ಮಂಗಳವಾರ, ಮೇ 11, 2021
24 °C

ಹೆಸರಿನ ಹುಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉರ್ದುವಿನ ಪ್ರಸಿದ್ಧ ಕವಿ ಮಖ್ದೂಂ ಮೊಹಿಯುದ್ದೀನ್ ಜನಪರ ಹೋರಾಟಗಳಲ್ಲಿ ಜೀವನ ಕಳೆದವರು. ಮನುಷ್ಯ ಎಷ್ಟೇ ಕಷ್ಟ ಕೋಟಲೆಗಳನ್ನೆದುರಿಸಿದರೂ ನಗು ನಗುತ್ತಿರಬೇಕು ಎನ್ನುತ್ತಿದ್ದರು. ಬದುಕು ಸಹನೀಯವಾಗಬೇಕಾದರೆ ಇದೊಂದೇ ದಾರಿ ಎಂದವರು ಬಲವಾಗಿ ನಂಬಿದ್ದರು.ಉರ್ದು ಕಾವ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಮಖ್ದೂಂ ತುಂಟತನಕ್ಕೆ ಪ್ರಸಿದ್ಧರು. ಒಮ್ಮೆ ಪ್ರಸಿದ್ಧ ಇಂಗ್ಲಿಷ್ ಪತ್ರಿಕೆ `ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ~ ಹೈದರಾಬಾದಿನ ಉರ್ದು ಕವಿಗಳ ಕುರಿತು ಒಂದು ಲೇಖನ ಬರೆದುಕೊಡಲು ಮಖ್ದೂಂ ಅವರನ್ನು ಕೇಳಿಕೊಂಡಿತ್ತು. ಅವರ ಲೇಖನ ಪ್ರಕಟವಾಗಲಿದೆ ಎಂದು ತಿಳಿದ ಮೇಲೆ ಹೈದರಾಬಾದಿನ ಹಿರಿ ಕಿರಿಯ ಕವಿಗಳು ಹಾಗೂ ಕಾವ್ಯ ಪ್ರೇಮಿಗಳು ಆ ಸಂಚಿಕೆಗಾಗಿ ಚಾತಕ ಪಕ್ಷಿಗಳಂತೆ ಕಾಯತೊಡಗಿದರು.ಒಂದು ವಾರ ಕಳೆದ ಮೇಲೆ ಹೈದರಾಬಾದಿನ ಪುಸ್ತಕ ಹಾಗೂ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳೆದುರು ಉರ್ದು ಕವಿಗಳು ಜಮಾಯಿಸತೊಡಗಿದರು. ಉರ್ದು ಪತ್ರಿಕೆಗಳನ್ನು ಖರೀದಿಸುವ ಗಿರಾಕಿಗಳಿಗೆ ಇಂದೇನಾಗಿದೆಯೋ? ಇವರೆಲ್ಲ ಇಂಗ್ಲಿಷ್ ಪತ್ರಿಕೆ ಖರೀದಿಸುತ್ತಿದ್ದಾರಲ್ಲ ಎಂದಯ ಅಂಗಡಿಕಾರರಿಗೆ ದಿಗಿಲಾಯಿತು.

 

