ಶನಿವಾರ, ಜೂಲೈ 11, 2020
27 °C

ಹೈಟೆಕ್ ಪಥ: ಚಾಲನಾ ಪರೀಕ್ಷೆಗೆ ಹಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈಟೆಕ್ ಪಥ: ಚಾಲನಾ ಪರೀಕ್ಷೆಗೆ ಹಿತ

ಬೆಂಗಳೂರಿನ ರಸ್ತೆಗಳಲ್ಲಿ ನಡೆದಾಡುವುದು ಕಷ್ಟ, ವಾಹನ ಓಡಿಸುವುದು ಇನ್ನೂ ಕಷ್ಟ. ಇದಕ್ಕೆಲ್ಲ ಕಾರಣ ಏರುತ್ತಿರುವ ವಾಹನಗಳ ಸಂಖ್ಯೆ, ದಟ್ಟಣೆ. ಕೆಲವೊಮ್ಮೆ ಕಾರಣವೇ ಇಲ್ಲದಿದ್ದರೂ ವಾಹನ ದಟ್ಟಣೆ ಉಂಟಾಗುತ್ತದೆ. ಅಪಘಾತಗಳೂ ಸಂಭವಿಸುತ್ತವೆ. ಹೆಚ್ಚುತ್ತಿರುವ ಅಪಘಾತಗಳಿಗೆ ಚಾಲಕರ ಚಾಲನಾ ನೈಪುಣ್ಯದ ಕೊರತೆಯೂ ಒಂದು ಕಾರಣ ಎಂಬುದು ತಜ್ಞರ ಅಭಿಪ್ರಾಯ. ಇವೆಲ್ಲವುಗಳನ್ನು ಗಮನದಲ್ಲಿರಿಸಿ ಸಾರಿಗೆ ಇಲಾಖೆ ಚಾಲಕರ  ನೈಪುಣ್ಯವನ್ನು ಅರಿತು, ಪರವಾನಗಿ ನೀಡಲು ಗಣಕೀಕೃತ ಚಾಲನಾ ಪರೀಕ್ಷಾ ಪಥವನ್ನು (ಹೈಟೆಕ್ ಡ್ರೈವಿಂಗ್ ಟೆಸ್ಟ್ -ಟ್ರೈನಿಂಗ್ ಸಿಸ್ಟಂ) ಸಿದ್ಧಗೊಳಿಸಿದೆ.ಜ್ಞಾನಭಾರತಿ ಆವರಣದಲ್ಲಿರುವ ಗಣಕೀಕೃತ ಚಾಲನಾ ಪರೀಕ್ಷಾ ಪಥ ಕಾರ್ಯಾರಂಭವಾಗಿ 4 ತಿಂಗಳುಗಳೇ ಕಳೆದಿವೆ. 1.75 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಗಣಕೀಕೃತ ಚಾಲನಾ ಪಥದ ಕಾರ್ಯವೈಖರಿಯ ಕಿರುನೋಟ ಇಲ್ಲಿದೆ.ಎಲ್ಲವೂ ನಿಖರ

ಚಾಲನಾ ಕೇಂದ್ರಗಳಲ್ಲಿ ವಾಹನ ಚಾಲನೆಯನ್ನು ಕಲಿತರೆ ಸಾಲದು, ಚಾಲಕರು ಪರವಾನಗಿ ಪಡೆಯಲು ಈ  ಹೈಟೆಕ್ ‘ಚಾಲನಾ ಪರೀಕ್ಷಾ ಪಥ’ದಲ್ಲಿ ತಮ್ಮ ನೈಪುಣ್ಯವನ್ನು ಪ್ರದರ್ಶಿಸಬೇಕು. ಗಣಕೀಕೃತ ಚಾಲನಾ ಪರೀಕ್ಷಾ ಕೇಂದ್ರದಲ್ಲಿ  ಪರವಾನಗಿ ಪಡೆಯಲು ಬಯಸುವ ಅಭ್ಯರ್ಥಿಯು ಸ್ವವಿವರದೊಂದಿಗೆ ಅರ್ಜಿ ಗುಜರಾಯಿಸಿ, 250 ರೂಪಾಯಿ ಶುಲ್ಕ ಪಾವತಿಸಿದ ಬಳಿಕ ಪ್ರವೇಶ ಪತ್ರ ದೊರೆಯಲಿದೆ.