ಶನಿವಾರ, ಫೆಬ್ರವರಿ 27, 2021
20 °C
ನಗರ ಸಂಚಾರ

ಹೋಳಿ ಸಂಭ್ರಮಕ್ಕೆ ಪರಿಸರ ಸ್ನೇಹಿ ಬಣ್ಣ...

ಪ್ರಜಾವಾಣಿ ವಾರ್ತೆ/ರಾಮರಡ್ಡಿ ಅಳವಂಡಿ Updated:

ಅಕ್ಷರ ಗಾತ್ರ : | |

ಹೋಳಿ ಸಂಭ್ರಮಕ್ಕೆ ಪರಿಸರ ಸ್ನೇಹಿ ಬಣ್ಣ...

ರಾಯಚೂರು:  ಈ ದಿನ ಬಣ್ಣಗಳ ಹಬ್ಬ ಹೋಳಿ ಹಬ್ಬದ ಸಂಭ್ರಮ. ವಿವಿಧ ಬಗೆಯ ಬಣ್ಣ ಹಚ್ಚಿ ಕುಣಿದು ಕುಪ್ಪಳಿಸುವ ದಿನ. ಸಂಭ್ರಮಕ್ಕೆ ಕಾರಣವಾಗುವ ‘ಬಣ್ಣ’ದಲ್ಲಿ ಅಡಕವಾಗಿರುವ ಅಪಾಯಕಾರಿ ರಾಸಾಯನಿಕಗಳ ದುಷ್ಪರಿಣಾಮ, ಪರಿಸರ ಸ್ನೇಹಿ ಬಣ್ಣಗಳ ಬಳಕೆ, ಯಾವ ರೀತಿ ಹೋಳಿ ಆಡಿದರೆ ಚೆನ್ನ ಎಂಬುದರ ಬಗ್ಗೆ ಅನೇಕ ತಜ್ಞರು, ಪರಿಸರ ಸ್ನೇಹಿಗಳು ಮಾಹಿತಿ ನೀಡುತ್ತ ಜಾಗೃತಿ ಮೂಡಿಸುತ್ತ ಬಂದಿದ್ದಾರೆ.ಪರಿಸರ ಸ್ನೇಹಿ ಬಣ್ಣವನ್ನೇ ಬಳಸಬೇಕು, ರಾಸಾಯನಿಕ ಮಿಶ್ರಿತ ಬಣ್ಣ ಬಳಕೆ ಬೇಡ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿ ವರ್ಷ ಜಾಗೃತಿ ಮೂಡಿಸುತ್ತ ಬಂದಿದೆ. ಆದರೂ ಇನ್ನೂ ಜನಜಾಗೃತಿ ಅವಶ್ಯ ಎಂಬುದು ವಾಸ್ತವಿಕ ಸ್ಥಿತಿಯಲ್ಲಿ ಕಂಡು ಬರುತ್ತಿದೆ.