ಯಾರು ಯಾವ ಪತ್ರಿಕೆ ಖರೀದಿಸಿದರೇನಂತೆ? ವ್ಯಾಪಾರವಾಗುತ್ತಿದೆಯಲ್ಲ ಅಷ್ಟೇ ಸಾಕು ಎಂದುಕೊಂಡರು. ಮಖ್ದೂಂ ತಮ್ಮ ಸ್ನೇಹಿತನ ಅಂಗಡಿಯಿಂದ ಪತ್ರಿಕೆ ಖರೀದಿಸಿ ಮನೆಯತ್ತ ಹೆಜ್ಜೆ ಹಾಕತೊಡಗಿದ್ದರು. ಹೆಜ್ಜೆಗೊಬ್ಬ ಕವಿ ಎದುರಾಗುತ್ತಿದ್ದ.ತಮ್ಮ ಕಾವ್ಯವನ್ನು ಪ್ರಶಂಸಿಸಿ ಬರೆದದ್ದಕ್ಕಾಗಿ ಕೆಲವು ಕವಿಗಳು ಮಖ್ದೂಂ ಅವರಿಗೆ `ಶುಕ್ರಿಯಾ, ಮಖ್ದೂಂ ಭಾಯಿ~ ಎಂದು ಹೇಳಿ ಮುಂದೆ ಸಾಗುತ್ತಿದ್ದರು. ಪತ್ರಿಕೆಯ ಆ ಲೇಖನದಲ್ಲಿ ತಮ್ಮ ಹೆಸರನ್ನೇ ಪ್ರಸ್ತಾಪ ಮಾಡಿಲ್ಲವೆಂದು ಕೆಲವರು ಮುನಿಸಿಕೊಂಡು ಮಖ್ದೂಂ ಅವರನ್ನು ಕಂಡೂ ಕಾಣದವರಂತೆ ರಸ್ತೆಯ ಇನ್ನೊಂದು ಬದಿಗೆ ಸರಿದು ಬಿಡುತ್ತಿದ್ದರು.ಕಡೆಗೆ ಯಾರೂ ತನ್ನತ್ತ ನೋಡದಿರಲಿ ಎಂದು ಮಖ್ದೂಂ ಪತ್ರಿಕೆಯನ್ನು ಓದುತ್ತಿರುವಂತೆ ನಟಿಸುತ್ತಾ ಹೆಜ್ಜೆ ಹಾಕತೊಡಗಿದರು. ಅಷ್ಟಾದರೂ `ಅಸ್ಸಲಾಂ ಅಲೈಕುಂ ಮಖ್ದೂಂ ಭಾಯಿ~ ಎಂದೊಬ್ಬರು ಅವರನ್ನು ತಡೆದು ನಿಲ್ಲಿಸಿದ್ದರು.ಅವರೊಬ್ಬ ವಯೋವೃದ್ಧ ಉರ್ದು ಕವಿ. ಅವರ ಕೈಯಲ್ಲೂ ಇಂಗ್ಲಿಷ್ ಪತ್ರಿಕೆ ಇತ್ತು. `ಹೈದರಾಬಾದಿನ ಉರ್ದು ಕವಿಗಳ ಬಗ್ಗೆ ನೀವು ಇದರಲ್ಲಿ ಒಂದು ಲೇಖನ ಬರೆದಿದ್ದೀರಿ ಎಂದು ಕೇಳಿದೆ. ಇದರಲ್ಲಿ ನನ್ನ ಹೆಸರು ಎಲ್ಲಿದೆ?~ ಎಂದು ಕೇಳಿದರು. ಮಖ್ದೂಂ ಅವರಿಗೆ ಏನು ಹೇಳಬೇಕೋ ತೋಚದಾಯಿತು.

 

ಇದರಲ್ಲಿ ನಿಮ್ಮ ಹೆಸರಿಲ್ಲವೆಂದರೆ ಆ ಅಜ್ಜನಿಗೆ ನೋವಾಗುವುದು. ಆ ಮುಗ್ಧ ಕವಿಗೆ ಇಂಗ್ಲಿಷ್‌ನ ಗಂಧ ಗಾಳಿಯೂ ಬಡಿದಿರಲಿಲ್ಲ. ಹಾಗಾಗಿ ಆ ಕವಿಯ ಕೈಯೊಳಗಿನ ಪತ್ರಿಕೆಯನ್ನು ತೆಗೆದುಕೊಂಡು ಪೆನ್ನಿನಿಂದ ಗುರುತು ಮಾಡಿದರು. `ಇದು ನಿಮ್ಮ ಹೆಸರು~ ಎಂದು ಹೇಳಿ ಮಖ್ದೂಂ ಸರಸರನೆ ಹೆಜ್ಜೆ ಹಾಕಿದರು.ಆ ವಯೋವೃದ್ಧ ಕವಿ ಪತ್ರಿಕೆಯಲ್ಲಿ ಗುರುತು ಹಾಕಿದ ಶಬ್ದಗಳನ್ನು ಪದೇ ಪದೇ ಚುಂಬಿಸಿ ಅಲ್ಲೇ ಕಣ್ಣು ನೆಟ್ಟು ಮುಂದೆ ಸಾಗಿದರು. ಅಷ್ಟರಲ್ಲಿ ಮಖ್ದೂಂ ಅವರ ನೆಚ್ಚಿನ ಶಿಷ್ಯ ಮುಜ್ತಬಾ ಹುಸೇನ್ ಆ ಹಿರಿಯರನ್ನು ಕಂಡು ನಿಂತರು. ಅವರು ಹೀಗೆ ಪತ್ರಿಕೆ ಓದುತ್ತಾ ನಡೆದರೆ ಯಾರಿಗಾದರೂ ಡಿಕ್ಕಿ ಹೊಡೆದಾರು ಎಂದು ಮುಜ್ತಬಾಗೆ ಆತಂಕವಾಯಿತು.