ಪ್ರತಿ ಪ್ರವೇಶ ಪತ್ರಕ್ಕೂ ತನ್ನದೇ ವಿಶೇಷ ಸಂಖ್ಯೆಯನ್ನು ನೀಡಲಾಗುತ್ತದೆ. ನಂತರ ಗಣಕಯಂತ್ರದಲ್ಲಿ ಸಂಚಾರಿ ಚಿಹ್ನೆಗಳನ್ನು ಗುರುತಿಸಬೇಕು. ಪರದೆಯ ಮೇಲೆ ನಾಲ್ಕು ಸಂಚಾರಿ ಚಿಹ್ನೆಗಳನ್ನು ತೋರಿಸಲಾಗುತ್ತದೆ ಅವುಗಳಿಗೆ ಎಂಟು ಉತ್ತರವಿರುತ್ತದೆ, 290 ಸೆಕೆಂಡುಗಳ ಅವಧಿಯಲ್ಲಿ ಅಭ್ಯರ್ಥಿಯು ಪ್ರತಿ ಚಿಹ್ನೆಗೆ ಸರಿಯಾದ ಉತ್ತರವನ್ನು ಜೋಡಿಸಬೇಕು.ಈ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮಾತ್ರ ಅಭ್ಯರ್ಥಿಯ ಚಾಲನಾ ನೈಪುಣ್ಯವನ್ನು ಒರೆಗೆ ಹಚ್ಚಲಾಗುತ್ತದೆ. ಹೈಟೆಕ್ ಪರೀಕ್ಷೆ: ಪ್ರತಿ ವಾಹನ ಪ್ರವೇಶವಾದ ಹಾಗೂ ನಿರ್ಗಮಿಸಿದ ಅವಧಿಯನ್ನು ಸೆನ್ಸರ್ ಗ್ರಹಿಸಿರುತ್ತದೆ. ಪ್ರತಿ ಅಭ್ಯರ್ಥಿಗೂ ನೀಡುವ ನೋಂದಣಿ ಸಂಖ್ಯೆಯನ್ನು ಮೋಟಾರು ವಾಹನ ತನಿಖಾಧಿಕಾರಿ ಕಂಟ್ರೋಲ್ ರೂಮ್‌ಗೆ ತಿಳಿಸುತ್ತಾರೆ. ಪಥದಲ್ಲಿ ಪರೀಕ್ಷೆ ಹಂತ ಹಂತವಾಗಿ ನಡೆಯುತ್ತದೆ.ಏರು ರಸ್ತೆ ಪರೀಕ್ಷೆ: ಈ ಹಂತದಲ್ಲಿ ಅಭ್ಯರ್ಥಿಯು ಏರು ರಸ್ತೆಯಲ್ಲಿ ಚಾಲನೆ ಮಾಡಬೇಕು. ಪರೀಕ್ಷೆ ಪ್ರಾರಂಭವಾದಾಗ ಅಭ್ಯರ್ಥಿಯು ವಾಹನವನ್ನು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಬೇಕು. ಹಸಿರು ದೀಪ ಉರಿಯುವಾಗ ವಾಹನವನ್ನು ಮುಂದಕ್ಕೆ ಚಲಾಯಿಸಬೇಕು, ವಾಹನಕ್ಕೆ ಹಿಂದಕ್ಕೆ ಚಲಿಸಿದಲ್ಲಿ ಅದನ್ನು ಸೆನ್ಸರ್ ಮುಖಾಂತರ ಅಳೆಯಲಾಗುವುದು. 4 ಪ್ರಯತ್ನಕ್ಕೆ ಮೀರದಂತೆ ಹಿಂದಕ್ಕೆ ಚಲಿಸಿದರೆ ಅಭ್ಯರ್ಥಿಯನ್ನು  ಈ ಹಂತದ  ಪರೀಕ್ಷೆಯಲ್ಲಿ ಅನುತ್ತೀರ್ಣ ಪರಿಗಣಿಸಲಾಗುತ್ತದೆ.‘ 8’ ಆಕಾರದ ರಸ್ತೆಯಲ್ಲಿ

