ಶುಕ್ರವಾರ, ಮಾರ್ಚ್ 5, 2021
27 °C

‘ಗಾಂಧಾರಿ’ಯಲ್ಲಿ ಬಸವಲಿಂಗಯ್ಯ

ಸಂದರ್ಶನ: ಜಕ್ಕಣಿಕ್ಕಿ ಎಂ.ದಯಾನಂದ Updated:

ಅಕ್ಷರ ಗಾತ್ರ : | |

‘ಗಾಂಧಾರಿ’ಯಲ್ಲಿ ಬಸವಲಿಂಗಯ್ಯ

ರಂಗಭೂಮಿಯ ಹಿರಿಯ ನಿರ್ದೇಶಕ ಸಿ.ಬಸವಲಿಂಗಯ್ಯ ಕಾಲೇಜು ದಿನಗಳಿಂದಲೂ ಜಾನಪದ, ರಂಗಭೂಮಿ ಕಡೆ ಆಸಕ್ತಿ ಬೆಳೆಸಿಕೊಂಡು ಬಂದವರು. ಈಗಂತೂ ಅವರು ರಂಗಭೂಮಿಯ  ಕುರಿತೇ ಹಲವು ರಾತ್ರಿ ಆಲೋಚನೆ ಮಾಡುತ್ತಿರುತ್ತಾರೆ. ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದ ಇವರು ಸದ್ಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಬೆಂಗಳೂರಿನ ಕೇಂದ್ರದ ನಿರ್ದೇಶಕರಾಗಿದ್ದಾರೆ.

ಕುಸುಮಬಾಲೆ,  ಗಾಂಧಿ ವರ್ಸಸ್‌ ಗಾಂಧಿ, ಮನುಷ್ಯ ಜಾತಿ ತಾನೊಂದೇ ಒಲಂ, ಅಗ್ನಿ ಮತ್ತು ಮಳೆ, ಸಂಕ್ರಾಂತಿ, ಮಾದಾರಿ ಮಾದಯ್ಯ, ದ್ಯಾವನೂರು, ಕಬೀರ ನಾಟಕಗಳಲ್ಲದೆ ವಾರ್ತಾ, ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ನಿರ್ದೇಶನ ಮಾಡಿದ ನಾಟಕಗಳಿಗೆ ಲೆಕ್ಕವಿಲ್ಲ.  ಹಿಂದಿ, ತೆಲುಗು, ಅಸ್ಸಾಮಿ, ಮಲಯಾಳಂ ನಾಟಕಗಳೂ ರಂಗದ ಮೇಲೆ ಮೂಡಿಬಂದಿವೆ.ನಾಟಕ ನಿರ್ದೇಶನ ಮಾತ್ರವಲ್ಲದೆ  ಮಾರಿಚನ ಬಂಧುಗಳು  ಕುರಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆ ಸೇರಿ ರಾಜ್ಯಕ್ಕೆ ಬಂದ ನಂತರ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾದರು. ಕಲಾವಿದರಿಗೆ, ನಟರಿಗೆ ನಾಟಕಗಳಿಗೆ  ಬಣ್ಣ ಹಚ್ಚಿಸುತ್ತಿದ್ದ ಇಂತಿಪ್ಪ ಬಸವಲಿಂಗಯ್ಯ ಇದೇ ಮೊದಲ ಬಾರಿಗೆ ಧಾರಾವಾಹಿಯೊಂದಕ್ಕೆ ತಾವೇ ಬಣ್ಣ  ಹಚ್ಚಿದ್ದಾರೆ.ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಾಂಧಾರಿ’ ಧಾರಾವಾಹಿಯಲ್ಲಿ ನಾಯಕನ ತಂದೆ (ಸೋಮದೇವ್‌) ಪಾತ್ರಕ್ಕೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಿದ್ದಾರೆ. ರಂಗದ ಮೇಲಿನ ಅಭಿನಯಿಸುವುದು ಹಾಗೂ ಕಿರುತೆರೆಗೆ ನಟಿಸುವುದರ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.*ಗಾಂಧಾರಿಯಲ್ಲಿ ನಿಮ್ಮ ಪಾತ್ರವೇನು?

ನನ್ನದು ಹೀರೊ ಅಪ್ಪನ ಪಾತ್ರ. ಈತ ಕೊನೆಗೆ ರಾಜಕಾರಣಿಯಾಗಿ ಬದಲಾಗುತ್ತಾನೆ. ಇದೊಂದು ಪೋಷಕ ಪಾತ್ರವಾದರೂ ತನ್ನದೇ  ಮಹತ್ವ ಹೊಂದಿದೆ.*ನಾಟಕ ನಿರ್ದೇಶನದಲ್ಲೇ ಸದಾ ಬ್ಯುಸಿಯಾಗಿರುತ್ತಿದ್ದ ನೀವು ಅಭಿನಯಿಸಲು ಒಪ್ಪಿದ್ದು ಏಕೆ?

