ಭಾನುವಾರ, ಮಾರ್ಚ್ 7, 2021
29 °C
ಧಾರವಾಡ ಸಾಹಿತ್ಯ ಸಂಭ್ರಮ 2016

‘ಆತ್ಮಕಥೆಗಳು ಪೂರ್ತಿ ಸತ್ಯವಲ್ಲ’

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

‘ಆತ್ಮಕಥೆಗಳು ಪೂರ್ತಿ ಸತ್ಯವಲ್ಲ’

ಧಾರವಾಡ: ‘ಆತ್ಮಕಥೆಗಳು ಕೆಲವು ಸತ್ಯಗಳನ್ನು ಮುಚ್ಚಿಟ್ಟುಕೊಳ್ಳುತ್ತವೆ’ ಎಂದು ಹಿರಿಯ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.

ಸಾಹಿತ್ಯ ಸಂಭ್ರಮದ ಕೊನೆಯ ದಿನವಾದ ಭಾನುವಾರ ನಡೆದ ‘ಸತ್ಯದೊಂದಿಗೆ ಪ್ರಯೋಗ’(ಕನ್ನಡ ಆತ್ಮಕಥೆಗಳು)’ ಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.‘ಭ್ರಷ್ಟಾಚಾರದ ಮೂಲಕ ಕೋಟ್ಯಧೀಶರಾದ ಅನೇಕರು ಆತ್ಮಕಥೆಗಳನ್ನು ಬರೆದಿದ್ದಾರೆ. ಆದರೆ ಅವರ ಭ್ರಷ್ಟಾಚಾರದ ವಿವರಗಳು ಮಾತ್ರ ಅವುಗಳಲ್ಲಿ ಎಲ್ಲಿಯೂ ಕಾಣುವುದಿಲ್ಲ’ ಎಂದು ಉದಾಹರಣೆಯನ್ನೂ ನೀಡಿದರು.‘ಗಂಡಸರಿಗೆ ಹೋಲಿಸಿದರೆ ಕನ್ನಡದ ಹೆಣ್ಮಕ್ಕಳೇ ಹೆಚ್ಚು ಗಟ್ಟಿಯಾಗಿ, ಧೈರ್ಯವಾಗಿ ಆತ್ಮಕಥೆಗಳನ್ನು ಬರೆಯುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನಾನು ಯಾವುದೇ ಆತ್ಮಕಥೆಯನ್ನು ಬರೆದಿಲ್ಲ. ಆದರೆ ನನ್ನ ಅನೇಕ ಪ್ರಬಂಧಗಳಲ್ಲಿ ನನ್ನ ಆತ್ಮಕಥೆಯ ತುಣುಕುಗಳನ್ನು ಕಾಣಬಹುದು. ಹಾಗೆ ನೋಡಿದರೆ ಎಲ್ಲ ಸಾಹಿತಿಗಳೂ ಒಂದಿಲ್ಲ ಒಂದು ರೀತಿಯಲ್ಲಿ ತಮ್ಮ ಆತ್ಮಕಥೆಗಳನ್ನು ಬರೆದೇ ಇರುತ್ತಾರೆ’ ಎಂದೂ ಅವರು ಹೇಳಿದರು.ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಲೇಖಕಿ ಶಶಿಕಲಾ ವೀರಯ್ಯಸ್ವಾಮಿ, ತಮ್ಮ ಆತ್ಮಕಥೆಯ ಕೆಲವು ಆಪ್ತ ಸನ್ನಿವೇಶಗಳನ್ನು ಓದಿದರು. ‘ಸಾಮಾನ್ಯವಾಗಿ ಹೆಣ್ಣುಮಕ್ಕಳು ಆತ್ಮಕಥೆ ಬರೆದರೆ ಅದರಲ್ಲಿ ಯಾರ್‍ಯಾರ ಹೆಸರಿದೆ. ಅವರು ಯಾರ್‍ಯಾರ ಜತೆ ಎಷ್ಟು ಆಪ್ತರಾಗಿದ್ದರು ಎಂಬುದನ್ನು ಹುಡುಕಿ ಪತ್ತೆ ಮಾಡುವುದಕ್ಕಾಗಿಯೇ ಓದುತ್ತಾರೆ. ಇಂದಿಗೂ ಈ ದೃಷ್ಟಿಕೋನ ಬದಲಾಗಿಲ್ಲ. ಈ ಹಿಂಜರಿಕೆಯಿಂದಲೇ ಬಹಳ ಹೆಣ್ಣುಮಕ್ಕಳು ಮುಕ್ತವಾಗಿ ಆತ್ಮಕಥೆ ಬರೆಯಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.ಗೋಷ್ಠಿಯ ನಿರ್ದೇಶಕ ಅಗ್ರಹಾರ ಕೃಷ್ಣಮೂರ್ತಿ ‘ಇಂದು ಬೇರೆ ಬೇರೆ ಕ್ಷೇತ್ರದಲ್ಲಿ ಯಶಸ್ವಿಯಾದ ವ್ಯಕ್ತಿಗಳು ತಾವು ಹೇಗೆ ಯಶಸ್ವಿಯಾದೆವು ಎಂಬುದನ್ನು ವಿವರಿಸಲು ಆತ್ಮಕತೆ ಬರೆಯುತ್ತಿದ್ದಾರೆ. ಪಾಪ ನಿವೇದನೆಯೂ ಆತ್ಮಕಥೆಯ ಒಂದು ಗುಣವಾಗಿದೆ’ ಎಂದರು.

