ಶುಕ್ರವಾರ, ಮೇ 7, 2021
26 °C

ಹೆದ್ದಾರಿ ಬಳಕೆಗೆ ಶುಲ್ಕ ವಸೂಲಿ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಪ್ರಮುಖ ರಾಜ್ಯ ಹೆದ್ದಾರಿಗಳ ಬಳಕೆಗೆ ವಾಹನ ಸವಾರರಿಂದ ಶುಲ್ಕ (ಟೋಲ್) ವಸೂಲಿ ಮಾಡುವ ಉದ್ದೇಶ ಇದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಂಗಳವಾರ ಇಲ್ಲಿ ತಿಳಿಸಿದರು.ರಸ್ತೆಗಳ ಅಭಿವೃದ್ಧಿಗೆ ನಬಾರ್ಡ್, ವಿಶ್ವಬ್ಯಾಂಕಿನಿಂದ ಸಾಲ ಪಡೆದರೆ, ಮರು ಪಾವತಿ ಮಾಡಬೇಕಾಗುತ್ತದೆ. ನಿರ್ವಹಣೆಗೂ ಅಧಿಕ ವೆಚ್ಚವಾಗುತ್ತದೆ. ಹೀಗಾಗಿ ಅಗತ್ಯ ಇರುವ ಕಡೆ ಪ್ರಮುಖ ರಸ್ತೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವುದು ಅನಿವಾರ್ಯ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ವಾಹನ ಸಂಚಾರದ ಪ್ರಮಾಣ ಆಧರಿಸಿ ಯಾವ ರಸ್ತೆಗಳನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು. ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ ಪ್ರಮುಖ ನಗರ, ಪಟ್ಟಣಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಕೈಗೆತ್ತಿಕೊಳ್ಳಬೇಕು ಎನ್ನುವ ಪ್ರಸ್ತಾವ ಇದೆ ಎಂದರು.ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಹೆದ್ದಾರಿಗಳಲ್ಲಿ ಬಳಕೆ ಶುಲ್ಕ ಸಂಗ್ರಹಿಸುವ ವಿಷಯ ಸಂಪುಟದ ಮುಂದೆ ಬಂದಿತ್ತು. ಆದರೆ, ಒಮ್ಮತ ಮೂಡದ ಕಾರಣ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿರಲಿಲ್ಲ.ಹಿಂದಿನ ಸರ್ಕಾರ ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಿಸಿರುವ ಈ ವರ್ಷದ ಯೋಜನೆಗಳಿಗೆ ಹತ್ತು ಸಾವಿರ ಕೋಟಿ ರೂಪಾಯಿ ಅಗತ್ಯವಿದೆ. ಬಜೆಟ್ ಮೇಲಿನ ಪೂರ್ವಭಾವಿ ಚರ್ಚೆ ಸಂದರ್ಭದಲ್ಲಿ ಇಲಾಖೆಗೆ ಎಷ್ಟು ಅನುದಾನ ಅಗತ್ಯವಿದೆ ಎಂಬುದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದರು.ಗುತ್ತಿಗೆದಾರರಿಗೆ ಒಂದು ಸಾವಿರ ಕೋಟಿ ರೂಪಾಯಿ ನೀಡಬೇಕಾಗಿದೆ. 2-3 ವರ್ಷಗಳಿಂದ ಹಣ ಪಾವತಿಯಾಗಿಲ್ಲ. ಹಂತ ಹಂತವಾಗಿ ಹಳೆಯ ಬಾಕಿಯನ್ನು ಪಾವತಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.4,491 ಕಿ.ಮೀ. ರಾಷ್ಟ್ರೀಯ ಹೆದ್ದಾರಿ, 20,774 ಕಿ.ಮೀ. ರಾಜ್ಯ ಹೆದ್ದಾರಿ, 49,905 ಕಿ.ಮೀ. ಜಿಲ್ಲಾ ಮಟ್ಟದ ರಸ್ತೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 75 ಸಾವಿರ ಕಿ.ಮೀ. ರಸ್ತೆಗಳಿವೆ. ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲು ಕೇಂದ್ರದಿಂದ ಹೆಚ್ಚಿನ ಅನುದಾನ ದೊರೆಯುವ ವಿಶ್ವಾಸ ಇದೆ ಎಂದರು.ಆಸ್ಕರ್ ಫರ್ನಾಂಡೀಸ್ ಕೇಂದ್ರ ಸಚಿವರಾಗುವುದಕ್ಕೂ ಮೊದಲೇ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದರು. ಈಗ ಅವರೇ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಅವರಿಗೆ ಹೆಚ್ಚು ಆಸಕ್ತಿ ಇದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.