ಶುಕ್ರವಾರ, ಏಪ್ರಿಲ್ 23, 2021
31 °C

ಹೈಸ್ಪೀಡ್ ರೈಲಿನಿಂದ ಸಂಚಾರ ದಟ್ಟಣೆ ಕಡಿಮೆಯಾಗಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಬ್ರೂಯಿ ಅತಿಥಿ ಗೃಹ ವೃತ್ತದಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದವರೆಗೆ ಎಲಿವೇಟೆಡ್ ರಸ್ತೆ ನಿರ್ಮಾಣವಾಗುವುದರಿಂದ ದುಬಾರಿ ವೆಚ್ಚದ ಹೈಸ್ಪೀಡ್ ರೈಲು ಅವಶ್ಯಕತೆ ಇದೆಯೇ? ನಗರದಲ್ಲಿ ಫೀಡರ್ (ಸಂಪರ್ಕ) ರಸ್ತೆಗಳು, ಅಂಡರ್‌ಪಾಸ್, ಮೇಲು ಸೇತುವೆ, ರಸ್ತೆ ವಿಸ್ತರಣೆಯಂತಹ ಕಾಮಗಾರಿಗಳನ್ನು ಬಿಡಿಎ ಮತ್ತು ಬಿಬಿಎಂಪಿ ಕೈಗೊಳ್ಳುತ್ತಿದೆ. ಹೀಗಿರುವಾಗ ಹೈಸ್ಪೀಡ್ ರೈಲು ಎಂಬ ಹೆಗ್ಗಳಿಕೆಗಾಗಿ 6,689 ಕೋಟಿ ರೂಪಾಯಿ ಬೃಹತ್ ಮೊತ್ತವನ್ನು ಖರ್ಚು ಮಾಡುವ ಅವಶ್ಯಕತೆ ಖಂಡಿತ ಇಲ್ಲ.ಮೆಟ್ರೊ ರೈಲು ಸಂಚಾರ, ಮೇಲು ಸೇತುವೆ ಅಥವಾ ಅಂಡರ್‌ಪಾಸ್ ನಿರ್ಮಿಸಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಸಂಚಾರ ದಟ್ಟಣೆ ತಗ್ಗಿಸಬಹುದಾಗಿದೆ. ಹೈಸ್ಪೀಡ್ ರೈಲು ಯೋಜನೆಯಿಂದ ಕೇವಲ ವೇಗದ ಸಂಚಾರ ಉದ್ದೇಶ ಸಫಲವಾಗುತ್ತದೆಯೇ ಹೊರತು ಸಂಚಾರ ದಟ್ಟಣೆ ಕಡಿಮೆಯಾಗುವುದಿಲ್ಲ.ಹೈಸ್ಪೀಡ್ ರೈಲು ಪ್ರಾರಂಭವಾಗುವುದು ಎಂ.ಜಿ.ರಸ್ತೆಯಿಂದ. ಆದರೆ ಇದಕ್ಕೆ ಪರ್ಯಾಯ ಮಾರ್ಗವಾಗಿ ಹೆಬ್ಬಾಳದಿಂದ ಬಿಐಎಎಲ್‌ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಎಲಿವೇಟೆಡ್ ಮೇಲುಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದೆ. ಇದಕ್ಕೆ ಪೂರಕವಾಗಿ ಬಾಲಬ್ರೂಹಿ ಅತಿಥಿಗೃಹ ವೃತ್ತದಿಂದ ಹೆಬ್ಬಾಳದವರೆಗೂ ಎಲಿವೇಟೆಡ್ ರಸ್ತೆ ನಿರ್ಮಾಣ ಮಾಡಲು ಬಿಡಿಎ ಕಾರ್ಯ ಯೋಜನೆಯನ್ನು ರೂಪಿಸುತ್ತಿದೆ.ಪೀಡರ್ ರಸ್ತೆಗಳು (ಬಿಐಎಎಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳು): ಜಿಕೆವಿಕೆ ರಸ್ತೆ, ಎಂ.ಎಸ್.