 ಈ ಪರೀಕ್ಷೆಯಲ್ಲಿ ಅಭ್ಯರ್ಥಿಯು ‘8’ ಆಕಾರದ ಪಥದಲ್ಲಿ ಮುಂದಕ್ಕೆ ಚಾಲನೆ ಮಾಡಬೇಕು. ಚಾಲನಾ ಪಥದ ಎರಡೂ ಬದಿಯಲ್ಲಿ ಒಟ್ಟು 49 ತ್ರಿಕೋನ ಆಕಾರದ ಪುಟ್ಟ ಕಂಬಗಳಿರುತ್ತವೆ. ಅಭ್ಯರ್ಥಿ ಉತ್ತೀರ್ಣನಾಗಲು ನಿಗದಿತ 120 ಸೆಕೆಂಡುಗಳ ಒಳಗೆ ಪರೀಕ್ಷೆಯನ್ನು ಪೂರ್ಣಗೊಳಿಸಬೇಕು. ಗರಿಷ್ಠ 6 ಕಂಬಗಳಿಗೆ ತಾಗಿಸಿದರೂ ಉತ್ತೀರ್ಣ. ಅದಕ್ಕೂ ಹೆಚ್ಚಾದರೆ ಅನುತ್ತೀರ್ಣ.ಸಮಾನಾಂತರ ನಿಲುಗಡೆ:  ಅಭ್ಯರ್ಥಿಯು ನಿಗದಿತ ಜಾಗದಲ್ಲಿ ವಾಹನ ನಿಲುಗಡೆ ಮಾಡಬೇಕು. ಈ ಹಂತದಲ್ಲಿ ಚಾಲನಾ ಪಥದ ಅಂಚಿನಲ್ಲಿ 5 ಕಂಬಗಳನ್ನು ನಿಲ್ಲಿಸಲಾಗಿರುತ್ತದೆ. ಹಸಿರು ದೀಪ ಉರಿದಾಗ ಅಭ್ಯರ್ಥಿಯು ವಾಹವನ್ನು ಮುಂದಕ್ಕೆ ಚಾಲನೇ ಮಾಡಿ ಸ್ಟಾಟ್/ ಸ್ಟಾಪ್ ರೇಖೆ ದಾಟಿದ ತಕ್ಷಣ ನಿಲ್ಲಿಸಿ, ಹಿಂದಕ್ಕೆ ಚಾಲನೆ, ಮಾಡುತ್ತಾ ನಿಗದಿತ ಜಾಗದಲ್ಲಿ 180 ಸೆಕೆಂಡುಗಳ ಅವಧಿಯೊಳಗೆ ಬಂದು ನಿಲ್ಲಬೇಕು.ದ್ವಿಚಕ್ರ ಚಾಲನೆ ಪರೀಕ್ಷೆ: ದ್ವಿಚಕ್ರ ವಾಹನಗಳಿಗೂ ವಿಶೇಷವಾದ ಚಾಲನಾ ಪಥವಿದೆ. ಅಲ್ಪಸ್ವಲ್ಪ ಜ್ಞಾನವಿರುವ ಅಭ್ಯರ್ಥಿಯು ಈ ಪಥದಲ್ಲಿ ಗಾಡಿ ಓಡಿಸಲು ಅಳುಕುತ್ತಾರೆ ಎಂದು ಪರವಾನಗಿ ಪಡೆದ ಅಭ್ಯರ್ಥಿ ಮಹೇಶ್ವರಿ ಅವರ ಅಭಿಪ್ರಾಯ. ಈ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕಂಪ್ಯೂಟರ್ ಕಾರ್ಯವೈಖರಿಯನ್ನು ಸ್ವಲ್ಪ ಮಟ್ಟಿಗೆ ತಿಳಿದಿರಲೇಬೇಕು. ಸೆನ್ಸರ್, ಕಂಪ್ಯೂಟರ್ ಬಗ್ಗೆ ಅಳುಕಿರುವವನು ಚಾಲನಾ ನೈಪುಣ್ಯವಿದ್ದರೂ ಸೋಲುತ್ತಾರೆ ಎಂಬುದು ಬಹುತೇಕ ಅಭ್ಯರ್ಥಿಗಳ ಅನುಭವ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.