ನನಗೆ ನಾಟಕ ಅಭಿನಯದ ಪಟ್ಟುಗಳು ಗೊತ್ತು. ಕಿರುತೆರೆಯೂ ಒಂದು  ಪ್ರಬಲ ಮಾಧ್ಯಮ. ಹೆಚ್ಚು ಪರಿಣಾಮಕಾರಿಯಾಗಿದೆ. ಧಾರಾವಾಹಿ ನಿರ್ದೇಶಕ ಲೋಕೇಶ್‌ ಕೃಷ್ಣ ನನಗೆ ಗೊತ್ತಿರುವ ಹುಡುಗ. ತಂಡದಲ್ಲಿ ನಾಗೇಂದ್ರ ಷಾ ಸೇರಿದಂತೆ ಹಲವರು ಪರಿಚಯದವರಿದ್ದಾರೆ. ಎನ್ಎಸ್‌ಡಿ ವಿದ್ಯಾರ್ಥಿಗಳಿದ್ದಾರೆ. ರಂಗಭೂಮಿ  ಹಾಗೂ ಕಿರುತೆರೆ ಪೂರಕವಾಗಿರಬೇಕು.  ಒಂದು ಮಾಧ್ಯಮದವರು ಇನ್ನೊಂದು ಮಾಧ್ಯಮಕ್ಕೆ ಅಭಿನಯಿಸಬಾರದು ಎಂದು ಇಲ್ಲ. ನಟರಿಗೆ ಸ್ವಾತಂತ್ರ್ಯ ಇದೆ. ರಂಗಭೂಮಿ ಹಿಂದೆ ಅನ್ನ ಕೊಡುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. *ಕಿರುತೆರೆ ಪ್ರವೇಶಕ್ಕೆ ಪ್ರತಿಕ್ರಿಯೆ ಹೇಗಿದೆ?

ಧಾರಾವಾಹಿಯಲ್ಲಿ ನಾನು ಅಭಿನಯಿಸುತ್ತೇನೆ ಎಂದಾಗ ನನ್ನ ಪತ್ನಿಗೆ  ‘ನಿಮಗ್ಯಾಕೆ ಈಗ ಇದು’ ಎಂದು ಹೇಳಿದ್ದಳು. ನಾನು ಎಷ್ಟೊಂದು ವರ್ಷಗಳಿಂದ ಹಲವಾರು ನಾಟಕ ನಿರ್ದೇಶನ ಮಾಡಿದ್ದೇನೆ. ಆದರೂ ಯಾರು ಅಂತ ಗೊತ್ತಿಲ್ಲ. ಈಗ ದಾರಿಯಲ್ಲಿ ಹೋದರೆ, ಬಸ್‌ನಲ್ಲಿ ಕಂಡ ಮಗೂ ಸಹ ‘ನೀವು ಧಾರಾವಾಹಿಯಲ್ಲಿ ಬರುತ್ತೀರಲ್ಲ ಸೋಮದೇವ್‌ ಅಲ್ವಾ’ ಅಂತ ಗುರುತು ಹಿಡಿಯುತ್ತದೆ. ಟಿ.ವಿಯಲ್ಲಿ 10 ಸೆಕೆಂಡ್‌ ಮುಖ ಬಂದರೆ ‘ಸಲೆಬ್ರಿಟಿ’ ಆಗ್ತಾರೆ.*ನಾಟಕ ಶಾಲೆ ಕೆಲಸದ ನಡುವೆ ಶೂಟಿಂಗ್‌ಗೆ ಹೇಗೆ ಸಮಯ ಹೊಂದಾಣಿಕೆ?

ನನ್ನ ಮೊದಲ ಆದ್ಯತೆ ನಾಟಕ ಶಾಲೆ ಕೆಲಸಕ್ಕೆ. ಧಾರಾವಾಹಿ ಚಿತ್ರೀಕರಣವನ್ನು ನನ್ನ ಸಮಯಕ್ಕೆ ಹೊಂದಾಣಿಕೆ ಮಾಡಿಕೊಡುತ್ತಾರೆ. ಸಾಮಾನ್ಯವಾಗಿ ಶನಿವಾರ, ಭಾನುವಾರ ಶೂಟಿಂಗ್ ಆಗುತ್ತೆ. ಗಾಂಧಾರಿಯ ಶೂಟಿಂಗ್ ಸ್ಥಳ ಸಹ ಕಲಾಗ್ರಾಮಕ್ಕೆ ಹತ್ತಿರವಿದೆ.*ಚಿತ್ರೀಕರಣದಲ್ಲಿ ಸಹ ಕಲಾವಿದರ ಸಹಕಾರ ಹೇಗಿದೆ?