ಆರ್. ರಸ್ತೆ, ಥಣಿಸಂದ್ರ ರಸ್ತೆ, ರೇವಾ ಎಂಜಿನಿಯರ್ ಕಾಲೇಜು, ಕೋಗಿಲು ರಸ್ತೆ. ಇವು ಬಿಐಎಎಲ್‌ಗೆ ಸಂಪರ್ಕ ಕಲ್ಪಿಸಲು ಹೊಸದಾಗಿ ನಿರ್ಮಾಣಗೊಂಡಿರುವ ರಸ್ತೆಗಳು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ತೀವ್ರವಾಗಿರುವುದರಿಂದ 10 ಪ್ರಮುಖ ಕಾರಿಡಾರ್‌ಗಳನ್ನು ಸಿಗ್ನಲ್ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ. ಇದರ ಪೈಕಿ 7 ಕಾರಿಡಾರ್‌ಗಳನ್ನು ಸಿಗ್ನಲ್ ಮುಕ್ತಗೊಳಿಸುವ 1,040 ಕೋಟಿ ರೂಪಾಯಿ ಮೊತ್ತದ ಯೋಜನೆ ಟೆಂಡರ್ ಹಂತದಲ್ಲಿದೆ.ಸಿಗ್ನಲ್ ಮುಕ್ತ ಕಾರಿಡಾರ್‌ಗಳ ಪ್ರಮುಖ ಜಂಕ್ಷನ್‌ಗಳಲ್ಲಿ ಸಮಯ ಹಾಗೂ ಇಂಧನ ಉಳಿತಾಯ ಮಾಡುವ ಉದ್ದೇಶದಿಂದ ಆಯ್ದ ಸುಮಾರು 64 ಪ್ರಮುಖ ಜಂಕ್ಷನ್‌ಗಳಲ್ಲಿ 50 ಅಂಡರ್‌ಪಾಸ್‌ಗಳನ್ನು ಹಾಗೂ 14 ಮೇಲು ಸೇತುವೆ ನಿರ್ಮಾಣಕ್ಕೆ ಗಂಭೀರ ಚಿಂತನೆ ನಡೆದಿದೆ. ಐದು ಹೊಸ ವಲಯಗಳಲ್ಲಿ 103 ರಸ್ತೆಗಳ ಅಂದರೆ 512 ಕಿ.ಮೀ ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದು ಟೆಂಡರ್ ಪ್ರಕ್ರಿಯೆಯಲ್ಲಿನ ಸಮಸ್ಯೆಯಿಂದ ಸದ್ಯ ನ್ಯಾಯಾಲಯದಲ್ಲಿದೆ.ಹೊಸ ವಲಯಗಳಿಂದ ಹಳೆಯ ವಲಯಗಳಿಗೆ ಸಂಪರ್ಕ ಕಲ್ಪಿಸುವ 7 ಸಿಗ್ನಲ್‌ಮುಕ್ತ ಕಾರಿಡಾರ್‌ಗಳ ನಿರ್ಮಾಣ ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಳ್ಳುತ್ತಿದೆ. ಮೈಸೂರು ರಸ್ತೆಯ ನಾಯಂಡನಹಳ್ಳಿ ಜಂಕ್ಷನ್‌ನಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ 58.30 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.ಹೆಬ್ಬಾಳದ ಮೇಲುಸೇತುವೆಯಿಂದ ನಾಯಂಡಹಳ್ಳಿ ಜಂಕ್ಷನ್‌ವರೆಗೆ ಒಟ್ಟು  7 ಅಂಡರ್‌ಪಾಸ್ ಮತ್ತು ಮೇಲುಸೇತುವೆ ನಿರ್ಮಾಣ ಯೋಜನೆಯನ್ನು ಪಾಲಿಕೆ ರೂಪಿಸಿದೆ. ಬಿಐಎಎಲ್‌ನಿಂದ ಸಂಪರ್ಕ ಕಲ್ಪಿಸಲು ಕೆಳಕಂಡ ಸಿಗ್ನಲ್‌ಮುಕ್ತ ಕಾರಿಡಾರ್‌ಗಳನ್ನು ಶಿಫಾರಸು ಮಾಡಲಾಗಿದೆ.ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಎಚ್‌ಎಎಲ್ ವಿಮಾನನಿಲ್ದಾಣ ರಸ್ತೆ, ಮೇಖ್ರಿ ವೃತ್ತದಿಂದ ಹೋಪ್ ಫಾರ್ಮ್‌ವರೆಗಿನ ಕಾರಿಡಾರ್, ಮಾಗಡಿ ರಸ್ತೆ ಕಾರಿಡಾರ್, ಹೊರ ವರ್ತುಲ ರಸ್ತೆ ಕಾರಿಡಾರ್, ಡಾ.