ಶನಿವಾರ, ಮೇ 21, 2022
22 °C

ಹೊಸ ವಲಸೆ ನೀತಿ: ಒಬಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಬಾಲ್ಯದಲ್ಲೇ ಅಮೆರಿಕಕ್ಕೆ ವಲಸೆ ಬಂದು ಸೂಕ್ತ ದಾಖಲೆ ಇಲ್ಲದ ಕಾರಣ ಗಡೀಪಾರು ಶಿಕ್ಷೆಗೆ ಗುರಿಯಾದ ಯುವಕರಿಗೆ ನೀಡಿದ ಗಡೀಪಾರು ಶಿಕ್ಷೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯುವ ಮತ್ತು ಪ್ರತಿಭಾವಂತ ಅಕ್ರಮ ವಲಸಿಗರಿಗೂ ಪೌರತ್ವ ನೀಡಲು ಅನುಕೂಲವಾಗುವ ಹೊಸ ವಲಸೆ ನೀತಿಯನ್ನು ಅಧ್ಯಕ್ಷ ಬರಾಕ್ ಒಬಾಮ  ಶನಿವಾರ ಪ್ರಕಟಿಸಿದರು.ತಕ್ಷಣ ಹೊಸ ನೀತಿ ಜಾರಿಗೆ ಬರಲಿದ್ದು, ಯುವಕರ ಮೇಲಿನ ಗಡೀಪಾರು ಶಿಕ್ಷೆಯನ್ನು ಆಂತರಿಕ ಭದ್ರತಾ ಸಚಿವಾಲಯ ಕೂಡಲೇ ಹಿಂತೆಗೆದುಕೊಳ್ಳಲಿದೆ. ಪ್ರತಿಭಾವಂತ ಮತ್ತು ಅಪರಾಧ ಹಿನ್ನೆಲೆ ಹೊಂದಿರದ ಯುವಕರಿಗೆ ಮಾತ್ರ ಹೊಸ ವಲಸೆ ನೀತಿ ಅನ್ವಯಿಸುತ್ತದೆ. ಮುಂದಿನ ಕೆಲವೇ ತಿಂಗಳಲ್ಲಿ ಅರ್ಹ ಯುವಕರು ಗಡೀಪಾರು ಶಿಕ್ಷೆ ರದ್ದತಿಗಾಗಿ ಮತ್ತು ಪುನಃ ಕೆಲಸ ಕೋರಿ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದರು.

`ಇದು ಕೇವಲ ತಾತ್ಕಾಲಿಕ. ಇದನ್ನು ಶಾಶ್ವತ ನೀತಿ ಅಥವಾ ಸಾಮೂಹಿಕ ಕ್ಷಮಾದಾನ ಅಥವಾ ವಿನಾಯ್ತಿ ಇಲ್ಲವೇ ಪೌರತ್ವ ಪಡೆಯುವ ಮಾರ್ಗ~ ಎಂಬುದಾಗಿ ಭಾವಿಸಬೇಕಾಗಿಲ್ಲ ಎಂದು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.ಅಕ್ರಮ ವಲಸಿಗ ಯುವಕರ ಬಗ್ಗೆ ಅನುಕಂಪದ ಹೊಳೆಯನ್ನೇ ಹರಿಸಿದ ಒಬಾಮ, ತಮ್ಮ ನೀತಿಯನ್ನು ಸಮರ್ಥಿಸಿಕೊಳ್ಳಲು ಅನೇಕ ನಿದರ್ಶನಗಳನ್ನು ನೀಡಿದರು. `ಅಕ್ರಮ ವಲಸಿಗರ ಸ್ಥಾನದಲ್ಲಿ ನಿಮ್ಮನ್ನು ಕಲ್ಪಿಸಿಕೊಳ್ಳಿ. ಆಗ ಮಾತ್ರ ಅವರ ಬವಣೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ~ ಎಂದರು.`ಇಲ್ಲಿನ ಶಾಲೆಗಳಲ್ಲಿಯೇ ಓದಿ, ನಮ್ಮ  ಅಕ್ಕಪಕ್ಕದ ಮನೆಯ ಆವರಣದಲ್ಲಿ ಓಡಾಡಿಕೊಂಡಿದ್ದ ವಲಸಿಗ ಯುವಕರು ನಮ್ಮ ಮಕ್ಕಳ ಗೆಳೆಯರಾಗಿದ್ದವರು. ನಮ್ಮ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಅವರು ಮಾನಸಿಕವಾಗಿ ಅಪ್ಪಟ ಅಮೆರಿಕನ್ನರು. ಆದರೆ ಕಾನೂನು ದೃಷ್ಟಿಯಲ್ಲಿ ಮಾತ್ರ ಸೂಕ್ತ ದಾಖಲೆಗಳಿಲ್ಲದ ಅಕ್ರಮ ವಲಸಿಗರು~ ಎಂದು ಭಾವನಾತ್ಮಕವಾಗಿ ಮಾತನಾಡಿದರು.`ಪೋಷಕರು ಅಥವಾ ರಾಜಕಾರಣಿಗಳು ಮಾಡಿದ ತಪ್ಪಿಗಾಗಿ ಈ ಯುವಕರು ಯಾಕೆ ಶಿಕ್ಷೆ ಅನುಭವಿಸಬೇಕು. ಹಸುಗೂಸುಗಳಾಗಿ ಪೋಷಕರೊಂದಿಗೆ ಈ ನಾಡಿಗೆ ಬಂದವರು ಸೂಕ್ತ ದಾಖಲೆಗಳಿಲ್ಲ ಎಂಬ ಒಂದೇ ಕಾರಣಕ್ಕೆ ಇಂಥ ಶೀಕ್ಷೆ ನೀಡುವುದು ಎಷ್ಟು ನ್ಯಾಯಸಮ್ಮತ ಎಂಬ ಬಗ್ಗೆ ಪ್ರಶ್ನಿಸಿಕೊಳ್ಳಬೇಕಾಗಿದೆ~ ಎಂದರು.

ವಿದ್ಯಾರ್ಥಿವೇತನ ಅಥವಾ ವಾಹನ ಚಾಲನಾ ಪರವಾನಗಿ ಪತ್ರಕ್ಕೆ ಅರ್ಜಿ ಹಾಕುವ ವೇಳೆ ಮಾತ್ರ ತಮ್ಮ ದಾಖಲೆಗಳ ಬಗ್ಗೆ ವಲಸಿಗ ಯುವಕರಿಗೆ ಸಂಕಷ್ಟ ಎದುರಾಗುತ್ತದೆ ಎಂದರು.ವಲಸೆ ನೀತಿಯಲ್ಲಿ ತಪ್ಪುಗಳನ್ನು ಸರಿಪಡಿಸುವ ಮತ್ತು ಸರಿ ದಾರಿಯಲ್ಲಿ ಕೊಂಡೊಯ್ಯುವತ್ತ ಗಮನ ಹರಿಸಬೇಕಿದೆ ಎಂದು ಅವರು ನುಡಿದರು.ಮುಂಬರುವ ಅಧ್ಯಕ್ಷೀಯ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಒಬಾಮ ಈ ಹೊಸ ವಲಸೆ ನೀತಿಯನ್ನು ಪ್ರಕಟಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.