ಶನಿವಾರ, ಜನವರಿ 18, 2020
19 °C

‘ಕವಿತೆ ಸಮಾಜದ ಹುಸಿತನ, ಸತ್ಯಾಸತ್ಯತೆ ಪರೀಕ್ಷಿಸಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸಮಾಜದಲ್ಲಿನ ಹುಸಿತನ, ಮೌಲ್ಯಗಳು ಹಾಗೂ ಅವುಗಳ ಸತ್ಯಾಸತ್ಯತೆಗಳನ್ನು ಕವಿತೆ ವಿಮರ್ಶಿಸಬೇಕು ಎಂದು ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು ತಿಳಿಸಿದರು.ಅಭಿಮತ ಮಂಗಳೂರು ಕಲಾಂಗಣದಲ್ಲಿ ಏರ್ಪಡಿಸಿದ್ದ ಜನ ನುಡಿ ವಿಚಾರ ಸಂಕಿರಣದ ಎರಡನೇ ದಿನವಾದ ಭಾನುವಾರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪರ್ಯಾಯವಾದ ಸಮಾಜದಲ್ಲಿ ಹೊಸತೇನೂ ಅಲ್ಲ. ಇತಿಹಾಸದ ಉದ್ದಕ್ಕೂ ಸಿದ್ಧ ವ್ಯವಸ್ಥೆ, ವಾದಗಳ ವಿರುದ್ಧ ಧ್ವನಿಯೊಂದು ಬೆಳೆದುಕೊಂಡೇ ಬಂದಿದೆ. ಅದರಂತೆ ಅಭಿಮತ ನುಡಿಸಿರಿಗೆ ಪರ್ಯಾಯವಾಗಿ ಜನ ನುಡಿಯನ್ನು ಪರ್ಯಾಯವಾಗಿ ಸಂಘಟಿಸಿರುವುದು ಒಳ್ಳೆಯದೇ. ಆದರೆ ಈ ಪರ್ಯಾಯ ನುಡಿ ಕೇವಲ ವಿಚಾರ ಸಂಕಿರಣ, ಕವಿಗೊಷ್ಠಿಗಳಿಗೆ ಸೀಮಿತಗೊಳ್ಳಬಾರದು. ಬದಲಿಗೆ ಪರ್ಯಾಯ ಧ್ವನಿಯು ಸಮಾಜದ ಹುಸಿತನ, ಮೌಲ್ಯಗಳ  ಹುಸಿತನ, ಸತ್ಯ– ಅಸತ್ಯತೆಯ ವಿಮರ್ಶೆ ಮಾಡಬೇಕು. ಚರ್ಚೆಗೆ ವೇದಿಕೆಗಳನ್ನು ನಿರ್ಮಿಸುತ್ತಿರಬೇಕು ಎಂದರು.ದಕ್ಷಿಣ ಕನ್ನಡ ಜಿಲ್ಲೆ ಹಿಂದಿಗಿಂತ ಈಗ ಬದಲಾಗಿದೆ. ಅನೇಕ ಭಾಷೆ, ಧರ್ಮೀಯರು ಸಹಬಾಳ್ವೆಯಿಂದ ನಡೆಸುತ್ತಿದ್ದರು. ಇಲ್ಲಿ ಸಹಕಾರ ಕ್ಷೇತ್ರವೂ ಗಟ್ಟಿಯಾಗಿದ್ದ ಕಾಲವಿತ್ತು. ನಂತರ ರಾಜಕೀಯ ಉದ್ದೇಶಗಳಿಗಾಗಿ ಧಾರ್ಮಿಕ ಅಸಹಿಷ್ಣುತೆ, ಬಂಡವಾಳ ಶಾಹಿಯ ಪ್ರಭುತ್ವ ಮೇಲಾಗಿ ಇಂದಿನ ಈ ಪರಿಸ್ಥಿತಿಗೆ ಬಂದಿದೆ. ದಕ್ಷಿಣ ಕನ್ನಡವನ್ನು ಈಗ ಇಡೀ ಭಾರತಕ್ಕೇ ಹೋಲಿಸಿ ನೋಡುವಂತಾಗಿದ್ದು, ಈ ಸ್ಥಿತಿಯನ್ನು ಬದಲಿಸಿ, ಸರಿದಾರಿಗೆ ಕೊಂಡೊಯ್ಯಬೇಕಾದ ಜವಾಬ್ದಾರಿ ಪರ್ಯಾಯ ಧ್ವನಿಗೆ ಹೆಚ್ಚಿದೆ ಎಂದು ಹೇಳಿದರು.ಆಶಯ ಭಾಷಣ ಮಾಡಿದ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್‌, ಶ್ರಮಿಕ ವರ್ಗದ ಬಗ್ಗೆ ಕವಿತೆ ರಚನೆಯಾಗಲಿ. ಇದಕ್ಕೆ ಬಸವ, ಅಲ್ಲಮ, ಮಂಟೆಸ್ವಾಮಿ, ಕೈವಾರ ತಾತಯ್ಯ ಇತರರು ಮಾದರಿಯಾಗಿದ್ದಾರೆ. ಸಮಸ್ಯೆಗಳು, ನಿಜ ಸಂಗತಿಗಳು ಗೊತ್ತಿದ್ದರೂ ಬರೆಯದೇ ಇದ್ದರೆ, ಅದು ಅಪರಾಧವಾಗುತ್ತದೆ. ಸಮಾಜಪರವಾದ ಆಶಯ, ಬಡವರ ಧ್ವನಿಯನ್ನು ಹೊತ್ತು ಕವಿತೆಗಳು ರಚಿತವಾಗಲಿ ಎಂದರು.ಕವಿತೆ ವಿಶೇಷ: ಉಡುಪಿಯ ಶಶಿಧರ ಹೆಮ್ಮಾಡಿ ವಾಚಿಸಿದ ‘ಪಶುಪತಿ ಬೆತ್ತಲಾದ ಕತೆ’ ನಗೆಯ ಕಡಲನ್ನು ಉಕ್ಕಿಸಿತು. ಲಕ್ಷ್ಮೀನಾರಾಯಣ ಸ್ವಾಮಿ ಅವರ ‘ಮುಟ್ಟಿನ ನೆತ್ತರಲ್ಲಿ’, ಆರಿಫ್‌ ರಾಜಾ ಅವರ ‘ನನ್ನೊಳಗೆ ಏನು ಮಾತನಾಡಿದರೂ’ ಘಜಲ್‌, ರೇಣುಕಾ ಹೆಳವರ ಅವರ ‘ಪೋಸ್ಟ್‌ ಮಾರ್ಟಮ್‌ ರಿಪೋರ್ಟ್‌’, ಬಸವರಾಜ ಹೂಗಾರ್‌ ಅವರ ‘ವಲಸೆ ಹಕ್ಕಿಯ ಹಾಡು’, ಬಿ.ಶ್ರೀನಿವಾಸ ಅವರ ‘ಅವ್ವನ ಎದೆ ಮುಟ್ಟುವಂತಾಯಿತು’, ದೀಪಾ ಹಿರೇಗುತ್ತಿ ಅವರ ‘ನತದೃಷ್ಟರ ಸ್ವಗತ’ ಗಮನ ಸೆಳದವು.

ಪ್ರತಿಕ್ರಿಯಿಸಿ (+)