ಗಾಂಧಾರಿಯಲ್ಲಿ ಎಲ್ಲ ನನಗೆ ಗೊತ್ತಿರುವವರೇ ಇದ್ದಾರೆ. ನಾನೊಬ್ಬ ಮಹಾನ್‌ ನಿರ್ದೇಶಕ ಎಂಬ ಹಮ್ಮು ಇಲ್ಲ.  ಎಲ್ಲರೂ ಒಂದು ಕುಟುಂಬ ಸದಸ್ಯರ ರೀತಿ ಇದ್ದೇವೆ. ನಾಟಕದಲ್ಲಿ ನಟ ರಂಗಕ್ಕೆ ಬಂದರೆ ಮುಗಿಯಿತು. ಆದರೆ ಧಾರಾವಾಹಿಗೆ ಒಂದು ಶೂಟ್‌ಗೆ ಹಲವು ಟೇಕ್ ತಗೊಬಹುದು. ಈಗ ಎಲ್ಲರೂ ನಾನು ‘ತುಂಬಾ ನ್ಯಾಚುರಲ್‌ ಆಗಿ ಇರ್ತಿರಾ’ ಅಂತ ಹೇಳುತ್ತಿದ್ದಾರೆ. *ಕಿರುತೆರೆ, ಧಾರಾವಾಹಿ ಹೇಗಿದೆ ಪ್ರಭಾವ?

ಕಿರುತೆರೆ ನಟನೆಯಿಂದ ಹಣ, ಹೆಸರು ಸಿಗುತ್ತೆ. ಲಕ್ಷಾಂತರ ವೀಕ್ಷಕರು ಇರುತ್ತಾರೆ. ಇಲ್ಲಿ ಅಭಿನಯ ಒಂದು ಸವಾಲು. ನೂರಾರು ಜನರ ಪರಿಶ್ರಮದಿಂದ ಒಂದು ಸ್ಲಾಟ್‌ ತಯಾರಾಗುತ್ತೆ. ಸಿನಿಮಾ ಓಡದೇ ಇರಬಹುದು. ಆದರೆ ಧಾರಾವಾಹಿ ನೋಡೇ ನೋಡ್ತಾರೆ.*ರಂಗಭೂಮಿಯ ಅನುಭವ ಹೇಗೆ ನೆರವಾಯಿತು?

ಎನ್‌ಎಸ್‌ಡಿಯಲ್ಲಿ ಕಲಿಯುತ್ತಿರುವಾಗಲೇ ನಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೆ. ಕಿರುತೆರೆ ಧಾರಾವಾಹಿ ಕಥೆಯ ಹಿಂದೆ ಹಲವು ಪ್ರಭಾವಗಳಿರುತ್ತವೆ. ನಿರ್ದೇಶಕರಿಗೆ ಇಲ್ಲಿ ಸ್ವಾತಂತ್ರ್ಯ ಇಲ್ಲ. ಆದರೂ ನಟನಿಗೆ ತನ್ನದೇ ಅಭಿವ್ಯಕ್ತಿ ತೋರಲು ಅವಕಾಶವಿದೆ.*ಎಪಿಸೋಡ್‌ಗೆ ಎಳೆಯುವ ಧಾರಾವಾಹಿ ಹೆಚ್ಚು ಎನ್ನುತ್ತಾರೆ. ನಮ್ಮ ಜನಜೀವನದ ಕಥೆಗಳು ಯಾಕೆ ಬರ್ತಿಲ್ಲ?

ಮೆಗಾ ಧಾರಾವಾಹಿಗಳ ಸಂಕಟವೇ ಹಾಗೆ. ಇಂದಿನ ಹಲವು ಸೀರಿಯಲ್‌ಗಳಲ್ಲಿ ವೈಭೋಪೇತ ದೃಶ್ಯಗಳೇ ಹೆಚ್ಚು. ಧಾರಾವಾಹಿಯಲ್ಲಿ ರೈತರ ಆತ್ಮಹತ್ಯೆ, ಪ್ರಸಕ್ತ ರಾಜಕೀಯ, ಹಳ್ಳಿಯ ಬದುಕು ಬರಬೇಕು. ‘ನೇಟಿವಿಟಿ‘ ಇರಬೇಕು. ಕನ್ನಡದ ಕಥಾನಕಗಳು ಬರಬೇಕು. ಟಿ.ಎನ್‌. ಸೀತಾರಾಂ ಹಾಗೂ ನಾಗಾಭರಣ ನೈಜ ಬದುಕಿನ ಕಥೆಗಳ ಪ್ರಯೋಗ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.