ಶನಿವಾರ, ಜೂನ್ 12, 2021
28 °C

‘ಅರ್ಕಾವತಿ ಪುನಶ್ಚೇತನಕ್ಕೆ ಆರಂಭಿಕ ಹೆಜ್ಜೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅರ್ಕಾವತಿ ನದಿ ಪುನಶ್ಚೇತನದ ಆರಂಭಿಕ ಹೆಜ್ಜೆಯಾಗಿ ಒತ್ತುವರಿ ತೆರವು ಸೇರಿದಂತೆ ಪ್ರಾಥಮಿಕ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನದಿಯ ಸಮಗ್ರ ಪುನಶ್ಚೇತನಕ್ಕೆ ದಶಕದ ಕಾಲಾವಕಾಶ ಬೇಕಿದೆ’ ಎಂದು ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌ ತಿಳಿಸಿದರು.ಭಾರತೀಯ ಕೈಗಾರಿಕಾ ಮಹಾ ಒಕ್ಕೂಟದ (ಸಿಐಐ) ರಾಜ್ಯ ಘಟಕದ ನೀರಿನ ಕಾರ್ಯಪಡೆ ವತಿಯಿಂದ ನಗರದಲ್ಲಿ ಬುಧವಾರ ನಡೆದ ‘ನಗರ ನೀರು ನಿರ್ವಹಣೆ’ ಕುರಿತ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ರಾತ್ರಿ ಬೆಳಗಾಗುವುದರಲ್ಲಿ ಈ ನದಿ­ಯನ್ನು ಪುನಶ್ಚೇತನ ನಡೆಸಲು ಸಾಧ್ಯವಿಲ್ಲ. 18 ಇಲಾಖೆಗಳು  ಜತೆಗೂಡಿ ಕಾರ್ಯ­ನಿರ್ವ­ಹಿಸಬೇಕಿದೆ. ಪುನಶ್ಚೇತನದ ಸಂದರ್ಭ­ದಲ್ಲಿ ನಗರ ಯೋಜನೆ ಹಾಗೂ ಪ್ರಾದೇಶಿಕ ಯೋಜನೆಗಳನ್ನು ರೂಪಿಸ­ಬೇಕಿದೆ. ಹೀಗಾಗಿ ಹೆಚ್ಚಿನ ಕಾಲಾವಧಿ ಬೇಕಿದೆ’ ಎಂದರು.‘ಜಗತ್ತಿನ ಬಹುತೇಕ ನಗರಗಳು ನದಿ ತಟದಲ್ಲಿವೆ. ಆದರೆ, ಬೆಂಗಳೂರಿನ ಸ್ಥಿತಿ ಭಿನ್ನವಾಗಿದೆ. ನಗರದ ಕೆರೆಗಳು ಬತ್ತಿ ಹೋಗುತ್ತಿವೆ. ಕುಡಿಯುವ ನೀರಿಗಾಗಿ ಕಾವೇರಿ ನದಿಯನ್ನು ಅವಲಂಬಿಸಬೇಕಿದೆ. ಭವಿಷ್ಯದಲ್ಲಿ ಕಾವೇರಿ ನದಿಯನ್ನು ಮಾತ್ರ ಅವಲಂಬಿಸುವುದು ಕಷ್ಟ. ಹೀಗಾಗಿ ನೀರಿನ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು. ನೀರಿನ ಪೋಲು ತಡೆಗಟ್ಟಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನರ್‌ ಇಯಾನ್‌ ಫೆಲ್ಟನ್‌ ಮಾತನಾಡಿ, ‘ಹವಾ­ಮಾನ ಬದಲಾವಣೆ ಹಾಗೂ ಜನ­ಸಂಖ್ಯಾ ಹೆಚ್ಚಳದಿಂದಾಗಿ ನೀರಿನ ಮೇಲಿನ ಒತ್ತಡ ಹೆಚ್ಚಾಗಿದೆ. ಅಂತರ್ಜಲ ಮಟ್ಟ ತಳಕ್ಕೆ ಇಳಿದಿದೆ. ಜಲಮೂಲಗಳು ವ್ಯಾಪಕ ಪ್ರಮಾಣದಲ್ಲಿ ಕಲುಷಿತ­ಗೊಳ್ಳುತ್ತಿವೆ. ಹೀಗಾಗಿ ಸುಸ್ಥಿರ ನೀರಿನ ನಿರ್ವಹಣಾ ನೀತಿಯನ್ನು ರೂಪಿಸಬೇಕಿದೆ’ ಎಂದರು.ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆ ನಿರ್ದೇಶಕ ಮಹೇಶ್ವರ ರಾವ್‌, ‘ಕೈಗಾರಿಕೆ­ಗಳ ಸ್ಥಾಪನೆಗೆ ರಾಜ್ಯದಲ್ಲಿ ದಕ್ಷಿಣ ಭಾಗ­ದಲ್ಲಿ ಸಾಕಷ್ಟು ಭೂಮಿ ಲಭ್ಯ ಇದೆ. ಆದರೆ, ಇಲ್ಲಿ ನೀರಿನ ಸಂಪನ್ಮೂಲ ಮಿತ­ವಾಗಿದೆ. ಉತ್ತರ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಗಮನ ಹರಿಸಬೇಕು’ ಎಂದರು.‘ನೀರಿನ ಸಮಸ್ಯೆಯನ್ನು ಬಗೆಹರಿಸಲು ನವೀನ ಯೋಜನೆಗಳನ್ನು ರೂಪಿಸಬೇಕು. ನೀರಿನ ಪುನರ್‌ಬಳಕೆಗೆ ಹಾಗೂ  ಕೊಳಚೆ ನೀರಿನ ಶುದ್ಧೀಕರಣಕ್ಕೆ ಸರ್ಕಾರ ಈಗ ಒತ್ತು ನೀಡಲಾಗುತ್ತಿದೆ. ನಗರ­­ದಲ್ಲಿ 800 ದಶಲಕ್ಷ ಲೀಟರ್‌ ಕೊಳಚೆ ನೀರನ್ನು ಶುದ್ಧೀಕರಿಸಿ ಕೈಗಾರಿಕೆಗಳಿಗೆ ಪೂರೈಸ­ಲಾಗುತ್ತಿದೆ’ ಎಂದರು. ಸಿಐಐ ರಾಜ್ಯ ಘಟಕದ ಮುಖ್ಯಸ್ಥ ಸಂದೀಪ್‌ ಮೈನಿ, ‘ನೀರಿನ ಮೂಲ ಸಂರಕ್ಷಣೆ ಮಾಡುವುದು ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ. ಉದ್ಯಮಿ­ಗಳು, ಸ್ವಯಂಸೇವಾ ಸಂಘಟನೆಗಳು, ಸಮುದಾಯ ಈ ಕಾರ್ಯದಲ್ಲಿ ಕೈಜೋಡಿಸಬೇಕು’ ಎಂದರು. ಸಿಐಐ ಮಾಜಿ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಇದ್ದರು.

ಸಮ್ಮೇಳನದ ಸಲಹೆಗಳು

*ನೀರಿನ ಪುನರ್‌ಬಳಕೆಗೆ ಉತ್ತೇಜನ ನೀಡಬೇಕು

*ಮಳೆ ನೀರು ಸಂಗ್ರಹ ಪ್ರಮಾಣ ಹೆಚ್ಚಬೇಕು

*ಕೆರೆಗಳ ಪುನಶ್ಚೇತನಕ್ಕೆ ಒತ್ತು ನೀಡಬೇಕು

*ಅಂತರ್ಜಲದ ಸುಸ್ಥಿರ ಬಳಕೆಗೆ ಸಮಗ್ರ ಕಾರ್ಯಯೋಜನೆ ರೂಪಿಸಬೇಕು

*ನೀರಿನ ಪೋಲು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಬೇಕು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.