 

`ಅಸ್ಸಲಾಂ ಅಲೈಕುಂ ಮಿಯಾಂ. ಇದೇನು ನಿಮ್ಮ ಕೈಯಲ್ಲಿ ಇಂಗ್ಲಿಷ್ ಪತ್ರಿಕೆ ಇದೆಯಲ್ಲ?~ ಎಂದು ಕೇಳಿದರು. ಆ ಹಿರಿಯರು ಎಲ್ಲ ವಿವರಿಸಿ ಹೇಳಿದರು. ಮುಜ್ತಬಾ ಪತ್ರಿಕೆಯಲ್ಲಿ ಗುರುತು ಹಾಕಿದ ಹೆಸರನ್ನು ಓದಿದರು. ನಿಜ ವಿಷಯ ಹೇಳಲು ಅವರಿಗೆ ಮನಸ್ಸಾಗಲಿಲ್ಲ. `ಮಿಯಾಂ ಪತ್ರಿಕೆ ಓದುವುದನ್ನು ಬಿಟ್ಟು ಹುಷಾರಾಗಿ ಹೋಗಿರಿ. ಖುದಾ ಹಾಫಿಜ್~ ಎಂದು ಬೀಳ್ಕೊಂಡರು.ಕೆಲ ದಿನಗಳ ನಂತರ ಮಖ್ದೂಂ ಆ ಘಟನೆಯನ್ನು ಮರೆತಿದ್ದರೂ ಮರೆತಿರಬಹುದು. ಆದರೆ ಮುಜ್ತಬಾ ಅವರಿಗೆ ಅದೊಂದು ಮರೆಯಲಾಗದ ಪ್ರಸಂಗವೆನಿಸಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಅವರು ತಮ್ಮ ಗುರುವನ್ನು ಕಾಣಲು ಧಾವಿಸಿ ಹೋದರು.

 