ರಾಜ್‌ಕುಮಾರ್ ರಸ್ತೆಯಿಂದ ಓಕಳಿಪುರದವರೆಗಿನ ರಸ್ತೆ, ಮಹದೇವಪುರ ವಲಯದಲ್ಲಿ ಆವಲಹಳ್ಳಿ ರಸ್ತೆ, ಕೊತ್ತನೂರು ರಸ್ತೆ, ಕಲ್ಕೆರೆ ರಸ್ತೆಗಳನ್ನು ಬಿಐಎಎಲ್‌ಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ.ದಾಸರಹಳ್ಳಿ ವಲಯದಲ್ಲಿ 7 ಹೊಸ ರಸ್ತೆಗಳನ್ನು ಬಿಐಎಎಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಬೊಮನಹಳ್ಳಿ ವಲಯದ ಎಲ್ಲ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳನ್ನು ಒಂದಲ್ಲ ಒಂದು ರೀತಿಯಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಯೋಜನೆ ಸಿದ್ಧವಾಗುತ್ತಿದೆ. ಹೈಸ್ಪೀಡ್ ರೈಲು ಬೆಂಗಳೂರಿನ ಎಲ್ಲಾ ಪ್ರದೇಶಗಳಿಗೂ ಸಂಚರಿಸುವುದಾದರೆ ಸೂಕ್ತವೆನಿಸುತ್ತದೆ. ಆದರೆ ಇದು ಕೇವಲ ಎಂ.ಜಿ.ರಸ್ತೆಯಿಂದ ವಿಮಾನ ನಿಲ್ದಾಣಕ್ಕಷ್ಟೇ ಸಂಚರಿಸುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ.ಎಂ.ಜಿ.ರಸ್ತೆಯಿಂದ ಬಿಐಎಎಲ್‌ಗೆ ತಲುಪುವ ವೇಗದಲ್ಲಿಯೇ ಬಾಲಬ್ರೂಹಿ ಅತಿಥಿಗೃಹ ವೃತ್ತದಿಂದ ಎಲಿವೇಟೆಡ್ ರಸ್ತೆ ಮೂಲಕ ವಿಮಾನ ನಿಲ್ದಾಣ ತಲುಪಬಹುದು. ಇದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಮೇಲ್ಭಾಗದ ರಸ್ತೆಯ ಅಲ್ಲಲ್ಲಿ ಲೂಫ್-ವೇಗಳಿಗೆ ಅವಕಾಶ ನೀಡಿದರೆ ಆ ಭಾಗದ ಸ್ಥಳೀಯರಿಗೆ ಅನುಕೂಲವಾಗುತ್ತದೆ. ಹಾಗೆಯೇ ಸ್ಥಳೀಯರು ಸಹ ವಿಮಾನ ನಿಲ್ದಾಣಕ್ಕೆ ತೆರಳಲು ನೆರವಾಗುತ್ತದೆ.ಈಗಾಗಲೇ ಹಲವು ಟ್ರಾಫಿಕ್ ಮುಕ್ತ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಈ ಮಾರ್ಗಗಳಲ್ಲೂ ಸಂಚಾರ ದಟ್ಟಣೆ ತಗ್ಗಲಿದೆ. ಹಾಗಾಗಿ ಹೈಸ್ಪೀಡ್ ರೈಲಿನ ಅವಶ್ಯಕತೆ ಕಡ್ಡಾಯವಾಗಿ ಇರುವುದಿಲ್ಲ. ಈಗಾಗಲೇ ಮೆಟ್ರೊ ರೈಲು ಯೋಜನೆ ಪ್ರಗತಿಯಲ್ಲಿದ್ದು, ಅದನ್ನು ಸೂಕ್ತವಾಗಿ ವಿಸ್ತರಿಸಬಹುದು. ಕೇಂದ್ರ ಸರ್ಕಾರ ಕೂಡ ಸಂಪನ್ಮೂಲ ಕ್ರೋಢೀಕರಣಕ್ಕೆ ಸಹಾಯ ಮಾಡುತ್ತಿದೆ.