೂ ಸಂತೋಷದ ಸಂಗತಿಗಳು.ಕರ್ನಾಟಕದ ಕೆಮ್ಮಣ್ಣುಗುಂಡಿ, ಬಾಬಾಬುಡನ್‌ಗಿರಿಗಳಲ್ಲಿ ಕೆಲವು ವರ್ಷಗಳ ಹಿಂದೆ ಕುರಿಂಜಿ ಹೂವುಗಳು ಅರಳಿ ಜನ ನೋಡಿ ಸಂತಸಪಟ್ಟರು. ನಮ್ಮಲ್ಲಿ ಈ ಕುರಿಂಜಿ ಹೂವಿನ ಬಗ್ಗೆ ವಿಚಾರ ವಿನಿಮಯ, ಅವುಗಳ ಅರಳುವಿಕೆಯನ್ನು ಗಮನಿಸುವದು ಇತ್ತೀಚಿನ ವರ್ಷಗಳಿಂದ ನಡೆಯುತ್ತಿದೆ. ತಮಿಳು ಹೆಸರಿನ ಕುರಿಂಜಿಗೆ ನಮ್ಮಲ್ಲಿ ಸ್ಥಳೀಯ ಹೆಸರೇನೆಂದು ತಿಳಿಯದು. ಕಾಸ್‌ನಲ್ಲಿ ಕಂಡು ಬರುವ ವನ್ಯ ಹೂವುಗಳು ನಮ್ಮಲ್ಲಿ ಕೊಡಗು ಮುಂತಾದ ಕಡೆ ವಿರಳವಾಗಿ ಕಂಡು ಬಂದರೂ, ವಿಸ್ತಾರವಾದ ಪ್ರದೇಶಗಳಲ್ಲಿ ಸಮೃದ್ಧವಾಗಿ ಈ ಹೂಗಳು ಕಾಣಿಸಿಕೊಳ್ಳುವುದರ ಬಗ್ಗೆ ಯಾವ ಮಾಹಿತಿಯೂ ತಿಳಿದು ಬಂದಿಲ್ಲ.ಕಾಸ್ ಪಟಾರ್ ಎಂಬ ಹೂತಳವನ್ನು ನೋಡಿದಾಗ ಆಗಿಹೋದ ನಮ್ಮ ಕಲಾವಿದರ ಕಲೆಗಾರಿಕೆ ನೆನಪಾಗುತ್ತದೆ. ಫ್ರಾನ್ಸ್ ದೇಶದಲ್ಲಿ ಕಲಾವಿದ ಮೋನೆ ತನ್ನ ಮನೆ ಸುತ್ತಲು ಒಂದು ಸುಂದರ ಹೂವಿನ ತೋಟ ನಿರ್ಮಿಸಿಕೊಂಡು ಅಲ್ಲಿನ ಸುಂದರ ಹೂಗಳದ್ದೇ ಅದ್ಭುತ ಚಿತ್ರಗಳನ್ನು ಚಿತ್ರಿಸಿದರು. ಕರ್ನಾಟಕದಲ್ಲಿ ರುಮಾಲೆ ಚೆನ್ನಬಸವಯ್ಯನವರು ಬೆಂಗಳೂರಿನಲ್ಲಿ ಜಕರಾಂಡ, ಟಕೋಮ, ಗುಲ್‌ಮೊಹರ್ ಹೂಮರಗಳನ್ನು ಚಿತ್ರಿಸಿದರು. ಕಾಸ್‌ನಲ್ಲಿ ಸೃಷ್ಟಿಯಾಗುವ ಪುಷ್ಪ ಸಮುದಾಯವನ್ನು ನೋಡಿದಾಗ, ಇಲ್ಲಿಗೆ ಯಾರಾದರೂ ಯುವ ಕಲಾವಿದರು ಬರಬಾರದೇ ? ಪ್ರಕೃತಿ ತನ್ನ ಭೂಕ್ಯಾನ್ವಾಸ್ ಮೇಲೆ ಸೃಷ್ಟಿಸಿದ ಅದ್ಭುತ ಪುಷ್ಪ ಕಲಾಕೃತಿಗಳನ್ನು ಪ್ರತಿಕೃತಿಯಾಗಿಸಬಾರದೆ ಎಂದು ಮನಸ್ಸು ಹಾತೊರೆಯುತ್ತದೆ.

ಪ್ರತಿಕ್ರಿಯಿಸಿ (+)