ಸೋಮವಾರ, ಜನವರಿ 27, 2020
27 °C

ಹೊಸಕೋಟೆ: ಪ್ರತ್ಯೇಕ ಅಪಘಾತದಲ್ಲಿ 4 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಪಟ್ಟಣದ ಬಳಿ ಸೋಮವಾರ ಮತ್ತು ಮಂಗಳವಾರ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ವ್ಯಕ್ತಿಗಳು ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿದ್ದಾರೆ.ಮಾಲೂರು ರಸ್ತೆಯ ದೇವನಗುಂದಿ ಕ್ರಾಸ್ ಬಳಿ ಸೋಮವಾರ ಸಾಯಂಕಾಲ ಖಾಸಗಿ ಬಸ್ ಒಂದು ಮೊಪೆಡ್‌ಗೆ ಡಿಕ್ಕಿ ಹೊಡೆದುದರಿಂದ ಅದರ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಮಾಲೂರು ವಾಸಿಗಳಾದ ಚಲುವಪ್ಪ (38) ಮತ್ತು ಗಣೇಶಪ್ಪಶೆಟ್ಟಿ (46) ಮೃತಪಟ್ಟವರು. ಮಾಲೂರಿನ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವರು ತಮ್ಮ ಪತ್ನಿಯರನ್ನು ಚಿಕಿತ್ಸೆಗಾಗಿ ಹೊಸಕೋಟೆ ಬಳಿಯ ಎಂವಿಜೆ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಮಾಲೂರಿಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಬಸ್ ಅವರ ಮೊಪೆಡ್‌ಗೆ ಡಿಕ್ಕಿ ಹೊಡೆಯಿತು. ತೀವ್ರ ಗಾಯಗೊಂಡ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲಿ ಮೃತಪಟ್ಟರು.ಮತ್ತೊಂದು ಪ್ರಕರಣದಲ್ಲಿ ಪಟ್ಟಣದ ಹೆದ್ದಾರಿಯ ಪ್ರವಾಸಿ ಮಂದಿರ ವೃತ್ತದಲ್ಲಿ ಸೋಮವಾರ ಬೆಳಗಿನ ಜಾವ ಲಾರಿಯೊಂದು ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದುದರಿಂದ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿದ್ದಾರೆ. ಕಾರಿನ ಚಾಲಕ ಸುಲೇಮಾನ್(26) ಸ್ಥಳದಲ್ಲೇ ಮೃತಪಟ್ಟರೆ ಗಾಯಗೊಂಡ ಡಾ.ಮಿಸ್ಬಾಸ್ ಉದ್ದೀನ್ (26) ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟರು. ಗಾಯಗೊಂಡ ಪ್ರಮೋದ್(25) ಅವರನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ. ಇವರೆಲ್ಲಾ ಆಂಧ್ರಪ್ರದೇಶದ ನೆಲ್ಲೂರು ವಾಸಿಗಳು. ಕಳೆದ ಎರಡು ತಿಂಗಳ ಕೆಳಗಷ್ಟೇ ವಿವಾಹವಾಗಿದ್ದ ಡಾ.ಮಿಸ್ಬಾಸ್ ಉದ್ದೀನ್ ಕೆಲಸ ಹುಡುಕಲು ತಮ್ಮ ಸ್ನೇಹಿತರೊಂದಿಗೆ ಬೆಂಗಳೂರಿಗೆ ಬಂದಿದ್ದರು. ಸೋಮವಾರ ಅವರೆಲ್ಲಾ ನೆಲ್ಲೂರಿಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿತು. ಕಾರು ಸಂಪೂರ್ಣ ಜಖಂಗೊಂಡಿದೆ. ಹೊಸಕೋಟೆ ಪೊಲೀಸರು ಎರಡೂ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

 

ಪ್ರತಿಕ್ರಿಯಿಸಿ (+)