ಬುಧವಾರ, ಜೂಲೈ 8, 2020
28 °C

ಹೆಚ್ಚುವರಿ ಜಿಲ್ಲಾಧಿಕಾರಿ ಸಜೀವ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್): ಪೆಟ್ರೋಲ್ ಕಲಬೆರಕೆ ಮಾಫಿಯಾಗಳ ಮೇಲೆ ದಾಳಿ ನಡೆಸಲು ತೆರಳಿದ್ದ  ಮಾಲೆಗಾಂವ್‌ನ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಾನೆ ಅವರನ್ನು ಹಾಡಹಗಲೇ ಸಜೀವವಾಗಿ ಸುಟ್ಟು ಹಾಕಿದ ಬರ್ಬರ ಘಟನೆ ಇಲ್ಲಿಂದ 260 ಕಿ.ಮೀ. ದೂರದ ಮನ್‌ಮಾಡ್‌ನ ಪಾನೇವಾಡಿಯಲ್ಲಿ ನಡೆದಿದೆ.

 

42ರ ಹರೆಯದ ಮಹಾರಾಷ್ಟ್ರ ಕೇಡರ್‌ನ ಅಧಿಕಾರಿಯಾಗಿದ್ದ ಸೋನಾವಾನೆ ಅವರು, ತಮ್ಮ ಆಪ್ತ  ಸಹಾಯಕ ಮತ್ತು ಚಾಲಕನ ಜತೆ ತೆರಳಿದಾಗ  ಪಾನೇವಾಡಿಯ ಸಾಗರ್ ಢಾಬಾದ ಬಳಿ ಬೆಚ್ಚಿಬೀಳಿಸುವ ಈ ಘಟನೆ ನಡೆದಿದೆ. ಪ್ರಕರಣದಲ್ಲಿ ಶಂಕಿತ ಪ್ರಮುಖ ಆರೋಪಿ ಪೋಪತ್ ಶಿಂಧೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಹೆಚ್ಚುವರಿ ಪೊಲೀಸ್‌ಮಹಾ ನಿರ್ದೇಶಕ ಕೆ. ಪಿ. ರಘುವಂಶಿ ಅವರ ಪ್ರಕಾರ, ತೈಲ ಟ್ಯಾಂಕರ್‌ನಿಂದ ತೈಲ ಕದಿಯಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸೋನಾವಾನೆ ಪ್ರಶ್ನಿಸಿದಾಗ ಆತ ಅಲ್ಲಿಂದ ಪರಾರಿಯಾದ. ಕೂಡಲೇ ಸೋನಾವಾನೆ ಅವರು ವಿತರಣಾ ಅಧಿಕಾರಿಯನ್ನು ಸ್ಥಳಕ್ಕೆ ಬಂದು ತನಿಖೆ ನಡೆಸುವಂತೆ ತಿಳಿಸಿದರು. ಅಷ್ಟರಲ್ಲಿ ಮೋಟಾರ್‌ಸೈಕಲ್‌ಗಳಲ್ಲಿ ಅಲ್ಲಿಗೆ ಬಂದ ಕೆಲವರು ಸೋನಾವಾನೆ ಅವರ ಮೇಲೆ ಹಲ್ಲೆ ನಡೆಸಲು ಆರಂಭಿಸಿದರಲ್ಲದೆ ಗುಂಪಿನಲ್ಲಿದ್ದ ಶಿಂಧೆ ತನ್ನ ಪುತ್ರ ಮತ್ತು ಇತರರ ಸಹಾಯದಿಂದ ಸೋನಾವಾನೆ ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದನೆನ್ನಲಾಗಿದೆ.ಮನ್‌ಮಾಡ್‌ನ ತೈಲ ಕೇಂದ್ರಗಳ ಮೇಲೆ ಸೋನಾವಾನೆ ಅವರು ಕಂದಾಯ ಅಧಿಕಾರಿಗಳೊಂದಿಗೆ ಕಳೆದ ರಾತ್ರಿ ದಾಳಿ ನಡೆಸಿದ್ದರಿಂದ ಮಾಫಿಯಾಗಳು ಈ ಕ್ರೂರ ಕೃತ್ಯ ಎಸಗಿದ್ದಾರೆ ಎಂದು ಎಂದು ನಾಸಿಕ್ ಪೊಲಿಸರು ತಿಳಿಸಿದ್ದಾರೆ.ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ‘ತನ್ನ ಸರ್ಕಾರ ಇಂಥ ಹೇಯ ಘಟನೆಗಳನ್ನು ಸಹಿಸುವುದಿಲ್ಲ, ಅಪರಾಧಿಗಳಿಗೆ ಕಠಿಣ ಶಿಕ್ಷೆಯ ನೀಡಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.