ಶುಕ್ರವಾರ, ಏಪ್ರಿಲ್ 16, 2021
31 °C

ಹೊಳಲ್ಕೆರೆ: ತಾ.ಪಂ. ಸಾಮಾನ್ಯಸಭೆ.ಕಳಪೆ ಕಾಮಗಾರಿ, ಬೇಜವಾಬ್ದಾರಿ ಬಗ್ಗೆ ಪ್ರತಿಧ್ವನಿ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ‘ಕಳಪೆ ಕಾಮಗಾರಿ ಬಗ್ಗೆ ನಿಗಾವಹಿಸಿ, ಯೋಜನೆಗಳ ಅನುಷ್ಠಾನದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಬೇಡಿ, ಪಟ್ಟಣ ಬಿಟ್ಟು ಹಳ್ಳಿಗಳಿಗೆ ಹೋಗಿ ಸಮಸ್ಯೆಗಳನ್ನು ಪರಿಶೀಲಿಸಿ, ಯೋಜನೆಗಳ ಬಗ್ಗೆ ಸದಸ್ಯರಿಗೆ ಸರಿಯಾದ ಮಾಹಿತಿ ಕೊಡಿ. ಮಾತು ಕಡಿಮೆ ಮಾಡಿ, ಹೆಚ್ಚು ಕೆಲಸ ಮಾಡಿ....’ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಮಾತುಗಳಿವು.ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ಇದೇ ಪ್ರಥಮ ಸಾಮಾನ್ಯ ಸಭೆಯಾಗಿದ್ದು, ವಿವಿಧ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡ ಸದಸ್ಯರು ಅಧಿಕಾರಿಗಳ ಮೇಲೆ ಹರಿಹಾಯ್ದರು.ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ಕಾಮಗಾರಿಗಳ ವಿವರ ನೀಡುತ್ತಿದ್ದಂತೆ, ಜಲಮಣಿ ಯೋಜನೆಯಲ್ಲಿ ಶಾಲೆಗಳಿಗೆ ನೀಡಿರುವ ಕುಡಿಯುವ ನೀರಿನ ಫಿಲ್ಟರ್‌ಗಳ ಗುಣಮಟ್ಟ ಸರಿಯಿಲ್ಲ. ಆದ್ದರಿಂದ ಅವುಗಳನ್ನು ಅಳವಡಿಸದೆ ಮೂಲೆಗೆ ಎಸೆದಿದ್ದಾರೆ. ಕಳಪೆ ಫಿಲ್ಟರ್ ಖರೀದಿಗೆ ಲಕ್ಷಾಂತರ ರೂ ಖರ್ಚುಮಾಡಿದ್ದು, ಸರ್ಕಾರದ ಹಣ ವ್ಯರ್ಥ ಮಾಡಲಾಗಿದೆ. ತಕ್ಷಣವೇ ಅವುಗಳನ್ನು ವಾಪಸ್ ಕಳುಹಿಸಿ ಎಂದು ಸದಸ್ಯ ಎಸ್.ಆರ್. ನಾಗರಾಜ್ ತಾಕೀತು ಮಾಡಿದರು.ಸರ್ಕಾರಿ ಹಣ ಎಂದರೆ ಬೇಕಾಬಿಟ್ಟಿ ಖರ್ಚುಮಾಡುವುದು ಎಂದಲ್ಲ. ಅದು ಜನರ ತೆರಿಗೆಯ ಹಣ. ಅದು ಅವರ ಕಲ್ಯಾಣಕ್ಕೆ ಬಳಕೆಯಾಗಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹಕಾರ ಭಾವನೆಯಿಂದ ಕೆಲಸ ಮಾಡುವ ಮೂಲಕ ಅಭಿವೃದ್ಧಿ ಸಾಧಿಸಬೇಕು. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ನಿರ್ದಾಕ್ಷಿಣ್ಯವಾಗಿ ಕಪ್ಪು ಪಟ್ಟಿಗೆ ಸೇರಿಸಿ ಎಂದು ಅವರು ಸೂಚಿಸಿದರು.ಕೆಲವು ಕಡೆ ರಸ್ತೆಗೆ ಅಡ್ಡಲಾಗಿ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. ಕಾಟಾಚಾರಕ್ಕೆ ಕೆಲಸ ಮಾಡಿ ಹಣ ಬಿಡಿಸಿಕೊಂಡಿದ್ದಾರೆ. ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ಬಗ್ಗೆ ಮಾಹಿತಿ ನೀಡಬೇಕು ಎಂದು ಸದಸ್ಯ ಜಗದೀಶ್ ಸೂಚಿಸಿದರು.ಅಧಿಕಾರಿಗಳು ಯೋಜನೆ ಮತ್ತು ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸುವರ್ಣಗ್ರಾಮ ಯೋಜನೆಯಲ್ಲಿ ತಾಲ್ಲೂಕಿನ ಮುತ್ತಗದೂರಿನಲ್ಲಿ ನಿರ್ಮಿಸಿರುವ ಕಾಂಕ್ರಿಟ್ ರಸ್ತೆ ಕಳಪೆಯಾಗಿದೆ. ಕೆಲವು ಕಡೆ ಒಂದೇ ರಸ್ತೆಗೆ ವರ್ಷದಲ್ಲಿ ಎರಡು, ಮೂರು ಬಾರಿ ಹಣ ಹಾಕಿದ್ದೀರಿ. ಹೊಸದಾಗಿ ನಿರ್ಮಿಸಿದ ರಸ್ತೆ ಇಂತಿಷ್ಟು ವರ್ಷಗಳವರೆಗೆ ಬಳಕೆಯಾಗಬೇಕು ಎಂಬ ನಿಯಮ ಇಲ್ಲವೆ ಎಂದು ಸದಸ್ಯ ಓಂಕಾರಸ್ವಾಮಿ ಪ್ರಶ್ನಿಸಿದರು.ಬೇಸಿಗೆ ಆರಂಭವಾಗಿದ್ದು, ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅಧಿಕಾರಿಗಳು ಗ್ರಾಮಗಳಿಗೆ ಭೇಟಿನೀಡಿ ಪರಿಶೀಲಿಸಿ, ಅಗತ್ಯ ಇರುವ ಕಡೆ ತುರ್ತು ಕಾಮಗಾರಿ ಕೈಗೊಳ್ಳಬೇಕು. ಈಗ ಪರೀಕ್ಷೆಯ ಸಮಯವಾಗಿರುವುದರಿಂದ ಹಳ್ಳಿಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು ಎಂದು ಬೆಸ್ಕಾಂ ಎಂಜಿನಿಯರ್ ತಿಪ್ಪೇಸ್ವಾಮಿ ಅವರಿಗೆ ಅಧ್ಯಕ್ಷೆ ಪ್ರೇಮಾ ಧನಂಜಯ ಸೂಚನೆ ನೀಡಿದರು.ಉಪಾಧ್ಯಕ್ಷೆ ಪುಟ್ಟೀಬಾಯಿ, ಇಒ ಡಾ.ಶ್ರೀಧರ್, ತಾ.ಪಂ. ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.