ನಗರದ ಪೂರ್ವ ಭಾಗದಿಂದ ಬರುವ ಮೆಟ್ರೊ ರೈಲು ಜಿಪಿಒವರೆಗೆ ಸಂಚರಿಸುತ್ತದೆ. ಅದೇ ರೀತಿ ಕನಕಪುರ ರಸ್ತೆಯಿಂದ ಬರುವ ಇನ್ನೊಂದು ಮಾರ್ಗ ಮಹಾರಾಣಿ ಕಾಲೇಜು ಜಂಕ್ಷನ್ ತಲುಪುತ್ತದೆ. ಹಾಗಾಗಿ ಇಲ್ಲಿಂದ ಬಾಲಬ್ರೂಹಿ ಅತಿಥಿ ಗೃಹ ವೃತ್ತದವರೆಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿದರೆ ಜನತೆ ಸುಗಮವಾಗಿ ಎಲಿವೇಟೆಡ್ ರಸ್ತೆ ಮೂಲಕ ಬಿಐಎಎಲ್ ತಲುಪಬಹುದು. ಮಹಾರಾಣಿ ಕಾಲೇಜು ಹಾಗೂ ಅತಿಥಿ ಗೃಹ ವೃತ್ತದವರೆಗೆ 1/4 ಕಿ.ಮೀ. ಅಂತರವಿದ್ದು, ಇದಕ್ಕೆ ಸೂಕ್ತವಾದ ಯೋಜನೆ ರೂಪಿಸಬೇಕು.  ಸ್ವಂತ ವಾಹನ ಹೊಂದಿರುವವರಿಗೂ ಸಹಾಯವಾಗುತ್ತದೆ.ಬಿಐಎಎಲ್‌ಗೆ ಹೋಗಲು ಕೇವಲ ಒಂದು ರಸ್ತೆಯಷ್ಟೇ ಇತ್ತು. ಆದರೆ ಈಗ ಎಲಿವೇಟೆಡ್ ರಸ್ತೆ ಹಾಗೂ ಬೆಂಗಳೂರಿನಾದ್ಯಂತ ಹಲವು ಸಿಗ್ನಲ್ ಮುಕ್ತ ಕಾರಿಡಾರ್ ರಸ್ತೆಗಳ ನಿರ್ಮಾ ಣವಾಗುತ್ತಿವೆ. ಇದರಿಂದ ಬಿಐಎಎಲ್‌ಗೆ ಸುಲಭವಾಗಿ ತಲುಪಬಹುದು.ಈ ನಡುವೆ ಮಾನೋ ರೈಲು ಸಂಚಾರದ ಬಗ್ಗೆಯೂ ಚರ್ಚೆ ನಡೆದಿದೆ. ಮಾನೋ ರೈಲನ್ನು ಸಹ ಪ್ರಾರಂಭ ಮಾಡಿದ್ದಲ್ಲಿ ಮೆಟ್ರೊ ರೈಲು ನಿಲ್ದಾಣ ಹಾಗೂ ಬಿಐಎಎಲ್ ಸಂಪರ್ಕ ರಸ್ತೆಗಳನ್ನು ಪ್ರಯಾಣಿಕರು ಸುಲಭವಾಗಿ ತಲುಪಬಹುದಾಗಿದೆ.ಸಂಪರ್ಕ ರಸ್ತೆಗಳು, ಅಂಡರ್‌ಪಾಸ್ ಮತ್ತು ಮೇಲು ಸೇತುವೆಗಳ ನಿರ್ಮಾಣ ಕಾಮಗಾರಿ ಹಂತ ಹಂತವಾಗಿ ನಡೆಯುವುದರಿಂದ ಸಾರ್ವಜನಿಕರಿಗೆ ಸಮಯ, ಹಣ, ಇಂಧನ ಉಳಿತಾಯವಾಗುತ್ತದೆ. ಜತೆಗೆ ಮಾಲಿನ್ಯ ಕೂಡ ತಗ್ಗಿಸಬಹುದಾಗಿದೆ. ಆದ್ದರಿಂದ 6,689 ಕೋಟಿ ರೂಪಾಯಿ ಬೃಹತ್ ಮೊತ್ತವನ್ನು ಉಪಯುಕ್ತ ಕಾಮಗಾರಿಗಳು ಹಾಗೂ ಮೂಲ ಸೌಕರ್ಯ ಕಲ್ಪಿಸಲು ಬಳಸಿದರೆ ಬೆಂಗಳೂರಿನ ಸೌಂದರ್ಯ ಹಾಗೂ ಸೌಕರ್ಯವನ್ನು ಹೆಚ್ಚಿಸಬಹುದು.

 

 -ಲೇಖಕರು ಬಿಬಿಎಂಪಿ ಸದಸ್ಯರು ಹಾಗೂ ಮಾಜಿ ಮೇಯರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.