ಮಖ್ದೂಂ ತೆಲಂಗಾಣ ರೈತ ಹೋರಾಟದ ಹಿನ್ನೆಲೆ ಮುನ್ನೆಲೆ, ತಮ್ಮ ಭೂಗತ ಜೀವನದ ಅನುಭವಗಳ ಕುರಿತು ಮಾತನಾಡತೊಡಗಿದರೆ ಅವರು ಭಾವಪರವಶರಾಗುತ್ತಿದ್ದರು. ಅಂದೂ ಭಾವಾವೇಶದಿಂದ ಅವರು ಮಾತನಾಡುತ್ತಿದ್ದರು. ಅವರ ಸಂಗಾತಿಗಳು ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದರು. ಮುಜ್ತಬಾ ಏಕಾಏಕಿ ಒಳನುಗ್ಗಿದ್ದರು. ಅಷ್ಟೇ ಅಲ್ಲ, `ಮಖ್ದೂಂ ಭಾಯಿ ನನಗೆ ಎಷ್ಟು ಖುಶಿ ಆಗೈತಿ ಅಂದ್ರ ಅದನ್ನು ವ್ಯಕ್ತ ಮಾಡಾಕ ಶಬ್ದಾನ ಹೊಳೀತಾ ಇಲ್ಲ...~ ಎಂದು ಅರಚಿಕೊಂಡರು.ಮಖ್ದೂಂ ಅವರಿಗೆ ಪಿತ್ಥ ನೆತ್ತಿಗೇರಿದಂತಾಯಿತು. ಸಂಗಾತಿಗಳೂ ಸಿಡಿಮಿಡಿಗೊಂಡರು. ಸ್ವಲ್ಪ ಹೊತ್ತಿನ ನಂತರ ಮಖ್ದೂಂ ವಿಷಯ ಏನು ಎನ್ನುವಂತೆ ತಮ್ಮ ಶಿಷ್ಯನತ್ತ ದೃಷ್ಟಿ ಬೀರಿದರು. `ನಮ್ಮ... ದೇಶದ... ಸುಪ್ರಸಿದ್ಧ... ಇಂಗ್ಲಿಷ್ ಪತ್ರಿಕೆಯೊಂದು... ನಿಮ್ಮ ಕುರಿತು ಒಂದು... ಉತ್ತಮ ಲೇಖನ... ಪ್ರಕಟಿಸಿದೆ. ಅದನ್ನು ಓದಿ... ನಿಲ್ಲಲಾಗದೇ ಇಲ್ಲಿಗೇ ಓಡಿ ಬಂದೆ...~- ಮುಜ್ತಬಾ ಮಾತು ಮುಗಿಸುವ ಲಕ್ಷಣಗಳೇ ಕಾಣಿಸದಾಯಿತು.`ನೋಡ್ರಿ, ಕವಿಯಾದವನಿಗೆ ಹೆಸರಿನ ಹುಚ್ಚು ಇರಬಾರದು. ಅಂದಹಾಗೆ ನಾನು ಏನು ಹೇಳುತ್ತಿದ್ದೆ?~ ಎಂದು ಮಖ್ದೂಂ ಮಾತು ಮುಂದುವರಿಸಿದರು. ಸ್ವಲ್ಪ ಹೊತ್ತಿನ ನಂತರ  `ಕಾಮ್ರೇಡ್ಸ್, ಇಂದು ಇಷ್ಟು ಸಾಕು. ನನಗೂ ಮನೆಯಲ್ಲಿ ಒಂದು ಅರ್ಜೆಂಟ್ ಕೆಲಸ ಐತಿ. ನಾ ನಡೀತೀನಿ~ ಎಂದು ಮಖ್ದೂಂ ಅಲ್ಲಿಂದ ನಿರ್ಗಮಿಸಿದರು.ಇತ್ತ ಮಖ್ದೂಂ ಅವರ ನೆಚ್ಚಿನ ಶಿಷ್ಯ ಮುಜ್ತಬಾ ಕೂಡ ಎದ್ದು ಹೋದರು. ಮಖ್ದೂಂ ಎಲ್ಲಿಗೆ ಹೋದರೆನ್ನುವುದು ಅವರಿಗೆ ಗೊತ್ತಾಗಿತ್ತು. ನೋಡು ನೋಡುವಷ್ಟರಲ್ಲಿ ಆ ಶಿಷ್ಯ ತನ್ನ ಗುರುವಿನ ಎದುರಲ್ಲಿ ಹಾಜರಾದ. ಮಖ್ದೂಂ ತಮ್ಮ ಸ್ನೇಹಿತನ ಬುಕ್‌ಸ್ಟಾಲಿನೆದುರು ನಿಂತಿದ್ದರು. ಕುತೂಹಲದಿಂದ ಇಂಗ್ಲಿಷ್ ಪತ್ರಿಕೆಯೊಂದರ ಪುಟಗಳನ್ನು ತಿರುವುತ್ತಿದ್ದರು.