*

ಲಕ್ಷ್ಮಣ ಅನಾವರಣಗೊಳಿಸಿದ ಅಸ್ಪೃಶ್ಯ ಜಗತ್ತು

ಧಾರವಾಡ: ‘ಸತ್ಯದೊಂದಿಗೆ ಪ್ರಯೋಗ’ (ಕನ್ನಡ ಆತ್ಮಕಥೆಗಳು) ಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರಿನ ಲಕ್ಷ್ಮಣ ಅವರು ಅನಾವರಣಗೊಳಿಸಿದ ಅಸ್ಪೃಶ್ಯ ಜಗತ್ತಿನ ಕರಾಳ ಅನುಭವಗಳು ಪ್ರೇಕ್ಷಕರ ಮನಸ್ಸನ್ನು ಭಾವುಕತೆಯಲ್ಲಿ ಅದ್ದಿ ಮೃದುಗೊಳಿಸಿದವು.

‘ಒಂದು ಬೆಟ್ಟದಲ್ಲಿ ಎಷ್ಟು ಕಲ್ಲುಗಳಿವೆ ಎಂದು ಎಣಿಸುವುದು ಎಷ್ಟು ಕಷ್ಟವೋ, ದಲಿತನಾಗಿ ನಾನು ಅನುಭವಿಸಿದ ಅಸ್ಪೃಶ್ಯತೆಯ ಸಂಕಷ್ಟಹೇಳುವುದೂ ಅಷ್ಟೇ ಕಷ್ಟ’ ಎಂದು ತಮ್ಮ ಬದುಕಿನ ಅನೇಕ ಭಾವಸ್ಪರ್ಶಿ ಸಂಗತಿಗಳನ್ನು ಹಂಚಿಕೊಂಡರು. ಹಾಗೆ ಹೇಳುತ್ತಲೇ ಗದ್ಗದಿತರಾದ ಅವರ ಅನುಭವ, ನೋವಿನ ಕಥನಅವರ ಮಾತುಗಳಲ್ಲೇ ಕೇಳಬೇಕು:‘ನಮ್ಮೂರು ಕತ್ರಿಗುಪ್ಪೆ. ನಾನು ಮೂರನೇ ತರಗತಿಯಲ್ಲಿದ್ದಾಗ ಸರ್ಕಾರಿ ಶಾಲೆಗೆ ಇಬ್ಬರು ಶಿಕ್ಷಕರು. ಅದರಲ್ಲಿ ಒಬ್ಬರು ಪುಳುಜುಟ್ಟು ಮಾಸ್ತರು. ಅವರು ಮೇಲು ಜಾತಿ ವಿದ್ಯಾರ್ಥಿಗಳನ್ನು ಮೊದಲಿನ ಸಾಲಿ ನಲ್ಲಿ ಕೂಡಿಸುತ್ತಿದ್ದರು. ನಮ್ಮನ್ನು ಕಡೆ ಸಾಲಿನಲ್ಲಿ ಕೂರಿಸುತ್ತಿದ್ದರು. ತಪ್ಪು ಮಾಡಿದ ವಿದ್ಯಾರ್ಥಿಗಳನ್ನು ಹೊಡೆ ಯಲು ಅವರು ಎರಡು ಕೋಲು ಇಟ್ಟಿದ್ದರು. ಮೇಲುಜಾತಿ ವಿದ್ಯಾರ್ಥಿ ಗಳು ತಪ್ಪು ಮಾಡಿದರೆ ಮೊಳದಷ್ಟು ದ್ದದ ಕೋಲಿನಲ್ಲಿ ಹೊಡೆಯು ತ್ತಿದ್ದರು. ದಲಿತ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಮಾರುದ್ದ ಕೋಲಿನಲ್ಲಿ ಹೊಡೆಯುತ್ತಿದ್ದರು.‘ಶಾಲೆಯ ಗೋಡೆಯ ಪಕ್ಕದಲ್ಲಿ ಅವರು ತಮ್ಮ ಸೈಕಲ್ ನಿಲ್ಲಿಸುತ್ತಿದ್ದರು. ಅದರ ಪಕ್ಕವೇ ಒಂದು ಬಕೇಟಿನಲ್ಲಿ ಸ್ಲೇಟು ಒರೆಸಿಕೊಳ್ಳಲು ನೀರನ್ನೂ ಇರಿಸಲಾಗಿತ್ತು. ನನ್ನ ಸ್ನೇಹಿತ ಮಂಜ ಅಂತ. ಅವನು ಒಂದು ಸಲ ನೀರು ತೆಗೆದುಕೊಳ್ಳುವಾಗ ಆ ಸೈಕಲನ್ನೂ ಮುಟ್ಟಿಬಿಟ್ಟಿದ್ದ. ಅದಕ್ಕಾಗಿ ಆ ಮೇಷ್ಟ್ರು ಅವನಿಗೆ ಹೊಡೆದು ಹೊಡೆದು ಕೊನೆಗೆ ಅವನು ಮಗ್ಗಿಪುಸ್ತಕ, ಸ್ಲೇಟು ಎಲ್ಲವನ್ನೂ ಹಾಳುಬಾವಿಗೆ ಹಾಕಿ ‘ಇನ್ನು ಮೇಲೆ ಓದಲ್ಲ’ ಅಂತ ಹೇಳಿ ಶಾಲೆಯನ್ನೇ ಬಿಟ್ಟುಬಿಟ್ಟ’ ಎಂದು ಶಾಲೆಯಲ್ಲಿ ತಮ್ಮ ಕಾಲದಲ್ಲಿನ ದಲಿತ ಮಕ್ಕಳು ಅನುಭವಿಸಿದ ಅಸ್ಪೃಶ್ಯತೆಯ ಯಾತನೆಯನ್ನು ಬಿಚ್ಚಿಟ್ಟರು.‘ಹಾಗೂ ಹೀಗೂ ನಾಲ್ಕನೇ  ತರಗತಿ ಉತ್ತೀರ್ಣನಾದ ನಾನು ಐದನೇ ತರಗತಿಗೆ ಬಸವನಗುಡಿ ಬಾಯ್ಸ್‌ ಮಿಡಲ್‌ ಸ್ಕೂಲ್‌ಗೆ ಬಂದೆ. ಅಲ್ಲಿ ಡ್ರಿಲ್‌ ಮಾಡಲು ಖಾಕಿ ಚಡ್ಡಿ ಬಿಳಿ ಅಂಗಿ ಬೇಕಾಗಿತ್ತು. ನನ್ನ ಬಳಿ ಇರಲಿಲ್ಲ. ಅದಕ್ಕೆ ಅಲ್ಲಿನ ಶ್ರೀನಿವಾಸಯ್ಯ ಎಂಬ ಮೇಷ್ಟ್ರು ಪ್ರತಿ ಶನಿವಾರ ಡ್ರಿಲ್‌ ಮಾಡುವಾಗ ರೂಲ್‌ ದೊಣ್ಣೆಯಲ್ಲಿ ತಮ್ಮ ಮೈಯಲ್ಲಿನ ಬಲವನ್ನೆಲ್ಲ ಕೂಡಿಸಿಕೊಂಡು ನನ್ನನ್ನು ಹೊಡೆಯುತ್ತಿದ್ದರು. ತಾಯಿ ಹತ್ತಿರ ಈ ವಿಷಯ ಹೇಳಿದಾಗ ಅವರು ‘ಉಸಿರಿದ್ದರೆ ಉಪ್ಪು ಮಾರಿಕೊಂಡು ಬದುಕಬಹುದು. ಶಾಲೆ ಬಿಟ್ಟು ಬಿಡು’ ಎಂದರು. ಶಾಲೆ ಬಿಟ್ಟೆ. ನಂತರ ಒಬ್ಬರ ಮನೆಯಲ್ಲಿ ಜೀತಕ್ಕೆ ಸೇರಿಸಿದರು. ಇವನ್ನೆಲ್ಲ ನೆನಪಿಸಿಕೊಳ್ಳುವಾಗ ನನಗೆ ಅಳು ಬರುತ್ತದೆ’ ಎಂದು ಹೇಳುತ್ತಾ ಭಾವುಕರಾದರು.ನಂತರ ಕೂಲಿ ಕೆಲಸಕ್ಕೆ ಸೇರಿ ಕೊಂಡು ಹಣ ಕೂಡಿಸಿಕೊಂಡು ಖಾಕಿ ಚಡ್ಡಿ, ಬಿಳಿ ಅಂಗಿ ಹೊಲಿಸಿ ಕೊಂಡು, ಮತ್ತೆ ಶಾಲೆ ಸೇರಿದ್ದನ್ನೂ ನಡುಗುವ ಸ್ವರದಲ್ಲಿಯೇ ವಿವರಿಸಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಶಾಲೆಯೊಂದರಲ್ಲಿ ಜವಾನನ ಕೆಲಸ ಸಿಕ್ಕಿತು. ಆ ಶಾಲೆಯ ಕಾರ್ಯದರ್ಶಿ ಮನೆಯಲ್ಲಿನ ಮದುವೆ ಊಟಕ್ಕೆ ಹೋಗಿದ್ದಕ್ಕೆ ಕೆಂಡಾಮಂಡಲನಾದ ಕಾರ್ಯದರ್ಶಿ, ‘ರಾತ್ರಿ ನನ್ನನ್ನು ಮನೆಗೆ ಕರೆಸಿಕೊಂಡು ಬೈಯ್ದು ಕೆಲಸದಿಂದ ತೆಗೆದುಹಾಕಿದರು’ ಎಂದು ವಿವರಿಸುವಾಗ ಕೇಳುತ್ತಿದ್ದವರ ಕಣ್ಣಂಚೂ ಒದ್ದೆಯಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.