ಹಲವಾರು ವರ್ಷಗಳ ಹಿಂದೆ ಪರಿಸರ ಸ್ನೇಹಿ, ಗಿಡ, ಗಿಡದ ಎಲೆ, ಹೂವಿನ ಪಕಳೆಯಿಂದ ಬಣ್ಣ ತಯಾರಿಸಿ ಬಳಕೆ ಮಾಡಲಾಗುತ್ತಿತ್ತು.ಕಾಲ ಕ್ರಮೇಣ ಅದು ದೂರವಾಗುತ್ತಿದೆ. ಆಸಕ್ತರಷ್ಟೇ ಆ ದಿಶೆಯಲ್ಲಿ ಗಮನ ಹರಿಸುತ್ತಿದ್ದಾರೆ. ಹೋಳಿ ಹಬ್ಬದ ದಿನ ಯಾವ ಬಣ್ಣ ಬೇಗ ಸಿಗುತ್ತದೋ ಅದನ್ನು ತೆಗೆದುಕೊಂಡು ಆಡುವ ಪರಿಪಾಠ ಬೆಳೆಯುತ್ತಿರುವುದು ವಿಷಾದನೀಯ ಎಂದು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪ್ರೊ ಸಿ.ಡಿ. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.ಈಗ ಬಳಕೆ ಮಾಡುತ್ತಿರುವ ಬಣ್ಣದಲ್ಲಿ ಸೀಸ, ಮೆಟಾನಿಲ್ ಹಳದಿ ವಿಪರೀತ ಇರುತ್ತದೆ. ತ್ವಚೆಗೆ ಅಪಾಯಕಾರಿ. ಕಣ್ಣು,  ದೇಹದೊಳಗೆ ಈ ಬಣ್ಣ ಹೋದರೆ ಕ್ರಮೇಣ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುತ್ತವೆ. ಚರ್ಮದ ಮೇಲೆ ಕಲೆ ಆಗುತ್ತವೆ. ಅಲರ್ಜಿ ಉಂಟಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಮತ್ತು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಮುಖ್ಯವಾಗಿ ನೀರಿನಲ್ಲಿ ಬಣ್ಣ ಕಲಸಿ ಅದನ್ನು ಹಚ್ಚುವುದು ಸರಿಯಾದ ಕ್ರಮವಲ್ಲ. ಬಣ್ಣದ ಪುಡಿ ಹೇಗಿರುತ್ತದೋ ಹಾಗೆಯೇ ಹಚ್ಚಬೇಕು.ಅದರ ಬದಲು ನೀರಿನಲ್ಲಿ ಕಲಸುವುದು, ಕೊಳಚೆ ನೀರಿನಲ್ಲಿ ಕಲಸಿ ಹಚ್ಚುವುದು ಆರೋಗ್ಯಕ್ಕೆ ಅಪಾಯಕಾರಿ. ಕೊಳಚೆ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಇರುತ್ತವೆ. ಅಪ್ಪಿ ತಪ್ಪಿ ಕಣ್ಣು, ಬಾಯಿಯಲ್ಲಿ ಹೋದರೆ ಕಷ್ಟ. ಮುಖ್ಯವಾಗಿ ಹೋಳಿ ಹಬ್ಬ ಪ್ರೀತಿಯ ಸಂಕೇತ. ಅಷ್ಟೊಂದು ಪ್ರೀತಿಯಿಂದಲೇ ಅದನ್ನು ಆಚರಿಸಬೇಕು ಎಂದು ಪ್ರೊ. ಸಿ.ಡಿ ಪಾಟೀಲ್ ಕಾಳಜಿ ನುಡಿ ಆಡುತ್ತಾರೆ.

‘ಗುಣಮಟ್ಟದ ಬಣ್ಣ ಬಳಸಿ’

ಹೋಳಿ ಹಬ್ಬದಲ್ಲಿ ಕಡಿಮೆ ಗುಣಮಟ್ಟದ ಬಣ್ಣಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಇದ­ರಿಂದ ಅಲರ್ಜಿ, ಚರ್ಮ­ರೋಗ, ಚರ್ಮದ ಸೋಂಕು ಇದ್ದರೆ ಅದು ಉಲ್ಬಣ ಆಗುತ್ತದೆ. ಉದ್ದಿಮೆ­ಯಲ್ಲಿ ತಯಾರಾದ ಬಣ್ಣಗಳನ್ನೇ ಬಳಸುತ್ತಾರೆ.  ಇಂಥ ಬಣ್ಣ ಬಳಕೆಯಿಂಂದ ಕಣ್ಣು ತುರಿಕೆ ಬರಬಹುದು, ಪರಿಸರ ಮಾಲಿನ್ಯ ಆಗುತ್ತದೆ. ಸಾರ್ವಜನಿಕರು ಗುಣಮಟ್ಟದ ಬಣ್ಣ ಬಳಕೆ ಮಾಡಬೇಕು  ಎಂದು ಮನವಿ ಮಾಡಿದರು.

ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ‘ಹರ್ಬಲ್‌ ಬಣ್ಣಕ್ಕೆ ಬೇಡಿಕೆ’

ಕಳೆದ ವರ್ಷಕ್ಕಿಂತ ಈ ವರ್ಷ ಬಣ್ಣ ಮಾರಾಟ ಹೆಚ್ಚಾಗಿದೆ. ಹರ್ಬಲ್ ಬಣ್ಣಕ್ಕೆ ಹೆಚ್ಚು ಬೇಡಿಕೆ ಇದೆ. ಮಕ್ಕಳು ಈ ಬಣ್ಣ ಕೇಳಿ ಖರೀದಿ ಮಾಡುತ್ತಿದ್ದಾರೆ. ಅಪಾ­ಯಕಾರಿ ಬಣ್ಣದ ಬಳಕೆ ಬಗ್ಗೆ ಜಾಗೃತಿ ಆಗುತ್ತಿದೆ. ಕಳೆದ ವರ್ಷ ಕಡಿಮೆ ವ್ಯಾಪಾರ ಆಗಿತ್ತು. ಈ ವರ್ಷ ವ್ಯಾಪಾರ ಚೆನ್ನಾಗಿದೆ.

ವಿರೇಶ, ವ್ಯಾಪಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.