ಅದನ್ನು ಕೆಳಗಿರಿಸಿ ಮತ್ತೊಂದು ಪತ್ರಿಕೆಯನ್ನು ತೆಗೆದುಕೊಂಡರು. ಅದರ ಪುಟಗಳನ್ನು ತಿರುವಿಯಾದ ಮೇಲೆ ಅದನ್ನೂ ಕೆಳಗಿರಿಸಿದರು. ಅಲ್ಲಿ ನೇತಾಡುತ್ತಿದ್ದ ಕೊನೆಯ ಪತ್ರಿಕೆಯನ್ನು ತಿರುವತೊಡಗಿದ್ದಾಗ, `ಅಸ್ಸಲಾಂ ಅಲೈಕುಂ ಮಖ್ದೂಂ ಭಾಯಿ~ ಎಂದ ಮುಜ್ತಬಾರನ್ನು ಮಖ್ದೂಂ ಗಮನಿಸಲಿಲ್ಲ.ಮತ್ತೆ ಮುಜ್ತಬಾ, `ಮಖ್ದೂಂ ಭಾಯಿ, ಕವಿಯಾದವನಿಗೆ ಹೆಸರಿನ ಹುಚ್ಚು ಇರಬಾರದು~ ಎಂದರು. ಆ ಕ್ಷಣಕ್ಕೆ, ಹೈದರಾಬಾದಿನ ಹೃದಯವೆನಿಸಿಕೊಂಡಿದ್ದ ಮಖ್ದೂಂ ಅವರ ಹೃದಯದ ಬಡಿತ ಒಂದು ಕ್ಷಣ ನಿಂತು ಬಿಟ್ಟಿತೇನೋ! ಸುತ್ತಮುತ್ತ ಕಣ್ಣಾಡಿಸಿದರು. ಮಾಲು ಸಮೇತ ಸಿಕ್ಕ ಕಳ್ಳನಂತೆ ಶಿಷ್ಯನನ್ನೇ ನೋಡತೊಡಗಿದರು.ಬಿದ್ದರೂ ಮೀಸೆ ಮಣ್ಣಾಗಿಲ್ಲವೆನ್ನುವಂತೆ, `ಅರೆ ನಾಲಾಯಕ್, ನಾನು ಇಲ್ಲಿ ಇದ್ದದ್ದು ನಿನಗ ಹ್ಯಾಂಗ ಗೊತ್ತಾಯಿತೋ?~ ಎಂದವರು ಶಿಷ್ಯನನ್ನು ದಬಾಯಿಸಬಹುದಿತ್ತು. ಆದರೆ ತುಂಬ ಪ್ರಾಂಜಲ ಮನಸ್ಸಿನ ಕವಿ, `ಹಮಾರಿ ಬಿಲ್ಲಿ ಹಮ್‌ಸೇ ಮಿಯಾಂವ್!~ ಎಂದು ಗಹಗಹಿಸಿ ನಕ್ಕುಬಿಟ್ಟರಂತೆ.ಮುಜ್ತಬಾ ಶ್ರೇಷ್ಠ ಹಾಸ್ಯ ಸಾಹಿತಿ ಎಂದು ಹೆಸರು ಮಾಡಿದರು. ತಮ್ಮನ್ನು ಹಾಸ್ಯ ಸಾಹಿತಿಯನ್ನಾಗಿ ರೂಪಿಸಿದ್ದು ಕಪಟವರಿಯದ ತಮ್ಮ ಗುರುವಿನ ಬದುಕು ಎನ್ನುವುದನ್ನು ಅವರು ಹೇಳಿಕೊಂಡಿದ್ದರು. ಮುಂದೆ ಒಂದು ದಿನ ತಮ್ಮ ಗುರುವಿನ ಸಾವಿನ ಸುದ್ದಿ ಕೇಳಿದ ಶಿಷ್ಯ ಮುಜ್ತಬಾ ಬಿಕ್ಕಿ ಬಿಕ್ಕಿ ಅತ್ತರಂತೆ.ಎಲ್ಲರೂ ಮಖ್ದೂಂ ಅವರ ಗುಣಗಾನ ಮಾಡತೊಡಗಿದರು. ಆಗ ಮುಜ್ತಬಾರಿಗೆ ಈ ಘಟನೆ ನೆನಪಾಯಿತಂತೆ. ಕಡೆಗೂ ಬದುಕಿನ ಬಗೆಗಿನ ತಮ್ಮ ಗುರುವಿನ ದೃಷ್ಟಿಕೋನ ಅವರ ದುಃಖವನ್ನು  ತಹಬಂದಿಗೆ ತಂದಿತಂತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.